Homeಕರ್ನಾಟಕಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ಒಂದು ದೇಶ, ಒಂದು ಭಾಷೆ, ಅಖಂಡ ಭಾರತ, ಹಿಂದೂ ರಾಷ್ಟ್ರ ಇತ್ಯಾದಿಗಳೆಲ್ಲ ಪ್ರಬಲವಾಗಿ ಮುನ್ನೆಲೆಗೆ ಬರುತ್ತಿರುವ ಕಾಲವಿದು. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ತುಳುನಾಡು ಇವನ್ನೆಲ್ಲ ಉಗ್ರವಾಗಿ ಒಪ್ಪಿಕೊಂಡಿದೆ. ಆರ್‌ಎಸ್‌ಎಸ್ ತುಳುನಾಡನ್ನು ತನ್ನ ಪ್ರಯೋಗ ಶಾಲೆ ಮಾಡಿಕೊಂಡಿದೆ. ಉಡುಪಿಯ ಎಂಟು ಮಠಗಳ ಜೊತೆಗೆ ಹತ್ತು ಹಲವು ಸ್ವಾಮಿಗಳು ತುಳುನಾಡಿನ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟ ಮಂಗಳ ಪ್ರಶ್ನೆ, ಬ್ರಹ್ಮ ಕಲಶಗಳು ತುಳುನಾಡನ್ನು ಆಮೂಲಾಗ್ರವಾಗಿ ಆವರಿಸಿಕೊಂಡಿವೆ. ಭೂತಾರಾಧನೆಯ ಸಂದರ್ಭದಲ್ಲಿ ಉಗ್ರ ಹಿಂದುತ್ವದ ಭಾಷಣಗಳನ್ನು ಏರ್ಪಡಿಸಲಾಗುತ್ತಿದೆ. ಯಕ್ಷಗಾನಗಳಲ್ಲಿ ಕೋಮುವಾದಿ ಮಾತುಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ.

ಇಂಥ ಬೆಳವಣಿಗೆಗಳ ನಡುವೆ, ಕನ್ನಡ, ಮಲೆಯಾಳ, ಬ್ಯಾರಿ ಭಾಷೆ, ಕೊಂಕಣಿ, ಅರೆಭಾಷೆ, ತಮಿಳು, ಹವ್ಯಕ ಕನ್ನಡ, ಕೊರಗ, ಮತ್ತಿತರ ಅನೇಕ ಭಾಷೆಗಳಿರುವ ನೆಲದಲ್ಲಿ ಇದೀಗ ತುಳು ರಾಜ್ಯದ ಬೇಡಿಕೆ ಕೇಳಿಬರಲಾರಂಭಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಈ ಬೇಡಿಕೆಯು ಸದ್ಯಕ್ಕೆ ಬಹಳ ಮುಂದೆ ಹೋಗಲಾರದು. ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಮತ್ತು ತುಳುನಾಡಿನ ಇಂದಿನ ವಾಸ್ತವಗಳ ನಡುವೆ ಅಪಾರ ಅಂತರವಿರುವುದೇ ಅದಕ್ಕೆ ಮುಖ್ಯ ಕಾರಣ. ಆದರೆ ಇದೊಂದು ಕುತೂಹಲಕರ ಬೆಳವಣಿಗೆಯಾಗಿದೆ. ಈ ಬೇಡಿಕೆಯನ್ನು ಕನ್ನಡಿಗರು ಒಪ್ಪಲಾರರು. ಎಲ್ಲ ಬಗೆಯ ಪ್ರಾದೇಶಿಕತೆಗಳಿಗೆ ವಿರೋಧವಾಗಿರುವ ಬಿಜೆಪಿಯು ಕೂಡಾ ಈ ಬೇಡಿಕೆಯನ್ನು ಮನ್ನಿಸಲಾರದು. ತುಳುವಿನ ಹಿರಿಯ ವಿದ್ವಾಂಸರು ಪ್ರತ್ಯೇಕ ತುಳುನಾಡಿನ ಬೇಡಿಕೆಗೆ ತಮ್ಮ ಬೆಂಬಲವನ್ನು ಘೋಷಿಸಿಲ್ಲ ಮಾತ್ರವಲ್ಲ ಅಂತ ಬೇಡಿಕೆಗೆ ಅವರು ವಿರೋಧವಾಗಿದ್ದಾರೆ ಕೂಡಾ.

ನಾನು ಅರಿತುಕೊಂಡಂತೆ, ಪ್ರತ್ಯೇಕ ತುಳುರಾಜ್ಯದ ಬೇಡಿಕೆಗೆ, ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛದದಲ್ಲಿ ಸ್ಥಾನ ಸಿಗದೆ ಇರುವುದು ಮುಖ್ಯಕಾರಣ. ಇದರ ಹಿಂದಿರುವ ಭಾಷಾ ರಾಜಕಾರಣವನ್ನು ತುಳುವರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಕಳೆದ ಸುಮಾರು 30 ವರ್ಷಗಳಿಂದಲೂ ತುಳುವರು ಸಂವಿಧಾನದ ಎಂಟನೇ ಪರಿಚ್ಛದದಲ್ಲಿ ತುಳುವನ್ನು ಸೇರಿಸಲು ಕೂಗೆಬ್ಬಿಸುತ್ತಲೇ ಬಂದಿದ್ದಾರೆ. ಎಸ್.ಎಂ ಕೃಷ್ಣ ಸರಕಾರವು ಬಹಳ ಹಿಂದೆಯೇ ಕೇಂದ್ರ ಸರಕಾರಕ್ಕೆ ಮನವಿಯೊಂದನ್ನು ಕಳಿಸಿಕೊಟ್ಟಿತ್ತು. ಈಚೆಗೆ ಸಂಸದರಾದ ಶ್ರೀ ಬಿ.ಕೆ ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ತುಳುವಿನ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದಾರೆ. ಆದರೆ ಕರ್ನಾಟಕದ ಇತರೆಡೆಯ ಲೋಕಸಭಾ ಪ್ರತಿನಿಧಿಗಳು ಅವರ ಮಾತಿಗೆ ಧ್ವನಿ ಸೇರಿಸಿಲ್ಲ.

ತುಳುನಾಡಿನ ಸಂಸದರೂ ಕರ್ನಾಟಕ ಬಿಜೆಪಿಯ ಅಧ್ಯಕ್ಷರೂ ಆಗಿರುವ ಶ್ರೀ ನಳಿನ್ ಕುಮಾರ್ ಕಟೀಲರೂ ಹರಿಪ್ರಸಾದರ ಜೊತೆ ಸ್ವರ ಎತ್ತಲಿಲ್ಲ. ಒಂದು ಕಾಲಕ್ಕೆ ಕೇಂದ್ರದಲ್ಲಿ ಪ್ರಬಲ ನಾಯಕರುಗಳಾಗಿದ್ದ ಕರಾವಳಿಯ ತುಳುವರಾದ ಶ್ರೀ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿಯವರ ಕಾಲದಲ್ಲಿಯೂ ಆ ಕೆಲಸ ಅಗಲಿಲ್ಲ. ಲಾಲ್ ಕೃಷ್ಣ ಅದ್ವಾನಿ, ಉಮಾಭಾರತಿ ಮೊದಲಾದವರಿಗೆ ಗುರು ಸ್ಥಾನದಲ್ಲಿದ್ದ ಶ್ರೀ ಪೇಜಾವರ ಸ್ವಾಮಿಯವರಿಗೂ ಇದರ ಬಗ್ಗೆ ಆಸಕ್ತಿ ಇರಲಿಲ್ಲ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅವರ ಕೈಯಲ್ಲಿಯೇ ತುಳುವಿನ ಸಂವಿಧಾನ ಮಾನ್ಯತೆಗೆ ನಾನೇ ಸಿದ್ಧಪಡಿಸಿದ್ದ ಮನವಿಯನ್ನು ಕೊಟ್ಟಿದ್ದರು. ಆದರೆ ಕಳೆದ ಚುನಾವಣೆಗಳ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ ಪ್ರಧಾನಿಗಳು ಅದರ ಬಗ್ಗೆ ಉಸಿರೆತ್ತಲಿಲ್ಲ. ತುಳುವರೂ ಆ ಕುರಿತು ಮಾತೆತ್ತದೆ ಮೋದಿಯವರಿಗೇ ಮತಚಲಾಯಿಸಿದರು.

ಹೀಗೆಂದಾಗ ತುಳು ಭಾಷೆಗೆ ಎಂಟನೇ ಪರಿಚ್ಛದಕ್ಕೆ ಸೇರುವ ಅರ್ಹತೆ ಇಲ್ಲವೆಂದು ಭಾವಿಸುವಂತಿಲ್ಲ. ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆಯೆಂಬುದನ್ನು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು 1856ರಷ್ಟು ಹಿಂದೆಯೇ ಬರೆದ ರಾಬರ್ಟ್ ಕಾಲ್ಡವೆಲ್‌ನು ‘ತುಳು ಚೆನ್ನಾಗಿ ಅಭಿವೃದ್ಧಿ ಹೊಂದಿದ ಭಾಷೆ’ ಎಂದು ಕೊಂಡಾಡಿದ್ದಾನೆ. ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾದ ಡಾ. ಪಿ.ಎಸ್ ಸುಬ್ರಮಣ್ಯಂ ಅವರ ಪ್ರಕಾರ ಮೂಲ ದ್ರಾವಿಡದಿಂದ ಕ್ರಿ. ಶ. ಪೂರ್ವ 8ನೇ ಶತಮಾನದ ಹೊತ್ತಿಗೆ ಮೊದಲು ಬೇರೆಯಾದ ಭಾಷೆಯೇ ತುಳು, ಈಗ ಈ ಭಾಷೆಗೆ 2500 ವರ್ಷಗಳಿಗೂ ಅಧಿಕವಾದ ಶ್ರೀಮಂತ ಇತಿಹಾಸವಿದೆ. ಪುರಾತತ್ವ ಶಾಸ್ತ್ರಜ್ಞರು ತುಳುನಾಡಿನ ಜನರ ಇತಿಹಾಸವನ್ನು 25 ಶತಮಾನಗಳಷ್ಟು ಹಿಂದೆ ಕೊಂಡೊಯ್ದಿದ್ದಾರೆ. ಈ ಸುದೀರ್ಘ ಕಾಲಾವಧಿಯಲ್ಲಿ ತುಳುನಾಡಿನ ಗಡಿ ರೇಖೆಗಳು ಬದಲಾಗುತ್ತಲೇ ಇದ್ದುವು.

ಚಾರಿತ್ರಿಕವಾಗಿ ಅದು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಸೀತಾನದಿ ಮತ್ತು ದಕ್ಷಿಣದಲ್ಲಿ ಚಂದ್ರಗಿರಿ ಹೊಳೆಯ ನಡುವಣ ಪ್ರದೇಶವಾಗಿತ್ತು. ಮಂಗಳೂರು ಇದರ ಕೇಂದ್ರ ಸ್ಥಾನ. ಪ್ರಸ್ತುತ ತಲಪಾಡಿಯಿಂದ ದಕ್ಷಿಣ ಭಾಗವು ಕಾಸರಗೋಡಾಗಿ ಕೇರಳಕ್ಕೆ ಸೇರಿದೆ. ಉಳಿದ ತುಳುನಾಡು ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಾಗಿ ಒಡೆದಿವೆ. ವಲಸೆಗೆ ಹೆಸರಾದ ತುಳುವರು ಇಂದು ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಮುಂಬೈ ಮಹಾನಗರ ಮತ್ತು ದುಬೈ ದೇಶಗಳು ತುಳುವರ ಕರ್ಮ ಭೂಮಿ. ತುಳುನಾಡಿನ ಕುರಿತು ಟಾಲೆಮಿ ಮಾಡಿದ ಉಲ್ಲೇಖಗಳು, ಗ್ರೀಕ್ ಪ್ರಹಸನದಲ್ಲಿ ಕಂಡುಬರುವ ತುಳು ಪದಗಳು, ಅಶೋಕನ ಶಾಸನದಲ್ಲಿ ಉಲ್ಲೇಖಿತವಾದ ’ಸತಿಯ ಪುತ’, ತಮಿಳಿನ ಸಂಗಂ ಸಾಹಿತ್ಯದಲ್ಲಿ ದೊರೆಯುವ ’ಕೋಶರ್’ ಜನವರ್ಗದ ಉಲ್ಲೇಖ, ಪಾಡ್ದನಗಳಲ್ಲಿ ಹಾಗೂ ತಮಿಳಿನ ಪ್ರಾಚೀನ ಕೃತಿಗಳಲ್ಲಿ ಕಂಡುಬರುವ ’ಭೂತಾಳ ಪಾಂಡ್ಯ’ನ ಉಲ್ಲೇಖ ಇವೆಲ್ಲವುಗಳನ್ನು ಗಮನಿಸಿದರೆ, ತುಳು ಭಾಷೆಯನ್ನಾಡುವ ಜನಸಮುದಾಯವೊಂದು ಕ್ರಿಸ್ತಶಕದ ಹಿಂದು-ಮುಂದಿನ ಕಾಲದಲ್ಲಿ ಇಂದಿನ ಕೇರಳದ ಕಾಸರಗೋಡಿನಿಂದ ಭಟ್ಕಳದ ಸಮೀಪದ ಕಾಸರಕೋಡಿನವರೆಗೆ ಹರಡಿಕೊಂಡಿತ್ತೆಂದು ಭಾವಿಸಬಹುದು.

ತುಳುನಾಡಿಗೆ ಮಾತ್ರ ಸೀಮಿತವಾಗಿರುವ ಹಲವು ಸಾಂಸ್ಕೃತಿಕ ವಿಷಯಗಳಿವೆ. ಯಕ್ಷಗಾನ ಮತ್ತು ಭೂತಾರಾಧನೆ ತುಳುನಾಡಿನ ಎರಡು ಕಣ್ಣುಗಳು. ಯಕ್ಷಗಾನದಲ್ಲಿ ಪುರಾಣದ ಖಳನಾಯಕರೆಲ್ಲ ನಾಯಕರಾಗಿ ಪರಿವರ್ತನೆ ಹೊಂದಿದ್ಧಾರೆ. ಭೂತಾರಾಧನೆಯಲ್ಲಿ ಅಕಾಲ ಮರಣಕ್ಕೊಳಗಾದ ದಲಿತರೆಲ್ಲ ದೈವಗಳಾಗಿ ಜನರಿಂದ ಆರಾಧನೆಗೆ ಒಳಪಡುತ್ತಾರೆ. ಈ ದೈವಗಳಲ್ಲಿ ಬಬ್ಬರ್ಯ ಮತ್ತು ಆಲಿ ಭೂತಗಳೆಂಬ ಮುಸ್ಲಿಮರೂ ಇದ್ದಾರೆ. ತುಳು ಪಾಡ್ದನಗಳು ಅತ್ಯಂತ ವಿಶಿಷ್ಟವಾದ ಭಾಷಿಕ ರಚನೆಗಳು. ತುಳುನಾಡಿನ ಕೆಲವು ಜನಪದ ಕುಣಿತಗಳು ಬಹಳ ಮುಖ್ಯವಾಗಿವೆ. ಆಟಿ ತಿಂಗಳಿನಲ್ಲಿ ಮನೆ ಮನೆಗೆ ಸುತ್ತಾಡಿಕೊಂಡು ಬಂದು ಊರಿನ ರೋಗ ಕಳೆಯುವ ’ಆಟಿ ಕಳೆಂಜ’, ಮೇರರ ದುಡಿ, ಕೊರಗರ ಡೋಲು, ಮುಂಡಾಲರ ಕಂಗಿಲು, ಗೌಡರ ’ಸಿದ್ಧವೇಶ’ ಇತ್ಯಾದಿಗಳು ಬೇರೆಕಡೆ ಕಾಣಸಿಗದ ಕಲಾಪ್ರಕಾರಗಳಾಗಿವೆ. ಈ ಕುಣಿತಗಳ ಶೈಲಿ, ಕುಣಿತಗಳೊಂದಿಗಿರುವ ಹಾಡುಗಳು, ಸಂಗೀತ ವಾದ್ಯಗಳೆಲ್ಲ ’ತುಳು’ ಪರಿಕಲ್ಪನೆಯನ್ನು ಸಾಕ್ಷಾತ್ಕರಿಸುವ ಮುಖ್ಯ ಘಟಕಗಳಾಗಿವೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಇನ್ನೂ ಚಾಲ್ತಿಯಲ್ಲರುವ ಪ್ರದೇಶವಿದು.

ಇಂದಿಗೆ ತುಳು ಸಂಸ್ಕೃತಿ ಎಂಬುದು ಅನೇಕ ಸಂಸ್ಕೃತಿಗಳ ಒಂದು ಸಮುಚ್ಚಯ. ಚರಿತ್ರೆ ಪೂರ್ವಕಾಲದಲ್ಲಿ ವಾಸಿಸುತ್ತಿದ್ದ ಕೋಶರರು, ಕಡಲ ಕಾಳಗದಲ್ಲಿ ನಿಷ್ಠಾತರಾಗಿದ್ದ ಕದಂಬರು, ಕದಿರೆಯಲ್ಲಿ ವಾಸವಾಗಿದ್ದ ಬೌದ್ಧರು, ನಾಥರು, ಕಾರ್ಕಳ-ಮೂಡಬಿದಿರೆಗಳನ್ನಾಳಿದ ಜೈನರು, ಉಡುಪಿಯಲ್ಲಿ ಉದ್ಭವಗೊಂಡ ಮಾಧ್ವರು, ಮಂಗಳೂರನ್ನು ಬೆಳೆಸಿದ ಕ್ರೈಸ್ತರು, ಶತಮಾನಗಳಿಂದ ಕರಾವಳಿಯ ಬದುಕಿನ ಭಾಗವಾಗಿರುವ ಮುಸಲ್ಮಾನರು-ಇವರೆಲ್ಲ ತುಳು ಸಂಸ್ಕೃತಿಯನ್ನು ಬೆಳೆಸಿದವರು. ತುಳು ಭಾಷೆಗೊಂದು ಸ್ವತಂತ್ರ ಲಿಪಿಯೂ ಇದ್ದು, ಅದು ಉಡುಪಿಯ ಮಠಗಳಲ್ಲಿ ಬಳಕೆಯಲ್ಲಿತ್ತು ಎಂದೂ ಹೇಳಲಾಗಿದೆ. ಈಚಿನ ದಿನಗಳಲ್ಲಿ ತುಳು ಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಲಿಪಿಯನ್ನು ಉಪಯೋಗಿಸಿಕೊಂಡು ಪ್ರತಿವರ್ಷ ನೂರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಮಂದಾರ ರಾಮಾಯಣದಂತಹ ತುಳು ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಪೀಠವೊಂದು ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ತುಳುವನ್ನು ಒಂದು ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳಿಗಾಗಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಗಂಭೀರವಾದ ಅಧ್ಯಯನಗಳು ನಡೆಯುತ್ತಿವೆ. ಮಂಗಳೂರಿನ ಬಾಸೆಲ್ ಮಿಶನ್ ತನ್ನ ತುಳು ಪ್ರೇಮವನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಕಣ್ಣೂರು, ಕಲ್ಲಿಕೋಟೆ, ಚೆನ್ನೈ, ಅಣ್ಣಾಮಲೈ, ಮಧುರೈ, ಕುಪ್ಪಂ, ಒಸ್ಮಾನಿಯಾ, ಹೈದರಾಬಾದ್, ದೆಹಲಿ (ಜೆಎನ್‌ಯು) ಮತ್ತು ಮುಂಬೈಗಳ ವಿಶ್ವವಿದ್ಯಾಲಯಗಳಲ್ಲಿ ತುಳುವಿನ ಕುರಿತಾದ ಸಂಶೋಧನೆಗಳು ನಿರಂತರವಾಗಿ ನಡೆಯುತ್ತವೆ.

ಜರ್ಮನಿಯ ಟ್ಯೂಬಿಂಜನ್ ವಿವಿ ಮತ್ತು ಫಿನ್ಲೆಂಡಿನ ತುರ್ಕು ವಿವಿಗಳಲ್ಲಿ ತುಳುವಿನ ಕುರಿತಾದ ಅಧ್ಯಯನಗಳು ನಡೆಯುತ್ತಿವೆ. ಡಾ. ಪೀಟರ್ ಕ್ಲಾಸ್, ಮಾರ್ತಾ ಆಷ್ಟನ್, ಪ್ರೊ. ಹೈಡ್ರೂನ್ ಬ್ರೂಕ್ನರ್, ಪ್ರೊ. ಲಾರಿ ಹಾಂಕೊ ಮೊದಲಾದ ಅಂತಾರಾಷ್ಟ್ರೀಯ ಖ್ಯಾತಿಯ ಸಂಶೋಧಕರು ತುಳುವಿನ ಬಗ್ಗೆ ನಡೆಸಿದ ಸಂಶೋಧನೆಗಳು ತುಳು ಭಾಷೆಯನ್ನು ಜಗತ್ತಿನ ಎಲ್ಲಡೆ ಜನಪ್ರಿಯಗೊಳಿಸಿವೆ. ಟೋಫೆಲ್ ಪರೀಕ್ಷೆಗಾಗಿ ಪಟ್ಟಿಮಾಡಿದ ಜಗತ್ತಿನ 133 ಭಾಷೆಗಳಲ್ಲಿ ಭಾರತದ 17 ಭಾಷೆಗಳು ಸೇರ್ಪಡೆಗೊಂಡಿದ್ದು ಅದರಲ್ಲಿ ತುಳುವೂ ಒಂದು. ಮಂಗಳೂರು ಆಕಾಶವಾಣಿಯು ತುಳು ವಾರ್ತೆಯ ಜೊತೆಗೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು 1976ರಿಂದಲೂ ಪ್ರಸಾರ ಮಾಡುತ್ತಿದೆ. ಬೆಂಗಳೂರಿನ ದೂರದರ್ಶನ ಕೇಂದ್ರವು ತುಳು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿದೆ. 1994ರಲ್ಲಿ ಸ್ಥಾಪಿತಗೊಂಡ ತುಳು ಸಾಹಿತ್ಯ ಅಕಾಡೆಮಿಯು ನೂರಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ತುಳು ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ತುಳು ನಾಟಕ ಮತ್ತು ಯಕ್ಷಗಾನಗಳು ತುಳು ಭಾಷೆಯ ಸೊಗಸನ್ನು ಇನ್ನಷ್ಟು ಹೆಚ್ಚಿಸಿವೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಹೊರತಂದ ತುಳು ನಿಘಂಟುವಿಗೆ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಹೀಗೆ ತುಳುವಿನ ಹಿರಿಮೆ ದೊಡ್ಡದು.

ಇಂಥ ಮಹತ್ವದ ಭಾಷೆ ತುಳುವಿಗೆ ಸಂವಿಧಾನದ ಮನ್ನಣೆ ಸಿಗುವುದು ಇವತ್ತು ಕಷ್ಟ. ಏಕೆಂದರೆ ಅಂಥ ಮನ್ನಣೆಗಾಗಿ ಇವತ್ತು 99 ಭಾಷೆಗಳು ಹೋರಾಟ ನಡೆಸುತ್ತಿವೆ. ಆದರೆ, ಬಿಜೆಪಿ ಸರಕಾರಕ್ಕೆ ಸಣ್ಣ ಭಾಷೆಗಳ ಬಗ್ಗೆ ಅಷ್ಟಾಗಿ ಗೌರವ ಇದ್ದಂತಿಲ್ಲ. ಭಾಷಾಭಿವೃದ್ಧಿಯ ಕುರಿತಾದ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ ಎಂಬಂಥ ಮಾತುಗಳೂ ಕೇಳಿಬರುತ್ತಿವೆ. ಜೊತೆಗೆ ಪ್ರಸ್ತುತ ಸರಕಾರವು ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿದೆ. ಹಾಗಾಗಿ ಅದು ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಕೆಲಸಗಳನ್ನು ಪ್ರೋತ್ಸಾಹಿಸುತ್ತಿಲ್ಲ. ಜನರ ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿದೊಡ್ಡ ಜವಾಬ್ದಾರಿ ಎಂಬುದನ್ನು ಈ ಸರಕಾರ ಮರೆತಿದೆ. ನನ್ನ ಊಹೆಯ ಪ್ರಕಾರ ಸರಕಾರವು ಸಂವಿಧಾನದ ಎಂಟನೇ ಪರಿಚ್ಛೇದವನ್ನು ರದ್ದು ಮಾಡುವ ಸಾಧ್ಯತೆಗಳೇ ಅಧಿಕವಾಗಿದೆ.

ಇಂಥ ಮಹತ್ವದ ವಿಷಯಗಳ ಕುರಿತು ತುಳುನಾಡಿನಲ್ಲಿ ಇವತ್ತು ದೊಡ್ಡ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ. ಕೋಮುವಾದ, ಧರ್ಮ, ಜಾತಿ, ಚುನಾವಣೆ, ಗೋವು, ಮಂದಿರ, ಸ್ವಾಮಿಗಳು, ರಾಮಮಂದಿರ ಇತ್ಯಾದಿಗಳ ಕುರಿತು ತುಳುವರು ತಲೆಕೆಡಿಸಿಕೊಂಡಷ್ಟು ಅಲ್ಲಿನ ಭಾಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವೀ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದವು. ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಯಾಕೆ ಘೋಷಿಸುತ್ತಿಲ್ಲ? ಆಂಧ್ರ ಪ್ರದೇಶವು ತೆಲುಗಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ತುಳುವರು ಪ್ರತ್ಯೇಕ ರಾಜ್ಯ ಕೇಳುವ ಮುನ್ನ ಭಾರತದ ಭಾಷಾ ರಾಜಕಾರಣವನ್ನೂ, ತಮ್ಮದೇ ಆದ ಕೋಮುವಾದೀ ರಾಜಕಾರಣವನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ.

ಡಾ. ಪುರುಷೋತ್ತಮ ಬಿಳಿಮಲೆ

ಪ್ರೊ. ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬಿಳಿಮಲೆ, ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.


ಇದನ್ನೂ ಓದಿ: ಡಾ. ಹಫೀಜ್ ಕರ್ನಾಟಕಿ: ಸೌಹಾರ್ದತೆಯ ಸಂತನಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...