ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್ ಪ್ರಕರಣದಲ್ಲಿ ಬೆಂಗಳೂರು ಮೂಲದ ದಿಶಾ ರವಿಯವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈಗ ದಿಶಾ ಅವರನ್ನು ದೆಹಲಿ ಕೋರ್ಟ್ 5 ದಿನಗಳ ಪೊಲೀಸ್ ಬಂಧನಕ್ಕೆ ಕಳುಹಿಸಿದೆ. ಇದರ ನಡುವೆಯೇ ದಿಶಾಳನ್ನು ಬೆಂಬಲಿಸಿ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ನಡೆಯನ್ನು ಸಾವಿರಾರು ಜನ ಖಂಡಿಸಿದ್ದಾರೆ. ಜೊತೆಗೆ ಆಕೆಯನ್ನು ಬಿಡುಗಡೆ ಮಾಡುವಂತೆ ವಿವಿದೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಈ ಪ್ರಕರಣದಲ್ಲಿ ಪ್ರಮುಖವಾದ ವಿಷಯವೆಂದರೆ, ತನ್ನ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ತಾನೇ ವಾದ ಮಾಡುವುದಾಗಿ ದಿಶಾ ಹೇಳಿದ್ದಾರೆ. ಇದು ಬಹುತೇಕರಲ್ಲಿ ಅಚ್ಚರಿಯನ್ನುಂಟುಮಾಡಿತ್ತು. ಈಗ ಇದಕ್ಕೆ ದೆಹಲಿಯ ನ್ಯಾಯಾಲಯ ಅನುಮತಿ ನೀಡಿದ್ದು, ದಿಶಾಳ ಮೇಲಿನ ಆರೋಪದ ಎಫ್‌ಐಆರ್ ಕಾಪಿ ಮತ್ತು ರಿಮಾಂಡ್ ಅರ್ಜಿಯನ್ನು ದಿಶಾ ಪಡೆದುಕೊಳ್ಳಬಹುದು ಎಂದು ಹೇಳಿದೆ. ಆದರೆ ಇದನ್ನು ದೆಹಲಿ ಪೊಲೀಸರು ವಿರೋಧಿಸಿದ್ದಾರೆ!
ಇದನ್ನೂ ಓದಿ: ರೈತ ಹೋರಾಟ- ದ.ಕ ಜಿಲ್ಲೆಯ ರೈತರು ಸೊಲ್ಲೆತ್ತಲಿಲ್ಲವೇಕೆ?: ಮಿಸ್ರಿಯಾ ಪಜೀರ್
ಇನ್ನು ಆಕೆ ಪ್ರತಿದಿನ ತನ್ನ ವಕೀಲರೊಂದಿಗೆ 30 ನಿಮಿಷ ಮತ್ತು ಕುಟುಂಬದವರೊಂದಿಗೆ 15 ನಿಮಿಷಗಳ ಕಾಲ ಮಾತನಾಡಬಹುದು ಎಂದು ಹೇಳಿದೆ. ಜೊತೆಗೆ ಆಕೆಗೆ ಬೆಚ್ಚನೆಯ ಉಡುಪುಗಳು ಮತ್ತು ಪುಸ್ತಕಗಳನ್ನೂ ಒದಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
A Delhi court allows climate activist Disha Ravi to get warm clothes, masks, books etc. Court also allows her to speak to her mother and other family members. Court allows her to access the copy of the FIR and other documents related to her arrest in the Toolkit matter
— ANI (@ANI) February 16, 2021
ಇದನ್ನೂ ಓದಿ: ಶಾಸಕರ ರಾಜೀನಾಮೆ: ಬಹುಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರ್ಕಾರ
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಗ್ರೇಟಾ ಥನ್‌ಬರ್ಗ್ ಟೂಲ್‌ಕಿಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಭಯೋತ್ಪಾದಕರ ಕೈವಾಡವಿದೆ ಮತ್ತು ಖಲೀಸ್ತಾನಿಗಳ ಹಸ್ತಕ್ಷೇಪವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4 ರಂದು ಎಫ್‌ಐಆರ್ ಕೂಡ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ (ಫೆಬ್ರವರಿ 13) ದೇಶದ್ರೋಹ ಆರೋಪದ ಮೇಲೆ ಬಂಧನವಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿಯವರ ಮೇಲೆ ದೆಹಲಿ ಪೊಲೀಸರು ನಿಗಾ ಇಟ್ಟಿದ್ದರು ಮತ್ತು ಬಂಧನಕ್ಕೆ ಸಂಪೂರ್ಣ ಸಿದ್ಧರಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ದಿಶಾ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಆಕೆಯನ್ನು ವಿಮಾನ ಹತ್ತಿಸುವ ತನಕವೂ ಬೆಂಗಳೂರಿನ ಸ್ಥಳಿಯ ಪೊಲೀಸರಿಗಾಗಲೀ, ರಾಜ್ಯ ಸರ್ಕಾರಕ್ಕಾಗಲೀ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂಬುದು ಈ ಬಹು ಚರ್ಚಿತ ವಿಷಯವಾಗಿದೆ. ಇದರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ರಾಜ್ಯಕ್ಕೆ ಮತ್ತು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ ವ್ಯಕ್ತಿಯೊಬ್ಬರನ್ನು ಬಂಧಿಸುವಂತೆ ಕ್ರಮ ತೆಗೆದುಕೊಂಡಿರುವ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹಲವರು ಟೀಕೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಈ ಪ್ರಕರಣದಲ್ಲಿ ರಾಜ್ಯಸರ್ಕಾರ ಇನ್ನೂ ಈ ವಿಚಾರಕ್ಕೆ ಪ್ರತಿಕ್ರಿಯಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಸರ್ಕಾರದ ವಿರುದ್ದ ಎಳ್ಳು ನೀರು ಬಿಡುವ ಅಭಿಯಾನ


