ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ 68ನೇ ದಿನದ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ಡೆನ್ಸೋ ಕಿರ್ಲೋಸ್ಕರ್ ಕಾರ್ಮಿಕರು ಇಂದು (ಜನವರಿ 15) ಒಂದು ದಿನದ ಉಪವಾಸ ಹಮ್ಮಿಕೊಂಡಿದ್ದರು. ಅವೈಜ್ಞಾನಿಕ ಕೆಲಸದ ಸಮಯ ಮತ್ತು ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಬಿಡದಿಯಲ್ಲಿರುವ ಟೊಯೊಟಾ ಕಾರ್ ಕಂಪನಿಯ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 3 ನೇ ತಿಂಗಳಿಗೆ ಕಾಲಿಟ್ಟಿದೆ.
ನಿರಂತರ 68 ದಿನಗಳಿಂದ ಹೋರಾಟ ನಡೆಸುತ್ತಿರುವ ಕಾರ್ಮಿಕರ ಪರವಾಗಿ ಎಲ್ಲಾ ರಾಜಕೀಯ, ಕಾರ್ಮಿಕರ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ. ಆದರೆ ಸರ್ಕಾರ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಮಾತ್ರ ತಮ್ಮ ಕಾರ್ಮಿಕ ವಿರೋಧಿ ಧೋರಣೆಯನ್ನು ಮುಂದುವರೆಸಿದೆ.
ಟೊಯೋಟಾ ಇದುವರೆಗೂ ವಿಧಾನ ಸೌಧ ಚಲೋ, ರಾಜಭವನ ಚಲೋ, ಜಿಲ್ಲಾಧಿಕಾರಿ ಮುತ್ತಿಗೆ, ಛತ್ರಿ ಚಳುವಳಿ, ರಕ್ತದಾನ ಚಳುವಳಿ ಸೇರಿದಂತೆ ಹಲವಾರು ನವೀನ ಹೋರಾಟವನ್ನು ಮಾಡುತ್ತಾ ಸರ್ಕಾರದ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು
ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರ ಹೋರಾಟಕ್ಕೆ ದೇಶದ ಇತರ ಭಾಗದಲ್ಲೂ ಬೆಂಬಲ ವ್ಯಕ್ತವಾಗಿದೆ. ಜನವರಿ 5 ರಂದು ತಮಿಳುನಾಡಿನ ಪೆರಂಬದೂರ್ ಕೈಗಾರಿಕಾ ಪ್ರದೇಶದಲ್ಲಿ ಟೊಯೊಟಾ ಕಾರ್ಮಿಕರ ಪರವಾಗಿ ಪ್ರತಿಭಟನೆ ನಡೆದಿದೆ. ಹ್ಯುಂಡಾಯಿ, ಫೋರ್ಡ್, ನಿಸ್ಸಾನ್, ಬಿಎಂಡಬ್ಲೂ, ಅಪೋಲೋ ಟೈರ್‍ಸ್, ಜೆ.ಕೆ. ಟೈರ್ಸ್, ವಲಿಯೋ, ಯಮಹಾ, ಬ್ರೇ ಕಂಟೋಲ್, ಅಸಹಿ ಇಂಡಿಯಾ ಗ್ಲಾಸ್ ವರ್ಕಸ್ ಯುನಿಯನ್ ಸೇರಿದಂತೆ ಹಲವು ಕಂಪೆನಿಗಳ ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ದಕ್ಷಿಣ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಒಕ್ಕೂಟ ರಚಿಸಿ ಮುಂದಿನ ದಿನದಲ್ಲಿ ಟೊಯೊಟಾ ಕಾರ್ಮಿಕರ ಪರವಾಗಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ.
ಈ ಸಾಲಿಗೆ ಡೆನ್ಸೋ ಕಿರ್ಲೋಸ್ಕರ್ ಕಾರ್ಮಿಕರ ಪ್ರತಿಭಟನೆಯೂ ಸೇರಿಕೊಂಡಿದೆ.
ಇದನ್ನೂ ಓದಿ: ಕಂಪೆನಿ ಹಠಮಾರಿ ದೋರಣೆ ಕೈಬಿಡದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ: ಟೊಯೊಟಾ ಕಾರ್ಮಿಕರ ಬೆಂಬಲಕ್ಕೆ ಡಿಕೆ. ಸುರೇಶ್


