Homeಸಿನಿಮಾಕ್ರೀಡೆಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಮೊಹಮ್ಮದ್ ಸಿರಾಜ್‌ಗೆ 27 ವರ್ಷದ ಸಂಭ್ರಮ. ಅವರು ಬೆಳೆದು ಬಂದುದರ ಕುರಿತ ಬರಹ ಇಲ್ಲಿದೆ.

- Advertisement -
- Advertisement -

ಕ್ರಿಕೆಟ್ ಅಂಗಳದಲ್ಲಿ ಮಾನವೀಯತೆ ಮೆರೆದ ಸಿರಾಜ್, ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಸಿರಾಜ್, ತಂದೆ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಸಿರಾಜ್, ಪಾದಾರ್ಪಣೆ ಪಂದ್ಯದಲ್ಲೇ ಶ್ರೀನಾಥ್ ದಾಖಲೆ ಮುರಿದ ಸಿರಾಜ್, ಜನಾಂಗೀಯನಿಂದನೆ ವಿರುದ್ಧ ಆಸ್ಟ್ರೇಲಿಯನ್ನರಿಗೆ ತಕ್ಕ ಉತ್ತರ ನೀಡಿದ ಸಿರಾಜ್ ಇದು ಕಳೆದ ಒಂದು ವಾರದ ಅವಧಿಯಲ್ಲಿ ಕನ್ನಡದ ವಿವಿಧ ದಿನಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕಂಡುಬಂದ ಶೀರ್ಷಿಕೆಗಳು. ಮೊಹಮ್ಮದ್ ಸಿರಾಜ್ ಎಂಬ ಯುವ ಕ್ರೀಡಾಪಟು, ಹೈದರಾಬಾದ್‌ನ ಸ್ಲಂನಲ್ಲಿ ಬೆಳೆದು, ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಗೆಲುವು ಸಾಧಿಸುವುದಿರಲಿ ಡ್ರಾ ಸಾಧಿಸಿದರೇ ಅದೇ ಹೆಚ್ಚು ಎನ್ನಲಾಗಿತ್ತು. ಆದರೆ, 30 ವರ್ಷಗಳಿಂದ ಬ್ರಿಸ್ಬೇನ್ ಅಂಗಳದಲ್ಲಿ ಸೋಲು ಕಾಣದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅದೇ ಅಂಗಳದಲ್ಲಿ ಭಾರತ ಬಗ್ಗುಬಡಿದಿದೆ. ಈ ಮೂಲಕ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಟೆಸ್ಟ್ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ, ಎರಡನೇ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿತ್ತು. ತಾವಾಡಿದ ಈ ಮೊದಲ ಟೆಸ್ಟ್ ಪಂದ್ಯದಲ್ಲೇ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಭಾಗ್ಯವೂ ಅವರಿಗೆ ದಕ್ಕಿತ್ತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಕೊನೆಯ ಪಂದ್ಯದಲ್ಲೂ 5 ವಿಕೆಟ್ ಪಡೆದು ಭಾರತದ ಭವಿಷ್ಯದ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟೇನು ಸುಲಭದ್ದಾಗಿರಲಿಲ್ಲ.

ಸ್ಲಂನಿಂದ ಬ್ರಿಸ್ಬೇನ್‌ವರೆಗೆ

ಮೊಹಮ್ಮದ್ ಸಿರಾಜ್ ಹುಟ್ಟಿದ್ದು ಹೈದರಾಬಾದ್‌ನ ಓಲ್ಡ್ ಸಿಟಿಯ ಬೈಲೇನ್ ಎಂದು ಗುರುತಿಸುವ ಸ್ಲಂನಲ್ಲಿ. ತಂದೆ ಬಡ ಆಟೋ ಡ್ರೈವರ್. ಹೆಸರು ಮೊಹಮ್ಮದ್ ಗೌಸ್. ಓರ್ವ ಅಣ್ಣ ಮತ್ತು ತಂಗಿಯ ತುಂಬು ಕುಟುಂಬದ ಜೊತೆಗೆ ಸ್ಲಂನಲ್ಲೇ ಬಾಲ್ಯ ಕಳೆದ ಸಿರಾಜ್ ಕುಟುಂಬಕ್ಕೆ ತಂದೆಯೊಬ್ಬರ ದುಡಿಮೆಯೇ ಆಧಾರ. ತಂದೆಯ ದುಡಿಮೆ ಮನೆಯ ಖರ್ಚಿಗೆ ಸಾಲದೆ, ಊಟಕ್ಕೂ ಸಮಸ್ಯೆಯಿರುವ ಪರಿಸ್ಥಿತಿಯಲ್ಲಿ, ವಿದ್ಯಾಭ್ಯಾಸದ ಜೊತೆಗೆ ದೊಡ್ಡ ದೊಡ್ಡ ಕ್ಲಬ್‌ಗೆ ಸೇರಿ ಕ್ರಿಕೆಟ್ ಕಲಿಕೆ ಎಂಬುದು ದೂರದ ಮಾತೇ ಸರಿ.

ಆದರೆ, ಸಿರಾಜ್ ತಾನಿದ್ದ ಸ್ಲಂ ಗಲ್ಲಿಯಲ್ಲೇ ತನ್ನ ಗೆಳೆಯರ ಜೊತೆಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಯಲು ಆರಂಭಿಸಿದ್ದ. ಆತನ ಮೊನಚಾದ ಬೌಲಿಂಗ್‌ನಲ್ಲಿನ ಕೌಶಲ್ಯ ಆತ ಮುಂದಿನ ಹಂತಕ್ಕೆ ಬೆಳೆಯುವಂತೆ ಮಾಡಿತ್ತು. ತನ್ನ ಅಣ್ಣನ ಮಾರ್ಗದರ್ಶನದಂತೆ ಹೈದರಾಬಾದ್‌ನ ಚಾರ್ ಮಿನಾರ್ ಕ್ಲಬ್‌ನಲ್ಲಿ ಡಿವಿಷನ್ ಹಂತದ ಪಂದ್ಯಗಳೊಂದಿಗೆ ಆರಂಭವಾದ ಆತನ ಕ್ರಿಕೆಟ್ ಪಯಣ ನೋಡನೋಡುತ್ತಿದ್ದಂತೆ 2015-16ನೇ ಸಾಲಿನ ರಣಜಿ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದಲ್ಲಿ ಆಡುವುದಕ್ಕೆ ಆತನಿಗೆ ಸ್ಥಾನ ದೊರಕಿಸಿಕೊಟ್ಟಿತ್ತು.

ಪಾದಾರ್ಪಣೆ ಟೂರ್ನಿಯಲ್ಲೇ ಆತ 41 ವಿಕೆಟ್ ಗಳಿಸುವ ಮೂಲಕ ಆ ಋತುವಿನಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಶಿಶ್ ನೆಹ್ರಾ, ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಆತನ ಬೌಲಿಂಗ್ ಮತ್ತಷ್ಟು ಮಾಗಿತ್ತು. ಪರಿಣಾಮ 2017ರ ಐಪಿಎಲ್ ಋತುವಿನಲ್ಲಿ ಸನ್‌ರೈಸಸ್ ಹೈದರಾಬಾದ್ ತಂಡ ಸಿರಾಜ್‌ರನ್ನು 2.6 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇದೇ ವರ್ಷ ಅವರು ಭಾರತೀಯ ಟಿ20 ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಈ ವೇಳೆ ದಿ ಹಿಂದೂ ಪತ್ರಿಕೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೊಹಮ್ಮದ್ ಸಿರಾಜ್, “ಐಪಿಎಲ್ ಹಣದಿಂದ ನಾನು ಒಂದು ಮನೆಯನ್ನು ಖರೀದಿಸಿ ನನ್ನ ತಂದೆಗೆ ಉಡುಗೊರೆಯಾಗಿ ನೀಡುತ್ತೇನೆ” ಎಂದಿದ್ದರು.

ಸಿರಾಜ್ ಮೊದಲ ಸಂಪಾದನೆಯಲ್ಲಿ, ಸ್ಲಂನಿಂದ ಹೊರಬಂದು ಹೊಸ ಮನೆಗೆ ಹೋಗಿದ್ದಕ್ಕೆ, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರೇನೋ! ಆದರೆ, ಆ ನಂತರವೂ ಸಿರಾಜ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಭಾಗಶಃ ಸಾಮಾಜಿಕ ಜಾಲತಾಣದಲ್ಲಿ ಆತನಷ್ಟು ಟ್ರೋಲ್‌ಗೆ ಒಳಗಾದ ಬೌಲರ್ ಮತ್ತೊಬ್ಬನಿರಲಿಕ್ಕಿಲ್ಲ.

ಟ್ರೋಲಿಗರಿಗೂ ಉತ್ತರ ನೀಡಿದ್ದ ಸಿರಾಜ್

ಸಿರಾಜ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎದುರು ಐಪಿಎಲ್ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿದ್ದ ಸಿರಾಜ್ 4 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟಿದ್ದರು. ಆ ನಂತರ ಸತತ ಎಲ್ಲಾ ಪಂದ್ಯಗಳಲ್ಲೂ ಭಾರಿ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಹೈದರಾಬಾದ್ ತಂಡ ಆತನನ್ನು ಒಂದೇ ವರ್ಷದಲ್ಲಿ ಹೊರಹಾಕಿತ್ತು.

ಈ ವೇಳೆ 2018ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಹರಾಜಿನಲ್ಲಿ ಬಿಡ್ ಮಾಡಿ, ಸಿರಾಜ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಹಲವು ಪಂದ್ಯಗಳಲ್ಲಿ ಸಿರಾಜ್‌ಗೆ ಅವಕಾಶವನ್ನೂ ನೀಡಿತ್ತು. ಆದರೆ, 2018-19ರ ಋತುವಿನಲ್ಲೂ ಸಿರಾಜ್ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಭಾರತೀಯ ಟಿ20 ತಂಡದಿಂದಲೂ ಹೊರದೂಡಲ್ಪಟ್ಟರು. ಅಲ್ಲಿಗೆ ಅವರ ಕ್ರಿಕೆಟ್ ಕೆರಿಯರ್ ಮುಗಿದೇಹೋಯ್ತು ಎಂದು ಎಲ್ಲಾ ಕ್ರಿಕೆಟ್ ವಿಶ್ಲೇಷಕರೂ ಮಾತನಾಡಲಾರಂಭಿಸಿದ್ದರು. ಆದರೆ, ಆ ಒಂದು ಪಂದ್ಯ ಅವರ ಇಡೀ ಭವಿಷ್ಯವನ್ನೇ ಬದಲಿಸಿತ್ತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಸಿರಾಜ್

2020ರ ಐಪಿಎಲ್ ಟೂರ್ನಿಯನ್ನು ಕೊರೊನಾ ಕಾರಣಕ್ಕೆ ಬಿಸಿಸಿಐ, ದುಬೈಗೆ ಶಿಫ್ಟ್ ಮಾಡಿತ್ತು. ಈ ಟೂರ್ನಿಯಲ್ಲೂ ಸಹ ಆರಂಭದಲ್ಲಿ ಸಿರಾಜ್‌ಗೆ ಅವಕಾಶ ಸಿಗದೆ ಬೆಂಚ್ ಕಾಯುವಂತಹ ಸ್ಥಿತಿಯೇ ಇತ್ತು. ಆದರೆ, ಕೊನೆಗೆ ಅವಕಾಶ ಸಿಕ್ಕಿ, ಆ ಒಂದು ಪಂದ್ಯದಲ್ಲಿ ಆತ ನಿರ್ಮಿಸಿದ ಅಪರೂಪದ ದಾಖಲೆ, ಆತನನ್ನು ಟ್ರೋಲ್ ಮಾಡಿದವರೂ ಸಹ ಮೆಚ್ಚುಗೆ ಸೂಚಿಸುವಂತೆ ಮಾಡಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಸಿರಾಜ್ ಕೇವಲ 8 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಸತತ ಎರಡು ಓವರ್‌ಗಳನ್ನು ಮೇಡನ್ ಮಾಡಿದ್ದರು. ಟಿ20 ಮಾದರಿ ಚುಟುಕು ಕ್ರಿಕೆಟ್‌ನಲ್ಲಿ ಮೇಡನ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ, ಎರಡು ಓವರ್ ಮೇಡನ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇಡೀ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಐಪಿಎಲ್ ಬೆನ್ನಿಗೆ ಆರಂಭವಾಗಲಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ತಂದೆ ಅಗಲಿಕೆಯಲ್ಲೂ ದಾಖಲೆ ಬರೆದ ಸಿರಾಜ್

ಭಾರತ ಕ್ರಿಕೆಟ್ ತಂಡದ ಆಟಗಾರರು ದುಬೈನಿಂದ ಐಪಿಎಲ್ ಮುಗಿಸಿ ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಆದರೆ, ತಂಡ ಆಸ್ಟ್ರೇಲಿಯಾ ತೆರಳಿ ಎರಡನೇ ವಾರಕ್ಕೆ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನಿಧನರಾದರು. ಸಂತಸದಲ್ಲಿದ್ದ ಸಿರಾಜ್‌ಗೆ ಈ ಸುದ್ದಿ ಬರ ಸಿಡಿಲಿನಂತೆ ಎರಗಿತ್ತು. ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರಿಗೆ ಭಾರತಕ್ಕೆ ಹಿಂದಿರುಗುವ ಅವಕಾಶವನ್ನೂ ಬಿಸಿಸಿಐ ನೀಡಿತ್ತು.
ಆದರೆ, ಭಾರತಕ್ಕೆ ಹಿಂದಿರುಗಿದರೆ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ಅರಿತಿದ್ದ ಸಿರಾಜ್ “ತನ್ನ ತಂದೆಯ ಕನಸಿನಂತೆ ನಾನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿಯೇ ಭಾರತಕ್ಕೆ ಹಿಂದಿರುಗುತ್ತೇನೆ, ಅವರ ಕನಸನ್ನು ಪೂರೈಸುತ್ತೇನೆ” ಎಂದು ದೃಢ ನಿಶ್ಚಯ ಮಾಡಿದ್ದರು. ಕೊನೆಗೂ ಅದು ಕೈಗೂಡಿದೆ.

ತಂದೆಯ ಅಗಲಿಕೆಯ ನಡುವೆಯೇ ಟೆಸ್ಟ್ ಪಂದ್ಯವಾಡಿದ್ದ ಸಿರಾಜ್ ಇದೀಗ ಆಸ್ಟ್ರೇಲಿಯಾ ನೆಲದಲ್ಲೊಂದು ಅಪರೂಪದ ದಾಖಲೆ ಮಾಡಿದ್ದಾರೆ. ತಾನಾಡಿದ 3 ಟೆಸ್ಟ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಮೂರನೇ ಭಾರತೀಯ ಬೌಲರ್ ಎಂಬ ದಾಖಲೆಗೂ, ಪಾದಾರ್ಪಣೆ ಮಾಡಿದ ಸರಣಿಯೊಂದರಲ್ಲಿ, ಒಂದೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಭಾರತ 5ನೇ ಬೌಲರ್ ಎಂಬ ಹಿರಿಮೆಗೂ ಸಿರಾಜ್ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಸಾಧಕರಿದ್ದಾರೆ. ಎಲ್ಲಾ ಸಾಧಕರ ಯಶಸ್ಸಿನ ಹಿಂದೆಯೂ ಕಠಿಣ ಪರಿಶ್ರಮ ಇದ್ದೇ ಇರುತ್ತದೆ. ಆದರೆ, ಹೈದರಾಬಾದ್‌ನ ಸ್ಲಂನ ಕಠಿಣ ಪರಿಸರದಲ್ಲಿ, ಬಡತನದ ನಡುವೆ ಬೆಳದ ಓರ್ವ ವ್ಯಕ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಮೊಹಮ್ಮದ್ ಸಿರಾಜ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ತನ್ನ ತಂದೆಯ ಆಸೆಯಂತೆ ಸಾಕಾರ ಮಾಡಿ ಬೆಳೆದು ನಿಂತಿದ್ದಾರೆ. ಅಲ್ಲದೆ, ಅವರಂತಹ ಸಾವಿರಾರು ಹಿಂದುಳಿದ ಸಮುದಾಯಗಳ-ವರ್ಗಗಳ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: 2020: ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಮುಳ್ಳಾದ ಕೊರೊನಾ, ಇನ್ನೂ ಸರಿಯದ ಕರಿಛಾಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...