ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಯನ್ನು ಸಿಬಿಐ ತನಿಖೆಗೆ ಒಳಪಡಿಸಿದ ಕುರಿತು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ, ಇಂದು ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು “ದಂಗಬಾಜ್ (ದಂಗೆಕೋರ)” ಮತ್ತು “ದೈತ್ಯ (ರಾಕ್ಷಸ)” ಎಂಬ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂರು ತಿಂಗಳ ಅಂತರದಲ್ಲಿರುವ ರಾಜ್ಯ ಚುನಾವಣೆಯ ಪ್ರಚಾರಕ್ಕಾಗಿ ಕೋಲ್ಕತ್ತಾದ ಹೂಗ್ಲಿಯಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, “ಪ್ರಧಾನಿ ಈ ದೇಶದ ಅತಿ ದೊಡ್ಡ ದಂಗಾಬಾಜ್” ಎಂದು ಕಿಡಿಕಾರಿದ್ದಾರೆ.
ತೃಣಮೂಲದವರ ಮೇಲೆ ಬಿಜೆಪಿ ಬಳಸುವ “ತೋಲಾಬಾಜ್” ನಿಂದನೆಗೆ ನೇರ ಪ್ರತಿಕ್ರಿಯೆಯಾಗಿ ದಂಗಬಾಜ್ ಪದದ ಮೂಲಕ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 300 ಕ್ಕೂ ಹೆಚ್ಚು ಗುಡಿಸಲುಗಳ ಧ್ವಂಸ: ಚಿಕ್ಕಮಗಳೂರು ನಗರಸಭೆಯ ವಿರುದ್ದ ಪ್ರತಿಭಟನೆ
2020ರ ನವೆಂಬರ್‌ನಲ್ಲಿ ಅಮೆರಿಕ ಚುನಾವಣೆಯ ಅಖಾಡದಲ್ಲಿ ಹೀನಾಯವಾಗಿ ಸೋತ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ “ಕೆಟ್ಟ ಪರಿಸ್ಥಿತಿ” ನಮ್ಮ ಪ್ರಧಾನಮಂತ್ರಿಗಾಗಿ ಕಾಯುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
“ನಾನು ವಿಧಾನಸಭಾ ಚುನಾವಣೆಯಲ್ಲಿ ಗೋಲ್ ಕೀಪರ್ ಆಗಿರುತ್ತೇನೆ. ಬಿಜೆಪಿಗೆ ಒಂದೇ ಒಂದು ಗೋಲು ಗಳಿಸಲು ಬಿಡುವುದಿಲ್ಲ” ಎಂದು ಅವರು ಹೇಳಿದರು.
ಕಲ್ಲಿದ್ದಲು ಮಾಫಿಯಾದಿಂದ ಲಂಚ ಪಡೆದ ಪ್ರಕರಣದಲ್ಲಿ ಮಮತಾರವರ ಸೋದರಳಿಯ ಮತ್ತು ತೃಣಮೂಲ ಸಂಸದ ಅಭಿಷೆಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಅವರನ್ನು ಮನೆಯಲ್ಲಿ ಸಿಬಿಐ ಪ್ರಶ್ನಿಸಿತ್ತು. ಇದಾದ ಒಂದು ದಿನದ ನಂತರ ಮಮತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರುಜೀರಾ ಬ್ಯಾನರ್ಜಿಯ ಸಹೋದರಿಯನ್ನೂ ಈ ಹಿಂದೆ ಪ್ರಶ್ನಿಸಲಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ನೀವು ನನ್ನನ್ನು ಕೊಲ್ಲಬಹುದು, ನನ್ನನ್ನು ಥಳಿಸಬಹುದು. ಆದರೆ ನೀವು ಒಬ್ಬ ಮಹಿಳೆಯನ್ನು, ನನ್ನ ಮನೆಯ ಸೊಸೆಯನ್ನು ಅಗೌರವಗೊಳಿಸಬಹುದೇ? ಆಕೆಯನ್ನು ಕಲ್ಲಿದ್ದಲು ಕಳ್ಳಿ ಎಂದು ಕರೆಯುತ್ತೀರಾ?”ಎಂದು ಮುಖ್ಯಮಂತ್ರಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಪೌರಕಾರ್ಮಿಕರ ಪ್ರತಿಭಟನೆ
“ನೀವು ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳನ್ನು ಕಲ್ಲಿದ್ದಲು ಕಳ್ಳರು ಎಂದು ಕರೆಯುತ್ತಿದ್ದೀರಾ? ಓಹೋ ನೀವು ಅಷ್ಟೇನೂ ಕಳಂಕವಿಲ್ಲದವರು ಎಂದುಕೊಂಡಿದ್ದೀರಾ? ನಮಗೆ ಎಲ್ಲವೂ ಗೊತ್ತು. ಆದರೆ ಅದು ನನ್ನ ಮಟ್ಟಕ್ಕಿಂತ ಕೆಳಗೆ ಇರುವ ಕಾರಣ ನಾನು ಏನನ್ನೂ ಹೇಳುವುದಿಲ್ಲ” ಎಂದು ಹೇಳಿದ್ದಾರೆ.
ರ್‍ಯಾಲಿಯಲ್ಲಿ, ಸಿನಿತಾರೆಯರಾದ ಸಯೋನಿ ದತ್ತಾ, ಜೂನ್ ಮಾಲಿಯಾ ಮತ್ತು ಕ್ರಿಕೆಟಿಗ ಮನೋಜ್ ತಿವಾರಿ ಸೇರಿದಂತೆ ಹಲವಾರು ಗಣ್ಯರು ತೃಣಮೂಲ ಕಾಂಗ್ರೆಸ್ ಸೇರಿಕೊಂಡು, ಬಂಗಾಳದ ಆಡಳಿತ ಪಕ್ಷವು ಅಂಗೀಕರಿಸಿದ “ಖೇಲಾ ಹೋಬೆ (ಗೇಮ್ ಆನ್- ಆಟ ಚಾಲೂ)” ಘೋಷಣೆಯನ್ನು ಪುನರುಚ್ಚರಿಸಿದರು.
“ದೇಶವನ್ನು ದೈತ್ಯ ಮತ್ತು ದಾನಬ್ (ಬಂಗಾಳಿಯಲ್ಲಿ ರಾಕ್ಷಸರು ಎಂದರ್ಥ) ಆಳುತ್ತಿವೆ. ಅವರು ನಮ್ಮ ಬೆನ್ನುಮೂಳೆಯನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಅವರು ಒಳನುಸುಳುತ್ತಾರೆ! ಅವರು ಬಂಗಾಳವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ! ನಿಮಗೆ (ಬಂಗಾಳಿಗರಿಗೆ) ಏನು ಬೇಕು? ಬಂಗಾಳ ಬಂಗಾಳವಾಗಿ ಉಳಿಯುವುದು ಬೇಕಾಗಿದೆಯೋ ಅಥವಾ ಬಿಜೆಪಿ ಈಗ ದೇಶದಾದ್ಯಂತ ಏನು ಮಾಡುತ್ತದೆಯೋ ಅದು ಬೇಕೊ? ಗುಜರಾತ್ ಬಂಗಾಳವನ್ನು ಆಳುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?



??