ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ವಿರುದ್ಧ ನಡೆಯುತ್ತಿರುವ ತನಿಖೆಯ ವರದಿ ಸಲ್ಲಿಸುವಂತೆ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ಆಕ್ಷೇಪಾರ್ಹ ಸಂದೇಶಗಳನ್ನು ಕಳಿಸಿದ್ದಾರೆಂದು ಆರೋಪಿಸಿ ವಕೀಲರೊಬ್ಬರು ಕಳೆದ ಅಕ್ಟೋಬರ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಡಿಸೆಂಬರ್ 5 ರೊಳಗೆ ವರದಿ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉಪನಗರ ಅಂಬೋಲಿ ಪೊಲೀಸರಿಗೆ ಸೂಚಿಸಿತ್ತು.
ಆದರೆ ನ್ಯಾಯಾಲಯವು ನೀಡಿದ ಸಮಯದೊಳಗೆ ವರದಿಯನ್ನು ಸಲ್ಲಿಸಲು ಪೊಲೀಸರು ವಿಫಲರಾಗಿದ್ದರು. ನಂತರ ಗಡುವನ್ನು ಜನವರಿ 5 ಕ್ಕೆ ವಿಸ್ತರಿಸಿತು. ಆಗಲೂ ಕೂಡ ಪೊಲೀಸರು ವರದಿ ಸಲ್ಲಿಸಿಲ್ಲ. ಪೊಲೀಸರಿಗೆ ಫೆಬ್ರವರಿ 5 ರವರೆಗೆ ಹೊಸ ಗಡುವು ನೀಡಲಾಯಿತು, ಆದರೆ ಪೊಲೀಸರು ಈ ಬಗ್ಗೆ ನಡೆಸಿದ ವಿಚಾರಣೆಯ ವರದಿಯನ್ನು ಇನ್ನೂ ಸಲ್ಲಿಸಿಲ್ಲ.
ಇದನ್ನೂ ಓದಿ: ನಿಮ್ಮ ಜೀವನವನ್ನೇ ಸರ್ವನಾಶ ಮಾಡುತ್ತೇನೆ: ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ಕಂಗನಾ!
ಪೊಲೀಸರು ತನಿಖೆಯ ವರದಿ ಸಲ್ಲಿಸಲು ವಿಫಲವಾಗಿದ್ದರಿಂದ ಪ್ರಕ್ರಿಯೆಯನ್ನು ನೇರವಾಗಿ ಆರೋಪಿಗಳಿಗೆ ನೀಡಿ ಎಂದು ನಾನು ಮನವಿ ಮಾಡಿದ್ದೇನೆ ಎಂದು ದೂರುದಾರರಾದ ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಪ್ರಕ್ರಿಯೆ ನೀಡುವುದು ಕಾನೂನು ವಿಧಾನವಾಗಿದ್ದು, ಆ ಮೂಲಕ ಆರೋಪಿಯು (ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ) ನ್ಯಾಯಾಲಯಕ್ಕೆ ಹಾಜರಾಗಬೇಕು ಅಥವಾ ಅವನ / ಅವಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗುತ್ತದೆ.
ಸಿಆರ್‌ಪಿಸಿಯ ಸೆಕ್ಷನ್ 202 ರ ಅಡಿಯಲ್ಲಿ ವಿಚಾರಣೆಗೆ ಪ್ರಾಥಮಿಕ ಸಾಕ್ಷ್ಯಳಿವೆಯೇ ಮತ್ತು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲು ಸಾಕಷ್ಟು ಆಧಾರವಿದೆಯೇ ಎಂದು ನಿರ್ಧರಿಸಲು ಆದೇಶಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 04ಕ್ಕೆ ಮುಂದೂಡಲಾಗಿದೆ.
ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಟ್ವಿಟ್ಟರ್‌ನಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಸಂದೇಶವನ್ನು ಪೋಸ್ಟ್ ಮಾಡಿದ್ದರು. ನಂತರ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅದೇ ಸಮಯದಲ್ಲಿ ತನ್ನ ಸಹೋದರಿಯ ಬೆಂಬಲಕ್ಕೆ ಕಂಗನಾ ನಿಂತಿದ್ದರು ಮತ್ತು ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದಕರು ಎಂದು ಕರೆದಿದ್ದರು ಎಂದು ದೂರಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಹಿಂಸಾತ್ಮಕ, ಪ್ರಚೋದಾನಾತ್ಮಕ ಪೋಸ್ಟ್‌ಗಳಿಗೆ ಕಂಗನಾ ಕುಖ್ಯಾತಿಯಾಗಿದ್ದಾರೆ. ಈ ಕುರಿತು ಹತ್ತಾರು ದೂರುಗಳು ಅವರ ಮೇಲೆ ದಾಖಲಾಗಿದ್ದು ವಿಚಾರಣೆ ನಡೆಯುತ್ತಿವೆ.
ಇದನ್ನೂ ಓದಿ: ’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ


