Homeಅಂಕಣಗಳುರೈತ ಹೋರಾಟ- ದ.ಕ ಜಿಲ್ಲೆಯ ರೈತರು ಸೊಲ್ಲೆತ್ತಲಿಲ್ಲವೇಕೆ?: ಮಿಸ್ರಿಯಾ ಪಜೀರ್

ರೈತ ಹೋರಾಟ- ದ.ಕ ಜಿಲ್ಲೆಯ ರೈತರು ಸೊಲ್ಲೆತ್ತಲಿಲ್ಲವೇಕೆ?: ಮಿಸ್ರಿಯಾ ಪಜೀರ್

ಒಂದು ಕಾಲಕ್ಕೆ ಮೇಲ್ವರ್ಗದ ಜಮೀನುದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಮಂದಿಗೆ ಭೂಸುಧಾರಣೆ ಕಾನೂನು, ಭೂಮಿಯ ಹಕ್ಕು ನೀಡಿತು. ಆ ಮೂಲಕ ಜಿಲ್ಲೆಯ ಸಹಸ್ರಾರು ಭೂರಹಿತ ರೈತರು ಸ್ವಾಭಿಮಾನದ ಬದುಕು ಕಂಡುಕೊಂಡರು. ಅದೇ ಸಮುದಾಯದ ಮಂದಿ ಇಂದು ಬದುಕಿಗಿಂತ ಧರ್ಮವನ್ನು ಮುಖ್ಯವಾಗಿಸಿಕೊಂಡು ರೈತ ಹೋರಾಟದ ವಿರುದ್ಧ ನಿಂತಿರುವುದು ವಿಪರ್ಯಾಸ.

- Advertisement -
- Advertisement -

ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಅತ್ತ ದೆಹಲಿಯಲ್ಲಿ ಲಕ್ಷಾಂತರ ಮಂದಿ ಮೂರು ತಿಂಗಳುಗಳಿಂದ ತೀವ್ರ ಪ್ರತಿರೋಧವೊಡ್ಡುತ್ತಿರುವಾಗ, ಜಾಗತಿಕ ಮಟ್ಟದಲ್ಲಿಯೂ ಮೋದಿ ಸರಕಾರದ ವಿರುದ್ಧ ವಿವಿಧ ಕ್ಷೇತ್ರದ ಗಣ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮ ದ.ಕ ಜಿಲ್ಲೆಯಲ್ಲಿ ಕೆಲ ಹೋರಾಟಗಾರರ ಪ್ರತಿಭಟನೆ ಮತ್ತು ಬೆರಳೆಣಿಕೆಯ ರೈತರ ತೆಳುವಾದ ಅಸಹನೆ ಬಿಟ್ಟರೆ ಬಹುತೇಕ ರೈತರು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತಿದ್ದಾರೆ. ಒಂದು ಕಾಲಕ್ಕೆ ಹಲವು ಹೋರಾಟ ಮತ್ತು ಸುಧಾರಣೆಗಳಿಗೆ ಭೂಮಿಕೆಯೊದಗಿಸಿದ್ದ ನಮ್ಮ ಜಿಲ್ಲೆ ಇಂದು ಹೋರಾಟವನ್ನೇ ಗೇಲಿ ಮಾಡುವಲ್ಲಿಗೆ ಬಂದು ನಿಂತಿದೆ. ಹಿಂದೆ ಪ್ರಭುತ್ವದ ಜನವಿರೋಧಿ ನಿಲುವುಗಳ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ (ಕೆಕೆಎಸ್‌ವಿ) ಹೋರಾಟಗಳನ್ನು ಅಜ್ಜ ಮೊಮ್ಮಗನ ಹೋರಾಟವೆಂದು ಅಪಹಾಸ್ಯ ಮಾಡಿದ್ದಿದೆ. ಇಲ್ಲಿನ ಜನತೆಗೆ ಬೆರಳೆಣಿಕೆಯ ಜನ ಸೇರಿ ನಡೆಸುವ ಪ್ರತಿಭಟನೆಗಳು ಬರಿ ತಮಾಷೆಯಾಗಿ ಕಂಡಿತೇ ಹೊರತು ಉದ್ದೇಶ ಮನದಟ್ಟಾಗಲಿಲ್ಲವೇನೋ. ಈ ಕಾರಣದಿಂದಾಗಿ ಕೆಕೆಎಸ್‌ವಿ ಸಂಘಟನೆಯು ನಮ್ಮ ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿತು.

ಇಲ್ಲಿನ ಹೋರಾಟವನ್ನು ದಮನಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆಯಾದರೂ ಇಲ್ಲಿನ ಸೋಕಾಲ್ಡ್ ಬುದ್ಧಿವಂತರ ಪ್ರತಿರೋಧ ಮನೋಭಾವ ಎಲ್ಲಿ ಹೋಯಿತು? ನಾವೇನೇ ಮಾಡಿದರೂ ಅವರು ಮಾಡಬೇಕಾಗಿರುವುದನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸುತ್ತಾರೆ, ಆದ್ದರಿಂದ ಈ ಹೋರಾಟವೆಲ್ಲಾ ವ್ಯರ್ಥವೆಂದೂ, ಸುಮ್ಮನೆ ಪ್ರಾಣವನ್ನೇಕೆ ಕಳೆದುಕೊಳ್ಳಬೇಕು ಎಂದು ದೂರ ನಿಂತು ಅಭಿಪ್ರಾಯಪಡುತ್ತಿದ್ದ ಇಲ್ಲಿನ ಅಲ್ಪಸಂಖ್ಯಾತರು ಬೀದಿಗಿಳಿದದ್ದೇ ಎನ್‌ಆರ್‌ಸಿ, ಸಿಎಎ ಎಂಬ ಕರಾಳ ಕಾನೂನುಗಳು ತಮ್ಮ ಕಾಲಬುಡಕ್ಕೆ ಬಂದು ನಿಂತಾಗ. ಹೋರಾಟವನ್ನು ಹತ್ತಿಕ್ಕಲು, ಎರಡು ಅಮಾಯಕ ಜೀವಗಳನ್ನು ಕ್ರೂರ ವ್ಯವಸ್ಥೆಯು ಬಲಿ ತೆಗೆದುಕೊಂಡದ್ದನ್ನು ಮರೆಯುವಂತೆಯೂ ಇಲ್ಲ. ಸಮಸ್ಯೆಗಳು ನಮ್ಮ ಮನೆ ಬಾಗಿಲಿಗೆ ಬರುವವರೆಗೂ ಕಾಯದೆ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಯೊಬ್ಬರೂ ಪ್ರತಿರೋಧಿಸಿದರೆ ಆಳುವವರೆದೆಯಲ್ಲಿ ಅದು ನಡುಕ ಉಂಟುಮಾಡಬಹುದು. ಇದುವೇ ಪ್ರಜಾಪ್ರಭುತ್ವದ ಗೆಲುವು ಎಂಬುದನ್ನು ಮರೆಯಬಾರದು.

ತುಳುನಾಡಿನ ಓರ್ವ ರೈತನ ಮಗಳಾಗಿ ಇಲ್ಲಿನ ಕೃಷಿಕರು ಹೋರಾಟ ನಿರತ ರೈತರ ಜೊತೆ ದನಿಗೂಡಿಸದಿರಲು ಕಾರಣವೇನೆಂಬುದನ್ನು ನನ್ನ ಸೀಮಿತ ದೃಷ್ಟಿಕೋನದಲ್ಲಿ ಚರ್ಚಿಸುತ್ತೇನೆ.

ದ.ಕ ಜಿಲ್ಲೆಯ ಅಡಿಕೆ ಕೃಷಿಕರನ್ನು ರೈತರು ಎನ್ನುವುದಕ್ಕಿಂತ ತೋಟಗಾರಿಕೆ ಕಸುಬಿನವರೆನ್ನುವುದು ಹೆಚ್ಚು ಸೂಕ್ತ. ಒಂದು ಕಾಲಕ್ಕೆ ಮೇಲ್ವರ್ಗದ ಜಮೀನುದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಮಂದಿಗೆ ಭೂ ಸುಧಾರಣೆ ಕಾನೂನು, ಭೂಮಿಯ ಹಕ್ಕು ನೀಡಿತು. ಆ ಮೂಲಕ ಜಿಲ್ಲೆಯ ಸಹಸ್ರಾರು ಭೂರಹಿತ ರೈತರು ಸ್ವಾಭಿಮಾನದ ಬದುಕು ಕಂಡುಕೊಂಡರು. ಅದೇ ಸಮುದಾಯದ ಮಂದಿ ಇಂದು ಬದುಕಿಗಿಂತ ಧರ್ಮವನ್ನು ಮುಖ್ಯವಾಗಿಸಿಕೊಂಡು ರೈತ ಹೋರಾಟದ ವಿರುದ್ಧ ನಿಂತಿರುವುದು ವಿಪರ್ಯಾಸ.

ಅಂದು ಭೂಮಿಯ ಹಕ್ಕು ಪಡಕೊಂಡವರ ಭೂಮಿ ತಲೆಮಾರುಗಳು ದಾಟಿ ಹೋಗುವಾಗ ಮತ್ತಷ್ಟು ತುಂಡುಗಳಾಗಿ ಹರಿದು ಹಂಚಿ ಹೋಯಿತು. ತುಂಡು ಭೂಮಿಯಲ್ಲಿ ಆಹಾರ ಬೆಳೆ ಲಾಭದಾಯಕವಲ್ಲ ಎನ್ನುವ ವಾಸ್ತವ ಅವರನ್ನು ಆಹಾರದ ಕೃಷಿಯಿಂದ ವಿಮುಖಗೊಳಿಸಿತು. ಸಹಜವಾಗಿಯೇ ಅವರು ಅದರಲ್ಲಿ ಆಹಾರದ ಬೆಳೆಗಿಂತ ಕಡಿಮೆ ಶ್ರಮ ಬಯಸುವ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗುಗಳನ್ನು ಇಟ್ಟರು.

1998-2000ದ ಸುಮಾರಿಗೆ 40-50 ರೂಪಾಯಿಯ ಮಧ್ಯೆ ಅಡ್ಡಾಡುತ್ತಿದ್ದ ಅಡಿಕೆಯ ಬೆಲೆ ಏಕಾಏಕಿ ಏರುತ್ತಾ ರೂ. 280ರವರೆಗೂ ತಲುಪಿತು. ಆದರೆ ಈ ಬದಲಾವಣೆ ಹೆಚ್ಚು ಕಾಲ ಉಳಿಯಲಿಲ್ಲ. 280ರಿಂದ ಮತ್ತೆ ಕುಸಿಯುತ್ತಾ ಬಂದ ಬೆಲೆ ಮತ್ತೆ ನಲ್ವತ್ತು ರೂಪಾಯಿಯವರೆಗೂ ಇಳಿಯಿತು. ಬೆಲೆ ಕುಸಿದರೂ ಇಂದಲ್ಲ ನಾಳೆ ಮತ್ತೆ ಅಡಿಕೆಗೆ ಬೆಲೆ ಬರಬಹುದೆಂದು ಆಸೆಯಿಂದ ರೈತರು ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲೆಲ್ಲಾ ಅಡಿಕೆ ಇಟ್ಟರು. ಅಲ್ಲಿಗೆ ದ.ಕ ಜಿಲ್ಲೆಯ ಭತ್ತದ ಬೆಳೆ ನಿರ್ನಾಮದ ಹಂತ ತಲುಪಿತು. ಆ ಬಳಿಕ ಬಂದ ವಿಶೇಷ ಆರ್ಥಿಕ ವಲಯಕ್ಕೆ ಪ್ರಭುತ್ವವು ಇಲ್ಲಿನ ಫಲವತ್ತಾದ ಕೃಷಿ ಭೂಮಿಗಳನ್ನು ಧಾರೆಯೆರೆದು ಕೊಟ್ಟಿತು. ಆ ಮೂಲಕ ಅಳಿದುಳಿದ ಆಹಾರ ಕೃಷಿ ಸಂಪೂರ್ಣವಾಗಿ ಪತನದಂಚಿಗೆ ತಳ್ಳಲ್ಪಟ್ಟಿತು.

ಒಂದು ಕಾಲಕ್ಕೆ ಜಿಲ್ಲೆಯ ನಗರ ಪ್ರದೇಶಗಳಲ್ಲೂ ಧಾರಾಳವಾಗಿ ಭತ್ತದ ಗದ್ದೆಗಳಿದ್ದವು. ಅಲ್ಲಿನ ಕೃಷಿಕರು ಅದರ ಜಾಗದಲ್ಲಿ ಇಂದು ಕಾಂಕ್ರೀಟ್ ಕಾಡು ಕಟ್ಟಿ ಕೂತಲ್ಲೇ ದುಡ್ಡು ಎಣಿಸುತ್ತಿದ್ದಾರೆ.

ಇನ್ನು ಜಿಲ್ಲೆಯ ತರಕಾರಿ ಬೆಳೆಗಾರರನ್ನು ತೆಗೆದುಕೊಂಡರೆ ಮನೆಯಂಗಳದ ಹತ್ತು ಸೆಂಟ್ಸ್ ಜಮೀನಿನಲ್ಲಿ ತರಕಾರಿ ಬೆಳೆಯುವ ಜನ ದಿನ- ದಿನ ಕೊಯ್ಲು ಮಾಡಿದ ತರಕಾರಿಗಳನ್ನು ಅಂದಂದು ಮಾರಿ ದಿನ ದೂಡುತ್ತಾರೆಯೇ ವಿನಾ ಮಂಡಿಗೆ ಹಾಕುವುದಿಲ್ಲ. ಈ ಜನಕ್ಕೆಲ್ಲಾ ಪ್ರಸ್ತುತ ರೈತ ಹೋರಾಟ ಪಂಜಾಬ್-ಹರಿಯಾಣದ ರೈತರ ಸಮಸ್ಯೆಯಷ್ಟೇ. ಪಂಜಾಬ್-ಹರಿಯಾಣದ ರೈತರು ಬೀದಿಗೆ ಬಿದ್ದರೆ ನಾವಿಲ್ಲಿ ಅಕ್ಕಿಗೆ ಕಿಲೋಗೆ ಐನೂರು ರೂಪಾಯಿ ಕೊಡುವ ಕಾಲ ಬಂದೀತೆಂಬ ಪ್ರಜ್ಞೆಯೂ ಇವರಿಗಿಲ್ಲ. ಇಲ್ಲಿನ ಜನಸಾಮಾನ್ಯರು ಹೆಚ್ಚು ನಕಲಿ ಸುದ್ದಿಗಳನ್ನು ಉಣಬಡಿಸುವ ಉದಯವಾಣಿ, ಹೊಸ ದಿಗಂತ, ವಿಜಯವಾಣಿ ಪತ್ರಿಕೆಗಳನ್ನು ಓದುವಾಗ, ಸದಾ ಸುಳ್ಳು ಬೊಗಳುತ್ತಲೇ ಜನರ ದಿಕ್ಕು ತಪ್ಪಿಸುವ ಕನ್ನಡದ ನ್ಯೂಸ್ ಚಾನೆಲ್‌ಗಳನ್ನು ವೀಕ್ಷಿಸುವಾಗ ಅಂತಹ ಪ್ರಜ್ಞೆ ಬೆಳೆಯುವುದಾದರೂ ಹೇಗೆ?

ಇಲ್ಲಿನ ಜನರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ.

ಮೊನ್ನೆ ತುಳು ರಂಗಭೂಮಿ ಕಲಾವಿದ ಶೋಭರಾಜ್ ಪಾವೂರು ಇಂಧನ ಬೆಲೆಯೇರಿಕೆಯನ್ನು ಟೀಕಿಸಿ ಎಫ್‌ಬಿಯಲ್ಲಿ ಬರೆದಾಗ ಇಲ್ಲಿನ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ದಾಳಿ ನಡೆಸಿದರು. ಆ ಮಂದಿಗೆ ತಮ್ಮ ಬದುಕಿಗಿಂತ, ತಮ್ಮ ಧರ್ಮವೆಂದೇ ನಂಬಿರುವ ಬಿಜೆಪಿ ಪಕ್ಷದ ಹಿತಾಸಕ್ತಿಯೇ ಹೆಚ್ಚಾಯಿತು.

ಉದ್ಯೋಗ ಸೃಷ್ಟಿಯ ನೆಪವೊಡ್ಡಿ ರೈತರಿಂದ ಕೃಷಿ ಭೂಮಿಯನ್ನು ಕಬಳಿಸಿಕೊಂಡ ಎಮ್‌ಆರ್‌ಪಿಎಲ್ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಒಂದೆರಡು ವರ್ಷಗಳ ಹಿಂದೆ ಖಾಲಿ ಹುದ್ದೆಗಳನ್ನು ಭರ್ತಿಮಾಡುವಾಗ ಜಿಲ್ಲೆಯ ಒಳಗಿನವರಿಗೆ ಅವಕಾಶವನ್ನು ನೀಡಲಿಲ್ಲ. ನಮ್ಮದೇ ನೆಲ, ನಮ್ಮದೇ ಜಲ. ಆದರೆ ಇದರ ವಿರುದ್ಧ ಯಾವೊಬ್ಬನೂ ತಗಾದೆ ಎತ್ತಲಿಲ್ಲ. ಧರ್ಮ ರಕ್ಷಣೆಯ ದೊಡ್ಡ ಜವಾಬ್ದಾರಿ ಹೊತ್ತ ಬುದ್ಧಿವಂತರಿಗೆ ಇವೆಲ್ಲಾ ಅರ್ಥವಾಗುವುದೂ ಇಲ್ಲ. ಹೀಗಿರುವಾಗ ಅವರು ರೈತರ ಪರವಾಗಿ ನಿಲ್ಲಲು ಹೇಗೆ ಸಾಧ್ಯ?

2014ರ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕಾಗಿ ಮೋದಿ ಮಂಗಳೂರಿಗೆ ಬಂದಾಗ ನನ್ನ ಪುಟ್ಟ ಹಳ್ಳಿಯ ಅಡಿಕೆ ಕೃಷಿಕರು ಆಡಿಕೊಳ್ಳುತ್ತಿದ್ದ ಮಾತು ನನಗೆ ಸ್ಪಷ್ಟವಾಗಿ ನೆನಪಿದೆ. “ಯಾನ್ ನಿಕ್ಲೆನ ಕೈ ಬುಡ್ಪುಜಿ, ಬಜ್ಜಾಯಿಗ್ ಎಡ್ಡೆ ಕ್ರಯ ಕೊಪೆಂದ್ ಮೋದಿ ಪಂತೇರ್ (ನಾನು ನಿಮ್ಮ ಕೈ ಬಿಡುವುದಿಲ್ಲ, ಅಡಿಕೆಗೆ ಒಳ್ಳೆಯ ಬೆಲೆ ಕೊಡುತ್ತೇನೆಂದಿದ್ದಾರೆ). ಆ ಗುಂಗಿನಿಂದ ಹೊರಬರದ ನನ್ನ ಜಿಲ್ಲೆಯ ಜನತೆಗೆ ಇತ್ತ ಮೋದಿ ತಮ್ಮ ಅನ್ನದ ಬಟ್ಟಲನ್ನು ಕಿತ್ತು ಅದಾನಿಯ ಕೈಗಿಡುತ್ತಿರುವಾಗ ಅನ್ನಕ್ಕೆ ಪರ್ಯಾಯವಾಗಿ ಅಡಿಕೆ ತಿಂದು ಬದುಕಲಾಗದು ಎಂಬ ವಾಸ್ತವ ಅರ್ಥವಾಗಲೇ ಇಲ್ಲ.


ಇದನ್ನೂ ಓದಿ: ಹೋರಾಟನಿರತ ಕಿಸಾನ್‌ಗೆ ಆದ ಅವಮಾನ ಗಡಿಯಲ್ಲಿರುವ ಜವಾನ್‌ರಿಗೆ ನೋವು ತರಿಸುತ್ತದೆ: ಪ್ರತಿ ಸೈನಿಕನೂ ಸಮವಸ್ತ್ರದಲ್ಲಿರುವ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...