ಜನವರಿ 26 ರ ಗಣರಾಜ್ಯೋತ್ಸವದಂದು ಕೆಂಪು ಕೋಟೆ ಬಳಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ನಟ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ನಟ ದೀಪ್ ಸಿಧು ಅವರ ಜಾಮೀನು ಅರ್ಜಿಯ ಕುರಿತ ಆದೇಶವನ್ನು ದೆಹಲಿ ನ್ಯಾಯಾಲಯ ಸೋಮವಾರ ಕಾಯ್ದಿರಿಸಿತ್ತು.ವಿಶೇಷ ನ್ಯಾಯಾಧೀಶ ನೀಲೋಫರ್ ಅಬಿದಾ ಪರ್ವೀನ್, ಸಿಧು ಅವರ ಜಾಮೀನು ಅರ್ಜಿಯ ಆದೇಶವನ್ನು ಏಪ್ರಿಲ್ 15 ರಂದು ಘೋಷಿಸಲಾಗುವುದು ಎಂದಿದ್ದರು.
ದೀಪ್ ಸಿಧು ಕೇವಲ ಅಲ್ಲಿ ಅವರು ಉಪಸ್ಥಿತರಿದ್ದ ಮಾತ್ರಕ್ಕೆ ಅವರು ಕಾನೂನುಬಾಹಿರ ಘಟನೆ ಭಾಗವಾಗಲು ಸಾಧ್ಯವಿಲ್ಲ. ಅವರು ರೈತ ಪ್ರತಿಭಟನೆಯ ಭಾಗವಾಗಿದ್ದ ಪ್ರಾಮಾಣಿಕ ಪ್ರಜೆ ಎಂದು ಸಿಧು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
A Delhi Court grants bail to Deep Sidhu, an accused in the 26th January violence case.
(File photo) pic.twitter.com/vzrEEYuL1d
— ANI (@ANI) April 17, 2021
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ
ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ಪಬ್ಲಿಕ್ ಪ್ರಾಸಿಕ್ಯೂಟರ್, ಸಿಧು ಹಿಂಸಾಚಾರವನ್ನು ಉಂಟುಮಾಡಲು ಮತ್ತು ರಾಷ್ಟ್ರಧ್ವಜವನ್ನು ಕಡೆಗಣಿಸುವ ಉದ್ದೇಶದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಕಾನೂನುಬಾಹಿರ ಘಟನೆಯ ಮುಖ್ಯ ಪ್ರಚೋದಕ ಅವರೆ ಆಗಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
ಧಾರ್ಮಿಕ ಧ್ವಜವನ್ನು ಹಾರಿಸಲು ಕೆಂಪು ಕೋಟೆಯಲ್ಲಿ ಜನಸಮೂಹವನ್ನು ಪ್ರಚೋದಿಸಲಿಲ್ಲ ಮತ್ತು ಪ್ರತಿಭಟಿಸಲುತಮ್ಮ ಮೂಲಭೂತ ಹಕ್ಕು ಚಲಾಯಿಸಿದ್ದೇನೆ ಎಂದು ದೀಪ್ ಸಿಧು ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.
“ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕು, ಅದಕ್ಕಾಗಿಯೇ ನಾನು ಅಲ್ಲಿದ್ದೆ. ನಾನು ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ, ಹಿಂಸಾಚಾರದಲ್ಲಿ ಪಾಲ್ಗೊಳ್ಳುವಂತೆ ನಾನು ಯಾರನ್ನೂ ಒತ್ತಾಯಿಸಲಿಲ್ಲ ”ಎಂದು ಸಿಧು ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲಭೂತ ಹಕ್ಕುಗಳು ಎಂದು ಪೊಲೀಸ್ ಅಧಿಕಾರಿಗಳಿಗೆ ಹಾನಿ ಮಾಡಬಹುದೆಂದು ಅರ್ಥವಲ್ಲ ಎಂದು ದೆಹಲಿ ಪೊಲೀಸರ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 5 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 26 ರಂದು ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಒಕ್ಕೂಟ ಕರೆ ನೀಡಿತ್ತು. ಈ ಮೆರವಣಿಗೆಯಲ್ಲಿ ದೀಪ್ ಸಿಧುವಿನ ಪ್ರಚೋದಿತ ಗುಂಪೊಂದು ಉದ್ದೇಶಿತ ಮಾರ್ಗ ಬಿಟ್ಟು ಕೆಂಪುಕೋಟೆಗೆ ನುಗ್ಗಿ ಸಿಖ್ ಧಾರ್ಮಿಕ ಬಾವುಟವನ್ನು ಹಾರಿಸಿತ್ತು. ಇಲ್ಲಿ ರೈತರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘಟನೆಗಳು ನಡೆದು ಇಬ್ಬರೂ ಗಾಯಗೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9 ರಂದು ದೀಪ್ ಸಿಧುನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು: ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿಲ್ಲ


