ರಾಜ್ಯದಲ್ಲಿರುವ ಸರ್ಕಾರಿ ವಸತಿ ಶಾಲೆಗಳನ್ನು ಇನ್ನೂ ತೆರೆಯದೇ ಇರುವುದರಿಂದ ಸಾವಿರಾರು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಜೀವನ ಅತಂತ್ರ ಸ್ಥಿತಿ ತಲುಪಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಜಾಕ್ ಉಸ್ತಾದ್ ಕಳವಳ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕ ಸರಕಾರ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು 819 ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳು ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಗಳು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ನಡೆಸುತ್ತದೆ. ಈ ಎಲ್ಲ 819 ವಸತಿ ಶಾಲೆಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸುಮಾರು 1,63,070 ವಿದ್ಯಾರ್ಥಿಗಳು 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಸತಿ ಸಹಿತ ಶಿಕ್ಷಣವನ್ನು ಪೂರೈಸುತ್ತಿದ್ದಾರೆ. 2020-21ನೇ ಶೈಕ್ಷಣಿಕ ಸಾಲಿಗೆ ಕೋವಿಡ್-19 ಕಾರಣದಿಂದ ಲಾಕ್-ಡೌನ್ ಘೋಷಣೆ ಮಾಡಿರುವುದರಿಂದ ತರಗತಿಗಳು ಪ್ರಾರಂಭವಾಗಿಲ್ಲ” ಎಂದು ನಾನುಗೌರಿ.ಕಾಮ್ ಜೊತೆ ಮಾತನಾಡಿದ ರಜಾಕ್ ಉಸ್ತಾದ್ ಹೇಳಿದರು.
ಇದನ್ನೂ ಓದಿ: ಕೊವ್ಯಾಕ್ಸಿನ್‌ನ ಸಮಸ್ಯೆ ಬಗೆಹರಿಯುವವರೆಗೆ ರಾಜ್ಯಕ್ಕೆ ಲಸಿಕೆ ಬೇಡ: ಛತ್ತೀಸ್‌ಘಡ ಸರ್ಕಾರ
“ಇತ್ತೀಚಿಗೆ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಮಾತ್ರ ತರಗತಿಗಳು ನಡೆಸಲು ಸರಕಾರ ಅನುಮತಿ ನೀಡಿದೆ. ಈ ಲಾಕ್-ಡೌನ್ ಕಾರಣದಿಂದ ಈ ವರ್ಷ 9ನೇ ತರಗತಿಗೆ ಸರಕಾರ ವಸತಿ ಶಾಲೆಗಳ ಪ್ರವೇಶವನ್ನು ತೆಗೆದುಕೊಳ್ಳದೇ ಇರುವುದರಿಂದ ರಾಜ್ಯದ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸುಮಾರು 32614 ವಿದ್ಯಾರ್ಥಿಗಳಿಗೆ ಮುಂದೇನು ಎಂಬುದು ತಿಳಿಯದೇ ಅತಂತ್ರರಾಗಿದ್ದಾರೆ. ಪಾಲಕರು ಈ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಉದ್ದೇಶದಿಂದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 5ನೇ ತರಗತಿ ಪೂರೈಸಿರುವ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ಪಡೆದು ವಸತಿ ಶಾಲೆಗಳ ಪ್ರವೇಶಕ್ಕಾಗಿ ಕಾದು ಕುಳಿತಿದ್ದಾರೆ” ಎಂದು ಹೇಳಿದರು.
“ಇದೇ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ 2020-21ನೇ ಸಾಲಿಗಾಗಿ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆಸಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆದರೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತಮ್ಮ ಇಲಾಖೆಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆಸದೇ ಅನ್ಯಾಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ: ಗುಲಾಂ ನಬಿ ಆಜಾದ್
ಒಂದು ಕಡೆ ಶಿಕ್ಷಣ ಸಚಿವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರಿಗೆ 2020-21ನೇ ಸಾಲಿಗಾಗಿ ತರಗತಿಗಳು ನಡೆಯಲಿ ಅಥವಾ ನಡೆಯದೇ ಇರಲಿ ಮುಂದಿನ ತರಗತಿಗೆ ಪ್ರವೇಶ ಪಡೆಯಲೇಬೇಕು ಎಂದು ಆದೇಶ ನೀಡಿದ್ದಾರೆ. ಇದೇ ಸಚಿವರು ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ ಮಾಡಲು ಹಿಂದೇಟು ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರಕಾರ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ದಿಯ ಬಗ್ಗೆ ಪುಂಕಾನು ಪುಂಖವಾಗಿ ಮಾತನಾಡುತ್ತಿದೆಯೇ ಹೊರತು ಆ ಸಮುದಾಯದ ಮಕ್ಕಳ ಭವಿಷ್ಯದ ಬಗ್ಗೆ ನೈಜ ಕಾಳಜಿ ತೋರಿಸುತ್ತಿಲ್ಲ. ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಇದರಿಂದ ಆ ಸಮುದಾಯದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೇ? ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ದಿಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಜನಪ್ರತಿನಿಧಿಗಳು ಸರಕಾರವನ್ನು ಪ್ರಶ್ನಿಸದೇ ಏನು ಮಾಡುತ್ತಿದ್ದಾರೆ?” ಎಂದು ಕಿಡಿಕಾರಿದ್ದಾರೆ.
“ಸರಕಾರ 2020-21ನೇ ಶೈಕ್ಷಣಿಕ ಸಾಲಿನ ತರಗತಿಗಳು ಯಾವಾಗ ಬೇಕಾದರೂ ಪ್ರಾರಂಭ ಮಾಡಲಿ. ಈ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಪಾಲಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಈ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹೋರಾಟನಿರತ ಕಿಸಾನ್‌ಗೆ ಆದ ಅವಮಾನ ಗಡಿಯಲ್ಲಿರುವ ಜವಾನ್‌ರಿಗೆ ನೋವು ತರಿಸುತ್ತದೆ: ಪ್ರತಿ ಸೈನಿಕನೂ ಸಮವಸ್ತ್ರದಲ್ಲಿರುವ…


