ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ: ಗುಲಾಂ ನಬಿ ಆಜಾದ್

ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಬಿಜೆಪಿಗೆ ಸೇರುವ ವದಂತಿಗಳನ್ನು ತಿರಸ್ಕರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ನಾನು ಬಿಜೆಪಿ ಸೇರುತ್ತೇನೆ” ಎಂದು ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಅವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಅವರನ್ನು ಪ್ರಶಂಸಿದ್ದರು. ಜೊತೆಗೆ ಕಣ್ಣೀರನ್ನೂ ಸುರಿಸಿದ್ದರು. ಈ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್, ತಾನು ಬಿಜೆಪಿಗೆ ಸೇರುವ ಸಾಧ್ಯತೆಯಿಲ್ಲ ಎಂಬುದನ್ನು ಈ ರೀತಿ ಸ್ಪಷ್ಟಪಡಿಸಿದ್ದಾರೆ.

“ಮೋದಿ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ನಾನು 90ರ ದಶಕದಿಂದಲೂ ಬಲ್ಲೆ. ನಾವು ಒಟ್ಟಿಗೆ ಒಂದು ಕಪ್ ಚಹಾವನ್ನೂ ಕುಡಿದಿದ್ದೇವೆ. ಆದರೆ ನಾನು ಬಿಜೆಪಿಗೆ ಸೇರುತ್ತೇನೆ ಎಂಬ ವದಂತಿಯನ್ನು ಯಾರು ಹರಡುತ್ತಿದ್ದಾರೆ ಎಂಬುದು ತಿಳಿದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ರೈತನ ಸಾವು: ವರದಿ ಕೇಳಿದ ದೆಹಲಿ ಹೈಕೋರ್ಟ್

ಮತ್ತೋರ್ವ ಬಿಜೆಪಿ ಮುಖಂಡ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಸೌಹಾರ್ದಯುತ ಸಂಬಂಧವನ್ನು ಪ್ರಸ್ತಾಪಿಸುತ್ತಾ, “ಒಮ್ಮೆ ರಾಜಮಾತಾ ಸಿಂಧಿಯಾ ಸದನದಲ್ಲಿ ನನ್ನ ಬಗ್ಗೆ ಗಂಭೀರವಾದ ಕೆಲವು ಆರೋಪಗಳನ್ನು ಮಾಡಿದ್ದರು. ಆಗ ಸ್ವತಃ ನಾನೇ ವಾಜಪೇಯಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸುವಂತೆ ಕೋರಿದ್ದೆ. 15 ದಿನದಲ್ಲಿ ವರದಿ ಸಲ್ಲಿಸುವಂತೆಯೂ ಮತ್ತು ಸಮಿತಿಯು ಯಾವುದೇ ಶಿಕ್ಷೆ ವಿಧಿಸಿದರೂ ಸ್ವೀಕರಿಸಲು ಸಿದ್ದನಾಗಿರುವುದಾಗಿಯೂ ಹೇಳಿದ್ದೆ. ಆದರೆ ಅಷ್ಟರಲ್ಲಿ ವಾಜಪೇಯಿ ಎದ್ದುನಿಂತು, ನಾನು ಸದನದ ಕ್ಷಮೆ ಕೋರುತ್ತೇನೆ. ಮತ್ತು ಗುಲಾಂ ನಬಿಯವರಿಗೂ ಕೂಡ. ಬಹುಶಃ ರಾಜಮಾತಾ ಸಿಂಧಿಯಾ ಅವರಿಗೆ ಗುಲಾಂ ನಬಿ ಅವರ ಬಗ್ಗೆ ತಿಳಿದಿಲ್ಲ. ಆದರೆ ಅವರು ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದರು” ಎಂಬುದಾಗಿ ಗುಲಾಂ ನಬಿ ಆಜಾದ್ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಗುಲಾಂ ನಬಿ ಆಜಾದ್ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಸದಸ್ಯತ್ವದಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್, “ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ, ನಾನೊಬ್ಬ ಹಿಂದುಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನನಗೆ ಜನರ ಪ್ರೀತಿ ದೊರೆತಿದೆ” ಎಂದು ಹೇಳಿದ್ದರು.

ಈಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.


ಇದನ್ನೂ ಓದಿ: ಕೊರೊನಾ ಲಸಿಕೆ ಪೂರ್ಣಗೊಂಡ ಕೂಡಲೇ ಸಿಎಎ ಜಾರಿ: ಅಮಿತ್ ಶಾ

LEAVE A REPLY

Please enter your comment!
Please enter your name here