Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ಅಕ್ಟೋಬರ್ 31, 1984ರಂದು ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾಯಿತು. ತಳಮಳಗೊಂಡ ಈ ಕವಿಚೇತನ ಆ ದಿನ ರಾತ್ರಿ ‘ಪ್ರಿಯದರ್ಶಿನಿಗೊಂದು ಶ್ರದ್ಧಾಂಜಲಿ’ ಎಂಬ ಕವಿತೆ ಬರೆದರು. ಅದನ್ನು ಕಂಡಕ್ಟರ್ ಒಬ್ಬರಿಗೆ ಬೆಳಿಗ್ಗೆ ಓದಲು ಕೊಟ್ಟರೆ ಆತ ಅದನ್ನು ಪಾಟೀಲಪುಟ್ಟಪ್ಪನವರ ‘ವಿಶ್ವವಾಣಿ’ ಪತ್ರಿಕೆಗೆ ಕೊಟ್ಟರು. ಕವಿತೆ ಅಚ್ಚಾಯಿತು. ದಿನಬೆಳಗಾಗುವುದರೊಳಗೆ ಕವಿ ಮೂಡ್ನಾಕೂಡು ಬೆಳಕಿಗೆ ಬಂದರು. ಅವರ ಕಾವ್ಯಯಾನ ಶುರುವಾದದ್ದು ಹೀಗೆ.

- Advertisement -
- Advertisement -

‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಇದು ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕಥನ. ಈ ನೆನಪಿನ ಹಕ್ಕಿ ಹಾರಾಡುವ ರೂಟಿನ ನೀಲನಕ್ಷೆಯನ್ನು ಹೀಗೆ ತೆಗೆಯಬಹುದು.

ಈ ಜಂಬೂ ದ್ವೀಪದ ಭರತ ಕ್ಷೇತ್ರದೊಳ್ ಮಹಿಷಮಂಡಲವೆಂಬ ನಾಡಲ್ಲಿ ಮಹೀಸೂರೆಂಬುದು ಪೊಳಲ್. ಅದರ ತೆಂಕಣ ದಿಸೆಗೆ ಪ್ರಮೀಳಾ ರಾಜ್ಯ ಕೇರಳ. ಆ ಎರಡರ ಕೂಡು ಗಡಿಯ ಕಾಡೂರು ಮೂಡ್ನಾಕಾಡು. ಅದರೊಳ್ ಪಂಚಮರ ಮುನಿಯಮ್ಮನ ಮಗಳು ಗೌರಮ್ಮನೆಂಬ ಸತಿಗೆ ಪತಿ ಮೀಸೆ ಪೊಲೀಸ್-ಬಸಪ್ಪನೆಂಬೋನ್, ಅವರೀರ್ವರ್ಗೆ ಕೂಸು, ಪಂಚವರ್ಣದ ಗಿಳಿಮರಿಗೆ ಚಿನ್‌ಸಾಮಿ ಎಂದೆಸರಾಯಿತು. ಇದು ಗೂಡಿಂದ ತೆಪ್ಪಳಿಸಿ ಕುಪ್ಪಳಿಸಿ ತುಪ್ಪಳಹುಟ್ಟಿ ರೆಕ್ಕೆಪುಕ್ಕ ಬಲಿತು ಹಾರಲು ಕಲಿತು, ಪಂಚಮರ ಗೂಡಿಂದ ಜಾತಿ ಜನಾಂಗದ ಜೇಡ್ ಗೇಟ್ ರನ್‌ವೇ ಜಾರಿ ಹಾರಿ ಬಾನಂಗಳಕೆ ದೂರಾ ಬಹುದೂರಾ ಅಲ್ಲಹುದೆಮ್ಮ ಬೋಧಿಮರಾ ಎಂದು ಚಂದಿರ ತಾರಾ ಜಪಿಸಿ ಸಪ್ತ ಸಾಗರ ಈಜಿ ಮಂಜಿನಬೆಟ್ಟ ರಾಕಿ ಮೇಲಿಂದ ನಯನಮನೋಹರ ನಯಾಗಾರ ಕಣ್ತುಂಬಿಕಂಡು; ಹಾಲಿಹುಡ್ ಡಿಸ್ನಿಲ್ಯಾಂಡ್ ಯೂನಿವರ್ಸಲ್ ಸ್ಟುಡಿಯೊ ಅದ್ಭುತ ಮಾಯಾಲೋಕ ಲಾಸ್ ಏಂಜಲೀಸ್ ಚಿತ್ರನಗರಿ ವಿಹಾರಿ, ಪಶ್ಚಿಮ ಸ್ವರ್ಗಕ್ಕೆ ಬಂದ ಬೌದ್ಧ ಮಾಂಕುವಿನಂತೆ ಬೆರಗಾಗಿ; ಶಾಂತಿಸಾಗರ ಇಂಕಾ ಮಾಯಾ ದೈವಗಳ ನೆಲೆವೀಡು ಆಂಡೀಸ್ ಪರ್ವತ ಶ್ರೇಣಿಯ ಹತ್ತಿ ವಿಶ್ರಮಿಸಿ; ಏಸು ಶಿಲುಬೆ ಹೊತ್ತು ನಡೆದ ಜೆರುಸಲೇಮಿನ ಬೀದಿಗೆ ನಮಿಸಿ, ಬೌದ್ಧ ಮಹಾಭಿಕ್ಷು ಹುಯೆನ್‌ತ್ಸಾಂಗನ ತವರು ನೆಲ ಚೀಣಾ ಶಾಂಘೈ ಹಾಂಗ್‌ಕಾಂಗ್ ಮುಟ್ಟಿ ಮರಳಿ ಗೂಡಿಗೆ ಬುದ್ಧನೆಡೆಗೆ ಬಂದಲ್ಲಿಗೆ ಈ ಹಕ್ಕಿಯ ಪಯಣಕೆ ಒಂದು ನಿಲ್ದಾಣ!…

ಇದಿಷ್ಟು ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕಥನದ ನೆನಪಿನ ಹಕ್ಕಿ ಹಾರಾಡಿ ಬಂದ ರೂಟಿನ ನೀಲನಕ್ಷೆ. ಇದು ಬೌದ್ಧಭಿಕ್ಷು ಒಬ್ಬನು ತನ್ನ ಆತ್ಮಕಥನವನ್ನು ಒಂದು ಮಹಾಪ್ರಬಂಧವನ್ನಾಗಿ ರಚಿಸಿ ಸಂಘಾರಾಮಕ್ಕೆ ನಿವೇದಿಸಿರುವನೋ ಎಂಬಂತೆ ಕಂಡುಬರುತ್ತದೆ. ಇದರಲ್ಲಿ ನನ್ನ ಕಣ್ಣಳತೆಗೆ ಸಿಕ್ಕಿದ ಕೆಲವನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಜಾತೀಯತೆ

ಪುರಾತನ ಭಾರತವನ್ನು ಕವಿ ಕಲಾವಿದರು ಮೈದುಂಬಿ ಹಾಡುತ್ತಾರೆ. ಭೂದೇವಿಯ ಮಕುಟಮಣಿ; ಗಂಧದ ಚಂದದ ಹೊನ್ನಿನ ಗಣಿ; ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕಜಿನರುಧ್ಯಾನ; ಸರ್ವಜನಾಂಗದ ಶಾಂತಿಯ ತೋಟ ಇತ್ಯಾದಿಯಾಗಿ. ನಿಜ. ಆದರೂ ಮನುಸ್ಮೃತಿ ಇಟ್ಟ ಕಟ್ಟಳೆಯ ವರ್ಣವ್ಯವಸ್ಥೆ ಹಾಗೂ ಕರ್ಮಸಿದ್ಧಾಂತವು ಶೂದ್ರರು, ಪಂಚಮರು ಹಾಗೂ ಸಾರಾಸಗಟಾಗಿ ಮಹಿಳೆಯರೆಲ್ಲರಿಗೂ ಅಕ್ಷರ ವಿದ್ಯೆಯಿಂದ ದೂರ ಇಟ್ಟಿತು. ಬಹುಸಂಖ್ಯಾತ ಪಂಚಮರು ಮೇಲ್ವರ್ಣಗಳ ಸೇವೆಗೆ ಮೀಸಲಾದರು. ವಿದೇಶಿಯರ ಆಳ್ವಿಕೆಯೂ ಸಹ ಈ ಅನಧಿಕೃತ ರಾಜ್ಯಾಂಗ ಮನುಧರ್ಮ ಶಾಸ್ತ್ರವನ್ನು ಅಲುಗಿಸಲು ಆಗಲಿಲ್ಲ. ದೇಶ ಸ್ವಾತಂತ್ರ್ಯ ಪಡೆದು ನಮ್ಮ ನೂತನ ಸಂವಿಧಾನ ಜಾರಿಯಾಗುವರೆಗೂ ಈ ಚಿತ್ರ ಬದಲಾಗಲಿಲ್ಲ. ದುರಂತವೆಂದರೆ ಇವತ್ತಿಗೂ ಈ ಜಾತೀಯತೆಯ ವೈರಾಣು ಕೊರೊನಾ ವೈರಸ್ಸಿಗಿಂತ ಭೀಕರವಾಗಿ ಕಾಡುತ್ತಿದೆ; ಕಲಿತವರ ಬುದ್ಧಿಗೂ ಗೆದ್ದಲು ಹಿಡಿಯುತ್ತಿದೆ. ಕುವೆಂಪು ಹೇಳುವಂತೆ ದೇವಮಾನವನಾಗಿ ಹುಟ್ಟಿದ ಮಗುವಿಗೆ ಜಾತೀಯತೆಯ ಗೊಬ್ಬರ ನೀರು ಹಾಕಿ ಅಲ್ಪಮಾನವರನ್ನಾಗಿ ಮಾಡಿಬಿಡುತ್ತೇವೆ.

ಮೂಡ್ನಾಕೂಡು ಅವರಿಗೆ ಶಾಲೆಯ ದಿನಗಳಲ್ಲೇ ಈ ದಾರುಣ ಅನುಭವ ಆಯಿತು. ಪ್ರಾಥಮಿಕ ಶಾಲೆಯಲ್ಲಿ ತರಗತಿಗೆ ಬಂದ ಶಿಕ್ಷಕರು ‘ಡಿ.ಸಿ. ಕ್ಯಾಂಡಿಡೇಟ್ಸ್ ಯಾರಿದೀರಿ ಎದ್ನಿಂತ್ಕೊಳಿ’ ಎಂದ ಕೂಡಲೇ ಈ ಬಾಲಕ ಬೆವರಿ ನೀರಾಗಿ, ಜೀವ ಅಳ್ಳಕವಾಗಿ ಕುಸಿದಂತಾಗುತ್ತಿತ್ತೆಂದು ಬರೆದುಕೊಳ್ಳುತ್ತಾರೆ, ಯಾಕೆಂದರೆ ಮೇಲ್ಜಾತಿ ಸಹಪಾಠಿಗಳ ತಾತ್ಸಾರದ, ಕುಹಕದ ನೋಟ ಇವರನ್ನು ಅಣಕಿಸುತ್ತಿತ್ತು. ಮಕ್ಕಳು ಮಾಡದ ತಪ್ಪಿಗೆ ಹೀಗೆ ಸಾರ್ವಜನಿಕವಾಗಿ ಅವಮಾನ! ಶಾಲಾ ದಿನಗಳಿಂದ ಈ ಬಗೆಯ ಅವಮಾನಗಳು ಬಾಳಿನುದ್ದಕ್ಕೂ ಅನುಭವಕ್ಕೆ ಬರುತ್ತವೆ. ‘ನೊಂದ ನೋವ ನೋಯದವರೆತ್ತಬಲ್ಲರು? ಕಲಿತವರ ನಡುವೆಯೂ ಜಾತಿಭೇದದ ಪ್ರಸಂಗಗಳು ನಡೆದಿವೆ, ನಡೆಯುತ್ತಿವೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆ ಇರುವವರೆಗೂ ಅವು ಮುಂದುವರಿಯುತ್ತವೆ ಎನ್ನುತ್ತಾರೆ ಮೂಡ್ನಾಕೂಡು. ಈ ನಿಟ್ಟಿನಲ್ಲಿ ಅವರು ದಕ್ಷಿಣ ಅಮೆರಿಕದ ಆಂಡೀಸ್ ವಿಶ್ವವಿದ್ಯಾಲಯದಲ್ಲಿ ‘ಕ್ಯಾಸ್ಟ್ ಇನ್ ಇಂಡಿಯಾ – ಪಾಸ್ಟ್ ಅಂಡ್ ಪ್ರಸೆಂಟ್’ ಎಂಬ ಉಪನ್ಯಾಸ ನೀಡಿದಾಗ ಅವರಿಗಾದ ಅನುಭವವನ್ನು ತುಲನೆ ಮಾಡಿನೋಡಬಹುದು.

“ಅದಕ್ಕೆ ಸಿಕ್ಕ ಪ್ರತಿಕ್ರಿಯೆ ವಿಶಿಷ್ಟವೂ, ಅಪರೂಪವೂ ಆಗಿತ್ತು. ಏಕೆಂದರೆ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆ ಲ್ಯಾಟಿನ್ ಅಮೆರಿಕೆಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಕಾರಣವೇನೆಂದರೆ ಅಲ್ಲಿ ಹಿಂದೂಗಳಿಲ್ಲ. ಉತ್ತರ ಅಮೆರಿಕೆಯಲ್ಲಿ ವಲಸಿಗ ಹಿಂದೂಗಳು ಇರುವುದರಿಂದ ಮತ್ತು ಅವರು ಹೋದಲ್ಲಿ ಜಾತಿಯನ್ನು ಕೊಂಡೊಯ್ಯುವುದರಿಂದ ಸಾಂಸ್ಕೃತಿಕ ವಲಯದಲ್ಲಿ ಅದರ ಬಗ್ಗೆ ಚರ್ಚೆ ನಡೆಯುತ್ತವೆ. ನಾನು ಜಾತಿಪದ್ಧತಿಯನ್ನು ಮತ್ತು ಅಸ್ಪೃಶ್ಯತೆಯನ್ನು ವಿವರಿಸುವಾಗ ಅವರು ವಿಚಿತ್ರವಾಗಿ ಮುಖಮುಖ ನೋಡಿಕೊಳ್ಳುತ್ತಿದ್ದರು. ಕುತೂಹಲ ಪ್ರಶ್ನೆಗಳ ಸುರಿಮಳೆಯೇ ಆಯಿತು. ನಾನು ಅವರಿಗೆ ವಾಸ್ತವದ ಉದಾಹರಣೆಗಳ ಮುಖಾಂತರ ಉತ್ತರಿಸುತ್ತಿದ್ದೆ. ಉಪನ್ಯಾಸ ಮುಗಿದ ಮೇಲೆ ಅಧ್ಯಾಪಕರು, ವಿದ್ಯಾರ್ಥಿಗಳು ನನ್ನನ್ನು ಸುತ್ತುವರಿದರು. ‘ವಾ ಟಾಕೆ, (ನಾನು ನಿಮ್ಮನ್ನು ಮುಟ್ಟುತ್ತೇನೆ) ಎಂದು ಹೇಳುತ್ತಾ ನನ್ನನ್ನು ಮುಟ್ಟುತ್ತಿದ್ದರು. ಕೆಲವರು ನನ್ನ ಚರ್ಮವನ್ನು ಪರೀಕ್ಷಿಸುವಂತೆ ಮುಟ್ಟಿನೋಡುತ್ತಿದ್ದರು. ಕೆಲವರು ಅಪ್ಪುಗೆ ನೀಡುತ್ತಿದ್ದರು. ಅದು ಅಲ್ಲಿ ನನಗಾದ ವಿಚಿತ್ರ ಅನುಭವ. ಕೆಲವು ಯುವಕರು ಅಲ್ಲಿ ಇನ್ನೂ ಯಾಕೆ ಕ್ರಾಂತಿ ಆಗಿಲ್ಲ ಎಂದು ಕೇಳುತ್ತಿದ್ದರು.” (ಪುಟ.179)

ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಅಲ್ಲಿನ ಯುವಜನಕ್ಕೆ ‘ಇಂಡಿಯಾ ಎಂದರೆ ಸ್ಪಿರಿಚುಯಲ್ ದೇಶವಲ್ಲ ರಿಚುಅಲ್ ಎನ್ನುತ್ತಿದ್ದರು. ಇದನ್ನು ಯಾರಾದರೂ ಎದೆ ತಟ್ಟಿ ಅಲ್ಲ ಎನ್ನುವವರಿದ್ದಾರೆಯೆ? ಇಲ್ಲ. ‘ಹೌದು’ ಎನ್ನುವರಿದ್ದರೆ ಅದು ಕೇವಲ ಸುಳ್ಳು ಎನ್ನುತ್ತಾರೆ ಮೂಡ್ನಾಕೂಡು. ಇವರ ಮಾತನ್ನು ಯಾರು ಬೇಕಾದರೂ ನಿಕಷಕ್ಕೆ ಒಡ್ಡಿ ನೋಡಬಹುದು. ಪಾಶ್ಚಾತ್ಯರಂತೆ ಮನೆಗೆಲಸದ ಸಹಾಯಕ್ಕೆ ಬರುವ ಮಹಿಳೆಯನ್ನು ಆ ಮನೆಯೊಡತಿ ‘ಹಗ್’ ಆಲಿಂಗನ ಮಾಡುವಂತೆ ಭಾರತದಲ್ಲಿ ಉಂಟೆ? ಇಲ್ಲ. ಆದರೆ ವಿದೇಶಗಳಲ್ಲಿ ಆಕೆ ಕೆಲಸಕ್ಕೆ ಬಂದಾಗ ಮತ್ತು ಹೋಗುವಾಗ ಹಗ್ ಮಾಡಿಯೆ ಕಳುಹಿಸುವುದು ಸಾಮಾನ್ಯ. ಅಸ್ಪೃಶ್ಯತೆ ಎನ್ನುವುದು ಇಂಡಿಯಾದಲ್ಲಿ ಹೀಗೆ ಒಂದು ಒಪ್ಪಿತ ಪದ್ಧತಿಯಾಗಿದೆ ಎಂಬುದನ್ನು ತಮ್ಮ ಸ್ವಾನುಭವದಿಂದ ಉಲ್ಲೇಖಿಸುತ್ತಾರೆ ಇವರು.

ಇಂಥ ಭಯಂಕರ ಅವಮಾನ, ಕೀಳರಿಮೆ, ನರಕದಿಂದ ಪಾರಾಗಲು ಮೂಡ್ನಾಕೂಡು ಕುಟುಂಬವು 14.03.2003ರಂದು ಬಾಬಾ ಸಾಹೇಬ ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಹಿಂದೂವಾಗಿಯೇ ಸಾಯಲಾರದೆ ತಾನೂ ಬೌದ್ಧ ಧರ್ಮಕ್ಕೆ ಮತಾಂತರವಾಗುವುದು. ಹಾಗೆ ನೋಡಿದರೆ ಸಚ್ಛಾರಿತ್ರ್ಯವುಳ್ಳವರೆಲ್ಲ ಬೌದ್ಧರೇ!

ಕಾವ್ಯಯಾನ

ಮೂಡ್ನಾಕೂಡು ವೃತ್ತಿಯಲ್ಲಿ ಲೆಕ್ಕಪರಿಶೋಧಕರು; ಪ್ರವೃತ್ತಿಯಲ್ಲಿ ಕಾವ್ಯಾರಾಧಕರು. ಇವರು ಮುಂಬಡ್ತಿ ಪಡೆದು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 31, 1984ರಂದು ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾಯಿತು. ತಳಮಳಗೊಂಡ ಈ ಕವಿಚೇತನ ಆ ದಿನ ರಾತ್ರಿ ‘ಪ್ರಿಯದರ್ಶಿನಿಗೊಂದು ಶ್ರದ್ಧಾಂಜಲಿ’ ಎಂಬ ಕವಿತೆ ಬರೆದರು. ಅದನ್ನು ಕಂಡಕ್ಟರ್ ಒಬ್ಬರಿಗೆ ಬೆಳಿಗ್ಗೆ ಓದಲು ಕೊಟ್ಟರೆ ಆತ ಅದನ್ನು ಪಾಟೀಲಪುಟ್ಟಪ್ಪನವರ ‘ವಿಶ್ವವಾಣಿ’ ಪತ್ರಿಕೆಗೆ ಕೊಟ್ಟರು. ಕವಿತೆ ಅಚ್ಚಾಯಿತು. ದಿನಬೆಳಗಾಗುವುದರೊಳಗೆ ಕವಿ ಮೂಡ್ನಾಕೂಡು ಬೆಳಕಿಗೆ ಬಂದರು. ಅವರ ಕಾವ್ಯಯಾನ ಶುರುವಾದದ್ದು ಹೀಗೆ. ಅದು ನಿರಂತರವಾಗಿ ಸಾಗಿ ಬರುತ್ತಿದೆ. ಕಾವ್ಯ ಕಾರಣವಾಗಿಯೇ ಅವರು ಮಧ್ಯ ಅಮೆರಿಕಾದ ‘ವೆನೆಜುವೇಲಾ’ ಪ್ರವಾಸ, ಹಾಲಿವುಡ್‌ನಲ್ಲಿ ಕವಿತಾವಾಚನ, ಆಂಡಿಸ್ ವಿಶ್ವವಿದ್ಯಾಲಯದ ಭೇಟಿ, ಗ್ರೆನೆಡಾ ಕಾವ್ಯಮೇಳ, ನಿಕರಾಗುವಾ ದೇಶ, ಇಸ್ರೇಲ್‌ನ ಶಾರ್ ಅಂತಾರಾಷ್ಟ್ರೀಯ ಕಾವ್ಯಮೇಳ ಮುಂತಾಗಿ ದೇಶವಿದೇಶಗಳಲ್ಲಿ ಭಾಗವಹಿಸುವ ಭಾಗ್ಯ ಬಂದಿದೆ.

ಇದೆಲ್ಲಾ ಆರಂಭವಾದುದು ಹೀಗೆ. ಮೈಸೂರಿನಲ್ಲಿದ್ದಾಗ ದಕ್ಷಿಣ ಅಮೆರಿಕದ ವೆನಿಜುವೇಲಾ ದೇಶದ ಕವಿಯತ್ರಿ ರೊವೀನಾ ಹಿಲ್ ಎಂಬುವರನ್ನು ಆಕಸ್ಮಿಕವಾಗಿ ಭೇಟಿ ಆದುದು; ಮತ್ತು ಅವರು ಮೂಡ್ನಾಕೂಡು ಅವರ ‘ನಾನು ಒಂದು ಮರವಾಗಿದ್ದರೆ’ ಎಂಬ ಕವಿತೆಯನ್ನು ಮೆಚ್ಚಿಕೊಂಡುದು ಹಾಗೂ ಅದರೊಂದಿಗೆ ಇವರ ಉಳಿದ ಕೆಲವು ಕವಿತೆಗಳನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದ ಮಾಡಿದ್ದು. ಹೀಗೆ ಕಾವ್ಯದೊಂದಿಗೆ ಕವಿ ಹಾಗೂ ಕವಿಯೊಂದಿಗೆ ಕಾವ್ಯ ಲೋಕ ಪರ್ಯಟನೆ ಮಾಡಿದರು. ತಮ್ಮ ‘ಕೊಂಡಿಗಳು ಮತ್ತು ಮುಳ್ಳು ಬೇಲಿಗಳು’ ಎಂಬ ಕವನ ಸಂಕಲನಕ್ಕೆ ಮುನ್ನುಡಿ ನಿಮಿತ್ತ ದಲಿತ ಕವಿ ಸಿದ್ಧಲಿಂಗಯ್ಯನವರ ಭೇಟಿಯಾದ ಮೇಲೆ ನಗರದ ಸಾಂಸ್ಕೃತ ವಲಯದ ದಿಗ್ಗಜಗಳೆಲ್ಲರ ಪರಿಚಯವಾಗುತ್ತ ನಡೆಯಿತು. ನಗರದಲ್ಲಿ ನಡೆದ ಕಾವ್ಯಗೋಷ್ಠಿ ಒಂದರಲ್ಲಿ ‘ಗೋಧೂಳಿ’ ಎಂಬ ಕವಿತೆಯನ್ನು ಕೇಳಿದ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅದನ್ನು ಪ್ರಕಟಿಸಿದರು. ಅಲ್ಲದೆ ಅವರ ‘ದುಷ್ಟಕೂಟ’ದ ಸದಸ್ಯತ್ವವೂ ದೊರೆಯಿತು. ‘ಓ ಆ ಕವಿ ನೀವೇನಾ?’ ಎಂದು ಇವರ ಕವಿತೆಗಳನ್ನು ಓದಿದವರು ಹುಬ್ಬೇರಿಸುವಂತಾಯಿತು. ಹೀಗೆ ಚಿನ್ನಸ್ವಾಮಿಯವರ ಒಳಜಗತ್ತಿಗೆ ಕಾವ್ಯ ಸೇತುವೆ ಕಟ್ಟಿ ಲೋಕ ಯಾನ ಮಾಡಿಸಿತು.

ಮೀಸಲಾತಿ ಎಂಬ ಬ್ರಹ್ಮರಾಕ್ಷಸ

ಭಾರತ ಪದೇ ಪದೇ ವಿದೇಶೀಯರ ಆಕ್ರಮಣಕ್ಕೆ ತುತ್ತಾದುದಕ್ಕೆ ಮನುಸ್ಮೃತಿ ಪ್ರಣೀತ ವರ್ಣ ವ್ಯವಸ್ಥೆಯೇ ಕಾರಣ ಎನ್ನುತ್ತಾರೆ ಮೂಡ್ನಾಕೂಡು. ಅದೂ ಸತ್ಯವೂ ಸಹ.

“ವೇದ ಪ್ರಣೀತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಈ ವರ್ಣವ್ಯವಸ್ಥೆ ಸಮನಾಂತರ ವರ್ಗೀಕರಣವಲ್ಲ. ಅದು ಲಂಬರೇಖಾತ್ಮಕ ಮೇಲು ಕೀಳಿನ ವರ್ಗೀಕರಣ. ಕಾಲಾಂತರದಲ್ಲಿ ಈ ವ್ಯವಸ್ಥೆ ಮತ್ತಷ್ಟು ಛಿದ್ರವಾಗಿ ಅದೇ ಮಾದರಿಯಲ್ಲಿ ಜಾತಿಪದ್ಧತಿಯಾಗಿ ಉಚ್ಛ ನೀಚ ಎಂಬ ಒಂದು ಅನೈಸರ್ಗಿಕವೆನ್ನಬಹುದಾದ ವ್ಯವಸ್ಥೆಯಾಗಿ ನೆಲೆಯೂರಿತು. ಆದ್ದರಿಂದ ಈ ದೇಶದ ಬಹುಜನರು ಸಾವಿರಾರು ವರ್ಷಗಳಿಂದ ವಿದ್ಯೆಯಿಂದ, ಅಕ್ಷರ ಜ್ಞಾನದಿಂದ ವಂಚಿತರಾಗಿದ್ದರು. ಅಂದರೆ ಅವರ ಮಿದುಳನ್ನು ನಿಷ್ಕ್ರಿಯ (ಮ್ಯೂಟ್) ಮಾಡಲಾಗಿತ್ತು. ಅಜ್ಞಾನವು ತಾಂಡವವಾಡುತ್ತಿತ್ತು. ಈ ದೇಶದ ಮೇಲೆ ದಾಳಿಗಳು ನಡೆದಾಗ ಪ್ರತಿಯಾಗಿ ಕ್ಷತ್ರಿಯರು ಎನಿಸಿಕೊಂಡ ಕೆಲವೇ ಮಂದಿ ಹೋರಾಡಬೇಕಾಗಿತ್ತು. ಯುದ್ಧ ನಡೆಯುತ್ತಿರುವಾಗ ಹೊಲಗಳಲ್ಲಿ ದುಡಿಯುತ್ತಿದ್ದ ರೈತರು ನೋಡುತ್ತಾ ನಿಲ್ಲುತ್ತಿದ್ದರಂತೆ”.(ಪುಟ. 106)

ವರ್ಣವ್ಯವಸ್ಥೆಯ ಕರಾಳ ಮೀಸಲಾತಿಯಿಂದಲೇ, ಈ ದೇಶ ಅಭಿವೃದ್ಧಿ ಪಥ ಕಾಣದೆ ಹಿಂದುಳಿಯಿತು. ಜಾಗತಿಕವಾಗಿ ಅನೇಕ ಸಮಾಜಶಾಸ್ತ್ರಜ್ಞರು ಇದನ್ನು ಗುರುತಿಸಿದ್ದಾರೆ. ಮೂಡ್ನಾಕೂಡು ಪ್ರತ್ಯಕ್ಷ ಅನುಭವದಿಂದ ಅದನ್ನು ಕಂಡಿದ್ದಾರೆ.

ಐತಿಹಾಸಿಕ ಪೂನಾ ಒಪ್ಪಂದ

ಗಾಂಧೀಜಿ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ನಡುವೆ 1932ರಲ್ಲಿ ನಡೆದದ್ದು ಪೂನಾ ಒಪ್ಪಂದ. ಮುಸಲ್ಮಾನ, ಸಿಖ್, ಫಾರಸಿಗಳಿಗೆ ಕೊಟ್ಟಂತೆಯೇ ಹರಿಜನರಿಗೂ ಪ್ರತ್ಯೇಕ ಮತ ಕ್ಷೇತ್ರಗಳಿರಲಿ ಎಂದು ಅಂಬೇಡ್ಕರ್ ಬ್ರಿಟಿಷರಿಗೆ ಹೇಳಿದರು. ಆದರೆ ಯರವಾಡ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದ ಗಾಂಧೀಜಿ ಇದನ್ನು ವಿರೋಧಿಸಿ ಆಜೀವ ಉಪವಾಸ ಸತ್ಯಾಗ್ರಹ ಹಿಡಿದರು. ಅಸ್ಪೃಶ್ಯರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿಬಿಡುತ್ತಾರೆ ಎಂಬುದು ಅವರ ಆತಂಕ. ಆದರೆ ‘ಮೊದಲು ನಮ್ಮ ಹೆಗಲ ಮೇಲಿನ ಅಸ್ಪೃಶ್ಯತೆಯ ನೊಗ ಇಳಿಯಲಿ; ಆಮೇಲೆ ದೇಶದ ಸ್ವಾತಂತ್ರ್ಯ’ ಎಂಬುದು ಅಂಬೇಡ್ಕರ್ ವಿವೇಕ. ಆದರೆ ಗಾಂಧೀಜಿ ಉಪವಾಸ ನಿಲ್ಲಿಸಲಿಲ್ಲ. ಎಲ್ಲಾ ಸಂಧಾನಗಳೂ ವಿಫಲವಾದವು, ಕಡೆಗೆ ಮಹಾತ್ಮರ ಪ್ರಾಣ ಉಳಿಸಲು ಅಂಬೇಡ್ಕರ್ ಒಪ್ಪಲೇಬೇಕಾಯಿತು. ಇದು ಪೂನಾ ಒಪ್ಪಂದದ ತಿರುಳು.

ಮಹಾತ್ಮರ ಪ್ರಾಣಹರಣಕ್ಕೆ ಬಿಡದೆ, ತಮ್ಮ ನ್ಯಾಯಯುತ ಬೇಡಿಕೆಯನ್ನೂ ಬದಿಗಿಟ್ಟು ಬಾಬಾಸಾಹೇಬರು ಪರಮ ಅಹಿಂಸಾವಾದಿಯಾಗಿ ನಿಲ್ಲುತ್ತಾರೆ. ಸ್ವಾತಂತ್ರ್ಯ ಬಂದ ತರುವಾಯದ ವಿದ್ಯಮಾನಗಳನ್ನು ಗಮನಿಸಿದರೆ ಕೋಟಿ ಕೋಟಿ ದಲಿತರ ಪರವಾಗಿ ಅಂಬೇಡ್ಕರ್ ಅಂದು ಮಾಡಿದ ಆ ತ್ಯಾಗ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಇವತ್ತಿಗೂ ದಲಿತರು ಜಾತಿ ಹಿಂದೂಗಳ ಅಸ್ಪೃಶ್ಯತೆಯ ಆಚರಣೆ ಅವಮಾನ ಕೀಳರಿಮೆಗಳಿಂದ ಮುಕ್ತರಾಗಿಲ್ಲ. ಯಾರಿಗೆ ಬಂತು 1947ರ ಸ್ವಾತಂತ್ರ್ಯ? ಸಂವಿಧಾನ ನೀಡಿದ ಮೀಸಲಾತಿಯೆ ಈಗ ಬ್ರಹ್ಮರಾಕ್ಷಸನಂತೆ ಕಾಡುತ್ತಿದೆ ಎನ್ನುತ್ತಾರೆ ಚಿನ್ನಸ್ವಾಮಿ.

ಇದಕ್ಕೆ ಜವಾಬ್ದಾರಿ ಗಾಂಧೀಜಿಯ ಹಠಯೋಗಿಯಂತ ಹಠಮಾರಿತನ ಎಂದು ಇವರು ಷರಾ ಬರೆಯುತ್ತಾರೆ. ಈ ದೃಷ್ಟಿಯಿಂದ ನೋಡಿದರೆ ಬಾಬಾ ಸಾಹೇಬರ ವ್ಯಕ್ತಿತ್ವ ಗಾಂಧೀಜಿಗಿಂತ ‘ಅತ್ಯತಿಷ್ಠ’ ದಶಾಂಗುಲದಂತೆ ಕಂಡುಬರುತ್ತದೆ. ಅಂದು ಅಂಬೇಡ್ಕರ್ ಏನಾದರೂ ಪೂನಾ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ದೇಶದ ಪ್ರತಿ ಊರಿನ ತೆಂಕಣ ದಿಕ್ಕಿನ ವಲಗೇರಿಗಳಲ್ಲಿ ನೆತ್ತರ ಕೋಡಿ ಹರಿಯುತ್ತಿಲ್ಲವೆ? ಆದ್ದರಿಂದ ಅಂಬೇಡ್ಕರ್ ಅವರ ತ್ಯಾಗ ಹಿಮಾಲಯೋಪಮ. ಅದು ಬುದ್ಧನೆಡೆಗೆ ಮರಳುವ ಚೇತನ. ಆದ್ದರಿಂದ ಡಿ.ಆರ್. ನಾಗರಾಜ್ ಹೇಳಿರುವಂತೆ ‘ಪೂನಾ ಒಪ್ಪಂದ’ವು ಒಂದು ಮಹಾಕಾವ್ಯಕ್ಕೆ ವಸ್ತುವಾಗಿದ್ದು, ಅಂಥ ಒಬ್ಬ ಮಹಾಕವಿಯನ್ನು ಎದುರು ನೋಡುತ್ತಿದೆ.

ಹಣ ಅಧಿಕಾರ ಬಲಂ ದಿಗ್ಬಲಂ ನೈತಿಕ ತೇಜೋ ಬಲಂ ಬಲಂ

ಈ ಮಾತು ಪಿ. ಲಂಕೇಶರ ಬದುಕು-ಬರಹದ ಸೂತ್ರ ವಾಕ್ಯ. ಒಮ್ಮೆ ಚಿನ್ನಸ್ವಾಮಿ ಅವರಿಗೆ ಇದರ ಪ್ರತ್ಯಕ್ಷ ಅನುಭವವಾಯಿತು. ಈ ಹಿಂದೆ ಪ್ರಸ್ತಾಪಿಸಿರುವಂತೆ ಮೂಡ್ನಾಕೂಡು ಕವಿಯಾಗಿ ಲಂಕೇಶರ ಆಪ್ತ ವಲಯಕ್ಕೆ ಸೇರಿದರು. ಒಂದು ದಿನ ಇವರು ಪತ್ರಿಕಾ ಕಚೇರಿಯಲ್ಲಿರುವಾಗ ನಡೆದ ಪ್ರಸಂಗ ಹೀಗಿತ್ತು: ಜೆ.ಎಚ್.ಪಟೇಲರು ಆಗ ಮುಖ್ಯಮಂತ್ರಿ. ಸಂಪಾದಕರಿಗೆ ಒಂದು ಫೋನ್ ಬಂತು.

“ಯಥಾಪ್ರಕಾರ ಬಸವರಾಜು ಫೋನ್ ತೆಗೆದುಕೊಂಡು ಜೆ.ಎಚ್. ಪಟೇಲರು ಲೈನಿನಲ್ಲಿದ್ದಾರೆ ಎಂದರು. ಲಂಕೇಶ್ ‘ಏನಂತೆ, ಹುಟ್ಟುಹಬ್ಬದ ವಿಷ್ ಮಾಡೋಕೆ ತಾನೆ, ತಲುಪಿದೆ ಅಂತ ಹೇಳಿಬಿಡು’ ಅಂದವರೆ ಫೋನನ್ನು ಕೆಳಗಿಟ್ಟರು. ಪಟೇಲರ ಫೋನ್ ಸ್ವೀಕರಿಸಲಿಲ್ಲ. ನಾನು ದಂಗುಬಡಿದವನಂತೆ ಕೂತಿದ್ದೆ. ಒಬ್ಬ ಮುಖ್ಯಮಂತ್ರಿಯ ಫೋನ್‌ಅನ್ನು ತಿರಸ್ಕರಿಸುವುದಿದೆಯಲ್ಲ, ಅದು ಯಾವ ಬಲವಿರಬಹುದು? ಪತ್ರಿಕೆ ಲಂಕೇಶರ ಅಸ್ತ್ರವಾಗಿತ್ತು. ಒಂದು ಸರ್ಕಾರವನ್ನು ಬೀಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಒಂದಷ್ಟು ಯುವಕರಿಗೆ ಸರಿದಾರಿಯಲ್ಲಿ ನಡೆಯುವ, ಮಾರ್ಗದರ್ಶನ ಮಾಡುವ ಶಕ್ತಿಯಿತ್ತು. ಲಂಕೇಶರನ್ನು ಕಂಡಿರದ ಇವತ್ತಿನ ಯುವಸಮುದಾಯ ಅವರನ್ನು ನೆನೆಯುತ್ತಿರುವುದು ಅವರ ಆ ಬಲಕ್ಕೆ (ಪವರ್) ಸಾಕ್ಷಿಯಾಗಿದೆ”.(ಪುಟ.135)

ಇಂದು ಮುಖ್ಯವಾಹಿನಿಯ ಹಲವು ಸುದ್ದಿ ಮಾಧ್ಯಮಗಳು ಸರ್ಕಾರದ ಜಾಹಿರಾತು ಕಂಪನಿಗಳಂತೆ ತುತ್ತೂರಿ ಊದುತ್ತಿರುವುದನ್ನು ಕಂಡರೆ ಲಂಕೇಶ್ ಪತ್ರಿಕೆಯ ನೈತಿಕ ಬಲ ಯಾವ ಪ್ರಮಾಣದಲ್ಲಿತ್ತು ಎಂಬುದರ ಕಲ್ಪನೆ ಆದೀತು. ಲಂಕೇಶ್ ಪತ್ರಿಕೆ ದಲಿತ, ಮುಸಲ್ಮಾನ ಹಾಗೂ ಮಹಿಳಾ ಪ್ರತಿಭೆಗಳ ಅನ್ವೇಷಣೆ ಮಾಡುತ್ತಿತ್ತು. ತನ್ನದೊಂದು ಕವಿತೆಯೊ ಕತೆಯೊ ಪತ್ರಿಕೆಯಲ್ಲಿ ಬಂತೆಂದರೆ ಆ ಕಿರಿಯ ಲೇಖಕರು ಹಿಗ್ಗಿ ಹೋಗುತ್ತಿದ್ದರು. ಅಂತವರಲ್ಲಿ ಮೂಡ್ನಾಕೂಡು ಸಹ ಒಬ್ಬರಾಗಿ ಬೆಳಕಿಗೆ ಬಂದಿದ್ದನ್ನು ಅವರು ಇಲ್ಲಿ ಸ್ಮರಿಸುತ್ತಾರೆ. ಈ ತಲೆಮಾರಿನ ಲೇಖಕರು ಇಂದಿನ ಭ್ರಷ್ಟಾಚಾರ ಪ್ರಸಂಗಗಳನ್ನು ಕಂಡು ‘ಸದ್ಯ ಈಗ ಲಂಕೇಶ್ ಇಲ್ಲ’ ಅಥವಾ ’ಈಗ ಲಂಕೇಶ್ ಇದ್ದಿದ್ದರೆ’ ಎಂದು ಪ್ರತಿಕ್ರಿಯಿಸುವುದು ಸಾಮಾನ್ಯ. ಇನ್ನೂ ಹೆಚ್ಚಿ, ಹಾಗೇನಾದರೂ ಪ್ರತಿಭಟನಾ ಕಾವ್ಯ ರಚನೆ ಮಾಡಿದ್ದಾದರೆ ಕವಿ ಸಿರಾಜ್ ಬಿಸರಳ್ಳಿ ಅವರಂತೆ ಕಾವ್ಯ ಬೀದಿಯಲ್ಲಿ ಕವಿ ಸೆರೆಮನೆಯಲ್ಲಿ ಇರುವಂತಾದೀತು.

ಕಡೆಯದಾಗಿ, ನಿವೃತ್ತಿಯವರೆಗೂ ಸ್ವಂತಕ್ಕೊಂದು ಮನೆ ಮಾಡಿಕೊಳ್ಳಲಾರದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಸಾರಿಗೆ ಸಂಸ್ಥೆಯ ಮುಖ್ಯ ಲೆಕ್ಕಪರಿಶೋಧಕ ನಿರ್ವಹಣಾಧಿಕಾರಿಯಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಗದಗ ಮುಂತಾದ ಕಡೆ ವರ್ಗಾವಣೆ ಆದಾಗ ಸಂಸ್ಥೆಯ ವರಮಾನವನ್ನು ದ್ವಿಗುಣಗೊಳಿಸಿದ್ದಾರೆ. ಶ್ರಮ ಹಾಗೂ ಪ್ರಾಮಾಣಿಕತೆಯೇ ಮನುಷ್ಯನ ನೈತಿಕ ಬಲ ಎಂಬುದನ್ನು ಇವರು ಕಾರ್ಯತಃ ಮಾಡಿ ತೋರಿಸಿರುವುದು ಪ್ರಶಂಸನೀಯ. ಮೂಡ್ನಾಕೂಡು ಅವರ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಒಂದು ಅಪರೂಪದ ಸೃಜನಶೀಲ ದಲಿತ ಆತ್ಮ ಸಂಕಥನ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡು; ಬಿಜೆಪಿ ಆರೋಪ

0
'ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಒಳಗೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ರಾಜ್ಯ...