ದೆಹಲಿಯ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶ ಹೊಂದಿರುವ 2021 ರ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ದೆಹಲಿಯಲ್ಲಿ ಚುನಾಯಿತ ಸರ್ಕಾರ ಮತ್ತು ನಾಮನಿರ್ದೇಶಿತ ಲೆಫ್ಟಿನೆಂಟ್ ಗವರ್ನರ್ ಪಾತ್ರಗಳನ್ನು ನಿರ್ದಿಷ್ಟಪಡಿಸುವ ಕಾಯಿದೆಯ ತಿದ್ದುಪಡಿಗಳನ್ನು ಮಸೂದೆ ಸೂಚಿಸುತ್ತದೆ.
ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವುದು ದೆಹಲಿ ಜನರಿಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಏಕೆಂದರೆ ಇದು ಜನರಿಂದ ಚುನಾಯಿತರಾದವರ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಮತ್ತು ಸೋಲಿಸಲ್ಪಟ್ಟವರಿಗೆ ನಿಯಂತ್ರಣವನ್ನು ನೀಡುತ್ತದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಈ ತಿದ್ದುಪಡಿಗಳು ದೆಹಲಿಯಲ್ಲಿ ಚುನಾವಣೆಗಳು ಮತ್ತು ಚುನಾಯಿತ ಸರ್ಕಾರವನ್ನು ಅಪ್ರಸ್ತುತಗೊಳಿಸುತ್ತವೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟೀಕಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ವ್ಯವಹಾರಗಳನ್ನು ನಡೆಸುವಲ್ಲಿನ ಅಸ್ಪಷ್ಟತೆಯನ್ನು ಕೊನೆಗೊಳಿಸಲು ಈ ಮಸೂದೆಯನ್ನು ತರಲಾಗಿದೆ ಎಂದು ಕೇಂದ್ರವು ಹೇಳಿದೆ. ಇದು ನಗರದ ಜನರಿಗೆ ಪ್ರಯೋಜನಕಾರಿ ಆಗುವುದರಿಂದ ಇದನ್ನು “ರಾಜಕೀಯ ನಡೆ” ಎಂದು ಕರೆಯಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದೆ.
ಎರಡು ಪ್ರಸ್ತಾವಿತ ತಿದ್ದುಪಡಿಗಳು, ನಿರ್ದಿಷ್ಟವಾಗಿ, ಚುನಾಯಿತ ಸರ್ಕಾರವನ್ನು ಅಪ್ರಸ್ತುತಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಕಾರ್ಯಾಂಗೀಯ ಕ್ರಮಕ್ಕೆ ಲೆಫ್ಟಿನೆಂಟ್ ಜನರಲ್ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಕೇಂದ್ರವು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಮಸೂದೆಯನ್ನು ತಂದಿದೆ. ಎಲ್-ಜಿ ಅವರೇ ಸರ್ಕಾರ ಎಂದು ಅದು ಹೇಳುತ್ತದೆ. ಎಲ್ಲಾ ನಿರ್ಧಾರಗಳು ಮತ್ತು ಫೈಲ್‌ಗಳನ್ನು ಅವರ ಮೂಲಕ ರವಾನಿಸಬೇಕಾಗಿದೆ” ಎಂದು ಸಿಸೋಡಿಯಾ ಸೋಮವಾರ ಹೇಳಿದ್ದಾರೆ. “ಈ ಮಸೂದೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಆದೇಶಕ್ಕೆ ವಿರುದ್ಧವಾಗಿದೆ. ಕೇಂದ್ರವು ಇದನ್ನೇ ಮಾಡಲು ಬಯಸಿದರೆ, ಚುನಾವಣೆಗಳನ್ನು ನಡೆಸುವ ಮತ್ತು ರಾಜ್ಯದಲ್ಲಿ ಚುನಾಯಿತ ಸರ್ಕಾರ ರಚನೆಯ ಅರ್ಥವೇನು? ಕೇಂದ್ರವು ತಾನು ಪ್ರಜಾತಾಂತ್ರಿಕ ಎಂದು ಏಕೆ ನಟಿಸುತ್ತದೆ? ” ಎಂದು ಅವರು ಪ್ರಶ್ನಿಸಿದ್ದಾರೆ.
ಮಾರ್ಚ್ 15 ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಪರಿಚಯಿಸಲಾಯಿತು. ಇದರ ನಂತರ ದೆಹಲಿ ಮಂತ್ರಿಗಳು ಮತ್ತು ಎಎಪಿ ಸಂಸದರು, ಶಾಸಕರು ಮತ್ತು ಕೌನ್ಸಿಲರ್‌ಗಳು ಇದರ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು, ಇದು ಎಲ್-ಜಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಅಪಾದಿಸಿದ್ದರು.
ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ಪರಿಚಯಿಸಿದ 2021 ರ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 1991 ರ ಕಾಯಿದೆಯ ನಾಲ್ಕು ಷರತ್ತುಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ.
ಮೊದಲನೆಯದು ಸೆಕ್ಷನ್ 21, ಅಂದರೆ ಇದು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಶಾಸಕಾಂಗವು ಅಂಗೀಕರಿಸಿದ ಕಾನೂನುಗಳ ಮೇಲಿನ ನಿರ್ಬಂಧಗಳನ್ನು ಸೂಚಿಸುತ್ತದೆ. ಶಾಸಕಾಂಗವು ಮಾಡಬೇಕಾದ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಲಾದ “ಸರ್ಕಾರ” ಎಂಬ ಅಭಿವ್ಯಕ್ತಿ ಲೆಫ್ಟಿನೆಂಟ್ ಗವರ್ನರ್ ಎಂದು ಅರ್ಥೈಸುತ್ತದೆ” ಎಂದು ಸ್ಪಷ್ಟಪಡಿಸುವ ಮೂಲಕ ಉಪವಿಭಾಗವನ್ನು ಸೇರಿಸಲು ಮಸೂದೆ ಪ್ರಯತ್ನಿಸುತ್ತದೆ.
ಎರಡನೇ ತಿದ್ದುಪಡಿಯನ್ನು ಸೆಕ್ಷನ್ 24 ರಲ್ಲಿ ಕೋರಲಾಗಿದೆ, ಇದು ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುತ್ತದೆ. ಶಾಸಕಾಂಗ ಸಭೆಗೆ ನೀಡಲಾಗಿರುವ ಅಧಿಕಾರಗಳ ವ್ಯಾಪ್ತಿಯಿಂದ ಹೊರಗುಳಿಯುವ ಯಾವುದೇ ವಿಷಯಗಳನ್ನು ಒಳಗೊಳ್ಳುವ ಯಾವುದೇ ಮಸೂದೆಯನ್ನು ಪರಿಗಣಿಸಲು ಮತ್ತು ರಾಷ್ಟ್ರಪತಿಗೆ ರವಾನಿಸಲು ಎಲ್-ಜಿ ಒಪ್ಪದಿರುವ ಅಧಿಕಾರವನ್ನು ನೀಡಲಾಗಿದೆ.
ಮೂರನೆಯದಾಗಿ, ಮಸೂದೆಯು ಸೆಕ್ಷನ್ 33, ಕಾರ್ಯವಿಧಾನದ ನಿಯಮಗಳು ಮಾರ್ಪಾಟಿಗೆ ಬಯಸಿದೆ. ಅದರ ವಿಧಾನ ಮತ್ತು ಸದನ ನಡವಳಿಕೆಯನ್ನು ನಿಯಂತ್ರಿಸಲು ಅಸೆಂಬ್ಲಿ ಮಾಡಿದ ನಿಯಮಗಳ ಮೇಲೆ ಇದು ನಿಯಂತ್ರಣ ಸಾಧಿಸುತ್ತದೆ.
ಅಲ್ಲದೆ, “ ಹೊಸ ಮಸೂದೆ ಜಾರಿಗೆ ಬರುವ ಮುನ್ನ ರಾಜಧಾನಿಯ ದಿನನಿತ್ಯದ ಆಡಳಿತದ ವಿಷಯಗಳನ್ನು ಪರಿಗಣಿಸಲು ಅಥವಾ ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳನ್ನು ನಡೆಸಲು ಮತ್ತು ಯಾವುದೇ ನಿಯಮದಲ್ಲಿ ಶಾಸಕಾಂಗವು ತನ್ನನ್ನು ಅಥವಾ ಅದರ ಸಮಿತಿಗಳನ್ನು ಸಕ್ರಿಯಗೊಳಿಸಲು ಯಾವುದೇ ನಿಯಮವನ್ನು ಮಾಡಬಾರದು. ಎಂದು ನಿರ್ಬಂಧಿಸಿದೆ.
ತಿದ್ದುಪಡಿ ಮಸೂದೆಯು, “ಮಂತ್ರಿ ಮಂಡಲ ಅಥವಾ ಸಚಿವರ ನಿರ್ಧಾರದ ಅನುಸಾರ” ಅಥವಾ “ಸರ್ಕಾರದ ಅಧಿಕಾರವನ್ನು ಚಲಾಯಿಸಲು” ಯಾವುದೇ ಕಾರ್ಯಕಾರಿ ಕ್ರಮ ತೆಗೆದುಕೊಳ್ಳುವ ಮೊದಲು, ಎಲ್-ಜಿ ಅಭಿಪ್ರಾಯವನ್ನು ಪಡೆಯಬೇಕಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್


