ಕಳೆದ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಟೊಯೊಟಾ ಕಿಲೋಸ್ಕರ್ ಕಾರ್ಮಿಕರ ಪ್ರತಿಭಟನೆಗೆ ಕಂಪೆನಿಯು ಮಂಡಿಯೂರುತ್ತಿದ್ದು ತನ್ನ ಲಾಕೌಟ್ ಅನ್ನು ತೆರವುಗೊಳಿಸುವುದಾಗಿ ಹೇಳಿದೆ. ಆದರೆ ಕೆಲಸಕ್ಕೆ ಬರಲು ಇಚ್ಚಿಸುವ ಕಾರ್ಮಿಕರು ಮುಚ್ಚಳಿಕೆ ನೀಡಿ ಬರಬಹುದು ಎಂದು ಷರತ್ತನ್ನು ವಿಧಿಸಿದೆ. ಇದಕ್ಕೆ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಕಿರ್ಲೋಸ್ಕರ್ ಆಡಳಿತ ಮಂಡಳಿಯ ಪತ್ರಿಕಾ ಹೇಳಿಕೆಗೆ ಕಾರ್ಮಿಕ ಸಂಘಟನೆ ಪ್ರತಿಕ್ರಿಯೆ ನೀಡಿದ್ದು, “ಕಂಪೆನಿಯು ಪತ್ರಿಕಾ ಹೇಳಿಕೆ ನೀಡುವ ಮೂಲಕ, ಇಷ್ಟು ದಿನ ಕಾರ್ಮಿಕರು ಮುಷ್ಕರ ಮಾಡುತ್ತಿರಲಿಲ್ಲ ತಾವಾಗಿಯೆ ಬೀಗಮುದ್ರೆಯನ್ನು ಘೋಷಿಸಿದ್ದೆವು ಎಂದು ಒಪ್ಪಿಕೊಂಡಂತಾಗಿದೆ” ಎಂದು ಹೇಳಿದೆ.
“ಆಡಳಿತ ಮಂಡಳಿಯು ತನ್ನ ಅಗತ್ಯತೆಗಳನ್ನು ಕಾರ್ಮಿಕ ಸಂಘದ ಸಹಕಾರವಿಲ್ಲದೇ ಪೂರೈಸಿಕೊಳ್ಳಬಹುದು ಎಂದು ಭಾವಿಸಿರಬಹುದು. ಅವರಿಗೆ ಬೀಗ ಮುದ್ರೆಯು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಈಗ ಅರ್ಥವಾಗುತ್ತಿದೆ. ಇಷ್ಟಾದರೂ ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುತ್ತಿರುವುದು, ಕಾನೂನಿನ ಪ್ರಕಾರ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ” ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: 3 ನೇ ತಿಂಗಳಿಗೆ ಕಾಲಿಟ್ಟ ಟೊಯೊಟಾ ಕಾರ್ಮಿಕರ ಹೋರಾಟ: ದೌರ್ಜನ್ಯಕ್ಕೆ ತಲೆಬಾಗುವುದಿಲ್ಲ ಎಂದ ಕಾರ್ಮಿಕರು
“ಕಂಪೆನಿಯು ಎರಡನೇ ಬಾರಿಗೆ ದಿನಾಂಕ 23.11.2020 ರಿಂದ ಘೋಷಿಸಿದ್ದ ಬೀಗಮುದ್ರೆ ಕೂಡಾ ಕಾನೂನು ಬಾಹಿರವಾಗಿತ್ತು. ಈ ನಿರ್ಧಾರವು ನಿರರ್ಥಕ ಹಾಗೂ ಸಂಸ್ಥೆಯ ಬೆಳವಣಿಗೆಗೆ ಹಾನಿಕಾರಕ ಎಂದು ಆಡಳಿತ ಮಂಡಳಿ ಅರಿಯುವವರೆಗೂ ಇದು ಹಾಗೆ ಮುಂದುವರೆಯುತ್ತದೆ” ಎಂದು ಕಂಪೆನಿಯ ಕಾರ್ಮಿಕ ಸಂಘಟನೆ ಟಿಕೆಎಇಯು ಎಚ್ಚರಿಸಿದೆ.
“ಕೆಲಸದ ಒತ್ತಡದ ನಿಗದಿಯ ವಿಚಾರವಾಗಿ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳೇ ಕಾರ್ಮಿಕರ ಪ್ರತಿಭಟನೆಗೆ ಕಾರಣವಾಗಿತ್ತೇ ವಿನಃ ಕಾರ್ಮಿಕರು ಯಾವುದೇ ಮುಷ್ಕರ ಮಾಡುತ್ತಿರಲಿಲ್ಲ. ಈ ವಿಚಾರವಾಗಿ ಕಾರ್ಮಿಕ ಸಂಘದ ಹಲವಾರು ಪ್ರಯತ್ನಗಳಿಗೆ ಆಡಳಿತ ವರ್ಗವು ಸ್ಪಂದಿಸಲಿಲ್ಲ, ಅದಕ್ಕೆ ಪೂರಕ ದಾಖಲೆಗಳು ನಮ್ಮಲ್ಲಿವೆ. ಆಡಳಿತ ಮಂಡಳಿಯ ನೋಟಿಸಿನ ವಿಷಯಗಳು ನಮಗೆ ಅರ್ಥವಾಗಿದೆ, ಆಡಳಿತ ಮಂಡಳಿಯ ಷರತ್ತುಗಳು ಕಾರ್ಮಿಕ ವಿರೋಧಿಯ ಜೊತೆಗೆ ಸಂಸ್ಥೆಯ ವಿರುದ್ಧವಾಗಿದೆ” ಎಂದು ಕಾರ್ಮಿಕ ಸಂಘಟನೆ ಹೇಳಿದೆ.
ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಯು ಕಂಪೆನಿಯ ಆಡಳಿತ ಮಂಡಳಿಯ ಪತ್ರಿಕಾ ಹೇಳಿಕೆಗೆ ಕೆಲವು ವಿಚಾರವನ್ನು ಸ್ಪಷ್ಟಪಡಿಸಿದೆ.
►ಆಡಳಿತ ಮಂಡಳಿಯು ತನ್ನ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದೆ.
►ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುವುದು, ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ.
►ಕಾರ್ಮಿಕರು ಈ ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳಕ್ಕೆ ಅರ್ಹರಾಗಿರುತ್ತಾರೆ.
►ಕಾರ್ಮಿಕರು ಕಾನೂನು ಬಾಹಿರ ಬೀಗಮುದ್ರೆ ಹಾಗೂ ಮುಚ್ಚಳಿಕೆ ಸಮಯದಲ್ಲಿ ಕೆಲಸಕ್ಕೆ ಹಾಜರಾಗುವುದಿಲ್ಲ.
ಇದನ್ನೂ ಓದಿ: ಕಂಪೆನಿ ಹಠಮಾರಿ ದೋರಣೆ ಕೈಬಿಡದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ: ಟೊಯೊಟಾ ಕಾರ್ಮಿಕರ ಬೆಂಬಲಕ್ಕೆ ಡಿಕೆ. ಸುರೇಶ್
ಅಷ್ಟೇ ಅಲ್ಲದೆ ಮಂಗಳವಾರ ನಡೆದ ಕಾರ್ಮಿಕ ಸಂಘದ “ಸರ್ವ ಸದಸ್ಯರ ಸಭೆ” ಯಲ್ಲಿ ಕೆಲವು ನಿರ್ಣಯಗಳನ್ನು ಪ್ರತಿಭಟನಾ ನಿರತ ಕಾರ್ಮಿರಕು ತೆಗೆದುಕೊಂಡಿದ್ದಾರೆ.
►ಆಡಳಿತ ಮಂಡಳಿಯು ಮುಚ್ಚಳಿಕೆ ಕೇಳುವ ಮೂಲಕ ಮುಂದುವರೆದ ಕಾನೂನು ಬಾಹಿರ ಬೀಗಮುದ್ರೆಯನ್ನು ಖಂಡಿಸುತ್ತೇವೆ.
►ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳ ನೀಡಬೇಕು.
►ಆಡಳಿತ ಮಂಡಳಿಯ ಈ ಸಮಯದ ಎಲ್ಲಾ ಅಮಾನತು ಹಾಗೂ ಶಿಕ್ಷೆಯ ಆದೇಶಗಳನ್ನು ಹಿಂಪಡೆಯಬೇಕು.
►ನಾವು ಕಾನೂನು ಬಾಹಿರ ಬೀಗಮುದ್ರೆಯ ವಿರುದ್ಧ ನಮ್ಮ ನ್ಯಾಯಸಮ್ಮತ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ.
ಆಡಳಿತ ಮಂಡಳಿಯ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿದ್ದ ಕಂಪೆನಿಯ ವಿರುದ್ಧ 3500 ಕಾರ್ಮಿಕರು ಪ್ರಾರಂಭಿಸಿದ್ದ ಹೋರಾಟ 65 ನೇ ದಿನ ದಾಟಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಲಾಕೌಟ್ ನಿಷೇಧಿಸಿ ರಾಜ್ಯ ಸರ್ಕಾರ ನವೆಂಬರ್ 18 ರಂದು ಆದೇಶ ನೀಡಿದ್ದರೂ ಕಂಪೆನಿ ಮಾತ್ರ ಕಾರ್ಮಿಕರನ್ನು ಕಾರ್ಖಾನೆ ಒಳಗಡೆ ಹೋಗಲು ಅನುಮತಿ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸೂಜಿ ತಯಾರಿಕಾ ಕಂಪೆನಿ ’ಸ್ಮಿಟ್ಝ್’ ಲಾಕೌಟ್: ನೂರಾರು ಕಾರ್ಮಿಕರು ಬೀದಿಗೆ
