ಜನವರಿ 26 ರ ರೈತರ ಟ್ರಾಕ್ಟರ್ ರ್‍ಯಾಲಿಯಲ್ಲಿನ ಸಂಧರ್ಭದ ಅಹಿತಕರ ಘಟನೆಯ ನಂತರ ನಡೆದ ಬೆಳವಣಿಗೆಯಲ್ಲಿ ಕೇಂದ್ರ ಮತ್ತು ರೈತ ಮುಖಂಡರ ನಡುವಿನ ಮಾತುಕತೆಗಳು ಸಂಪೂರ್ಣವಾಗಿ ನಿಂತು ಹೋಗಿದೆ. ಜನವರಿ 22 ರಿಂದ ನಡುವೆ ಯಾವುದೇ ಸಭೆಗಳು ನಡೆದಿಲ್ಲ. ಇದುವರೆಗೂ ಹನ್ನೊಂದನೇ ಸುತ್ತಿನ ಮಾತುಕತೆಗಳನ್ನು ನಡೆದಿದ್ದು, ಎಲ್ಲವೂ ಮುರಿದು ಬಿದ್ದಿದೆ.
ಈ ಸಮಯದಲ್ಲಿ ಕೇಂದ್ರವು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳು ಅಥವಾ ಸರ್ಕಾರಿ ಅಧಿಕಾರಿಗಳು ಮತ್ತು ರೈತ ಪ್ರತಿನಿಧಿಗಳ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ತಡೆಹಿಡಿಯುವುದಾಗಿ ಹೇಳಿತ್ತು. ಆದರೆ ಕೇಂದ್ರದ ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತರು ಮೂರು ಕಾನೂನುಗಳನ್ನು ವಾಪಾಸು ಪಡೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?
ಸರ್ಕಾರ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧವಾಗುವುದಾಗಿ ಕೃಷಿ ಮುಖಂಡರು ಹೇಳಿದ್ದಾರೆ. “ನಮ್ಮ ಕೊನೆಯ ಸುತ್ತಿನ ಮಾತುಕತೆಯಲ್ಲಿ, ಸರ್ಕಾರಿ ಪ್ರತಿನಿಧಿಗಳು ಎಂಎಸ್ಪಿ ಪ್ರಶ್ನೆಯನ್ನು ಚರ್ಚಿಸಲು ಸಿದ್ಧರಿರಲಿಲ್ಲ. ನಮ್ಮ ಬೇಡಿಕೆಯು ಕೃಷಿ ಕಾನೂನನ್ನು ರದ್ದುಪಡಿಸ ಬೇಕು ಎಂಬುವುದಾಗಿದೆಯೆ ಹೊರತು ಅಮಾನತುಗೊಳಿಸುವುದಲ್ಲ. ಅವರು ಬೇರೆ ಪ್ರಸ್ತಾಪವನ್ನು ರೂಪಿಸಿ ನಮಗೆ ಅಧಿಕೃತ ಆಹ್ವಾನವನ್ನು ಕಳುಹಿಸಿದರೆ, ಮರುದಿನವೆ ನಾವು ಚರ್ಚಿಸಲು ಹೋಗುತ್ತೇವೆ” ಎಂದು ಬಿಕೆಯು ಏಕ್ತಾ (ಡಕೌಂಡಾ) ಪ್ರಧಾನ ಕಾರ್ಯದರ್ಶಿ ಜಗ್ಮೋಹನ್ ಸಿಂಗ್ ಹೇಳಿದ್ದಾರೆ.
ಕೃಷಿ ಮುಖಂಡರು ಮತ್ತು ಪ್ರತಿಭಟನಾಕಾರರ ಮೇಲೆ ದಾಖಲಾಗಿರುವ ಪ್ರಕರಣದಿಂದಾಗಿ ಮಾತುಕತೆ ನಡೆಯುತ್ತಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿರುವ, ಲೋಕ ಭಲೈ ಇನ್ಸಾಫ್ ವೆಲ್ಫೇರ್ ಸೊಸಟಿಯ ಅಧ್ಯಕ್ಷ ಬಾಲ್ದೇವ್ ಸಿಂಗ್ ಸಿರ್ಸಾ, “ನಮಗೆ ಎಫ್‌ಐಆರ್ ಮತ್ತು ಕಾನೂನು ನೋಟಿಸ್‌ಗಳ ಬಗ್ಗೆ ಚಿಂತೆಯಿಲ್ಲ, ಯಾಕೆಂದರೆ ಅದು ಯಾವುದೆ ಆಂದೋಲನದ ಭಾಗವಾಗಿದ್ದು ಅದಕ್ಕೆ ನಾವು ಸಿದ್ದರಾಗಿಯೆ ಇದ್ದೇವೆ. ಈ ಕೇಸುಗಳು ನಾವು ಹೋರಾಟ ನಡೆಸದಂತೆ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ನಾವು ಮಾತುಕತೆಗಾಗಿ ಹೋದಾಗ ನಮ್ಮ ಹೋರಾಟದ ಎಲ್ಲಾ ಬೇಡಿಕೆಗಳು ಈಡೇರಿದ ನಂತರ, ನಮ್ಮ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತೇವೆ. ಹೋರಾಟದಲ್ಲಿ ಅವುಗಳ ಬಗ್ಗೆ ನಾವು ಚಿಂತಿತರಾಗಿಲ್ಲ” ಎಂದು ರೈತ ಮುಖಂಡ ಜಗಮೋಹನ್ ಹೇಳುತ್ತಾರೆ.
ಇದನ್ನೂ ಓದಿ: ಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು: ರೈತರ ಸಾವಿನ ಬಗ್ಗೆ ನಾಲಗೆ ಹರಿಯ ಬಿಟ್ಟ ಹರಿಯಾಣ ಕೃಷಿ ಸಚಿವ
“ಸಾರ್ವಜನಿಕರ ಭಾಗವಹಿಸುವಿಕೆ ಉತ್ತೇಜಿಸಲು ಭಾನುವಾರದಂದು ಕ್ಯಾಂಡಲ್ ಮಾರ್ಚ್‌ನಂತಹ ಹಲವಾರು ಕಾರ್ಯಕ್ರಮಗಳನ್ನು ನಾವು ಸಂಘಟಿಸುತ್ತಿದ್ದೇವೆ. ಮಂಗಳವಾರ ರೈತ ಚಳವಳಿಗೆ ಸರ್ ಚೋಟೂ ರಾಮ್ ಅವರ ಕೊಡುಗೆಗಳನ್ನು ಸ್ಮರಿಸಲಿದ್ದೇವೆ. ಫೆಬ್ರವರಿ 18 ರಂದು ರೈಲ್ ರೋಕೊ ಚಳುವಳಿ ನಡೆಸುತ್ತಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಾಗಿ, ನಿಯಮಿತವಾಗಿ ನಡೆಯುತ್ತಿರುವ ದೊಡ್ಡ ಮಹಾಪಂಚಾಯತ್‌ಗಳನ್ನು ನಡೆಸಿ ನಮ್ಮ ಹೋರಾಟದವನ್ನು ಇನ್ನಷ್ಟು ಹುರಿಗೊಳಿಸುತ್ತೇವೆ” ಎಂದು ಮಹಿಲಾ ಕಿಸಾನ್ ಅಧಿಕಾರ ಮಂಚ್‌ನ ನಾಯಕಿ ಕವಿತಾ ಕುರುಗಂತಿ ಹೇಳಿದ್ದಾರೆ.
“ನಮ್ಮ ಚಳವಳಿಯ ಮುಖ್ಯ ವಿಷಯ ಆಂದೋಲನವಾಗಿದೆ ಮತ್ತು ಅದನ್ನು ನಾವು ಬಲಪಡಿಸುತ್ತಿದ್ದೇವೆ. ಅಲ್ಲದೆ ಈ ಆಂದೋಲನ ಎಲ್ಲಾ ರಾಜ್ಯಗಳಲ್ಲಿ ಬೆಳೆಯುತ್ತಿದೆ. ಮಾತುಕತೆಗಾಗಿ ಸರ್ಕಾರವನ್ನು ಒತ್ತಾಯಿಸುವ ಮುಖ್ಯಶಕ್ತಿ ಇದುವೆ ಆಗಿದೆ” ಎಂದು ರೈತ ಮುಖಂಡ ಭಂಗು ಹೇಳಿದ್ದಾರೆ.
ಇದನ್ನೂ ಓದಿ: ‘ವಕೀಲರ ನಡಿಗೆ ರೈತರ ಕಡೆಗೆ’ – ರೈತ ಹೋರಾಟಕ್ಕೆ ಬೆಂಬಲ ನೀಡಿದ ಬೆಂಗಳೂರಿನ ವಕೀಲರು


