ಕಾನೂನು ಪ್ರಕಾರ ನಿಷೇಧವಾಗಿದ್ದರೂ ದೇವದಾಸಿ ಪದ್ಧತಿ ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಇನ್ನೂ ಜಾರಿಯಲ್ಲಿದೆ. ಈ ಅಮಾನವೀಯ ಪದ್ದತಿಗೆ ಬಲಿಯಾಗಬೇಕಿದ್ದ 19 ವರ್ಷದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡುವ ಮೂಲಕ ದಿಟ್ಟತನ ಮೆರೆದು ಅದರಿಂದ ಪಾರಾಗಿದ್ದಾಳೆ.
ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ದೇವದಾಸಿ ನಿರ್ಮೂಲಾನ ಕೇಂದ್ರದ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಆ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಂತ್ರಸ್ತ ಯುವತಿ ನೆರೆಮನೆಯ ಹುಡುಗನನ್ನು ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಯುವತಿಯ ಕುಟುಂಬದಿಂದ ತೀವ್ರ ವಿರೋಧವಿತ್ತು. ಏಕೆಂದರೆ ಇಬ್ಬರು ಹೆಣ್ಣು ಮಕ್ಕಳಿದ್ದ ಕುಟುಂಬದ ಆಸ್ತಿ ಸಂತ್ರಸ್ತ ಯುವತಿ ಮತ್ತು ಆಕೆಯ ಪತಿಯ ಪಾಲಾಗುತ್ತದೆ ಎಂದು ಆತಂಕ ಕುಟುಂಬದ್ದಾಗಿತ್ತು. ಹೀಗಾಗಿ, ಆಸ್ತಿ ಯುವತಿಯ ಪಾಲಾಗುತ್ತದೆ ಎಂದು ಆಕೆಯ ಪೋಷಕರು ದೇವದಾಸಿ ಪದ್ದತಿಗೆ ತಳ್ಳಲು ಆಚರಣೆಗಳನ್ನು ಮಾಡುತ್ತಿದ್ದಾರೆಂದು ತಿಳಿದ ನಂತರ ಯುವತಿ ಪೊಲೀಸರಿಗೆ ದೂರು ನಿಡಿ ಸಹಾಯಕ್ಕಾಗಿ ಮನವಿ ಮಾಡಿದ್ದಳು.
“ಹುಡುಗಿಯ ತಾಯಿ ಮಾಜಿ ದೇವದಾಸಿಯಾಗಿದ್ದು, ತನ್ನ ಮಗಳನ್ನು ಅದೇ ಕೆಲಸಕ್ಕೆ ತಳ್ಳಲು ಮುಂದಾಗಿದ್ದರು. ಇದನ್ನು ದೇವತೆಗಳ ಹೆಸರಿನಲ್ಲಿ ಮಾಡಲಾದರೂ, ಯುವತಿಯರು ಉತ್ತಮ ಭವಿಷ್ಯವಿಲ್ಲದೆ ಭವಿಷ್ಯವಿಲ್ಲದೆ ಲೈಂಗಿಕ ಗುಲಾಮರಾಗಿ ನರಳಬೇಕಾಗುತ್ತದೆ. ಸಂತ್ರಸ್ತ ಯುವತಿ ಕಳೆದ ವಾರ ಪೊಲೀಸರನ್ನು ಸಂಪರ್ಕಿಸಿದ ನಂತರ, ನಾವು ದಾಳಿ ಮಾಡಿದೆವು. ದಾಳಿ ನಡೆದ ಮೂರು ದಿನಗಳ ನಂತರ ಎಚ್ಚೆತ್ತುಕೊಂಡ ಆಕೆಯ ಪೋಷಕರು ಮಗಳು ಇಷ್ಟಪಟ್ಟವರೊಡನೆ ಮದುವೆಯಾಗಲು ಒಪ್ಪಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣವನ್ನು ಸುಲಭವಾಗಿ ಬಗೆಹರಿಸಲಾಯಿತು. ಯುವತಿಯ ಮದುವೆಗೂ ಮುನ್ನ ಆಕೆಯನ್ನು ಕೆಲವು ದಿನಗಳು ಸರ್ಕಾರಿ ಸೌಲಭ್ಯದಲ್ಲಿ ಮತ್ತು ಕೆಲ ದಿನಗಳು ಸ್ನೇಹಿತೆಯ ಮನೆಯಲ್ಲಿ ಇರಿಸಲಾಗಿದೆ. ಆಕೆಯ ಪೋಷಕರು ತಮ್ಮ ಮನಸ್ಸನ್ನು ಬದಲಾಯಿಸುವುದಿಲ್ಲ ಎಂದು ಪೊಲೀಸರಿಗೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳ್ಳಾರಿ ಮತ್ತು ಹೊಸದಾಗಿ ರೂಪುಗೊಂಡ ವಿಜಯನಗರ ಜಿಲ್ಲೆಗಳಲ್ಲಿ ದೇವದಾಸಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಆಡಳಿತ ಮಂಡಳಿಗಳು ತೀವ್ರ ಪ್ರಯತ್ನ ಮಾಡುತ್ತಿವೆ. ಈ ಎರಡೂ ಜಿಲ್ಲೆಗಳಲ್ಲಿ 10,000 ನೋಂದಾಯಿತ ದೇವದಾಸಿಗಳು ಇದ್ದು, ಪ್ರಸ್ತುತ ಸರ್ಕಾರದ ಪುನರ್ವಸತಿ ಯೋಜನೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಮಾಸಿಕ 1,500 ರೂ. ನೀಡುತ್ತಿದೆ. ಆದರೆ ಇನ್ನು ಮುಂದೆ ಒಬ್ಬರೂ ಸಹ ದೇವದಾಸಿಗಳಾಗದಂತೆ ತಡೆಯುವ ಸವಾಲು ನಮ್ಮ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ನನ್ನ ಕುಟುಂಬದವರ ಮತವೇ ನನಗೆ ಬಿದ್ದಿಲ್ಲ ಎಂದ ಬಿಜೆಪಿ ಅಭ್ಯರ್ಥಿ!


