- ವಿಕಾಸ್ ಆರ್ ಮೌರ್ಯ |
‘ವಾಡಿ’ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ದಲಿತರಿಗೆ ಸುಪರಿಚಿತ ಹೆಸರು. 1874ರಲ್ಲಿ ಹೈದರಾಬಾದಿನ ನಿಜಾಮ ಈ ವಾಡಿ ರೈಲ್ವೇ ಜಂಕ್ಷನ್ ಸ್ಥಾಪಿಸಲು ಹಣ ಬಿಡುಗಡೆ ಮಾಡಿದ್ದನು. ಮುಂಬೈಯಿಂದ ಹೈದರಾಬಾದಿಗೆ ಹೋಗಬೇಕೆಂದರೆ ಈ ವಾಡಿಯಲ್ಲಿ ರೈಲು ಬದಲು ಮಾಡಬೇಕಿತ್ತು. ಅಷ್ಟೇ ಅಲ್ಲ, ರೈಲುಗಳು ಕಲ್ಲಿದ್ದಲು ತುಂಬಿಸಿಕೊಳ್ಳಲು ವಾಡಿಯಲ್ಲಿಯೇ ನಿಲ್ಲುತ್ತಿದ್ದವು. ಆದರೆ ‘ವಾಡಿ’ ಇಂದು ಮನೆಮಾತಾಗಿರಲು ಕಾರಣ ಇದಲ್ಲ. ಬಾಬಾಸಾಹೇಬ್ ಅಂಬೇಡ್ಕರರು ಅಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದರಿಂದ ಇಂದು ವಾಡಿ ಹೆಸರುವಾಸಿಯಾಗಿದೆ.
ಏಪ್ರಿಲ್ 27, 1945 ನೇ ಇಸವಿ. ಅಂದು ಗುಲ್ಬರ್ಗಾ ಜಿಲ್ಲೆಯ ‘ವಾಡಿ’ ರೈಲ್ವೇ ಜಂಕ್ಷನ್ನಿನಲ್ಲಿ ಹೈದರಾಬಾದ್‍ಗೆ ತೆರಳುತ್ತಿದ್ದ ರೈಲು ಕಲ್ಲಿದ್ದಲು ತುಂಬಿಸಿಕೊಳ್ಳಲು ಎರಡು ಗಂಟೆಗಳ ಕಾಲ ನಿಂತಿತ್ತು. ಅಲ್ಲಿ ಅದ್ಯಾರೋ ಅಂಬೇಡ್ಕರರು ರೈಲಿನಲ್ಲಿರುವ ವಿಚಾರವನ್ನು ಮಾತಾಡುತ್ತಿದ್ದದ್ದನ್ನು ಕೇಳಿಸಿಕೊಂಡ ಸ್ಟೇಷನ್ನಿನಲ್ಲಿ ಟೀ ಮಾರುತ್ತಿದ್ದ ದಿಲ್ದಾರ್ ಹುಸೇನ್‍ರವರು ಇದನ್ನು ತಿಳಿಸಲು ಅತೀವ ಸಂತಸದಿಂದ ‘ವಾಡಿ’ಗೆ ಓಡಿ ಬಂದು ‘ಬಾಬಾಸಾಹೇಬ್ ಅಂಬೇಡ್ಕರ್’ ರೈಲಿನಲ್ಲಿದ್ದಾರೆ ಎಂದು ತಿಳಿಸಿದ ತಕ್ಷಣ ಅಮೃತರಾವ್ ಕೋಮಟೆ, ಜ್ಞಾನೋಬ ಗಾಯಕ್‍ವಾಡ್, ಬಸಪ್ಪ ಬಟ್ರಿಕಿ ಜೊತೆ ಇಡೀ ವಾಡಿಯೇ ಅಂಬೇಡ್ಕರರನ್ನು ನೋಡಲು ತೆರಳಿತು. ಅದಾಗಲೇ ಗಾಯಕ್‍ವಾಡ್ ಅವರು ಮರಾಠಿ ಪತ್ರಿಕೆ ‘ಪ್ರಬುದ್ಧ ಭಾರತ’ ಓದುತ್ತಿದ್ದರಾದ್ದರಿಂದ ಅಂಬೇಡ್ಕರರ ಹೋರಾಟದ ಪರಿಚಯವಿತ್ತು. ಅಂದು ಅಂಬೇಡ್ಕರರು ತನ್ನ ಜನಗಳನ್ನು ಉದ್ದೇಶಿಸಿ ಮಾತನಾಡಿದರು. ಭಾವಚಿತ್ರವನ್ನೂ ತೆಗೆಸಿಕೊಂಡರು. ಬಾಬಾಸಾಹೇಬರನ್ನು ಬೀಳ್ಕೊಟ್ಟ ವಾಡಿ ಜನತೆ ಅಂದೇ ಸೈಕಲ್ಲುಗಳ ಮೇಲೆ ಬಾಬಾಸಾಹೇಬ್ ಅಂಬೇಡ್ಕರರ ಫೋಟೋ ಕಟ್ಟಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿದ್ದರು. ಕಾಕತಾಳೀಯವೆಂಬಂತೆ ಅಂಬೇಡ್ಕರರು ವಾಡಿಗೆ ಮತ್ತೊಮ್ಮೆ ಭೇಟಿ ಇತ್ತದ್ದು 1952 ಏಪ್ರಿಲ್ 28 ರಂದು. ಆದ್ದರಿಂದ ವಾಡಿಯ ಜನತೆ ಏಪ್ರಿಲ್ 27 ಮತ್ತು 28 ರಂದು ಪ್ರತಿವರ್ಷ ‘ಅಂಬೇಡ್ಕರ್ ಹಬ್ಬ’ವೆಂದು ಆಚರಿಸುತ್ತಾರೆ. 1956 ರಲ್ಲಿ ಅಂಬೇಡ್ಕರರು ಬೌದ್ಧ ಧಮ್ಮಕ್ಕೆ ಮತಾಂತರವಾದಾಗಲೂ ಇಲ್ಲಿಂದ ಹತ್ತು ಮಂದಿ ನಾಗಪುರಕ್ಕೆ ಹೋಗಿ ಮತಾಂತರಗೊಂಡು ಬಂದರು. ಇಂದಿಗೂ ಸಹ ಅಮೃತರಾವ್ ಕೋಮಟೆಯವರ ಮಗ ಟೋಪಣ್ಣ ಕೋಮಟೆಯವರು ಮತಾಂತರ ದಿನದ ಕರಪತ್ರ, ಪ್ರಬುದ್ಧ ಭಾರತದಲ್ಲಿ ಪ್ರಕಟವಾದ ಅಂಬೇಡ್ಕರರ ದೇಹವನ್ನು ಹೊತ್ತೊಯ್ದ ಭಾವಚಿತ್ರಗಳನ್ನು ಕಾಪಿಟ್ಟುಕೊಂಡಿದ್ದಾರೆ.
ಅಂಬೇಡ್ಕರರು ವಾಡಿಗೆ ಬಂದುಹೋಗಿ 73 ವರ್ಷಗಳು ಉರುಳಿವೆ. ಅಲ್ಲಿನ ದಲಿತರು ಒಗ್ಗಟ್ಟಿನಿಂದ ಹಿಂದೂ ದೇವಾಲಯಗಳ ಬದಲು ಬುದ್ಧ ವಿಹಾರಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂಬೇಡ್ಕರರು ಬಂದು ಕುಳಿತುಹೋದ ಜಾಗದಲ್ಲಿ ಅಂಬೇಡ್ಕರರು ಕುಳಿತಿರುವ ಭಂಗಿಯಲ್ಲಿ ಮೂರ್ತಿ ನಿರ್ಮಿಸಿದ್ದಾರೆ. ಆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಹೆಸರಿಟ್ಟಿದ್ದಾರೆ. ಅಂಬೇಡ್ಕರ್ ಕಲ್ಯಾಣಮಂಟಪವನ್ನೂ ಕಟ್ಟಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಟು ಮಂದಿ ತಮ್ಮವರನ್ನೇ ಗೆಲ್ಲಿಸಿಕೊಂಡಿದ್ದಾರೆ.
ವಾಡಿಯ ದಲಿತರನ್ನು ಭೇಟಿಯಾದ ತಕ್ಷಣ ನಿಮಗೆ ‘ಜೈ ಭೀಮ್’ ಎಂಬ ನಮಸ್ಕಾರ ಎದುರಾಗುತ್ತದೆ. ಮಕ್ಕಳ ಹೆಸರಿನ ಜೊತೆ ‘ಬೌದ್’ ಎಂಬ ಪದನಾಮ ಸೇರಿದೆ. ಬಹುತೇಕ ಮಕ್ಕಳ ಹೆಸರು ಬೌದ್ಧರ ಹೆಸರಾಗಿವೆ. ಮನೆಗಳ ಮೇಲೆ ‘ಅಶೋಕ ಚಕ್ರ’ವುಳ್ಳ ನೀಲಿ ಬಾವುಟ ಮತ್ತು ‘ಬೌದ್ಧ ಧರ್ಮ’ದ ಬಾವುಟಗಳು ಹಾರಾಡುತ್ತಿರುತ್ತವೆ. ಏಪ್ರಿಲ್ ತಿಂಗಳು ಬಂತೆಂದರೆ ಬೀದಿಗಳೆಲ್ಲ ನೀಲಿ ಬಣ್ಣಕ್ಕೆ ತಿರುಗುತ್ತವೆ. ಇವರು ಆಚರಿಸುವ ಮೂರು ಹಬ್ಬಗಳು ದಲಿತರ ಮೂಲದ್ದಾಗಿವೆ. ಒಂದು ಕೊರೆಗಾವ್ ವಿಜಯೋತ್ಸವ, ಎರಡನೆಯದ್ದು ಅಂಬೇಡ್ಕರ್ ಹಬ್ಬ, ಮೂರನೆಯದ್ದು ಬುದ್ಧ ಪೂರ್ಣಿಮೆ.
ಏಪ್ರಿಲ್ 27 ಮತ್ತು 28 ಈ ಎರಡು ದಿನಗಳ ಅಂಬೇಡ್ಕರ್ ಹಬ್ಬವನ್ನು ಆಚರಿಸುವ ಪರಿ ನಿಜಕ್ಕೂ ಕುತೂಹಲಕಾರಿ. ಮೊದಲ ದಿನ ಸಂಜೆ ವೇದಿಕೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಅದು ಕೇವಲ ಭಾಷಣ ಕಾರ್ಯಕ್ರಮವಲ್ಲ. ಪ್ರತಿವರ್ಷ ಸರತಿಯ ಮೇಲೆ ಅಶೋಕ ಚಕ್ರ ಮೆರವಣಿಗೆ ಮಾಡಿ ಅದು ವೇದಿಕೆ ತಲುಪಿದಾಗಲೇ ವೇದಿಕೆ ಕಾರ್ಯಕ್ರಮ ಆರಂಭವಾಗುವುದು. ಈ ವರ್ಷ ಆ ಸರತಿ ಅಂಬೇಡ್ಕರ್ ನಗರದ ಪಾಲಾಗಿತ್ತು.
ಎರಡನೆಯ ದಿನದ ಸಂಭ್ರಮ ನಿಜಕ್ಕೂ ವಿಸ್ಮಯ. ದೂರದೂರಿನಿಂದ ನೆಂಟರು-ನಿಷ್ಟರನ್ನು ಅಂಬೇಡ್ಕರ್ ಹಬ್ಬಕ್ಕೆ ಆಹ್ವಾನಿಸಲಾಗಿರುತ್ತದೆ. ಎಲ್ಲರೂ ಹೊಸ ಬಟ್ಟೆ. ಅಕ್ಕ-ತಂಗಿಯರಿಗೆ ತವರುಮನೆಯಿಂದ ಸೀರೆಯನ್ನು ಉಡುಗೊರೆಯಾಗಿ ನೀಡಿ ಆಹ್ವಾನಿಸಲಾಗಿರುತ್ತದೆ. ಊರಿನ ತುಂಬಾ ಬಣ್ಣಬಣ್ಣದ ಬಟ್ಟೆ ಮತ್ತು ತಲೆಗೆ ನೀಲಿ ರುಮಾಲು ತೊಟ್ಟ ಮಕ್ಕಳು, ಯುವಕರ ಸಂಭ್ರಮ. ಯುವತಿಯರು ಕೆನ್ನೆಗೆ ನೀಲಿ ಬಣ್ಣ ಬಳಿದುಕೊಂಡು, ಯುವಕರು ನೀಲಿ ತಿಲಕವಿಟ್ಟುಕೊಂಡು ಮೆರವಣಿಗೆಗಾಗಿ ಕಾಯುತ್ತಿರುತ್ತಾರೆ. ಕೇವಲ ನೋಡಲು ಮಾತ್ರವಲ್ಲ. ಕುಣಿಯಲು, ಕುಣಿದು ಕುಪ್ಪಳಿಸಲು. ಹೌದು ಎರಡನೆಯ ದಿನದ ಮುಖ್ಯ ಆಕರ್ಷಣೆ ಬುದ್ಧ ಮತ್ತು ಅಂಬೇಡ್ಕರರ ಪ್ರತಿಮೆಗಳ ಮೆರವಣಿಗೆ. ಆಹಾರವೂ ವಿಭಿನ್ನ. ಮೊದಲ ದಿನ ಮಾಂಸಾಹಾರವಾದರೆ ಎರಡನೆಯ ದಿನ ಹೋಳಿಗೆ ಊಟ.
ಈ ಮೆರವಣಿಗೆ ಮೈಸೂರು ದಸರೆಯನ್ನು ನೆನಪಿಸುವುದರಲ್ಲಿ ಸಂಶಯವಿಲ್ಲ. ವಾಡಿಯ ಅಂಬೇಡ್ಕರ್ ಕಾಲೋನಿ, ಭೀಮ್ ನಗರ, ಸಿದ್ದಾರ್ಥ ನಗರ, ಗೌತಮ್ ನಗರ ಮತ್ತು ಇಂದಿರಾನಗರಗಳಿಂದ ತಲಾ ಒಂದೊಂದು ಬುದ್ಧ ಮತ್ತು ಅಂಬೇಡ್ಕರ್ ಪ್ರತಿಮೆಗಳನ್ನು ಟ್ರ್ಯಾಕ್ಟರ್ ಮೇಲೆ ವಿಶಿಷ್ಟವಾಗಿ ಹಾಗು ವಿಭಿನ್ನವಾಗಿ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಸಿಂಗರಿಸಿಕೊಂಡಿರುತ್ತಾರೆ. ಪ್ರತಿ ಪ್ರತಿಮೆಯ ಮುಂದೆ ಅಬ್ಬರಿಸುವ ಡಿಜೆ ಸೌಂಡ್ ಸಿಸ್ಟಮ್ ಇರುತ್ತದೆ. ಅದರ ಹಿಂದೆ ಮನಬಿಚ್ಚಿ ಕುಣಿಯುವ ಯುವಜನರ ತಂಡವಿರುತ್ತದೆ. ಹೀಗೆ ಐದೂ ನಗರಗಳಿಂದ ಹೊರಟ ಐದು ಪ್ರತಿಮೆಗಳು ಅಂಬೇಡ್ಕರ್ ವೃತ್ತದ ಬಳಿ ನಿರ್ಮಿಸಿರುವ ಅವರÀ ಪುತ್ಥಳಿ ಹತ್ತಿರ ಬಂದು ಸೇರುತ್ತವೆ. ಅಲ್ಲಿಂದ ಶುರು. ಅಂಬೇಡ್ಕರ್ ಹಬ್ಬದ ಮೆರವಣಿಗೆ. ಹಾಡು, ಕುಣಿತ, ಅಂಬೇಡ್ಕರ್ ಹಾಗು ಬುದ್ಧನಿಗೆ ಜೈಕಾರ. ಬಿರು ಬಿಸಿಲಿನ ಮಧ್ಯಾಹ್ನ ಆರಂಭವಾಗುವ ಮೆರವಣಿಗೆ ಮುಗಿಯುವುದು ಮಧ್ಯ ರಾತ್ರಿ 12 ಗಂಟೆಗೆ. ಪ್ರತಿ ಏರಿಯಾದ ಮಕ್ಕಳು, ಯುವಕರು ಹದಿನೈದು ದಿನಗಳಿಂದ ಕಲಿತುಕೊಂಡ ನೃತ್ಯಗಳನ್ನ ಮೆರವಣಿಗೆಯುದ್ದಕ್ಕೂ ಪ್ರದರ್ಶಿಸುತ್ತಾ ಹೋಗುತ್ತಾರೆ. ಅವರ ಜೊತೆ ಇಡಿ ಊರಿಗೇ ಊರೇ ಕುಣಿಯುತ್ತದೆ. ಸಂತಸವೆಂದರೆ ಹೆಂಗಸರು ತಮ್ಮ ಮಕ್ಕಳೊಂದಿಗೆ ಹೆಜ್ಜೆ ಹಾಕುವ ಪರಿ. ದಣಿವಾರಿಸಲು ದಾರಿಯುದ್ದಕ್ಕೂ ಮಜ್ಜಿಗೆ ಮತ್ತು ತಂಪು ನೀರು ಉಚಿತವಾಗಿ ಸಿಗುತ್ತದೆ.
ವಾಡಿಯಲ್ಲಿ ಅಂಬೇಡ್ಕರ್ ಜಯಂತಿ ಎಂದರೆ ಹಬ್ಬ. ದಸರಾ ನೆನಪಿಸುವ ಹಬ್ಬ. ಇಂತಹ ಹಬ್ಬ ದೇಶ ವ್ಯಾಪಿ ಬೇಗ ಹಬ್ಬಿಕೊಳ್ಳಲಿ.


