|ಡಾ.ಸಾರಾ ಅಬೂಬಕ್ಕರ್|
ಕೆಲವು ವಾರಗಳ ಹಿಂದೆ ಉಡುಪಿಯಲ್ಲಿ ಸಹಬಾಳ್ವೆ ಎಂಬ ಮುಸ್ಲಿಂ ಸಂಘಟನೆಯ ಸರ್ವಜನೋತ್ಸವವೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಂತಿ, ಸಹೋದರತೆ ಮತ್ತು ಐಕ್ಯತೆ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕೋಮು ಸೌಹಾರ್ದದ ಧೋರಣೆ ಹೊಂದಿರುವ ಹೆಸರುವಾಸಿ ಲೇಖಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆಂದು ಪತ್ರಿಕೆಯಲ್ಲಿ ವರದಿಯಾಗಿತ್ತು.
ಇತ್ತೀಚೆಗೆ ಕೋಮು ಸೌಹಾರ್ದ, ಸಹೋದರತೆ, ಬಹುತ್ವ, ಐಕ್ಯತೆ ಮುಂತಾದ ವಿಷಯಗಳ ಕುರಿತು ಧಾರಾಳ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಮೇಲ್ಭಾಗದಲ್ಲಿ ಎಲ್ಲರೂ ಇಂತಹ ಮಾತುಗಳನ್ನಾಡುತ್ತಿದ್ದರೂ ಆಳದಲ್ಲಿ ‘ಹಿಂದುತ್ವ’ ಎಂಬ ಇನ್ನೊಂದು ಮಾತು ಹುದುಗಿಕೊಂಡಿವೆಯೆಂದೆನ್ನಿಸುತ್ತದೆ. ಹಿಂದುತ್ವದ ಜೊತೆಯಲ್ಲಿ ‘ಇಸ್ಲಾಮೀಕರಣ’ ಎಂಬ ಇನ್ನೊಂದು ಮಾತು ತಳುಕು ಹಾಕಿಕೊಂಡಿರುತ್ತವೆಯೇನೊ ಎಂದೆನ್ನಿಸುವಂತಾಯಿತು. ಈ ಎರಡು ವಿಷಯಗಳ ಕುರಿತು ನನ್ನ ಕೆಲವು ಅನುಭವಗಳನ್ನು ಓದುಗರ ಮುಂದಿಡಬಯಸುತ್ತೇನೆ.
ನಾನು ಕಳೆದ 40 ವರ್ಷಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನನ್ನ ಕೊಡುಗೆಗಳನ್ನು ನೀಡುತ್ತಾ ಬಂದಿದ್ದೇನೆ. ಹಾಗೆಯೇ ನನ್ನ ಮನೆಯೊಳಗೆ ಮಾತ್ರ ನನಗೆ ಧರ್ಮವಿದೆಯೆಂದೂ, ಮನೆಯಿಂದ ಹೊರಗೆ ನಾನು ಈ ದೇಶದ ಜನಸಾಮಾನ್ಯರೊಂದಿಗೆ ಕೇವಲ ಮನುಷ್ಯಳಾಗಿ ಮಾತ್ರ ಬದುಕುತ್ತಿದ್ದೇನೆಂದೂ ಹೇಳುತ್ತಾ ಬಂದಿದ್ದೇನೆ. ನನ್ನ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳೂ ಯುವಜನರೂ ಮೆಚ್ಚಿಕೊಂಡು ಓದುತ್ತಲೂ ಇದ್ದರೆಂಬುವುದೂ ನನಗೆ ತಿಳಿದಿತ್ತು. ಇತ್ತೀಚೆಗೆ ಪುಸ್ತಕ ಮಾರಾಟಗಾರರೊಬ್ಬರು ನನ್ನೊಡನೆ ಹೇಳಿದ ಮಾತುಗಳಿಂದ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು.
ಈ ಮಾರಾಟಗಾರರು ನನ್ನೊಡನೆ ಪುಸ್ತಕ ಮಾರಾಟದ ಇತ್ತೀಚೆಗಿನ ತೊಂದರೆಗಳ ಕುರಿತು ಮಾತಾಡುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಈ ಅನುಭವವನ್ನು ನನ್ನೊಡನೆ ಹಂಚಿಕೊಂಡರು. ನಿನ್ನೆ ಪುಸ್ತಕ ಕೊಳ್ಳಲು ಬಂದವರೊಬ್ಬರು ನನ್ನೊಡನೆ, ‘ನೀವು ಯಾಕೆ ಮುಸ್ಲಿಮರ ಪುಸ್ತಕಗಳನ್ನು ಮಾರಾಟ ಮಾಡುತ್ತೀರಿ? ನಿಮಗೆ ಮಾರಾಟ ಮಾಡಲು ಹಿಂದೂಗಳ ಪುಸ್ತಕಗಳಿಲ್ಲವಾ? ಮುಸ್ಲಿಂ ಮಹಿಳೆಯ ಕೃತಿಗಳನ್ನು ಮಾರಾಟ ಮಾಡುವುದೇಕೆ? ಎಂದು ಕೇಳಿದರು!’ ಎಂದರು. ಅದಕ್ಕೆ ಉತ್ತರವಾಗಿ ನಾನು “ಇದು ಹಿಂದೂ ಮತಾಂಧತೆ. ಹಿಂದುತ್ವದ ಹೆಸರಿನಲ್ಲಿ ಮತ ಪಡೆಯಬಹುದಲ್ಲವಾ?” ಎಂದೆ. ‘ಇಸ್ಲಾಮೀಕರಣ ಇದಕ್ಕಿಂತ ಬೇರೆಯಾಗಿ ಏನೂ ಇಲ್ಲ’ ಎಂದು ನಾನಂದಾಗ ಆ ಮಾರಾಟಗಾರರು ತಮ್ಮ ಇನ್ನೊಂದು ಅನುಭವವನ್ನು ನನ್ನ ಮುಂದಿಟ್ಟರು.
ಅವರ ಬಳಿಗೆ ಬಂದ ಮುಸ್ಲಿಂ ವಿದ್ಯಾರ್ಥಿಯೋರ್ವನು ನಿಮ್ಮ ಎರಡು ಕೃತಿಗಳನ್ನೆತ್ತಿಕೊಂಡು ಹಣಕೊಟ್ಟು ಕೊಂಡುಕೊಂಡು ಹೋದನು. ಮರುದಿನ ಆತನ ತಂದೆ ಬಂದು, ‘ಈ ಪುಸ್ತಕ ನಮ್ಮಲ್ಲಿ ಇದೆ. ಇದು ಬೇಡ ಹಣ ಕೊಡಿ’ ಎಂದನು. ಹಾಗಾದರೆ ನೀವು ಅದೇ ಲೇಖಕಿಯ ಬೇರೆ ಪುಸ್ತಕ ಕೊಂಡುಕೊಳ್ಳಿ, ಆ ಕಡೆಯಲ್ಲಿದೆ ನೋಡಿ ಎಂದರು. ‘ಆಯಿತು, ಈಗ ಹಣ ಕೊಡಿ’ ಎಂದಾಗ ನಾನು ಹಣ ಕೊಟ್ಟೆ. ಆತ ಆಚೆ ಈಚೆ ನೋಡಿದಂತೆ ಮಾಡಿ ನನಗೆ ತಿಳಿಯದಂತೆ ಹಣ ತೆಗೆದುಕೊಂಡು ಓಡಿಯೇ ಬಿಟ್ಟ. ಒಂದೆರೆಡು ದಿನಗಳ ಬಳಿಕ ಆ ವಿದ್ಯಾರ್ಥಿ ಅಂಗಡಿಗೆ ಬಂದಾಗ ನಾನು ಆತನೊಡನೆ, “ನೀನು ಕೊಂಡು ಹೋದ ಪುಸ್ತಕ ನಿನ್ನ ತಂದೆ ಹಿಂದೆ ಕೊಟ್ಟರಲ್ಲಾ?” ಎಂದೆ. ಆಗ ಆತನು ‘ನನ್ನ ಪಠ್ಯಪುಸ್ತಕದಲ್ಲಿ ಸಾರಾ ಅಬೂಬಕ್ಕರ್ ಬರೆದ ಕತೆಯಿತ್ತು. ಅವರ ಕತೆಗಳು ನಮಗೆಲ್ಲಾ ತುಂಬಾ ಇಷ್ಟವಾಗುತ್ತಿತ್ತು. ಹೀಗಾಗಿ ನಾನು ಅವುಗಳನ್ನು ಕೊಂಡುಕೊಂಡಿದ್ದೆ. ತಂದೆ ಹಣ ಏನು ಮಾಡಿದೆ ಎಂದು ಕೇಳಿದಾಗ ನಾನು ಆ ಪುಸ್ತಕಗಳನ್ನು ತೋರಿಸಿದೆ. ಆಗ ಅವರು “ಆ ಮಹಿಳೆ ಬರೆದ ಪುಸ್ತಕ ಯಾಕೆ ತೆಗೆದುಕೊಂಡೆ? ಕೊಡು ಎಂದು ನನ್ನ ಕೈಯಿಂದ ಎಳೆದುಕೊಂಡು ಇಲ್ಲಿ ಬಂದು ನಿಮಗೆ ಕೊಟ್ಟರು. ಅವರು ಹಾಗೆ ಮಾಡುತ್ತಾರೆಂದು ಗೊತ್ತಿದಿದ್ದರೆ ನಾನು ಅವರಿಗೆ ಅವುಗಳನ್ನು ತೋರಿಸುತ್ತಿರಲಿಲ್ಲ” ಎಂದು ದುಃಖದಿಂದ ನುಡಿದನು. ಕೆಲವು ಕಡೆ ಮಸೀದಿಗಳಲ್ಲಿ ಸಾರಾ ಅಬೂಬಕ್ಕರ್ ಅವರ ಪುಸ್ತಕಗಳನ್ನು ಓದಬೇಡಿ ಎಂದು ಫತ್ವಾ ಹೊರಡಿಸಿದ್ದಾರಂತೆ. ಅದು ಎಷ್ಟು ಸುಳ್ಳೋ, ಎಷ್ಟು ಸತ್ಯವೊ ಎಂದು ತಿಳಿಯದು ಎಂದರು ಆ ಮಾರಟಗಾರರು.
ಮತಾಂಧತೆಯಲ್ಲಿ ಮುಳುಗುತ್ತಿರುವವರನ್ನು ಅದರಿಂದ ಹೊರಗೆ ತರಲು ಯಾರಿಂದಲೂ ಸಾಧ್ಯವಾಗಲಾರದು. ನಾನು ತ್ರಿವಳಿ ತಲಾಖನ್ನು ವಿರೋಧಿಸಿ ಅದನ್ನು ರದ್ದುಪಡಿಸಬೇಕೆಂದು ಲೇಖನ ಬರೆದಿರುವುದು ಈ ಜನರಿಗೆ ಇಷ್ಟವಾಗಿರುವುದಿಲ್ಲ. ಅದನ್ನು ರದ್ದುಪಡಿಸಿದರೆ ಇವರಿಗೆ ಬೇಕಾದಂತೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಸಾಧ್ಯ. ನನ್ನ ಈ ಲೇಖನಗಳನ್ನು ಅರಗಿಸಿಕೊಳ್ಳಲು ಮುಸ್ಲಿಂ ಪುರುಷರಿಂದ ಸಾಧ್ಯವಾಗುತ್ತಿಲ್ಲ. ಕೆಲವು ಮತಾಂಧ ಸಂಘಟನೆಗಳು ದೇಶಾದ್ಯಂತ ಮುಸ್ಲಿಂ ಪುರುಷರನ್ನು ‘ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ’ವೆನ್ನುತ್ತಾ ಇಡೀ ದೇಶಾದ್ಯಂತ ಎತ್ತಿ ಕಟ್ಟುತ್ತಿದ್ದಾರೆ. ಶಾಬಾನು ಮೊಕದ್ದಮೆಯಲ್ಲಿ ಅವರಿಗೆ ಬೇಕಾದಂತೆ ಸರಕಾರ ಖುರ್‍ಆನ್ ವಾಕ್ಯದ ವಿರುದ್ಧವಾಗಿಯೇ ನಿಯಮ ರೂಪಿಸಿ ಜಾರಿಗೆ ತಂದಿದೆ. ಇಂದು ಇಂಡಿಯಾದ ಸುತ್ತಲೂ ಇರುವ ಸುಮಾರು ಇಪ್ಪತ್ತರಷ್ಟು ಮುಸ್ಲಿಂ ದೇಶಗಳು ತಮ್ಮ ದೇಶಗಳಲ್ಲಿ ತ್ರಿವಳಿ ತಲಾಖ್ ನಿಯಮವನ್ನು ರದ್ದುಪಡಿಸಿವೆ. ನಮ್ಮ ದೇಶದ ಮುಸ್ಲಿಂ ಪುರುಷರಿಗೆ ಈ ನಿಯಮ ಅನ್ವಯಿಸಬಾರದು ಎಂದರೆ ಏನರ್ಥ?
ಮುಸ್ಲಿಮರ ಈ ಮತಾಂಧತೆ ವಿದ್ಯಾರ್ಥಿಗಳನ್ನು ಆಧುನಿಕ ಶಿಕ್ಷಣದಿಂದಲೂ ದೂರ ಸರಿಸುತ್ತಿದೆ. ಖುರ್‍ಆನ್ ಬಾಯಿಪಾಠ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ‘ಹಾಫಿಜ್’ ಎಂಬುದು ಈ ಬಾಯಿಪಾಠದ ಹೆಸರಾಗಿದೆ. ಕೆಲವು ಹಳ್ಳಿಗಳ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯರನ್ನು ಮಂಗಳೂರಿಗೆ ಕರೆತಂದು ಅವರಿಗೆ ಮದ್ರಸಾದ ಗುರುಗಳಿಂದ ಖುರ್‍ಆನ್ ಬಾಯಿಪಾಠ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಎಂ.ಎ, ಎಂ.ಎಸ್ಸಿ ಪದವಿ ಪಡೆದರೆ ಅದು ಅವರ ಮುಂದಿನ ಬದುಕಿನಲ್ಲಿ ಪ್ರಯೋಜನವಾಗಬಹುದು. ಅರ್ಥ ತಿಳಿಯದ ಖುರ್‍ಆನ್ ವಾಕ್ಯಗಳನ್ನು ಬಾಯಿಪಾಠ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಬದುಕಿನಲ್ಲಿ ಏನೂ ಪ್ರಯೋಜನವಾಗಲಾರದು. ಸುಮಾರು 600 ಪುಟಗಳಿರುವ ಖುರ್‍ಆನ್ ಬಾಯಿಪಾಠವೆಂಬುದು ಸುಲಭದ ಕೆಲಸವೇನೂ ಅಲ್ಲ. ಎಲ್ಲ ವಿದ್ವಾಂಸರಿಗೂ ಈ ವಾಕ್ಯಗಳ ಸಮನಾದ ಅರ್ಥವನ್ನು ವಿವರಿಸುವುದು ಇಂದಿಗೂ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ನಮ್ಮ ಮುಂದನ ಬದುಕಿಗೆ ನಿಷ್ಪ್ರಯೋಜಕವಾಗಿರುವ ಈ ಬಾಯಿಪಾಠದಿಂದ ಮಕ್ಕಳು ತಮ್ಮ ಶಿಕ್ಷಣ ಕ್ಷೇತ್ರದಿಂದ ದೂರ ಸರಿಯಬಹುದು. ಆ ರೀತಿ ಮಕ್ಕಳನ್ನು ದೂರ ಸರಿಸುವುದೇ ಹಾಫಿಜ್‍ನ ಉದ್ದೇಶವೇ? ಅಥವಾ ಸ್ವರ್ಗದಲ್ಲಿ ಸೀಟು ರಿಸರ್ವ್ ಮಾಡಿಸುವುದು ಇವರ ಹಿರಿಯರ ಉದ್ದೇಶವೇ? ಇತ್ತೀಚೆಗೆ ಹೆಣ್ಣುಮಕ್ಕಳ ಮದುವೆ ಸಂದರ್ಭಗಳಲ್ಲಿ ‘ಹುಡುಗಿ ಹಾಫಿಜ್ ಮಾಡಿದ್ದಾಳೆಯೇ?’ ಎಂಬ ಪ್ರಶ್ನೆಗಳೂ ಪ್ರಾರಂಭವಾಗಿವೆ! ಎಂದು ಕೇಳಿದ್ದೇನೆ.
ಪ್ರವಾದಿಗಳು ಖುರ್‍ಆನ್ ಮೂಲಕ ಜನರಿಗೆ ಬದುಕಿನ ಕುರಿತು ಬೋಧನೆ ನೀಡಿದ್ದಾರೆಏ ಹೊರತು ಅದನ್ನು ಬಾಯಿಪಾಠ ಮಾಡಿ ಎಂದು ಹೇಳಿಲ್ಲ. ನಾವು ನಮ್ಮ ಸಮಾಜದಲ್ಲಿ ಹೇಗೆ ಬುದುಕಬೇಕು, ಎಲ್ಲ ರೀತಿಯ ಮೋಸ, ವಂಚನೆ, ನೀಚತನವಿಲ್ಲದೆ ಉತ್ತಮ ಮನುಷ್ಯರಾಗಿ, ಯಾರಿಗೂ ನೋವು ಕೊಡದೆ ಬದುಕಬೇಕೆಂಬುದು ಪ್ರವಾದಿಗಳ ಬೋಧನೆಯಾಗಿದೆ. ‘ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂಬ ಬೋಧನೆಯು ನಮ್ಮ ಹಿರಿಯರಿಂದ ನಮಗೂ ದೊರಕಿತ್ತು.’ ಇಂತಹ ಉತ್ತಮ ಬೋಧನೆಯನ್ನು ನಾವು ಅರ್ಥ ಮಾಡಿಕೊಳ್ಳುಬೇಕೇ ಹೊರತು ಅರ್ಥ ತಿಳಿಯದ ವಾಕ್ಯಗಳನ್ನು ಬಾಯಿಪಾಠ ಮಾಡುವುದು, ಮಕ್ಕಳಿಂದ ಬಾಯಿಪಾಠ ಮಾಡಿಸಿ ಅವರು ತರಗತಿಗಳಲ್ಲಿ ಶಿಕ್ಷಣದಿಂದ ಹಿಂದುಳಿಯುವುದು ಎಂದಿಗೂ ಅನುಸರಣೀಯವೆನಿಸಲು ಸಾಧ್ಯವಿಲ್ಲ.
ನಾನು ಪ್ರವಾದಿಗಳನ್ನಾಗಲಿ, ದೇವರನ್ನಾಗಲಿ ಯಾವ ರೀತಿಯಿಂದಲೂ ಟೀಕೆ ಮಾಡುವುದಾಗಲಿ, ವಿಮಶಿಸುವುದಾಗಲಿ ಮಾಡಲಿಲ್ಲ. ಧರ್ಮದ ಹೆಸರಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಮೇಲೆ ಏನೇನೊ ಅಧಾರ್ಮಿಕ ನಿಯಮಗಳನ್ನು ಹೇರಿವೆ ಎಂದಿದ್ದೇನೆ. ಇತ್ತೀಚೆಗೆ ಉಪನ್ಯಾಸಕರೊಬ್ಬರು ನನ್ನೊಡನೆ, “ಈಗ ಈ ಮತಾಂಧತೆಯನ್ನು ಉತ್ತರ ಕರ್ನಾಟಕದ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಹರಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದಿನವರೆಗೆ ನಮ್ಮೂರುಗಳಲ್ಲಿ ಮೊಹರಂ ಹಬ್ಬ ಮತ್ತು ಚೌತಿ ಹಬ್ಬವನ್ನು ಹಿಂದೂ ಮುಸ್ಲಿಮರು ಒಟ್ಟಾಗಿ ಆಚರಿಸುತ್ತಿದ್ದರು. ಈಗ ಹಿಂದುತ್ವ ಮತ್ತು ಇಸ್ಲಾಮೀಕರಣದಿಂದಾಗಿ ಈ ಒಟ್ಟು ಸೇರುವಿಕೆಯು ಜನರ ನಡುವಿನಿಂದ ಮರೆಯಾಗುತ್ತಿದೆ” ಎಂದರು. ಮತಾಂಧತೆ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೇ?


