| ಪಿ.ಕೆ ಮಲ್ಲನಗೌಡರ್ |
ಒಂದು ಸಮುದಾಯ ಅದರಲ್ಲೂ ಉಪ ಸಮುದಾಯ ಸುಲಭಕ್ಕೆ ಇಡೀಯಾಗಿ ಪಕ್ಷನಿಷ್ಠೆ ಬದಲಿಸಿವುದು ಅಪರೂಪ. ಅದರ ಎದುರು ಒಪ್ಪಿತವಾಗುವ ವಾದಗಳು ಅಥವಾ ‘ತಮ್ಮದು ಎಂಬ ಭಾವ ಮೂಡಬೇಕಷ್ಟೇ. 2ನೇ ಹಂತದ ಚುನಾವಣೆ ನಡೆಯುತ್ತಿರುವ ಉತ್ತರ ಕರ್ನಾಟಕದಲ್ಲಿ ಈ ಸಲ ಪಂಚಮಸಾಲಿಗಳು ಒಂದು ಸಮುದಾವಾಗಿ ಯಾರ ಕಡೆ ಒಲವು ಹೊಂದಿದ್ದಾರೆ ಎಂಬುದನ್ನು ಗೆರೆ ಕೊರೆದು ಹೇಳಲಾಗದು. ಆದರೆ, ಸುಮಾರು 15 ವರ್ಷಗಳ ಕಾಲ ಬಿಜೆಪಿ ಬೆಂಬಲಿಗರು ಎಂದೇ ಗುರುತಿಸಲ್ಪಟ್ಟಿದ್ದ ಪಂಸಮಸಾಲಿ ಲಿಂಗಾಯತರು ಈ ಸಲ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆಯೇ ಎಂಬ ವಾತವಾರಣ ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುತ್ತಿದೆ.
ಮುಂಬೈ ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಹಲವು ಬೆಳವಣಿಗೆಗಳು ಇದಕ್ಕೆ ಸಾಕ್ಷಿ. ನಿನ್ನೆ ಶನಿವಾರ ಹುಬ್ಬಳ್ಳಿಯಲ್ಲಿ ಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಿಜೆಪಿಯ ಶಾಸಕರು ಮತ್ತು ಮಾಜಿ ಶಾಸಕರು ಪತ್ರಿಕಾಗೋಷ್ಠಿ ನಡೆಸಿ, ಲಿಂಗಾಯತರು ಎಂದಿನಂತೆ ಪ್ರಹ್ಲಾದ ಜೋಶಿಯವರಿಗೇ ಬೆಂಬಲಿಸಬೇಕು…. ಈ ಹಿಂದೆ ಸಮಾಜ ಒಡೆಯಲು ಯತ್ನಿಸಿದ್ದ ವಿನಯ ಕುಲಕರ್ಣಿ ಈಗ ಸಮಾಜದ ಹೆಸರಲ್ಲಿ ಮತ ಬೇಡುತ್ತಿರುವುದು ಖಂಡನೀಯ’ ಎಂದು ಮಾತಾಡಿದ್ದಾರೆ.
ಹೌದು ವಿನಯ್ ಲಿಂಗಾಯತ/ವೀರಶೈವ ಮುಖಂಡರ ಸಭೆಗಳನ್ನು ನಡೆಸಿ, ಲಿಂಗಾಯತರು ಒಂದಾಗಿ ತಮಗೆ ಬೆಂಬಲಿಸಬೇಕು ಎಂದು ಒಲವು ಗಳಿಸುತ್ತಿದ್ದಾರೆ. ಬಹಿರಂಗ ಸಭೆಗಳಲ್ಲೂ ಅವರು, ‘8 ಲಿಂಗಾಯಿತ ಸಂಸದರಿದ್ದರೂ ಒಬ್ಬರಿಗೂ ಬಿಜೆಪಿ ಕೇಂದ್ರ ಸಚಿವ ಸ್ಥಾನ ನೀಡಲಿಲ್ಲ. ಮೂವರು ಬ್ರಾಹ್ಮಣ ಸಂಸದರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ಮಾಡಿ, ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ… ಬಿಜೆಪಿಗೆ ನಿಜಕ್ಕೂ ಲಿಂಗಾಯತ ಸಮಾಜದ ಮೇಲೆ ಗೌರವವಿದ್ದರೆ, ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರ ಹಾಕಲಿ’ ಎಂದು ಸವಾಲು ಎಸೆಯುತ್ತಿದ್ದಾರೆ. ಇನ್ನೊಂದು ಕಡೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಮಾರು 15 ಅದ್ವೈತ ಮಠಾಧೀಶರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು 6 ಕ್ಷೇತ್ರಗಳಿದ್ದು ಐದು ಸಾಮಾನ್ಯ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಪಂಚಮಸಾಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಳಗಾವಿ-ಸಾಧುನವರ್, ಚಿಕ್ಕೋಡಿ-ಪ್ರಕಾಶ ಹುಕ್ಕೇರಿ, ಧಾರವಾಡ-ವಿನಯ್ ಕುಲಕರ್ಣಿ ಮತ್ತು ಬಾಗಲಕೋಟೆ-ವೀಣಾ ಕಾಶಪ್ಪನವರ್. ಬಿಜೆಪಿ ಇಲ್ಲಿ ಪಂಚಮಸಾಲಿಗೂ ಟಿಕೆಟ್ ನೀಡಿಲ್ಲ. ಅದು ಹೈದರಾಬಾದ್ ಕರ್ನಾಟಕದಲ್ಲಿ ಮಾತ್ರ ಕೊಪ್ಪಳದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸಂಗಣ್ಣ ಕರಡಿಯವರಿಗೆ ಟಿಕೆಟ್ ನೀಡಿದೆ. ಇದು ಕೂಡ ಪಂಚಮಸಾಲಿಗಳಿಗೆ ಕಾಂಗ್ರೆಸ್ ಪರ ಹೊರಳಲು ಒಂದು ಕಾರಣವಾಗುತ್ತಿದೆಯೇ? ಬಾಗಲಕೋಟೆಯಲ್ಲಂತೂ ಪಂಚಮಸಾಲಿಗಳು ಕಾಂಗ್ರೆಸ್ ಅಭ್ಯರ್ಥಿ ಪರ ನಿಲ್ಲುತ್ತಿರುವುದು ಸ್ಪಷ್ಟವಾಗುತ್ತಿದೆ.
ಲಿಂಗಾಯತ/ವೀರಶೈವ ಸಮುದಾಯದಲ್ಲಿ ಬಹುಸಂಖ್ಯಾತರಾಗಿರುವ ಪಂಚಮಸಾಲಿ ಸಮುದಾಯ ತನಗೆ ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಮೊದಲಿಂದಲೂ ಅಸಮಾಧಾನ ಹೊಂದಿದೆ. ರಾಜೈ ಪಂಚಮಸಾಲಿ ಸಂಘಟನೆಯೂ ಈ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದೆ. ಇಷ್ಟು ವರ್ಷಗಳು ಬೆಂಬಲಿಸಿದರೂ ಬಿಜೆಪಿ ತಮ್ಮನ್ನು ಬಳಸಿಕೊಂಡು ಬಿಸಾಡುತ್ತಿದೆ ಎಂಬ ಭಾವನೆ ದಟ್ಟವಾಗುತ್ತಿದೆ. ಇದು ಸಾಮೂಹಿಕವಾಗಿ ಮತಗಳಾಗಿ ಪರಿವರ್ತಿತ ಆಗಬಹುದೇ ಎಂಬ ಪ್ರಶ್ನೆ ಉಳಿದುಕೊಂಡಿದೆ.
ಬಿಜೆಪಿಗೆ ಮೊದಲ ಬಾರಿ ಇಂತಹ ಹೆದರಿಕೆ ಉಂಟಾಗಿದೆ. ಅದಕ್ಕೇ ಅದು ವಿಜಯ ಸಂಕೇಶ್ವರರ ಪೇಪರ್ ಮೂಲಕ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ಧರ್ಮ ಒಡೆಯುತ್ತಿದೆ ಎಂಬ ಸವಕಲು ವಾದವನ್ನು ತೇಲಿಬಿಡಲು ಯತ್ನಿಸಿತು. ಕರ್ನಾಟಕದಲ್ಲಿ ಪ್ರಧಾನಿಯ ಬಾಯಲ್ಲೂ ಅದನ್ನು ಹೇಳಿಸಲು ಯತ್ನಿಸಿತು.
ಲಿಂಗಾಯತ ಮತಗಳಿಗಾಗಿ ಈಗ ರಾಜಕೀಯ ಮೇಲಾಟ ಶುರುವಾಗಿದ್ದು, ಪಂಚಮಸಾಲಿಗಳು ಈ ಸಲ ಪಾರ್ಟಿ ಬದಲಿಸಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಚುನಾವಣಾ ಫಲಿತಾಂಶದ ಮೇಲೂ ಇದರ ಪ್ರಭಾವವಾಗಲಿದೆ. ಈ ವಿಷಯದಲ್ಲಿ ಹಿಂದೆಲ್ಲ ಬಿಜೆಪಿಗಿದ್ದ ಅಡ್ವಾಂಟೇಜ್ ಈ ಸಲ ಕಾಂಗ್ರೆಸ್‍ಗೆ ಇದೆ. ಅದಕ್ಕೆ ಸಾಕಷ್ಟು ಕಾರಣಗಳೂ ಇವೆಯಲ್ಲವೇ?
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)


