ಮೆಟ್ರೋ

ಫೆಬ್ರವರಿ 01 ರಂದು ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿನ ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಮಾರ್ಗ ಕಾಮಗಾರಿಗೆ 15,000 ಕೋಟಿ ಮಂಜೂರು ಮಾಡಿದ್ದಾರೆ ಎಂದು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ ಮೋಹನ್ ಪ್ರತಿಪಾದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, “ಬೆಂಗಳೂರು ನಗರವನ್ನು ವೇಗ ಮತ್ತು ಸ್ಮಾರ್ಟ್‌ಗೊಳಿಸಲು ಪ್ರಮುಖ ಹೆಜ್ಜೆ ಇಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ನಮ್ಮ ಬೆಂಗಳೂರು ಮೆಟ್ರೋ ಹಂತ II ಎ ಮತ್ತು II ಬಿ ಅನ್ನು 14,788 ಕೋಟಿ ವೆಚ್ಚ ಪ್ರಕಟಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “19 & 20ನೇ ಶತಮಾನದಲ್ಲಿಯೇ ಲಂಡನ್, ನ್ಯೂಯಾರ್ಕ್, ಮಾಸ್ಕೋ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗಾಗಿ ಬಂಡವಾಳ ಹೂಡಿದ್ದರೆ ನಾವು ಕ್ರೂರವಾಗಿ ತೀರಾ ತಡ ಮಾಡಿದ್ದೇವೆ. ಆದರೆ ನಗರ ಸೌಲಭ್ಯಗಳಿಗೆ ಹೆಚ್ಚು ಹೂಡಿಕೆ ಮಾಡುವ ಮೂಲಕ ಮೋದಿ ಸರ್ಕಾರ ಅದಕ್ಕೆ ತಿದ್ದುಪಡಿ ಮಾಡಿದೆ. ಬೆಂಗಳೂರು ಮೆಟ್ರೋದ ವಿಮಾನ ನಿಲ್ದಾಣ ಮತ್ತು ಸಿಲ್ಕ್‌ಬೋರ್ಡ್‌ (ಒಆರ್‌ಆರ್) ಮಾರ್ಗಗಳಿಗೆ 15 ಸಾವಿರ ಕೋಟಿ ರೂ ಮಂಜೂರು ಮಾಡಿದ್ದಕ್ಕೆ ನಾನು ನಿರ್ಮಲಾ ಸೀತಾರಾಮನ್‌ರವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

 

ವಾಸ್ತವವೇನು?

ಮೊದಲನೇಯದಾಗಿ ಬಜೆಟ್ ನಲ್ಲಿ 15 ಸಾವಿರ ಕೋಟಿ ಹಣವನ್ನು ಮಂಜೂರು ಮಾಡಿಲ್ಲ. ಅರ್ಥ ಸಚಿವರು ಮೆಟ್ರೋದ 2‌A ಮತ್ತು 2‌Bಯ ಒಟ್ಟು ಯೋಜನಾ ವೆಚ್ಚ `14,778 ಕೋಟಿಗಳ ಪ್ರತಿರೂಪವನ್ನು ಘೋಷಿಸಿದ್ದಾರೆ ಅಷ್ಟೇ. ಅಂದರೆ ಬೆಂಗಳೂರು ಮೆಟ್ರೋ ಹಂತ 2 (ಎ) ಮತ್ತು 2 (ಬಿ) ಯೋಜನೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮತ್ತು ಕೆ.ಆರ್.ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 58.19 ಕಿ.ಮೀ ವಿಸ್ತರಣೆಗೆ 14,788 ಕೋಟಿ ರೂ. ಒಟ್ಟು ಯೋಜನಾ ವೆಚ್ಚ. ಇದರಲ್ಲಿ ಕೇಂದ್ರ ಸರ್ಕಾರವು ನೇರ ಅನುದಾನವನ್ನಾಗಿ ಶೇಕಡಾ 15 ರಷ್ಟನ್ನು ನೀಡುತ್ತದೆ. ಶೇ.35 ರಷ್ಟು ಹಣವನ್ನು ಕೇಂದ್ರ ಸರ್ಕಾರದ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ಧಿ ಸಂಸ್ಥೆಗಳ ಮೂಲಕ ಪಡೆಯಬೇಕಾಗಿದೆ. ಶೇ. 35 ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಿದರೆ, ಉಳಿದ ಶೇ.15 ರಷ್ಟು ಹಣವನ್ನು ಖಾಸಗಿ ವಲಯದಿಂದ ಸಂಗ್ರಹಿಸಲಾಗುತ್ತದೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವಿವರವಾದ ವರದಿ ಮಾಡಿದೆ.

ಈ ಕುರಿತು ಟ್ವಿಟ್ಟರ್‌ನಲ್ಲಿಯೇ ‘ತಪ್ಪು ಮಾಹಿತಿ ಹರಡಬೇಡಿ’ ಎಂದು ಹಲವಾರು ಕನ್ನಡಿಗರು ತೇಜಸ್ವಿ ಸೂರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “15 ಸಾವಿರ ಕೋಟಿ ನಮ್ಮ ಮೆಟ್ರೋ ನ 2‌A ಮತ್ತು 2‌B project ನ ‌Total cost. ಈ Total cost ನಲ್ಲಿ ಸುಮಾರು 15% ಅಷ್ಟು ಕೇಂದ್ರ ಸರಕಾರ ಕೊಡುತ್ತೆ. ಜೊತೆಗೆ public domain ನಲ್ಲಿರೋ ಬಜೆಟ್ ನ documents ನಲ್ಲಿ ಎಲ್ಲೂ 15 ಸಾವಿರ ಕೋಟಿ sanction ಮಾಡಿರುವ ಮಾಹಿತಿ ಇಲ್ಲ” ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅರುಣ್ ಜಾವಗಲ್ “ಕೇಂದ್ರ ಸರ್ಕಾರದ ಬಳಿ ಕೊಡಲು ಹಣವೇ ಇಲ್ಲ. ಈಗಾಗಲೇ ಅದು 106 ಲಕ್ಷ ಕೋಟಿಯಷ್ಟು ಸಾಲ ಮಾಡಿಕೊಂಡಿದೆ. ಅದರ ಬಡ್ಡಿ ಕಟ್ಟುವಲ್ಲಿಯೇ ಅದು ಸುಸ್ತಾಗುತ್ತಿದೆ. ಆದರೆ ದೊಡ್ಡ ದೊಡ್ಡ ಘೋಷಣೆ ನೀಡಿ ಮರಳು ಮಾಡುತ್ತಿದೆ. ನಮ್ಮ ಸಂಸದರು ಸಹ ಅದನ್ನೇ ಹೇಳಿ ದಾರಿ ತಪ್ಪಿಸುತ್ತಿದ್ದಾರೆಯೇ ಹೊರತು ಬೇರೆನಿಲ್ಲ. ಈ ಹಿಂದೆ ಉಪನಗರ ರೈಲು ಯೋಜನೆಯಲ್ಲಿಯೂ ಸಹ ಕೇಂದ್ರ ಸರ್ಕಾರ 2,479 ಕೋಟಿ ನೇರ ಅನುದಾನ ಕೊಡಬೇಕಿತ್ತು. ಅದರಲ್ಲಿ ಕೇವಲ 500 ಕೋಟಿಗಷ್ಟೆ ಕೇಂದ್ರ ಸರ್ಕಾರ ಸೀಮಿತವಾಗಿದೆ. ಇದು ಅಷ್ಟೆಯೆ” ಎಂದು ತಿಳಿಸಿದ್ದಾರೆ.

ಇನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಬೆಂಗಳೂರು ಮೆಟ್ರೋ ಹಂತ II ಎ ಮತ್ತು II ಬಿ ಮಾರ್ಗಕ್ಕಾಗಿ ಬೇಕಾಗುವ ಹಣದಲ್ಲಿ ಅರ್ಧ ಅನುದಾವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ಈಗ ಅದರಲ್ಲಿ ನೇರವಾಗಿ 15% ಕೊಡಲು ಒಪ್ಪಿದೆ. ಈ ಕುರಿತು ಬಜೆಟ್ ಮಂಡನೆಯಾದ ದಿನವೇ ‘ಅದು ಹೊಸ ಅನುದಾನವಲ್ಲ’ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದರು.

ಒಟ್ಟಿನಲ್ಲಿ ಮೆಟ್ರೋದ 2‌A ಮತ್ತು 2‌Bಯ ಒಟ್ಟು ಯೋಜನಾ ವೆಚ್ಚ `14,778 ಕೋಟಿಗಳನ್ನು ಪೂರ್ಣ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಅದರ 15% ರಷ್ಟನ್ನು ನೀಡಲಿದೆ. ಅದು ಇನ್ನು ಮಂಜೂರಾಗಿಲ್ಲ.


ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೇಜ್ರಿವಾಲ್ ಕೃಷಿ ಕಾಯ್ದೆ ಪರ ಮಾತನಾಡಿದರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿಗರು

LEAVE A REPLY

Please enter your comment!
Please enter your name here