ತೀವ್ರವಾಗಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮ್‌ಡೆಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ದೇಶದಲ್ಲಿ ಎರಡನೇ ಅಲೆ ಆರಂಭವಾದಾಗಿನಿಂದ ಕೊರೊನಾ ಲಸಿಕೆ ಜೊತೆಗೆ ರೆಮ್‌ಡೆಸಿವಿರ್ ಕೂಡ ಹೆಚ್ಚು ಮಾನ್ಯತೆ ಪಡೆಯುತ್ತಿದೆ. ಇಂತಹ ಸಮಯದಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಮಾರಾಟ ಮಾಡುವುದು ಆರಂಭವಾಗಿದೆ.
ಗುಜರಾತ್‌ನಲ್ಲಿ ಅಕ್ರಮವಾಗಿ ರೆಮ್‌ಡೆಸಿವಿರ್ ಲಸಿಕೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವೈದ್ಯ ಸೇರಿದಂತೆ ನಾಲ್ವರನ್ನು ಸೂರತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ.
ಗುಜರಾತ್‌ನಲ್ಲಿ ಶನಿವಾರ ವಿವಿಧ ಪ್ರದೇಶಗಳ ಮೇಲೆ ದಾಳಿ ಮಾಡಿದ ಅಪರಾಧ ಶಾಖೆ ತಂಡವು ಈ ನಾಲ್ವರನ್ನು ಬಂಧಿಸಿ, ರೆಮ್‌ಡೆಸಿವಿರ್ ಔಷಧದ ಮೂರು ಬಾಟಲುಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಆರೋಪಿಗಳು ಔಷಧಿಯನ್ನು ಅದರ ಎಂಆರ್‌ಪಿ (maximum retail price) ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಬಿಕ್ಕಟ್ಟಿನಲ್ಲಿ ಹಲವು ರಾಜ್ಯಗಳು, ನಮ್ಮಲ್ಲಿ ಕೊರತೆಯಿಲ್ಲ ಎಂದ ಉತ್ತರಪ್ರದೇಶ ಸಿಎಂ
ಆರೋಪಿಗಳಿಗೆ ರೆಮ್‌ಡೆಸಿವಿರ್ ಬಾಟಲುಗಳನ್ನು ಸರಬರಾಜು ಮಾಡಿದ ಆರೋಪಿಯನ್ನು ಬಂಧಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ಮೋಸ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ, ಅಗತ್ಯ ಸರಕುಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲಾಲ್‌ಗೇಟ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ರೋಗಿಗಳಿಗೆ ರೆಮ್‌ಡೆಸಿವಿರ್ ಔಷಧಿ ನೀಡಲು ವೈದ್ಯರು ಸೂಚಿಸುತ್ತಿದ್ದಾರೆ. ಕೋವಿಡ್ ಪ್ರಕರಣಗಳ ತೀವ್ರ ಉಲ್ಬಣದಿಂದಾಗಿ ಔಷಧದ ಬೇಡಿಕೆ ಹಠಾತ್ತನೆ ಏರಿಕೆಯಾದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಸುಧಾರಿಸುವವರೆಗೆ ರೆಮ್‌ಡೆಸಿವಿರ್ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಕೆಲವು ದಿನಗಳ ಹಿಂದೆ ಗುಜರಾತ್ ಹೈಕೋರ್ಟ್, ರೆಮ್‌ಡೆಸಿವಿರ್‌ಗೆ ಇರುವ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗಳಿಗೆ ಚುಚ್ಚುಮದ್ದನ್ನು ವಿತರಿಸುವ ನೀತಿಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್!


