Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

- Advertisement -
- Advertisement -

ರಮೇಶ್ ಜಾರಕಿಹೊಳಿ ಅವರ ಮನಿ ಒಳಗ ಸಿಡಿ ಪ್ಲೇಯರ್ ಇಲ್ಲ. ಅದು ಇರೋದು ಅವರ ಕಚೇರಿಯೊಳಗ. ಅವರು ಜಾಸ್ತಿ ಪಿಚ್ಚರು ನೋಡೋದಿಲ್ಲ. ಮೊನ್ನೆ ಮೊನ್ನೆಯಿಂದ ಟಿವಿ ನೋಡೋದು ಕಮ್ಮಿ ಅಗೆತಿ ಅಂತ ಅವರ ಪಿಎ ಸಾಹೇಬರು ಅಂದ್ರು ಮೊನ್ನೆ.

ಅದು ಯಾಕಾಪಾ ಅಂದ್ರ ಅವರು ತಮ್ಮ ವಿರುದ್ಧದ ಸುದ್ದಿ ಹಾಗೂ ಕೋವಿಡ್ ವೈರಸ್‌ಗಳಿಗೆ ಗುರಿಯಾಗಿ ತಮ್ಮ ಗೋಕಾಕ ಜಲಪಾತದ ಹತ್ತಿರದ ಮನಿ ಒಳಗ ಸುಧಾರಿಸಿಕೊಳ್ಳತಾ ಇದ್ದಾರ.

“ಗೋಕಾಕ ಸಾಹುಕಾರ್ ಅವರ ರಾಸಲೀಲೆ” ಅಂತ ಉದ್ದುದ್ದ ಸುದ್ದಿ ಬರೆದು ಊರೆಲ್ಲ ಗದ್ದಲ ಮಾಡಿದ ನಮ್ಮ ಮಾಧ್ಯಮಗಳು ಆ ಪ್ರಕರಣದ ಅಳಕ್ಕೆ ಇಳಿಯಲಿಲ್ಲ. ಹಂಗಂದ್ರ ಅದರ ಸರಿ ತಪ್ಪುಗಳ ಲೆಕ್ಕಾಚಾರ ಅಂತ ಅಲ್ಲ. ಆ ಘಟನೆಯ ಬೇರೆ ಬೇರೆ ಆಯಾಮಗಳ ವಿಚಾರ ಮಾಡಲಿಲ್ಲ ಅಂತ.

ಮೊದಲನೆದಾಗಿ ಮಾಧ್ಯಮಗಳ ಭಾಷೆ ಸೂಕ್ಷ್ಮವಾಗಿರಲಿಲ್ಲ. ಸಂತ್ರಸ್ತ ಯುವತಿಯನ್ನು ಸಿಡಿ ಲೇಡಿ ಅಂತ ಕರೆದ ನಮ್ಮ ಟಿವಿಯ ಹಿಡಿಗೂಟಗಳು (ಆಂಕರ್‌ಗಳು) ಆರೋಪಿ ರಾಜಕಾರಣಿಯನ್ನು ಬಣ್ಣಿಸುವಾಗ ಸಭ್ಯ ಭಾಷೆ ಬಳಸಿದವು. ಅವರ ಅಭಿಮಾನಿ ಯಾರೋ ವಕೀಲರ ನೋಟಿಸು ಕಳಿಸಿದರು ಅನ್ನುವ ಕಾರಣಕ್ಕೆ ಸಾಹುಕಾರ್ ಅನ್ನುವ ಪದ ಬಳಕೆ ಸಹಿತ ಬಿಟ್ಟವು.

ಆ ಹುಡುಗಿಗೆ ಅನ್ಯಾಯ ಅಗಿದೆಯೋ ಇಲ್ಲವೋ ಅನ್ನುವ ವಿಚಾರ ಮಾಡುವ ಬದಲಿಗೆ ‘ಅಕಿ ಯಾರು’, ‘ಯಾವ ಜಾತಿಯವಳು?’, ‘ಅಕಿ ಗೆಣೆಕಾರರು ಯಾರು’, ‘ಅವರ ಬೆನ್ನ ಹಿಂದಿನ ಮಹಾ ನಾಯಕರು ಯಾರು?’ ಇಂಥಾ ವಿಚಾರಗಳನ್ನು ಜನರ ತಲೆಯೊಳಗೆ ಒತ್ತಾಯದಿಂದ ತುಂಬಿದರು. ‘ಪಾಪ ಸಾಹುಕಾರರು ನೊಂದುಕೊಂಡರೇನೋ’ ಅಂತ ಬೇಜಾನ್ ಬೇಸರ ಮಾಡಿಕೊಂಡ ಟಿವಿ ಹಿಡಿಗೂಟಗಳು ‘ಆ ಬಡ ಹುಡುಗಿ ನೊಂದುಕೊಂಡಳೋ ಇಲ್ಲವೋ’ ಅಂತ ವಿಚಾರ ಸಹಿತ ಮಾಡಲಿಲ್ಲ.

ಇದೆಲ್ಲಾ ಆರಂಭವಾಗಿದ್ದು ಸಾಹುಕಾರರು ಗೃಹ ಸಚಿವರಿಗೆ ಬರೆದ ಒಂದು ಓಲೆಯಿಂದ. ರಾಜಕೀಯದಲ್ಲಿ ತಮ್ಮ ಬುಲೆಟ್ ಟ್ರೇನ್ ವೇಗದ ಬೆಳವಣಿಗೆಯನ್ನು ಸಹಿಸದ ಯಾರೋ ಕೆಲ ದುರುಳರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ತಮ್ಮನ್ನು ಜೇನುಪಾಶದಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಅಂತ ಅವರು ಗೋಳು ಹೇಳಿಕೊಂಡರು. ತನ್ನ ಸರ್ಕಾರದ ಹುಟ್ಟಿಗೆ ಕಾರಣವಾದ ಈ ಆಧುನಿಕ ಜಮೀನುದಾರನ ಗೋಳು ನೋಡಲಿಕ್ಕೆ ಆಗದ ಘನ ಸರಕಾರ ಮಂತ್ರಿಗಳಿಗೆ ಗಾಳ ಹಾಕಿದ ಕಂತ್ರಿಗಳು ಯಾರು ಅಂತ ತನಿಖೆ ಮಾಡಲು ಒಂದು ಸಿಟ್ (ಎಸ್‌ಐಟಿ) ನೇಮಿಸಿತು. ಆ ನಿಕಟಪೂರ್ವ ಮಂತ್ರಿಗಳಿಂದ ಸಂತ್ರಸ್ತ ಯುವತಿ ಅನ್ಯಾಯ ಮಾಡಿದರೋ ಇಲ್ಲವೋ ಅನ್ನೋದು ಆ ಸಿಟ್‌ನ ಲಿಸ್ಟ್‌ನಲ್ಲಿ ಇರಲಿಲ್ಲ.

ಶುರುವಾತಿಗೆ ಅದು ಹೆಸರಿಗೆ ತಕ್ಕ ಹಾಗೆ ಸಿಟ್ ಮಾಡಿತು. ಅಂದರೆ ಸುಮ್ಮನೆ ಕೂತುಬಿಟ್ಟಿತು.
ಆಮ್ಯಾಲೆ ಒಂದು ಪ್ರಥಮ ಮಾಹಿತಿ ವರದಿಯ ಪ್ರಹಸನ ನಡೀತು. ಒಬ್ಬ ಸಾಮಾಜಿಕ ಹಾರಾಟಗಾರರು ಒಂದು ದೂರು, ಅದಕ್ಕೆ ತಕ್ಕ ಸಾಕ್ಷಿ ಕೊಟ್ಟ ಮೇಲೆ ಅದರ ತಯಾರಿ ಆರಂಭವಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಹಲವಾರು ತೀರ್ಪುಗಳ ವಿರುದ್ಧ ರಾಜ್ಯದ ಪೊಲೀಸರು ನಡೆದುಕೊಂಡರು. ಇಷ್ಟು ಘೋರ ಅಪರಾಧದ ಆರೋಪ ಇದ್ದರೂ ದೂರು ದಾಖಲು ಆಗಲಿಲ್ಲ. ಎಫ್‌ಐಆರ್ ಮಾಡೋರು ಯಾರು ಅನ್ನೋದು ಗೊತ್ತಾಗೋ ಮೊದಲೇ ಅದರ ಜೀವ ಆರಿಹೋತು.

ಆನಂತರ, ಸಾರ್ವಜನಿಕರ ಒತ್ತಡ ಹೆಚ್ಚಿ, ನ್ಯಾಯಾಲಯದ ಮಧ್ಯಪ್ರವೇಶ ಆದನಂತರ ಇನ್ನೊಂದು ಎಫ್‌ಐಆರ್ ಆಯಿತು. ಇಷ್ಟು ಎಲ್ಲಾ ಆಗೋವಾಗ ಮೊದಲಿಗೆ ದೂರು ನೀಡಿದ ಸಾಮಾಜಿಕ ಹಾರಾಟಗಾರರು ಪ್ರಕರಣದಿಂದ ದೂರವಾದರು.

ಅಲ್ಲಿಗೆ ಈ ಪ್ರಕರಣದ ಅಪರಾಧದ ಆಯಾಮದ ಬಿಸಿ ಕಮ್ಮಿ ಆಗಿ ಅದರ ರಾಜಕಿಯ ಆಯಾಮದ ಉಗಿ ಎದ್ದಿತ್ತು. ಅದರ ಝಳ ಬೆಂಗಳೂರಿನಿಂದ ಶುರು ಆಗಿ ಗೋಕಾಕಗೆ ತಟ್ಟಿತ್ತು.

ಈಗ ಗೋಕಾಕ ಎಂಬ ಸರ್ವಾಧಿಪತ್ಯದ ರಾಜ್ಯದಲ್ಲಿ ಎಲ್ಲರೂ ಸಿಡಿ ಲೇಡಿ ಅನ್ನುವ ಪದ ಬಳಸತಾರ. ಅದರ ಅದು ಆ ಹುಡುಗಿಗೆ ಅಲ್ಲ. ರಾಜೀನಾಮೆ ನೀಡಿ ಸರಕಾರದೊಂದಿಗೆ ರಾಜಿ ಮಾಡಿಕೊಂಡ ಮಾಜಿ ಮಂತ್ರಿಯ ಬಗ್ಗೆ ಮಾತಾಡುವಾಗ. ಆದರೆ ಅದು ಕುಶಾಲಿಗೆ. ಆ ನಂತರ ಅವರ ಮಾತು ಗಂಭೀರ ಆಗತಾವ.

“ನಂ ಸಾಹುಕಾರ್ ಏನು ತಪ್ಪು ಮಾಡಿದ್ದಾನ ಹೇಳ್ರಿ?” ಅಂತ ನಿಮ್ಮನ್ನ ಪ್ರಶ್ನೆ ಮಾಡತಾರ. “ಎಲ್ಲ ಗಂಡಸರು ಮಾಡೋದನ್ನ ಮಾಡಿದ್ದಾನ. ಅವತ್ತ ಟಿವಿ ಒಳಗ ಹೇಳಲಿಲ್ಲೇನು ‘ನಾನು ಗಂಡಸು ಅವನು ಅಲ್ಲ ಅಂತ’. ಅದರಾಗ ತಪ್ಪು ಏನು ಐತಿ?, ಆ ಹುಡುಗಿನ ಪ್ರಚೋದನೆ ಮಾಡಿದರ ಇವರ ತಪ್ಪು ಏನು? ಅಕಿ ಇವರ ಕಡೆ ಮೊದಲು ಬಂದು ಎಲ್ಲ ಉಪಯೋಗ ತೊಗೊಂಡಳು. ಆಮ್ಯಾಲೆ ಸಾಹುಕಾರರಿಗೆ ತಿರುಗಿ ಬಿದ್ದಳು. ಬ್ಲಾಕ್‌ಮೇಲು ಮಾಡಿದಳು. ರೊಕ್ಕ ಕೇಳಿರ್‌ಬೇಕು, ಸಾಹುಕಾರರು ಕೊಡೋ ಅಷ್ಟು ಕೊಟ್ಟಿರಬೇಕು, ಆಮ್ಯಾಲೆ ಒಲ್ಲೆ ಅಂದಿರಬೇಕು. ಆವಾಗ ತನ್ನ ಬಾಯ್‌ಫ್ರೆಂಡ್ ಮತ್ತು ಅವನ ಫ್ರೆಂಡ್ಸ್ ಜೊತಿಗೆ ಸೇರಿಕೊಂಡು ಈ ಹಲ್ಕಾ ಕೆಲಸ ಮಾಡಿರಬೇಕು. ಈ ಟಿವಿ ಪತ್ರಕರ್ತರಿಗೆ ಹೆಂಗು ಕೆಲಸ ಇಲ್ಲ. ಲಾಕ್‌ಡೌನ್‌ದಾಗ ಅವರ ನೌಕರಿ ಹೋಗಿದ್ದಾವು. ಬಿಟ್ಟಿ ರೊಕ್ಕ ಸಿಗತದ ಅಂತ ಅದನ್ನ ವಿಡಿಯೋ ಮಾಡಿ ಬಿಟ್ಟರಬೇಕು” ಅಂತ ವಾದ ಮಾಡತಾರ.
ಭಾರತದಂತಹ ಗಂಡಾಳಿಕೆ ಸಮಾಜದೊಳಗ ಇದು ಏನು ಹೊಸದಲ್ಲ. ಆಶ್ಚರ್ಯಚಕಿತ ಮಾಡೋ ಅಂತ ವಿಷಯನೂ ಅಲ್ಲ.

ನಮ್ಮ ಜನ, ಮಾಧ್ಯಮ, ಪೊಲೀಸರು, ನ್ಯಾಯಾಲಯ ಎಲ್ಲರೂ ಹಿಂಗ ವಿಚಾರ ಮಾಡತಾರ ಅನ್ನಲಿಕ್ಕೆ ನಮ್ಮ ಇತಿಹಾಸ ಸಾಕ್ಷಿ ಅದ. ಈ ರೀತಿ ಮಾಡಲಿಲ್ಲ ಅಂದ್ರ ಆವಾಗ ಆಶ್ಚರ್ಯ ಆಗತದ.

ಇಂದಿಗೆ ಮೂವತ್ತು ವರ್ಷದ ಹಿಂದ ರಾಜಸ್ತಾನದ ಹಳ್ಳಿಯೊಳಗ ಭನವಾರಿ ದೇವಿ ಮೋಹನ ಲಾಲ್ ಅನ್ನುವ ಶೂದ್ರ ಜನಾಂಗಕ್ಕ ಸೇರಿದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿತ್ತು. ಇಂದಿನ ಅಂಗನವಾಡಿ- ಆಶಾ ಕಾರ್ಯಕರ್ತರ ರೀತಿಯಲ್ಲಿ ಅಂದು ಸಾಥಿನ ಆಗಿ ಕೆಲಸ ಮಾಡುತ್ತಿದ್ದ ಭನವಾರಿ ದೇವಿ ಮೇಲು ಜಾತಿ ಅನ್ನಿಸಿಕೊಳ್ಳುವ ಗೌಳಿ ಗುಜ್ಜರ ಜಾತಿಯ ಮನೆತನದ ಬಾಲ್ಯ ವಿವಾಹ ನಿಲ್ಲಿಸಲಿಕ್ಕೆ ಹೋದಳು. ಆ ಸಿಟ್ಟಿಗೆ ಆ ಐದು ಜನ ದನ ಕಾಯೋರು ಭನವಾರಿ ದೇವಿಯ ಗಂಡನನ್ನು ಥಳಿಸಿ ಅವಳನ್ನು ಗುಂಪು ಅತ್ಯಾಚಾರ ಮಾಡಿದರು. ಇದನ್ನು ಪ್ರತಿಭಟಿಸಿ ಮಹಿಳಾ ಸಂಘಟನೆಗಳು ದೆಹಲಿಯೊಳಗೆ ಹೋರಾಟ ಮಾಡಿದರು.

ಆದರ ನ್ಯಾಯಾಲಯ ಅದನ್ನ ಒಪ್ಪಲಿಲ್ಲ. ಅಲ್ಲಿನ ನ್ಯಾಯಾಧೀಶರು ಸಾಕ್ಷಿ ಸಾಲದು ಅಂತ ಆ ಐದು ಕಿರಾತಕರನ್ನ ಬಿಡುಗಡೆ ಮಾಡಿದರು. ಅವರು ಕೊಟ್ಟ ಕಾರಣಗಳು ಇವು:

1. ಗ್ರಾಮದ ಮುಖ್ಯಸ್ಥ ಅತ್ಯಾಚಾರದಂತಹ ಹೀನ ಕೆಲಸ ಮಾಡಲಾರ.

2. ವಿಭಿನ್ನ ಜಾತಿಯ ಜನ ಸೇರಿ ಗುಂಪು ಅತ್ಯಾಚಾರ ಮಾಡಲಾರರು.

3. ಚಿಕ್ಕಪ್ಪ ಹಾಗೂ ಅವರ ಅಣ್ಣನ ಮಗ ಸೇರಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲಿಕ್ಕೆ ಸಾಧ್ಯ ಇಲ್ಲ. ಅವರಿಗೆ ನಾಚಿಕೆ ಆದೀತು.

4. 50-60-70 ವರ್ಷದ ಹಿರಿಯ ನಾಗರಿಕರು ಈ ಕೆಲಸ ಮಾಡಲಾರರು.

5. ಮೇಲುಜಾತಿಯವರು ಕೆಳಜಾತಿಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾರರು. ಅದು ಅಪವಿತ್ರ ಅಂತ ಅವರಿಗೆ ಗೊತ್ತು.

6. ಹೆಂಡತಿಯನ್ನು ಅತ್ಯಾಚಾರ ಮಾಡುವಾಗ ಗಂಡನೇಕೆ ಸುಮ್ಮನೆ ಇದ್ದ? ಅದು ಅಸಾಧ್ಯ.

ಇತ್ಯಾದಿ.

ಈಗಲೂ ಇಂತಹ ಪ್ರಶ್ನೆಗಳನ್ನ ಕೇಳೋ ಜನ ಇದ್ದಾರ.

ಅನೇಕ ವರ್ಷದ ಹಿಂದ, ಹಿಂದಿ ಚಿತ್ರರಂಗದ ವಯಸ್ಸೇ ಆಗದ ಸುಂದರಿ ರೇಖಾ ನಟಿಸಿದ ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು. ಅದರೊಳಗ ರೇಖಾ ಭನವಾರಿ ದೇವಿ ಪಾತ್ರ ವಹಿಸಿದ್ದರು. ‘ರೇಖಾ ಅವರ ಮಾಸದ ಸೌಂದರ್ಯದ ಕಾರಣ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿರಬಹುದು’ ಅಂತ ನಮ್ಮ ಪಡ್ಡೆ ಬುದ್ಧಿಗೆ ಅನ್ನಿಸಬಹುದು. ಆದರೆ ಅದರ ನಿಜವಾದ ಕಾರಣ ಏನು ಅಂದ್ರ ಆ ಕಾಲದಾಗ ನಮ್ಮ ಜನರ ಮನಸ್ಸಿನೊಳಗ ಯಾವ ಪ್ರಶ್ನೆ – ಸಂದೇಹ ಇದ್ದವಲ್ಲ, ಅವೇ ಪ್ರಶ್ನೆ, ಸಂದೇಹ, ಇವತ್ತಿಗೂ ಅದಾವು. ಅದಕ್ಕೆ ಚಿರ ಜವ್ವನೆ ರೇಖಾ ಅವರನ್ನು ಭನವಾರಿ ದೇವಿ ಪಾತ್ರ ಮಾಡಲು ಆರಿಸಲಾಯಿತು.

ಇನ್ನೊಂದು ಸಾಮ್ಯ ಏನು ಅಂದ್ರ ಅಂದು ತಾಲೂಕು ನ್ಯಾಯಾಲಯದಿಂದ ಹಿಡಿದು ದೆಹಲಿಯ ಸರ್ವೋಚ್ಚ ನ್ಯಾಯಾಲಯದವರೆಗೆ ಹೆಂಗ ಭನವಾರಿ ದೇವಿ ಹೋರಾಟ ಮಾಡಿದಳಲ್ಲ, ಹಂಗ ಸಾಹುಕಾರರ ಸಂತ್ರಸ್ತ ಮಹಿಳೆ ಸಹಿತ ಗಟ್ಟಿತನದಿಂದ ಹೋರಾಟ ಶುರು ಮಾಡಿದ್ದಾಳ. ನಮ್ಮ ಸಮಾಜ ಅಕಿಗೆ ಹೆಂಗ ಸಾಥ್ ಕೊಡತದ ಅನ್ನೋದು ನೋಡಬೇಕು.

ಒಂದ ವ್ಯತ್ಯಾಸ ಎನಪಾ ಅಂದ್ರ ಆವಾಗ ಮಾಧ್ಯಮಗಳು ಭನವಾರಿ ದೇವಿ ಪರವಾಗಿ ಇದ್ದವು. ಸಾಹುಕಾರರ ಪರವಾಗಿ ಇರಲಿಲ್ಲ. ರಾಜಸ್ತಾನದ ಸ್ಥಳೀಯ ಪತ್ರಿಕೆಗಳು ಸಹಿತ ಜಮೀನುದಾರರನ್ನು ಎದುರು ಹಾಕಿಕೊಂಡು ಸುದ್ದಿ ಬರೆದವು. ಈಗ ಮಾತ್ರ ಮಾಧ್ಯಮಗಳು ಸಾಹುಕಾರರ ಪರವಾಗಿ ಇದ್ದಾವು. ಬಡವಿಯ ಚಿತ್ರ – ವಿಡಿಯೋಗಳನ್ನ ಟಿಆರ್‌ಪಿ ಸಲುವಾಗಿ ಮಾತ್ರ ಬಳಸಿಕೊಳ್ಳುತ್ತಾ ಅದಾವು.

ಅಲ್ಲವೇ ಮನೋಲ್ಲಾಸಿನಿ ?


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...