| ಪಿ.ಕೆ. ಮಲ್ಲನಗೌಡರ್ |
ಈಗ ಮೂರು ಹಂತದ ಚುನಾವಣೆ ಮುಗಿದಿದೆ. ಸದ್ಯ ಇಂಟರವಲ್ ಎನ್ನುವುದಾದರೆ, ಫಸ್ಟ್ ಹಾಫ್‍ನಲ್ಲಿ ದೇಶದ ಸಮಸ್ಯೆಗಳ ಕುರಿತು ಚಕಾರ ಎತ್ತದ, ತಾವು ಕೊಟ್ಟ ಭರವಸೆ ಕುರಿತು ಮಾತೇ ಆಡದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ದಾಳಿ, ಪಾಕ್ ದ್ವೇಷ, ರಾಷ್ಟ್ರದ ಸುರಕ್ಷತೆ ಎಂದೆಲ್ಲ ಭಾಷಣ ಬಿಗಿದರಷ್ಟೆ. ಸೆಕೆಂಡ್ ಹಾಫ್‍ನಲ್ಲಿ ಹಿಂದೆಲ್ಲ ಅಡಿಯಾಳಿಗಿದ್ದ ಮಾಧ್ಯಮಗಳನ್ನೆಲ್ಲಾ ಸಾರಾಸಗಟಾಗಿ ಖರೀದಿಸಿದಂತೆ ಕಾಣುತ್ತಿದೆ.
ಮೂರು ಹಂತದ ಚುನಾವಣೆ ಮುಗಿದ ನಂತರ ಭಯ ಬಿದ್ದಂತಿರುವ ಬಿಜೆಪಿಯವರು ಬೇರೆ ಹಾದಿ ಹಿಡಿದಿದ್ದಾರೆ. ಅಲ್ಲಿ ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರಲು ಒದ್ದಾಡಿದ್ದಾರೆ. ಅಕ್ಷಯಕುಮಾರ್ ಸಂದರ್ಶನ ಅದರ ಭಾಗ. ಅದು ಯಾವಾಗ ಲೇವಡಿಗೆ ಒಳಗಾಯಿತೋ, ಆಗ ಅವರು ಕಾಶಿ ವಿಶ್ವನಾಥನ ಹೆಸರಲ್ಲಿ ಧಾರ್ಮಿಕವಾಗಿ ಹಿಂದೂಗಳ ಒಲವು ಪಡೆಯಲು ಎರಡು ದಿನ ‘ಹರ’ಸಾಹಸ ಮಾಡಿದ್ದಾರೆ!
ಇದೇ ವೇಳೆ, ತಾವು ಈವರೆಗೂ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಇಂಡಿಯಾ ಟುಡೇಯೊಂದಿಗೆ ಗಂಗಾ ನದಿಯ ತಟದಲ್ಲಿ ಒಂದೂವರೆ ತಾಸುಗಳ ಸಂದರ್ಶನ ನೀಡಿದ್ದಾರೆ. ಪ್ರಧಾನಿಯ ನಾಮಿನೇಶನ್ ನಂತರ ಅದನ್ನು ಪ್ರಮೋಟ್ ಮಾಡುತ್ತಲೇ ಇರುವ ಇಂಡಿಯಾ ಟುದೇ ಚಾನೆಲ್,‘unforgettable interview for Modi’ ಎಂದೆಲ್ಲ ಪೋಸು ಕೊಡುತ್ತಿದೆ. ಇವತ್ತು ಸಂಜೆ 7ಕ್ಕೆ ಆ ಸಂದರ್ಶನ ಪ್ರಸಾರವಾಗಲಿದ್ದು, ಅದರ ತುಣುಕುಗಳನ್ನು ಈಗ ಪ್ರದರ್ಶಿಸಲಾಗಿತ್ತಿದೆ.
‘ಇಂಡಿಯಾ ಟುಡೇ’ದ ಸಂಪಾದಕನೇ ಆಗಿರುವ ರಾಹುಲ ಕನ್ವಾಲ್ ತನ್ನ ಸಹಚರರೊಂದಿಗೆ ಈ ಸಂದರ್ಶನ ಮಾಡಿದ್ದು, ‘ಮೋದಿ ಪ್ರಶ್ನೆಗೆ ಉತ್ತರಿಸಲ್ಲ, ಪ್ರೆಸ್ ಅನ್ನು ಅವಾಯ್ಡ್ ಮಾಡ್ತಾರೆ ಎಂಬುದೆಲ್ಲ ಸುಳ್ಳು, ಅವರು ನಮ್ಮ ಪ್ರಶ್ನೆ ಮತ್ತು ಕೌಂಟರ್ ಪ್ರಶ್ನೆಗೆಲ್ಲ ಉತ್ತರಿಸಿದರು’ ಎಂದೆಲ್ಲ ಹೇಳುತ್ತಾರೆ. ನ್ಯೂಸ್ ಆ್ಯಂಕರ್ ಅಂಜನಾ ಕಶ್ಯಪ್ ಸ್ಟುಡಿಯೋದಲ್ಲಿ ಪ್ರಸಾರವಾಗಲಿರುವ ಈ ಸಂದರ್ಶನದ ಬಗ್ಗೆ ಬಿಲ್ಡ್‍ಅಪ್ ಕೊಡುತ್ತಲೇ, ಗಂಗಾ ತಟದಲ್ಲಿರುವ ರಾಹುಲ್ ಕನ್ವಲ್‍ರನ್ನು ಮಾತಾಡಸಿ, ಮೋದಿ ಮನಬಿಚ್ಚಿ ಮಾತಾಡಿದರೇ ಎಂದು ನಾಟಕೀಯ ಶೈಲಿಯಲ್ಲಿ ಪ್ರಶ್ನೆ ಮಾಡುತ್ತಾರೆ! ಅದಕ್ಕೆ ಗಂಗಾ ತಟದಿಂದ ಉತ್ತರಿಸುವ ರಾಹುಲ್ ಕನ್ವಲ್, ಮೋದಿ ಬಗ್ಗೆ ತಪ್ಪು ಅಭಿಪ್ರಾಯ ಇವೆಯಲ್ಲ, ಈ ಸಂದರ್ಶನದಿಂದ ಅವೆಲ್ಲ ದೂರವಾಗಲಿವೆ, ಮೋದಿ ಪ್ರಬುದ್ಧ ನಾಯಕ ಎಂಬಂತೆ ಹೊಗಳತೊಡಗುತ್ತಾರೆ!
7ಕ್ಕೆ ಸಂದರ್ಶನ ನೋಡೋಣ!
ಅರ್ನಾಬ್ ಕೂಗಾಡಿದ್ದು ಆಯ್ತು ಕೆಲಸ ಆಗಲಿಲ್ಲ… ಅಕ್ಷಯ್ ಬಂದ, ವರ್ಕ್‍ಔಟ್ ಆಗಲಿಲ್ಲ… ಈಗ ಇದ್ದುದರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದ ‘ಇಂಡಿಯಾ ಟುಡೆ’ ಯನ್ನು ಕೂಡ ಬಲೆಗೆ ಹಾಕಲಾಗಿದೆ! ಈ ಸಂದರ್ಶನವನ್ನೂ ಎಲ್ಲ ಭಾಷೆಗಳ ಪೇಯ್ಡ್ ಚಾನೆಲ್‍ಗಳೂ ಅನುವಾದಿಸಿ (ಸಬ್ ಟೈಟಲ್ ಹಾಕಿ) ಪ್ರಸಾರ ಮಾಡುವುದಂತೂ ಗ್ಯಾರಂಟಿ! ಈಗಾಗಲೇ ಅವಕ್ಕೆ ಸಂದರ್ಶನದ ಸ್ಕ್ರಿಪ್ಟ್ ಸಿಕ್ಕಿರಬಹುದು ಅಲ್ಲವೇ?
ಮೋದಿಯವರು ಅಕ್ಷಯ್ ಕುಮಾರ್‍ಗೆ ಸಂದರ್ಶನ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರವೀಶ್‍ಕುಮಾರ್‍ಗೂ ಸಂದರ್ಶನ ಕೊಡುತ್ತೀರಾ ಎಂಬ ಪ್ರಶ್ನೆ ವೈರಲ್ ಆಗಿದೆ. ಚೇಂಜ್.ಆರ್ಗ್‍ನಲ್ಲಿ ಸಾವಿರಾರು ಜನ ಪಿಟಿಷನ್‍ಗೆ ಸಹಿ ಮಾಡಿ ಮೋದಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯಿಸದ ಮೋದಿ ಇಂಡಿಯಾ ಟುಡೇಗೆ ಸಂದರ್ಶನ ನೀಡಿ ಪಲಾಯನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈಗಷ್ಟೇ ಸೆಕೆಂಡ್ ಹಾಫ್ ಶುರು. ಈ ಭಾಗದ ನಾಟಕದಲ್ಲಿ ಮಾಧ್ಯಮಗಳೇ ದೊಡ್ಡ ಪೇಯ್ಡ್ ಅಭಿನಯಕಾರರು ಎಂಬುದು ನಾಚಿಕೆಗೇಡಿನ ವಿಷಯ! ಆದರೂ ಪೂರ್ತಿ ಸಂದರ್ಶನ ಪ್ರಸಾರವಾಗುವವರೆಗೂ ಕಾಯೋಣ.


