ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ(ಸಿಆರ್‌ಪಿಎಫ್) ಮುಖ್ಯ ಕ್ರೀಡಾ ಅಧಿಕಾರಿ ಡಿಐಜಿ ಖಜನ್ ಸಿಂಗ್ ಮತ್ತು ತರಬೇತುದಾರ ಇನ್ಸ್‌ಪೆಕ್ಟರ್ ಸುರ್ಜಿತ್ ಸಿಂಗ್ ಅನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
30 ವರ್ಷದ ಮಹಿಳಾ ಕಾನ್‌ಸ್ಟೆಬಲ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಸಾಬೀತಾಗಿದೆ ಎಂದು ಶ್ರೀನಗರ ಮೂಲದ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಚಾರು ಸಿನ್ಹಾ ನೇತೃತ್ವದ ಸಮಿತಿಯು ಹೇಳಿದೆ.
“ಸಮಿತಿಯು ನಡೆಸಿದ ಪ್ರಾಥಮಿಕ ತನಿಖೆಯ ಶಿಫಾರಸುಗಳನ್ನು ಅನುಸರಿಸಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಖಜನ್ ಸಿಂಗ್ ಮತ್ತು ಇನ್ಸ್‌ಪೆಕ್ಟರ್ ಸುರ್ಜಿತ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಅತಿದೊಡ್ಡ ಅರೆಸೈನಿಕ ಪಡೆಗಳ ಮುಖ್ಯ ಕ್ರೀಡಾ ಅಧಿಕಾರಿ ಖಜನ್ ಸಿಂಗ್ ಅವರು 1986 ರ ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದು 1951 ರ ಆವೃತ್ತಿಯ ನಂತರ ಈ ಕ್ರೀಡಾಕೂಟದಲ್ಲಿ ಭಾರತ ಪಡೆದ ಮೊದಲ ಪದಕವಾಗಿದೆ.
ಖಜನ್ ಸಿಂಗ್ ಈ ಹಿಂದೆ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿ, “ಈ ಆರೋಪಗಳು ಸಂಪೂರ್ಣವಾಗಿ ಸುಳ್ಳಾಗಿದ್ದು, ಇದು ನನ್ನ ಇಮೇಜ್ ಅನ್ನು ಹಾಳುಗೆಡವಲು ರೂಪಿಸಿದ್ದಾಗಿದೆ” ಎಂದು ಪಿಟಿಐಗೆ ಹೇಳಿದ್ದರು.
ಇದನ್ನೂ ಓದಿ: 2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!
ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯ ಬಾಬಾ ಹರಿದಾಸ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ನೀಡಿದ ದೂರಿನಲ್ಲಿ, ಈ ಅಧಿಕಾರಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಅವರು ಹಲವು ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.
2010 ರಲ್ಲಿ ಸಿಆರ್‌ಪಿಎಫ್‌ಗೆ ಸೇರ್ಪಡೆಯಾದ ಮಹಿಳೆ, ನಂತರ ಪೊಲೀಸ್ ತನಿಖೆಯ ವೇಳೆ ತನ್ನ ಆರೋಪಗಳನ್ನು ಹಿಂತೆಗೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮಹಿಳೆ ತನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅಲ್ಲಿ ಇಬ್ಬರು ಸಿಆರ್‌ಪಿಎಫ್ ಕ್ರೀಡಾ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಹಿಂತೆಗೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ನಿವೃತ್ತರಾದ ಸಿಆರ್‌ಪಿಎಫ್‌ನ ಮಾಜಿ ಮಹಾನಿರ್ದೇಶಕ ಆನಂದ್ ಪ್ರಕಾಶ್ ಮಹೇಶ್ವರಿ ಜನವರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಈ ಪ್ರಕರಣದಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ” ಎಂದು ಹೇಳಿದ್ದರು.
ಸಿಆರ್‌ಪಿಎಫ್ ಪಡೆಯು ಸುಮಾರು 3.25 ಲಕ್ಷ ಸಿಬ್ಬಂದಿಗಳನ್ನು ಹೊಂದಿದ್ದು, 1986 ರಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ಯುದ್ಧ ಶ್ರೇಣಿಯಲ್ಲಿ ಸೇರಿಸಿಕೊಂಡಿತು. ಇದು ಪ್ರಸ್ತುತ ಆರು ಮಹಿಳಾ ಬೆಟಾಲಿಯನ್‌ಗಳನ್ನು ಹೊಂದಿದ್ದು, ಒಟ್ಟಾರೆ ಸುಮಾರು 8,000 ಸಿಬ್ಬಂದಿಗಳನ್ನು ಹೊಂದಿದೆ. ಇದು ಕ್ರೀಡೆ ಮತ್ತು ಇತರ ಆಡಳಿತ ವಿಭಾಗಗಳಲ್ಲಿಯೂ ಸಹ ಮಹಿಳಾ ಸಿಬ್ಬಂದಿಯನ್ನು ಹೊಂದಿದೆ.
ಇದನ್ನೂ ಓದಿ: ನಿಮಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ: ಸಿಎಂ v/s ಈಶ್ವರಪ್ಪ ಬಗ್ಗೆ ಕಾಂಗ್ರೆಸ್


