ಕಳೆದ ವರ್ಷ ನಡೆದ ದರೋಡೆಕೋರ ವಿಕಾಸ್ ದುಬೆಯ ಎನ್‌ಕೌಂಟರ್ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ತನಿಖಾ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ. ಸಾಕಷ್ಟು ಪುರಾವೆಗಳೊಂದಿಗೆ ಮುಂದೆ ಬರದಿರುವುದಕ್ಕೆ ಸಾರ್ವಜನಿಕರನ್ನು, ಮಾಧ್ಯಮಗಳನ್ನು ಮತ್ತು ಅಪರಾಧಿಯ ಕುಟುಂಬವನ್ನು ತನಿಖಾ ಆಯೋಗವು ದೂಷಿಸಿದೆ ಎಂದು ವರದಿಯಾಗಿದೆ.
ದರೋಡೆಕೋರ ವಿಕಾಸ್ ದುಬೆ ಹಾಗೂ ಸಹಚರರು ಹೊಂಚು ಹಾಕಿ ಎಂಟು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿ ಕೊಂದಿದ್ದರು. ಇದಾದ ನಂತರ ಪರಾರಿಯಾಗಿದ್ದ ದುಬೆಯನ್ನು ಉತ್ತರ ಪ್ರದೇಶದ ಹೊರಗೆ ಬಂಧನ ಮಾಡಲಾಗಿತ್ತು. ಅಲ್ಲಿಂದ ದುಬೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಮತ್ತೆ ಯುಪಿಗೆ ಕರೆತರಲಾಗಿತ್ತು.
ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ ಅನುಮಾನಾಸ್ಪದ: ಸಾರ್ವಜನಿಕರಿಂದ 5 ಪ್ರಶ್ನೆಗಳು
ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ ಹೊಡೆದಿದ್ದು, ಈ ಸಮಯದಲ್ಲಿ ದುಬೆ ಪೊಲೀಸರ ಬಂದೂಕನ್ನು ಕಿತ್ತು, ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಕ್ಕೆ ದುಬೆಯನ್ನು ಎನ್‌ಕೌಂಟರ್ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು.
ಎನ್‌ಕೌಂಟರ್ ಬಗ್ಗೆ ಪೊಲೀಸ್ ಹೇಳಿಕೆಯ ಆಯಾಮವನ್ನು ಅಲ್ಲಗಳೆಯಲು ಯಾವುದೇ ಪುರಾವೆಗಳಿಲ್ಲ, ಆದರೆ ಅದನ್ನು ಅವರ ಹೇಳಿಕೆಯ ಪರವಾಗಿ ಸಾಕಷ್ಟು ಪುರಾವೆಗಳು ಇವೆ ಎಂದು ಮೂವರು ಸದಸ್ಯರ ವಿಚಾರಣಾ ಸಮಿತಿಯು ಯುಪಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ವಿಕಾಸ್ ದುಬೆಯನ್ನು ನಕಲಿ ಎನ್ಕೌಂಟರ್‌ನಲ್ಲಿ ಕೊಲ್ಲಲಾಗಿದೆ, ಆದ್ದರಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಕೆಯಾಗಿತ್ತು. ಹಾಗಾಗಿ ಕೋರ್ಟ್ ಪ್ರಕರಣದ ತನಿಖೆಗೆ ನ್ಯಾಯಾಂಗ ಸಮಿತಿಯನ್ನು ರಚಿಸಿತ್ತು.
ಇದನ್ನೂ ಓದಿ: ಯುಪಿ ಸರ್ಕಾರ ಕುಸಿಯದಂತೆ ತಡೆಯಲು ವಿಕಾಸ್ ದುಬೆ ಹತ್ಯೆ: ವಿರೋಧ ಪಕ್ಷಗಳ ಆರೋಪ
ನ್ಯಾಯಮೂರ್ತಿ ಬಿ.ಎಸ್. ಚೌಹಾನ್ ನೇತೃತ್ವದ ವಿಚಾರಣಾ ಆಯೋಗವು ಪೊಲೀಸರ ವಿರುದ್ಧ ಯಾರೂ ಯಾವುದೇ ಪುರಾವೆಗಳೊಂದಿಗೆ ಮುಂದೆ ಬರಲಿಲ್ಲ ಎಂದು ಹೇಳಿದ್ದಾಗಿ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
“ನಾವು ಸಾಕ್ಷ್ಯಗಳನ್ನು ಸಂಗ್ರಹಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಅವರ ಆಯಾಮವನ್ನು ನೀಡುವಂತೆ ಕೇಳಿಕೊಂಡಿದ್ದೇವೆ. ಮಾಧ್ಯಮಗಳು ಯುಪಿ ಪೊಲೀಸರ ವಿರುದ್ಧ ಅನೇಕ ‘ಸುದ್ದಿಗಳನ್ನು’ ಬರೆದಿದ್ದವು, ಆದರೆ ಯಾವುದೂ ಯಾವುದೇ ಪುರಾವೆಗಳನ್ನು ನೀಡಿಲ್ಲ” ಎಂದು ಮೂಲಗಳು ತಿಳಿಸಿವೆ.
“ನಾಗರಿಕರು ಮತ್ತು ಮಾಧ್ಯಮಗಳು ತಮಗೆ ಸಹಕಾರ ನೀಡದೆ ಇರುವುದು ವಿಚಾರಣಾ ಆಯೋಗವನ್ನು ರಚಿಸಿರುವ ಉದ್ದೇಶ ಸೋಲುವಂತಾಗಿದೆ” ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ: ಉತ್ತರ ಪ್ರದೇಶ ಪೊಲೀಸರ ತೀವ್ರ ವೈಫಲ್ಯಕ್ಕೆ ಸಾಕ್ಷಿ!
ಸಮಿತಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ವಿಕಾಸ್ ದುಬೆ ಅವರ ಪತ್ನಿ ಅಥವಾ ಕುಟುಂಬ ಸದಸ್ಯರು ಕೂಡಾ ಪೊಲೀಸರ ವಿರುದ್ಧ ಯಾವುದೇ ಪುರಾವೆಗಳೊಂದಿಗೆ ಮುಂದೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯಾಧಾರ ನೀಡುವಂತೆ ಸ್ಥಳೀಯ ಪತ್ರಿಕೆಗಳಲ್ಲಿ ನೋಟಿಸ್ ನೀಡಲಾಗಿತ್ತು ಆದರೆ ಯಾರೂ ಸಾಕ್ಷಿಗಳೊಂದಿಗೆ ಹಾಜರಾಗಲಿಲ್ಲ ಎಂದು ತನಿಖಾ ಆಯೋಗ ಹೇಳಿದೆ.
“ಪ್ರಕರಣದ ಬಗ್ಗೆ ಮಾಧ್ಯಮಗಳು ಪೊಲೀಸರ ವಿರುದ್ದ ಭಾರಿ ಮಾತನಾಡಿತ್ತು. ಆದರೆ ಸಮಿತಿಯ ಕೋರಿಕೆಯ ಹೊರತಾಗಿಯು ಯುಪಿ ಪೊಲೀಸರ ವಿರುದ್ಧ ಸಾಕ್ಷ್ಯ ನೀಡಲು ಮಾಧ್ಯಮಗಳು ಏಕೆ ಮುಂದೆ ಬರಲಿಲ್ಲ?” ಎಂದು ಸಮಿತಿಯು ಪ್ರಶ್ನಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪ್ರಪಾತಕ್ಕೆ ಬಿದ್ದ ಭಾರತ: ಮೋದಿ ಸರ್ಕಾರವೇ ಕಾರಣವೆಂದ ಸಮೀಕ್ಷಾ ಸಂಸ್ಥೆ!
ವಿಡಿಯೊ ನೋಡಿ: ರಾಜ್ಯ ಸರ್ಕಾರ ಸಂಬಳ ನೀಡದೆ ಇದ್ದಿದ್ದಕ್ಕೆ ಭಿಕ್ಷಾಟನೆ ನಡೆಸಿದ ಕೆಎಸ್‌ಆರ್‌ಟಿಸಿ ನೌಕರರನ ಮಗು!


