’ಅಪ್ಪಣೆ ಇಲ್ಲದೇ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮ ಪ್ರವೇಶ ನಿಷಿದ್ಧ’- ಈ ಅರ್ಥದ ಬೋರ್ಡ್‌ಗಳನ್ನು ಚಿಕ್ಕವರಿದ್ದಾಗ ನೋಡಿದ್ದೇವೆ. ಪ್ರೊ. ನಂಜುಂಡಸ್ವಾಮಿ ನೇತೃತ್ವದ ರೈತ ಚಳುವಳಿ ತಾತ್ವಿಕವಾಗಿ ಮತ್ತು ಸಂಘಟನಾತ್ಮಕವಾಗಿ ಪ್ರಬಲವಾಗಿದ್ದಾಗ ರಾಜ್ಯದ ಬಹುಪಾಲು ಗ್ರಾಮಗಳ ಪ್ರವೇಶದಲ್ಲಿ ಇಂತಹ ಫಲಕಗಳು ರಾರಾಜಿಸಿದ್ದವು.
ಈಗ ಪಶ್ಚಿಮ ಉತ್ತರಪ್ರದೇಶದ ಬಹುಪಾಲು ಗ್ರಾಮಗಳ ಪ್ರವೇಶದಲ್ಲಿ, ’ಬಿಜೆಪಿಯವರಿಗೆ ಬಿಲ್‌ಕುಲ್ ಪ್ರವೇಶ ನಿಷೇಧ’ ಎಂಬ ಫಲಕಗಳು ಕಾಣಿಸುತ್ತಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿಯ ಸಾಮಾಜಿಕ ಬಹಿಷ್ಕಾರಕ್ಕೆ ಬಿಕೆಯುನ ನರೇಶ್ ಟಿಕಾಯತ್ ಸೂಚಿಸಿದ ಕೆಲ ದಿನಗಳ ನಂತರ, ಬಿಜೆಪಿ ನಾಯಕರಿಗೆ ಪಶ್ಚಿಮ ಉತ್ತರಪ್ರದೇಶದ ಗ್ರಾಮಗಳಿಗೆ ಭೇಟಿ ಕೊಡುವುದೇ ಕಷ್ಟವಾಗಿದೆ. ಸದ್ಯದಲ್ಲೇ ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಕೃಷಿ ಕಾನೂನುಗಳ ವಿರುದ್ಧದ ರೈತ ಪ್ರತಿಭಟನೆ ಬಿಜೆಪಿಗೆ ತೊಡಕಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಮುಜಫರ್‌ನಗರದ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಮತ್ತು ಬುಲ್ಡಾನಾ ಶಾಸಕ ಉಮೇಶ್ ಮಲಿಕ್ ಇತರರು ಬೈಸ್ವಾಲ್ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಿದ್ದು, ಬಲ್ಯಾನ್ ಮುರ್ದಾಬಾದ್ ಮತ್ತು ಕಿಸಾನ್ ಏಕ್ತಾ ಜಿಂದಾಬಾದ್ ಘೋಷಣೆಗಳು.
ಇದನ್ನೂ ಓದಿ: ಭೀಮಾ ಕೊರೆಗಾಂವ್ – ಕ್ರಾಂತಿಕಾರಿ ತೆಲುಗು ಕವಿ ವರವರ ರಾವ್‌ಗೆ ಆರು ತಿಂಗಳ ಜಾಮೀನು
ಜಿಲ್ಲಾ ಪಂಚಾಯತ್ ಚುನಾವಣೆಗೆ ತಯ್ಯಾರಿ ನಡೆಸಿರುವ ಬಿಜೆಪಿ ತನ್ನ ಜಾಟ್ ನೆಲೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ’ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಳೆದ ಬಾರಿ ಪಶ್ಚಿಮ ಯುಪಿಯಲ್ಲಿನ 29 ಜಿಲ್ಲಾ ಪಂಚಾಯಿತಿಗಳಲ್ಲಿ 25 ಗೆದ್ದಿದ್ದರು. ಇಲ್ಲಿ ಜಾಟ್ ಸಮುದಾಯವು ಕನಿಷ್ಟ 18 ರಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದೆ” ಎಂದು ಹಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಗಮನ ಸೆಳೆದರು.
ಭಾನುವಾರ ಬಿಜೆಪಿ ನಾಯಕರು ಭೇಟಿ ನೀಡಿದ ಲಿಸಾದ್ ಗ್ರಾಮವು, ಖಾಪ್ ಪಂಚಾಯತ್ ಮುಖಂಡ ಬಾಬಾ ಹರಿಕಿಶನ್ ಅವರ ಸ್ಥಳೀಯ ಗ್ರಾಮವಾಗಿದ್ದು, ಈ ಪ್ರದೇಶದಲ್ಲಿ ಅವರಿಗೆ ಭಾರಿ ಬೆಂಬಲವಿದೆ. ಹರಿಕಿಶನ್, ’ಸಮುದಾಯ ತನ್ನ ನಿರ್ಧಾರದಿಂದ ಹಿಂದೆ ಸರಿಯದು. ಕೇಂದ್ರವು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ನಾವು ಕೇಂದ್ರ ಸಚಿವ ಬಲ್ಯಾನ್ ಮತ್ತು ಭೂಪೇಂದ್ರ ಚೌಧರಿ (ಯುಪಿ ಪಂಚಾಯತಿ ರಾಜ್ ಸಚಿವ) ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಕಳೆದ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲಾಗಿಲ್ಲ ಎಂಬುದನ್ನೂ ಅವರಿಗೆ ನೆನಪಿಸಿದ್ದೇವೆ’ ಎಂದಿದ್ದಾರೆ.
ಬಿಜೆಪಿಯನ್ನು ಬಹಿಷ್ಕರಿಸಲಾಗಿದೆ ಎಂಬುದನ್ನು ನಿರಾಕರಿಸಿದ ಬಲ್ಯಾನ್, “ಅವರ ಕುಂದುಕೊರತೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದೇವೆ” ಎಂದು ಹೇಳಿದರು.
ಜನವರಿ 29 ರಂದು ಮುಜಫರ್‌ನಗರದಿಂದ ಪ್ರಾರಂಭವಾದ ಕೃಷಿ ಕಾನೂನುಗಳ ವಿರುದ್ಧದ ಮಹಾಪಂಚಾಯತ್ ನಂತರ ಪಶ್ಚಿಮ ಯುಪಿ ಮಹಾ ಪಂಚಾಯತ್‌ಗಳ ಸರಣಿಗೆ ಸಾಕ್ಷಿಯಾಗಿದೆ. ಹಂತಹಂತವಾಗಿ ಹೆಚ್ಚಿನ ಜನಸಂದಣಿಯನ್ನು ಸೆಳೆಯುತ್ತಿದೆ. ಈ ಸಭೆಗಳಲ್ಲಿ ಸುಮಾರು ಒಂದು ಡಜನ್ ಸಭೆಗಳನ್ನು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ನಾಯಕ ಜಯಂತ್ ಚೌಧರಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಡೆಸಿದ್ದಾರೆ. ಫೆಬ್ರವರಿ 28 ರಂದು ಮೀರತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಮಹಾ ಪಂಚಾಯತ್ ನಡೆಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮಂಡಲ ಅಧ್ಯಕ್ಷ ಸೇರಿದಂತೆ 4 ಜನರಿಂದ 20 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ
ಫೆಬ್ರವರಿ 15 ರಂದು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರು ಯುಪಿ, ಹರಿಯಾಣ ಮತ್ತು ರಾಜಸ್ಥಾನದ ಜಾಟ್ ನಾಯಕರೊಂದಿಗೆ ಸಭೆ ನಡೆಸಿದ್ದರು. ಜಯಂತ್ ಚೌಧರಿ ಅವರು ಇತ್ತೀಚೆಗೆ ನಡೆದ ಮಹಾಪಂಚಾಯತ್‌ನಲ್ಲಿ ಈ ಸಭೆಯ ಕುರಿತು ಮಾತನಾಡುತ್ತಾ, ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ಜಾತಿ ಮತ್ತು ಕೋಮುವಾದಿ ಮಾರ್ಗಗಳಲ್ಲಿ ರೈತರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆಂದು ನಮಗೆ ತಿಳಿದಿದೆ. ನಾವು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಹೇಳಿದ್ದರು.
ಮುಜಫರ್‌ನಗರದ ಕಲ್‌ಖಂಡೆ ಖಾಪ್‌ನ ಬಾಬಾ ಸಂಜಯ್ ಸಿಂಗ್, ಬಿಜೆಪಿಯು ರೈತರನ್ನು “ಭಯೋತ್ಪಾದಕರು ಮತ್ತು ದೇಶದ್ರೋಹಿಗಳು” ಎಂದು ಕರೆದಿದ್ದಕ್ಕೆ ನಾವೆಲ್ಲ ನಿರಾಶೆಗೊಂಡಿದ್ದೇವೆ” ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡರು ನಮ್ಮೊಂದಿಗೆ ಮಾತನಾಡಲು ಬಯಸಿದರೆ, ಅವರು ಮೊದಲು ರಾಜೀನಾಮೆ ನೀಡಬೇಕು. ಅವರು ನಮ್ಮಲ್ಲಿಯ ಒಬ್ಬರಂತೆ ನಮ್ಮ ನಡುವೆ ಇರಬೇಕು, ಎಂದು ಅವರು ಹೇಳಿದ್ದಾರೆ.
ಟಿಕಾಯತ್ ಅವರ ಸ್ವಗ್ರಾಮವಾದ ಸಿಸೌಲಿ ಮತ್ತು ನೆರೆಯ ಪ್ರದೇಶಗಳಲ್ಲಿ, ಬಿಜೆಪಿಯನ್ನು ಬಹಿಷ್ಕರಿಸುವಂತೆ ಟಿಕಾಯತ್ ಮಾಡಿದ ಕರೆ ಸ್ಪಲ್ಪ ಪರಿಣಾಮ ಬೀರುತ್ತಿದೆ. ಪ್ರಧಾನವಾಗಿ 84 ಜಾಟ್ ಹಳ್ಳಿಗಳ ’ಚೌಧರಿ’ ಅಥವಾ ನಾಯಕ ಎಂದು ಪರಿಗಣಿಸಲ್ಪಟ್ಟ ಟಿಕಾಯತ್ ಗ್ರಾಮೀಣ ಮುಜಾಫರ್‌ನಗರದಲ್ಲಿ ದೊಡ್ಡ ಹಿಡಿತ ಹೊಂದಿದ್ದಾರೆ.
“ನಮಗೆ ಬಲವಾದ ಏಕತೆಯ ಪ್ರಜ್ಞೆ ಇದೆ ಮತ್ತು ಸದ್ಯದ ವಿದ್ಯಮಾನಗಳು ನಮ್ಮನ್ನು ಮತ್ತಷ್ಟು ಒಂದುಗೂಡಿಸಿದೆ. ನಾವು ಬಿಜೆಪಿ ನಾಯಕರನ್ನು ಗ್ರಾಮ ಪ್ರವೇಶಿಸಲು ಬಿಡುವುದಿಲ್ಲ; ಕಾನೂನುಗಳನ್ನು ರದ್ದುಪಡಿಸಿದಾಗ ಮಾತ್ರ ಅವರು ನಮ್ಮೊಂದಿಗೆ ಮಾತನಾಡಬೇಕು ಎಂದು ಸಿಸೌಲಿಯ ರೈತ ಅಜಿತ್ ಚೌಧರಿ (24) ಹೇಳಿದರು. ನಮ್ಮನ್ನು ಭೇಟಿ ಮಾಡಲು ಯಾವುದೇ ಶಾಸಕ, ಸಂಸದ ಅಥವಾ ನಾಯಕ ಬರಬಾರದು. ಅವರು ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಬಯಸಿದರೆ, ಅವರು ಸಂಯುಕ್ತ್ ಕಿಸಾನ್ ಮೋರ್ಚಾದೊಂದಿಗೆ ಮಾತಾಡಬೇಕು. ಮೋರ್ಚಾ ನಮಗೆ ಏನೇ ಹೇಳಿದರೂ ನಾವು ಮಾಡುತ್ತೇವೆ ಎಂದು ಚೌಧರಿ ಖಾಪ್‌ನ ಸಚಿನ್ ಚೌಧರಿ ಹೇಳಿದರು.
ಇದನ್ನೂ ಓದಿ: ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ – ಮುಖ್ಯಮಂತ್ರಿ ರಾಜೀನಾಮೆ
ಸಂಸದ ಬಲ್ಯಾನ್ ಅವರ ಸ್ಥಳೀಯ ಗ್ರಾಮವಾದ ಕುಟ್ಬಾದಲ್ಲಿಯೂ ಇದರ ಪರಿಣಾಮವನ್ನು ಕಾಣಬಹುದು. ಸಾಂಪ್ರದಾಯಿಕವಾಗಿ, ಜಾಟ್‌ಗಳು ಯಾವಾಗಲೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ ಈ ಸಮಯದಲ್ಲಿ, ಕೃಷಿ ಕಾನೂನುಗಳ ಕಾರಣದಿಂದ ಖಂಡಿತ ಬದಲಾವಣೆ ಇದೆ. ಬಲ್ಯಾನ್ ಅವರ ಮನೆ ಇಲ್ಲಿರುವ ಕಾರಣ ನಾವು ಅವರನ್ನು ಸಂಪೂರ್ಣವಾಗಿ ವಾಪಸ್ ಕಳಿಸಲು ಅಥವಾ ತಡೆಯಲು ಸಾಧ್ಯವಿಲ್ಲ. ಆದರೆ ಜನರು ಬಿಜೆಪಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬುದು ಸತ್ಯ. ಟಿಕಾಯತ್ ಮತ್ತು ಅವರ ಕುಟುಂಬಕ್ಕೆ ನಮ್ಮ ಗೌರವ ಮತ್ತು ಮೆಚ್ಚುಗೆ ಇದೆ ಎಂದು ಕುನ್ವರ್ ಪಾಲ್ ಸಿಂಗ್ ದಿವಾನ್ ಹೇಳಿದರು.
ಸಂಭಾಲ್‌ನ ಭದ್ರೌಲಾದಲ್ಲಿ, ಸ್ಥಳೀಯರು ಬಿಜೆಪಿ ಸದಸ್ಯರನ್ನು ಸ್ವಾಗತಿಸುವುದಿಲ್ಲ ಎಂದು ಫಲಕವನ್ನು ಹಾಕಿದ್ದಾರೆ.
ಅಂತಹ ಬಹಿಷ್ಕಾರದ ಕರೆ ನೀಡಿಲ್ಲ ಎಂದು ಟಿಕಾಯತ್ ಸ್ವತಃ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. “ಕಳೆದ ಎರಡು ದಿನಗಳಿಂದ ನಾನು ಈ ಪ್ರದೇಶದಲ್ಲಿದ್ದೇನೆ ಮತ್ತು ನಾನು ಅಂತಹ ಯಾವುದೇ ಬಹಿಷ್ಕಾರದ ವಿಷಯವನ್ನು ಎದುರಿಸಲಿಲ್ಲ’ ಎಂದು ಬಲ್ಯಾನ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಕೃಷಿ ನಾಯಕರಾಗಿ ಟಿಕಾಯತ್ ಅವರಿಗೆ ಮತ್ತು ಸಾರ್ವಜನಿಕ ಪ್ರತಿನಿಧಿಯಾಗಿ ನನಗೆ ವಿಶಿಷ್ಟ ಪಾತ್ರಗಳಿವೆ ಎಂದು ಅವರು ವಾದಿಸಿದರು. “ಟಿಕಾಯತ್ ಅವರು ನನ್ನ ಸಮುದಾಯದ ನಾಯಕನಾಗಿರುವುದರಿಂದ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಸಾರ್ವಜನಿಕ ಸೇವಕರಾಗಿ ನಮ್ಮ ಕೆಲಸವು ಯಾವುದೇ ಹಸ್ತಕ್ಷೇಪವಿಲ್ಲದೆ ಮುಂದುವರಿಯುತ್ತದೆ ಎಂದು ಬಲ್ಯಾನ್ ಹೇಳಿದರು.
ಬಿಜೆಪಿ ಬುಧಾನಾ ಶಾಸಕ ಉಮೇಶ್ ಮಲಿಕ್, ಜನರು ನಮಗೆ ಬೆಂಬಲ ನೀಡುತ್ತಿದ್ದಾರೆ; ವಾಸ್ತವವಾಗಿ ಬೆಂಬಲ ಹೆಚ್ಚಾಗಿದೆ. ಸಿಸೌಲಿ ನನ್ನ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ ಮತ್ತು ನಾನು ಸ್ಥಳೀಯರನ್ನು ನಿಯಮಿತವಾಗಿ ಭೇಟಿಯಾಗುತ್ತೇನೆ ಎಂದಿದ್ದಾರೆ.
ಬಹಿಷ್ಕಾರದ ಕರೆಯ ಬಗ್ಗೆ ಶನಿವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್ ಕೇಳಿದಾಗ, ಟಿಕಾಯತ್, ನನ್ನ ಮಾತುಗಳನ್ನು ಸಂದರ್ಭದಿಂದ ಪ್ರತ್ಯೇಕವಾಗಿ ನೋಡಲಾಗುತ್ತಿದೆ. ನಾನು ಹೇಳಿದ್ದನ್ನೆಲ್ಲಾ ಜನರು ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುವವರೊಂದಿಗೆ ತೊಡಗಿಸಬಾರದು’ ಎಂದಿದ್ದಾರೆ.
ಇದನ್ನೂ ಓದಿ: ‘ಇದೇನಾ ಅಚ್ಚೇ ದಿನ್’- ಮುಂಬೈಯ ಬೀದಿ ಬೀದಿಗಳಲ್ಲಿ ಬ್ಯಾನರ್ ಅಳವಡಿಸಿದ ಶಿವಸೇನೆ!


