Homeಮುಖಪುಟಕರ್ನಾಟಕದ ಐಎಎಸ್ ಅಧಿಕಾರಿ ಒರಿಸ್ಸಾದಲ್ಲಿ ಅಮಾನತು : ಮೊಹಮದ್ ಮೊಹ್ಸಿನ್ ಅವರು ಮಾಡಿದ ತಪ್ಪೇನು?

ಕರ್ನಾಟಕದ ಐಎಎಸ್ ಅಧಿಕಾರಿ ಒರಿಸ್ಸಾದಲ್ಲಿ ಅಮಾನತು : ಮೊಹಮದ್ ಮೊಹ್ಸಿನ್ ಅವರು ಮಾಡಿದ ತಪ್ಪೇನು?

- Advertisement -
- Advertisement -

ಕುಂದಾಪುರದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ತಮ್ಮ ಕೆಲಸ ಶುರು ಮಾಡಿದ ಐಎಎಸ್ ಅಧಿಕಾರಿ ಮೊಹಮದ್ ಮೊಹ್ಸಿನ್, ಇದೀಗ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಸುದ್ದಿ ಒಳ್ಳೆಯದೋ ಕೆಟ್ಟದ್ದೋ ಎನ್ನುವುದು ಓದುಗರು ಯಾವ ನೆಲೆಯಿಂದ ನೋಡುತ್ತಾರೆ ಎಂಬುದರ ಆಧಾರದ ಮೇಲೆ ನಿಂತಿರುತ್ತದೆ. ಏಪ್ರಿಲ್ 17ರಂದು ಒರಿಸ್ಸಾದ ಸಂಭಲ್ಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಅಲ್ಲಿ ಚುನಾವಣಾ ವೀಕ್ಷಕರಾಗಿ ಮೊಹಮದ್ ಮೊಹ್ಸಿನ್ ಕರ್ತವ್ಯ ನಿರತರಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಆ ರಾಜ್ಯದಿಂದ ಹೊರಗಿನ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ. ಏಕೆಂದರೆ, ಆಯಾ ರಾಜ್ಯದ ಅಧಿಕಾರಿಗಳು ನಂತರದಲ್ಲಿ ರಾಜಕೀಯ ನಾಯಕತ್ವದ ಕೆಳಗೇ ಕೆಲಸ ಮಾಡಬೇಕಾದ್ದರಿಂದ ಪಕ್ಷಪಾತ ಧೋರಣೆ ತೋರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಮೊಹಮದ್ ಮೊಹ್ಸಿನ್ ಒರಿಸ್ಸಾಕ್ಕೆ ಹೋಗಿದ್ದರು. ಸಂಭಲ್ಪುರಕ್ಕೆ ಬಂದ ಮೋದಿಯವರ ಹೆಲಿಕಾಪ್ಟರ್ ಅನ್ನು ಪರೀಕ್ಷಿಸಲು ಮೊಹ್ಸಿನ್ ಸೂಚಿಸಿದ್ದರು.

ಇದೇ ಅವರು ಮಾಡಿದ ತಪ್ಪು ಎಂದು ಚುನಾವಣಾ ಆಯೋಗವು ಅವರನ್ನು ಅಮಾನತು ಮಾಡಿದೆ. ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿ ಯಾರನ್ನು ಬೇಕಾದರೂ ಪರೀಕ್ಷೆ ಮಾಡುವ ಅಧಿಕಾರ ಹೊಂದಿರುತ್ತಾರೆ ಅಲ್ಲವೇ? ಚಿತ್ರದುರ್ಗದಲ್ಲಿ ದೊಡ್ಡದೊಂದು ಪೆಟ್ಟಿಗೆಯನ್ನು ಮೋದಿಯವರ ಹೆಲಿಕಾಪ್ಟರ್ ನಿಂದ ಇಳಿಸಿ ಖಾಸಗಿ ಇನ್ನೋವಾ ಕಾರಿಗೆ ಸಾಗಿಸಿದ ಪ್ರಕರಣದಲ್ಲೂ ಇದು ಚರ್ಚೆಗೆ ಬಂದಿತ್ತು. ಅಲ್ಲಿನ ಎಸ್.ಪಿಯವರು ಸ್ಪಷ್ಟನೆ ನೀಡಿ, ನಮ್ಮದೇನಿದ್ದರೂ ಭದ್ರತೆ ಕೆಲಸ; ಪರೀಕ್ಷೆ ಮಾಡುವುದು ಚುನಾವಣಾಧಿಕಾರಿಗಳಿಗೆ ಬಿಟ್ಟಿದ್ದು ಎಂದಿದ್ದರು. ಆ ನಂತರ ಸದರಿ ಪೆಟ್ಟಿಗೆಯನ್ನು ಚುನಾವಣಾಧಿಕಾರಿಗಳು ಏಕೆ ತಪಾಸಣೆಗೆ ಒಳಪಡಿಸಲಿಲ್ಲ ಎಂಬ ಪ್ರಶ್ನೆ ಗಂಭೀರವಾಗಿ ಎದ್ದಿತ್ತು.

ಚಿತ್ರದುರ್ಗದಲ್ಲಿ ಮೋದಿ ಹೆಲಿಕ್ಯಾಪ್ಟರ್ ನಿಂದ ಟ್ರಂಕ್ ಒಂದನ್ನು ಹೊತ್ತಿ ಓಡುತ್ತಿರುವುದು

ಈಗ ಪ್ರಧಾನಿಯವರ ವಾಹನವನ್ನು ಪರಿಶೀಲಿಸುವ ಕೆಲಸ ಚುನಾವಣೆಗೆ ಸಂಬಂಧಿಸಿದ ಅಧಿಕಾರಿ ಮಾಡಬಹುದೇ ಇಲ್ಲವೇ? ಪ್ರಧಾನಿಯವರದ್ದು ಹೋಗಲಿ, ತನ್ನದ್ದೂ ಮಾಡಬಾರದೆಂದು ಅದೇ ಒರಿಸ್ಸಾದ ಬಿಜೆಪಿ ನಾಯಕ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಜಗಳವಾಡಿದ್ದಾರೆ. ಆ ಜಗಳದ ನಂತರ ಏನಾಯಿತು ಗೊತ್ತಿಲ್ಲ. ಆದರೆ ಮೊಹಮ್ಮದ್ ಮೊಹ್ಸಿನ್ ಅವರನ್ನು ‘ಎಸ್.ಪಿ.ಜಿ ರಕ್ಷಣೆಯಲ್ಲಿರುವವರ ವಾಹನಗಳಿಗೆ ಇಂತಹ ತಪಾಸಣೆಯಿಂದ ವಿನಾಯಿತಿ ಕೊಟ್ಟಿದ್ದರೂ, ಮೊಹ್ಸಿನ್ ಅವರು ತಪಾಸಣೆಗೆ ಆದೇಶ ನೀಡಿದ್ದಾರೆ. ಹಾಗಾಗಿ ತಪಾಸಣೆ ಮಾಡಿದ್ದಾರೆ ಆದ್ದರಿಂದ ಅಮಾನತು ಮಾಡಲಾಗಿದೆ’ ಎಂದು ಆಯೋಗ ಹೇಳಿದೆ.

ಮೊಹಮ್ಮದ್ ಮೊಹ್ಸಿನ್

ಆದರೆ, ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಈ ಕುರಿತು ಯಾವುದೇ ನಿಯಮಗಳಿಲ್ಲ. ಬದಲಿಗೆ ಸರ್ಕಾರೀ ವಾಹನಗಳನ್ನು ಬಳಸುವ ಕುರಿತು ಅಷ್ಟೇ ಹೇಳಲಾಗಿದೆ. ಹೀಗಾಗಿ ‘ಇಲ್ಲದ ನಿಯಮಗಳನ್ನು ಮುಂದಿಟ್ಟು ಇವರನ್ನು ಅಮಾನತು ಮಾಡಲಾಗಿದೆ’ ಎಂದು ಕಾಂಗ್ರೆಸ್ ಸೇರಿದಂತೆ ಹಲವರು ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ. ಈಗಾಗಲೇ ಚುನಾವಣಾ ಆಯೋಗವು ಬಿಜೆಪಿ ಕಚೇರಿಯಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಸಾಕಷ್ಟು ಕೇಳಿಬಂದಿರುವಾಗ ಈ ಅಮಾನತು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ.

ಕಳೆದ ಸಾರಿ ದೊಡ್ಡ ಸಾಧನೆ ಮಾಡಿದ್ದ ರಾಜ್ಯಗಳಲ್ಲಿ ಅದನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗದು ಎಂಬ ಹಿನ್ನೆಲೆಯಲ್ಲಿ ಒರಿಸ್ಸಾದಂತಹ ಕೆಲವು ರಾಜ್ಯಗಳಲ್ಲಿ ನಷ್ಟವನ್ನು ತುಂಬಿಕೊಳ್ಳುವ ಬಿಜೆಪಿಯ ಯೋಜನೆ ಎಲ್ಲರಿಗೂ ಗೊತ್ತಿದೆ. ಪ್ರಧಾನಿಯವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಕ್ಕೆ ಅಮಾನತು ಮಾಡಿರುವುದು ಮತ್ತು ಧರ್ಮೇಂದ್ರ ಪ್ರಧಾನ್ ವಾಹನದ ತಪಾಸಣೆಗೆ ಬಿಡದೇ ಇರುವುದು ಎರಡೂ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ವಿಶ್ವಾಸ ಇಲ್ಲದಂತೆ ಮಾಡುತ್ತಿದೆ.

ಮೊಹಮದ್ ಮೊಹ್ಸಿನ್ ಅವರು ವಿಜಾಪುರ ಮತ್ತು ಗದಗದ ಜಿಲ್ಲಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಅದಲ್ಲದೇ ಹಲವು ನಿಗಮ ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಕೇಂದ್ರ ಸರ್ಕಾರವು ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ನಿಂತಿರುವುದನ್ನು ಟೀಕಿಸಿರುವ ಕೆಲವು ಪೋಸ್ಟ್.ಗಳು ಕಂಡುಬರುತ್ತವೆ. ಇದರ ಬಗ್ಗೆ ಕೆಲವು ರಾಜಕೀಯ ವಿಶ್ಲೇಷಕರನ್ನು ‘ನಾನುಗೌರಿ ವೆಬ್’ನಿಂದ ಮಾತಾಡಿಸಲಾಯಿತು. ಸ್ವರಾಜ್ ಇಂಡಿಯಾದ ರಾಜಶೇಖರ್ ಅಕ್ಕಿಯವರನ್ನು ಮಾತಾಡಿಸಿದಾಗ, ‘ಅವರು ಸರ್ಕಾರೀ ಅಧಿಕಾರಿಯಾಗಿದ್ದುಕೊಂಡು ಸರ್ಕಾರವನ್ನು ಟೀಕಿಸುತ್ತಿದ್ದಾರಾದರೆ ಅದನ್ನು ನಾನು ತಪ್ಪು ಎನ್ನುತ್ತೇನೆ. ಆದರೆ, ಈಗ ಪ್ರಧಾನಿಯವರ ವಾಹನ ತಪಾಸಣೆಯೇ ತಪ್ಪು ಎನ್ನುವುದು ಮತ್ತು ಅದಕ್ಕಾಗಿ ಅಮಾನತು ಮಾಡುವುದನ್ನೂ ತಪ್ಪು ಎನ್ನುತ್ತೇನೆ. ಎರಡನ್ನೂ ಲಿಂಕ್ ಮಾಡಬಾರದು ‘ ಎನ್ನುತ್ತಾರೆ.

ವಕೀಲ ಮತ್ತು ರಾಜಕೀಯ ವಿಶ್ಲೇಷಕ ಜಗನ್ನಾಥ್ ರಾಮಸ್ವಾಮಿಯವರ ಪ್ರಕಾರ, ‘ಈ ಅಧಿಕಾರಿ ವ್ಯವಸ್ಥೆಯ ಹುಳುಕುಗಳನ್ನು ಪ್ರಶ್ನಿಸುವ ಮನೋಭಾವ ಇದ್ದುದರಿಂದಲೇ ಪ್ರಧಾನಿಯವರ ವಾಹನ ತಪಾಸಣೆಗೂ ಕೈ ಹಾಕಿದ್ದಾರೆ. ಇವತ್ತು ‘ನಾರ್ಮಲ್’ ಎಂದು ಭಾವಿಸಲಾಗುವ ಅಧಿಕಾರಿಗಳು ವ್ಯವಸ್ಥೆಯ ಜೊತೆಗೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ಹೋಗುತ್ತಾರೆ, ಅಷ್ಟೇ’ ಎಂಬ ಅನಿಸಿಕೆ ವ್ಯಕ್ತಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...