ತನ್ನ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಕಂಗನಾ ರಣಾವತ್ ಆರೋಪಿಸಿದ್ದು, ಈ ಹಿಂದೆ ತಾಂಡವ್ ವೆಬ್ ಸೀರೀಸ್ ವಿರುದ್ಧ ಹಿಂಸೆಗೆ ಕರೆ ನೀಡುವ ಪ್ರಚೋದನಾತ್ಮಕ ಟ್ವೀಟ್ ಮಾಡಿದ್ದರು. ಇದನ್ನು ಅನುಸರಿಸಿ ಟ್ವಿಟರ್ ಕಂಪನಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ’ತಾಂಡವ್’ ವೆಬ್ ಸೀರಿಸ್‌ನ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ವಿವಾದಾತ್ಮಕ ನಟಿ ಕಂಗನಾ ರಾಣಾವತ್, “ಅವರ ತಲೆಗಳನ್ನು ಕತ್ತರಿಸುವ ಸಮಯ” ಎಂದು ಹಿಂಸಾಚಾರಕ್ಕೆ ಕರೆ ನೀಡಿದ್ದರು. ಕಂಗನಾ ಈ ಟ್ವೀಟನ್ನು ನಂತರ ಡಿಲೀಟ್ ಮಾಡಿದ್ದಾರಾದರೂ, ಅಷ್ಟರಲ್ಲೇ ಅದರ ಸ್ಕ್ರೀನ್ ಶಾರ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ’ತಲೆಗಳನ್ನು ಕತ್ತರಿಸುವ ಸಮಯ’ – ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ
ಟ್ವೀಟ್ಟರ್‌ನಲ್ಲಿ ತಾಂಡವ್ ವೆಬ್ ಸಿರೀಸ್ ಬಗ್ಗೆ ಟ್ವೀಟ್ ಮಾಡಿದ್ದ ದಿ ಅತುಲ್ ಮಿಶ್ರಾ( @TheAtulMishra) ಎಂಬವರಿಗೆ ಪ್ರತಿಕ್ರಿಯಿಸಿದ ಕಂಗನಾ, “ಭಗವಾನ್ ಕೃಷ್ಣ ಶಿಶುಪಾಲ ಮಾಡಿದ್ದ 99 ಪಾಪಗಳನ್ನು ಕ್ಷಮಿಸಿದ್ದರೂ ಕೂಡಾ.. ಮೊದಲು ಶಾಂತಿ ನಂತರ ಕ್ರಾಂತಿಯಾಗಬೇಕು. ಅವರ ತಲೆಗಳನ್ನು ಕತ್ತರಿಸುವ ಸಮಯವಾಗಿದೆ, ಜೈ ಶ್ರೀ ಕೃಷ್ಣ” ಎಂದು ಹಿಂಸೆಗೆ ಕರೆ ನೀಡಿದ್ದಾರೆ. ಅವರು ಅತುಲ್ ಮಿಶ್ರ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ಮಾತ್ರವಲ್ಲದೆ, ಅದನ್ನು ರೀಟ್ವೀಟ್ ಕೂಡಾ ಮಾಡಿದ್ದರು.
ಇದಾದ ನಂತರ ಕಂಗನಾ ಅವರ ಟ್ವಿಟರ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು ಎಂದು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.
“ಕೆಲವು ಉದಾರವಾದಿಗಳು ತಮ್ಮ ಸಂಬಂಧಿ ಜ್ಯಾಕ್ (ಟ್ವಿಟರ್ ಸಿಇಒ) ಬಳಿ ಅತ್ತು-ಕರೆದು ನನ್ನ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಮಾಡಿದ್ದರು. ಜೊತೆಗೆ ನನ್ನ ಖಾತೆಯನ್ನು ನಿರ್ಬಂಧಿಸುವುದಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ನನ್ನ ಸಾಮಾಜಿಕ ಮಾಧ್ಯಮ ಖಾತೆ ದೇಶಕ್ಕಾಗಿ ಯಾವ ಕ್ಷಣದಲ್ಲಾದರೂ ಮಡಿಯಬಹುದು (ಹುತಾತ್ಮ) ಹೊಂದಬಹುದು. ಆದರೂ ಮತ್ತೊಮ್ಮೆ ನನ್ನ ಚಿತ್ರಗಳ ಮೂಲಕ ನನ್ನ ದೇಶಭಕ್ತಿ ಹೊರಬರಲಿದೆ. ನಿಮ್ಮ ಜೀವನವನ್ನೇ ಸರ್ವನಾಶ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್‌ಪಿ ದಾಹಕ್ಕೆ ಕಂಗನಾ ಬಲಿಪಶು?
Librus cried to their chacha @jack and got my account temporarily restricted, they are threatening me mera account/virtual identity kabhi bhi desh keliye shaheed ho sakti hai,magar my reloaded desh bhakt version will reappear through my movies.Tumhara jeena dushwar karke rahungi.
— Kangana Ranaut (@KanganaTeam) January 20, 2021
ಈ ಮೂಲಕ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಕಂಗನಾ, ಸೇಡು ತೀರಿಸಿಕೊಳ್ಳುತ್ತೇನೆ ಎನ್ನುವಂತೆ ಟ್ವೀಟ್ ಮಾಡಿದ್ದಾರೆ.
ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯ ನಟಿಸಿರುವ ಹೊಸ ವೆಬ್ ಸೀರೀಸ್ ಆದ ‘ತಾಂಡವ್’ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂಬ ಆರೋಪವೆದ್ದಿದೆ. ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಇದರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿಯೂ ಪ್ರಕರಣ ದಾಖಲಾಗಿದ್ದು, ಬಂಧನದ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ತಾಂಡವ್ ಚಿತ್ರತಂಡ ಕ್ಷಮೆಯನ್ನೂ ಕೇಳಿತ್ತು. ಜೊತೆಗೆ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿಯೂ ಹೇಳಿತ್ತು.
ಇದನ್ನೂ ಓದಿ: ಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿದ್ದಾರೆ: ಮುಂಬೈ ಸಿವಿಲ್ ಕೋರ್ಟ್