| ಪಿ.ಕೆ.ಮಲ್ಲನಗೌಡರ್ |
ಇಲ್ಲಿ ವಿಜಯವಾಣಿ ಮತ್ತು ದಿಗ್ವಿಜಯದ ಮಾಲೀಕ ವಿಜಯ ಸಂಕೇಶ್ವರರು ಬಿಜೆಪಿ ಪಕ್ಷಕ್ಕೆ ಸೇರಿದವರು ಮತ್ತು ಪತ್ರಿಕೆಯೂ ಅವರ ಪರವಾಗಿಯೇ ಸುದ್ದಿ ಪ್ರಸಾರ ಮಾಡುತ್ತಿದೆ ಎಂಬುದರಲ್ಲಿ ಯಾರಿಗೂ ಸಂದೇಹವಿರಲಿಲ್ಲ. ಆದರೆ ಈಗ ಕಳೆದ ಚುನಾವಣೆ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಂದಿದ್ದ ಸುಳ್ಳು ಸುದ್ದಿಯೊಂದನ್ನು ‘ಪ್ರಿಂಟ್’ ಮಾಡುವ ಮೂಲಕ ಸಂಕೇಶ್ವರ್ ತಾವು ಯಾವ ಮಟ್ಟಕ್ಕೆ ಇಳಿಯಬಲ್ಲವರು ಎಂಬುದನ್ನು ಅವರ ಓದುಗರು/ವೀಕ್ಷಕರಿಗೂ ತೋರಿಸಿಯೇ ಬಿಟ್ಟಿದ್ದಾರೆ! ಈ ಹೊತ್ತಲ್ಲೇ ವಿಜಯವಾಣಿಗೆ ಮೋದಿ ಸಂದರ್ಶನ ನೀಡಿದ್ದಾರೆ, ನಿನ್ನೆ (ಏ 18) ಬಾಗಲಕೋಟೆಯಲ್ಲಿ ಮೋದಿ ಲಿಂಗಾಯತ ವಿಷಯವನ್ನು ಎತ್ತಿಕೊಂಡಿದ್ದಾರೆ! ಅಂದರೆ ಎಲ್ಲವೂ ಒಂದು ಯೋಜಿತ ಹುನ್ನಾರದ ಭಾಗವಾಗಿ ನಡೆದಿದೆ. ಈ ಸಾರಿ ಅದು ಶುರುವಾಗಿದ್ದು ವಿಜಯವಾಣಿಯಲ್ಲಿ ಪ್ರಕಟವಾದ ಸುಳ್ಳು ಸುದ್ದಿಯಿಂದ.
ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸಾಕಷ್ಟು ಮುನ್ನಲೆಗೆ ಬಂದಿತ್ತು. ಪ್ರತ್ಯೇಕ ಲಿಂಗಾಯತ/ವೀರಶೈವ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಪ್ರಚಾರ ಮಾಡಿದ ಸಂಘ ಪರಿವಾರ, ಈ ಕುರಿತಂತೆ ಹಲವು ಸುಳ್ ಸುದ್ದಿಗಳನ್ನೂ ಹರಡಿತ್ತು.
ಆ ಸಂದರ್ಭದಲ್ಲಿ, ಅಂದಿನ ಜಲಸಂಪನ್ಮೂಲ ಮತ್ತು ಇಂದಿನ ಗೃಹ ಸಚಿವ ಎಂ.ಬಿ. ಪಾಟೀಲರ ಸಂಸ್ಥೆಯ ಲೆಟರ್‍ಹೆಡ್ ಮತ್ತು ಅವರ ಫೋರ್ಜರಿ ಸಹಿಯಿದ್ದ ಪತ್ರವೊಂದನ್ನು ಕುಖ್ಯಾತ ಫೇಕ್ ಕಂಪನಿ ಪೋಸ್ಟ್‍ಕಾರ್ಡ್ ಸೃಷ್ಟಿಸಿತ್ತು. ಕ್ರಿಶ್ಚಿಯನ್ ಮಿಷಿನರಿಗಳ ಸಹಾಯ ಪಡೆದು, ಲಿಂಗಾಯತ ಧರ್ಮವನ್ನು ಒಡೆಯಲು ಉದ್ದೇಶಿಸಿದ ಎಂ.ಬಿ.ಪಾಟೀಲರು ಈ ಬಗ್ಗೆ ಸೋನಿಯಾ ಗಾಂಧಿ ಜೊತೆ ಪತ್ರ ವ್ಯಹಾರ ಮಾಡಿದ್ದಾರೆ ಎಂದು ತೋರಿಸಲಾಗಿತ್ತು. ಆಗಲೇ ಎಂ.ಬಿ.ಪಾಟೀಲ ಇದನ್ನು ನಿರಾಕರಿಸಿದ್ದರು. ಆದರೆ ಈ ಪುಣ್ಯಾತ್ಮ ಆಗಲೇ ದೂರು ಕೊಡದೇ ಮೂರ್ಖತನ ಮಾಡಿದ್ದರು.
ಈಗ ಅದೇ ಫೇಕ್ ಪತ್ರ ಜಾಲತಾಣದಲ್ಲಿ ಓಡಾಡುತ್ತಿದೆ. ಅದನ್ನು ಸಂಕೇಶ್ವರರ ವಿಜಯವಾಣಿ ಪ್ರಿಂಟ್ ಮಾಡಿದ್ದು, ಇದರ ಹಿಂದಿನ ಹುನ್ನಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟಿರುವ ಎಂ.ಬಿ.ಪಾಟೀಲರು ಆಯೋಗಕ್ಕೆ ದೂರನ್ನೂ ನೀಡಿದ್ದಾರೆ. ಆಯೋಗ ವಿಜಯವಾಣಿಯ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ ನೋಡಬೇಕು.
ಬೆದರಿಬಿಟ್ಟಿತಾ ಬಿಜೆಪಿ?
ಎರಡನೇ ಹಂತದ ಚುನಾವಣೆಗಳು ನಡೆಯುವ 14 ಕ್ಷೇತ್ರಗಳಲ್ಲಿ ಲಿಂಗಾಯತರ ಮತಗಳು ನಿರ್ಣಾಯಕವಾಗಿವೆ. ಈ ಸಲ ಲಿಂಗಾಯತರು ಉಲ್ಟಾ ಹೊಡೆಯುವ ಸೂಚನೆಗಳು ಕಾಣತೊಡಗಿದ ಮೇಲೆ ಬಿಜೆಪಿ ಮತ್ತು ಸಂಘ ಪರಿವಾರ ಬೆದರಿದಂತೆ ಕಾಣುತ್ತಿವೆ. ಅದರ ಪರಿಣಾಮವಾಗಿಯೇ, ಸಂಕೇಶ್ವರರ ಪೇಪರ್ ವರ್ಷದ ಹಿಂದೆ ಪ್ರಕಟವಾದ ಸುಳ್ ಸುದ್ದಿಯನ್ನು ಮುದ್ರಿಸುತ್ತದೆ! ಇದೇ ಸಂದರ್ಭದಲ್ಲಿ, ಕನ್ನಡ ಮಾಧ್ಯಮದಲ್ಲೇ ಪ್ರಥಮ ಎಂದು ಮೋದಿಯ ಸಂದರ್ಶನವನ್ನೂ ಪ್ರಕಟಿಸುತ್ತದೆ. ನಿನ್ನೆ (ಏಪ್ರಿಲ್ 18) ಬಾಗಲಕೋಟೆಯಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ, ‘ಕಾಂಗ್ರೆಸ್ ಲಿಂಗಾಯತ ಧರ್ಮವನ್ನು ಒಡೆಯಲು ಹೊರಟಿದೆ’ ಎಂದು ಹೇಳುತ್ತಾ, ಸದರಿ ಪತ್ರವನ್ನೂ ಉಲ್ಲೇಖಿಸುತ್ತಾರೆ.
ಗದುಗಿನ ತೋಂಟಾದಾರ್ಯ ಮಠದಲ್ಲಿ ಹಿಂದಿನ ಸಿದ್ದಲಿಂಗ ಸ್ವಾಮಿಗಳು ಜಾತ್ರೆಯ ಉತ್ಸುವಾರಿ ಸಮಿತಿಗೆ ಮುಸ್ಲಿಂರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿದಾಗ ಇದೇ ಗದುಗಿನವರಾದ ವಿಜಯ್ ಸಂಕೇಶ್ವರ್‍ರವರು ಮಠದಲ್ಲೇ ಸ್ವಾಮೀಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ದಿವಂಗತ ಸಿದ್ಧಲಿಂಗ ಸ್ವಾಮಿಗಳು ಸಂಕೆಶ್ವರರಿಗೆ ಲೆಫ್ಟ್ ರೈಟ್ ತೆಗೆದುಕೊಂಡು ಬೆವರಿಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಒಟ್ಟಿನಲ್ಲಿ ಫೇಕ್‍ನ್ಯೂಸ್ ಎಂಬುದು ಕೇವಲ ಸೋಷಿಯಲ್ ಮೀಡಿಯಾ ಅಥವಾ ಟಿವಿ ಚಾನೆಲ್‍ಗಳಿಗೆ ಸೀಮಿತವಲ್ಲ ಎಂಬುದನ್ನು ‘ನಮ್ಮಲ್ಲೇ ಮೊದಲು’ ಎಂದು ಬಿತ್ತರಿಸಿದ ಖ್ಯಾತಿ ವಿಜಯ್ ಸಂಕೇಶ್ವರರ ವಿಜಯವಾಣಿಗೇ ಸಲ್ಲುತ್ತದೆ.


