ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂತ್ರಸ್ತ ಯುವತಿ ದೂರು ನೀಡಿದ ಬೆನ್ನಲ್ಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ವಿರುದ್ಧ ಬೆಂಗಳೂರಿನ ಕಬ್ಬನ್‌ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿಯವರು ಉದ್ಯೋಗದ ಭರವಸೆ ನೀಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಇಂದು ಎರಡು ಪುಟಗಳ ದೂರು ಸಲ್ಲಿಸಿದ್ದರು.
ಇಂದು ಬೆಳಿಗ್ಗೆ ಸಂತ್ರಸ್ತ ಯುವತಿಯು 29 ಸೆಕೆಂಡ್‌ಗಳ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, “ಎಲ್ಲರ ಬೆಂಬಲದಿಂದ ನಾನು ಇಂದು ಬದುಕುಳಿದಿದ್ದೇನೆ. ಕಳೆದ 24 ದಿನಗಳಿಂದ ಜೀವ ಕೈಯಲ್ಲಿಡಿದು ಬದುಕಿದೆ. ಈಗ ನಿಮ್ಮ ಬೆಂಬಲದಿಂದ ನಾನು ರಮೇಶ್ ಜಾರಕಿಹೊಳಿಯವರ ವಿರುದ್ದ ನಮ್ಮ ವಕೀಲರಾದ ಜಗದೀಶ್ ಕುಮಾರ್ ಅವರ ಮೂಲಕ ಪೊಲೀಸ್ ಕಮಿಷನರ್‌ರವರಿಗೆ ದೂರು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದರು.
ದೂರು ಪರಿಶೀಲಿಸಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಕಬ್ಬನ್ ಪಾರ್ಕ್ ಪೊಲೀಸರಿಗೆ ನಿರ್ದೇಶಿಸಿದ್ದರು. ಅದರನ್ವಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಐಪಿಸಿ 506- ಜೀವ ಬೆದರಿಕೆ, 354(A)- ಉದ್ದೇಶಪೂರ್ವಕ ಲೈಂಗಿಕ ದೌರ್ಜನ್ಯ, 376(C)- ಅಧಿಕಾರ ದುರುಪಯೋಗಿಪಡಿಸಿಕೊಂಡು ಅತ್ಯಾಚಾರ, 506 ಅವಾಚ್ಯ ಶಬ್ದಗಳಿಂದ ನಿಂದನೆ, 417 ನೌಕರಿ ಕೊಡಿಸುವುದಾಗಿ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಾದ ಹಿನ್ನಲೆಯಲ್ಲಿ ಕೆಲದಿನಗಳಲ್ಲಿಯೇ ಸಂತ್ರಸ್ತ ಯುವತಿಯು ಖುದ್ದು ಎಸ್‌ಐಟಿ ಎದುರು ಹಾಜರಾಗಿ ಹೇಳಿಕೆ ನೀಡಲಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಯುವತಿ


