Homeಮುಖಪುಟಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

- Advertisement -
- Advertisement -

ಡಿಸೆಂಬರ್ 17, 1903ರಲ್ಲಿ ಅರ್ವಿಲ್ಲೇ ರೈಟ್ ಮತ್ತು ವಿಲ್ಬರ್ ರೈಟ್ (ರೈಟ್ ಸಹೋದರರು) ತಾವೇ ರೂಪಿಸಿದ ವಿಮಾನವನ್ನು ಕ್ಯಾಲಿಫೋರ್ನಿಯಾದ ಕಿಟ್ಟಿ ಹಾಕ್ ಪ್ರದೇಶದಲ್ಲಿ ಮೊದಲ ಬಾರಿಗೆ ಹಾರಿಸಿದರು. ಈ ವಿಮಾನವು 12 ಸೆಕೆಂಡುಗಳವರೆಗೆ, ಭೂ ಪ್ರದೇಶದಿಂದ 20 ಅಡಿಗಳ ಅಂತರದಲ್ಲಿ ಹಾರಾಟ ನಡೆಸಿತು. ಇದು ಮಾನವನ ಇತಿಹಾಸದಲ್ಲೇ ಒಂದು ಚಾರಿತ್ರಿಕ ಮೈಲುಗಲ್ಲು.

ರೈಟ್ ಬ್ರದರ್ಸ್ ವಿಮಾನ ಹಾರಾಟವಾಗಿ ಒಂದು ದಶಕದ ಅಂತರದಲ್ಲಿಯೇ (1914 ರಲ್ಲಿ) ಪ್ರಪಂಚದ ಮೊದಲ ಪ್ರಯಾಣಿಕ ವಿಮಾನ ಹಾರಿತು. ನಂತರ ವೈಮಾನಿಕ ಕ್ಷೇತ್ರದಲ್ಲಿ ನಡೆದಿರುವುದೆಲ್ಲವೂ ರೋಚಕ ಇತಿಹಾಸ. ಅದರಲ್ಲೂ 1969, ಜುಲೈ 20ರಂದು ಚಂದ್ರನ ಮೇಲೆ ನೀಲ್ ಆರ್ಮ್‌ಸ್ಟ್ರಾಂಗ್ ನುಡಿದ ಮೊದಲ ಮಾತು ಇನ್ನೂ ನಮ್ಮ ಕಿವಿಯಲ್ಲಿ ಗುನುಗುತ್ತಲೇ ಇದೆ:

“That’s one small step for man. One giant leap for Mankind”.

PC : The Becker T3 Group, (ರೈಟ್ ಬ್ರದರ್ಸ್)

ರೈಟ್ ಬ್ರದರ್ಸ್ ಅಂದು ನಡೆಸಿದ ಮೊದಲ ವಿಮಾನ ಹಾರಾಟದಂತೆಯೇ ಇಂದು ನಡೆದ (ಏಪ್ರಿಲ್ 19, 2021) ಮತ್ತೊಂದು ಚಾರಿತ್ರಿಕ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ನಡೆಯುತ್ತಿರುವುದು ಭೂಮಿಯ ಮೇಲೆ ಅಲ್ಲ, ಬದಲಾಗಿ ಭೂಮಿಯಿಂದ ಸುಮಾರು 48 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದ ಮೇಲೆ.

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ ವಿ 541 ರಾಕೆಟ್‌ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್‌ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳ ಸಮಯದಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಈ ರೋವರ್ ಸುಮಾರು ಒಂದು ಮಂಗಳ-ವರ್ಷಗಳ ಕಾಲ (ಅಂದರೆ 687 ಭೂ ದಿನಗಳು) ಮಂಗಳನ ಮೇಲೆ ತನ್ನಲ್ಲಿರುವ ಏಳು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಗ್ರಹದ ಅನ್ವೇಷಣೆ ನಡೆಸುತ್ತದೆ.

ಮಾರ್ಸ್ 2020: ಪರ್ಸಿವರೆನ್ಸ್ ರೋವರ್‌ನ ಉದ್ದೇಶವೇನು?

ಮಂಗಳ ಗ್ರಹದ ಮೇಲೆ ಇಳಿದಿರುವ ರೋವರ್‌ಗಳಲ್ಲಿ ಪರ್ಸಿವರೆನ್ಸ್ ರೋವರ್ ಮೊದಲನೆಯ ರೋವರ್ ಏನಲ್ಲ. ಈಗಾಗಲೇ ಹಲವು ರೋವರ್‌ಗಳು ಮಂಗಳ ಗ್ರಹದಲ್ಲಿ ಅನ್ವೇಷಣೆ ಕೈಗೊಂಡಿವೆ. ಈ ಎಲ್ಲಾ ರೋವರ್‌ಗಳಿಂದ ಬಂದ ಮಾಹಿತಿಯ ಪ್ರಕಾರ ಮಂಗಳ ಗ್ರಹದಲ್ಲಿ ಜೀವಿಗಳು ಹಿಂದೆಂದೋ ಇದ್ದಿರಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಊಹಿಸಲಾಗುತ್ತಿದೆ. ಆದರೆ ಯಾವ ರೋವರ್‌ಗಳು ಮತ್ತು ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹಗಳೂ ಆ ಗ್ರಹದಲ್ಲಿ ಜೀವಿಗಳಿರುವುದರ ಬಗ್ಗೆ ಕಂಡುಹಿಡಿದು ಸಾಬೀತುಪಡಿಸಿಲ್ಲ. ಈಗ ಇಳಿದಿರುವ ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆಂದೋ ಇದ್ದ ಜೀವಿಗಳು ಹೇಗಿದ್ದಿರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡಲು ಹೊರಟಿದೆ.

ಜೀವಿಗಳೆಂದರೆ, ಮನುಷ್ಯನ ಗಾತ್ರಕ್ಕೆ ಅಥವಾ ಇನ್ಯಾವುದೋ ಪ್ರಾಣಿಯ ಗಾತ್ರಕ್ಕೆ ಹೋಲುವ ಜೀವಿಗಳಲ್ಲ. ಪರ್ಸಿವರೆನ್ಸ್ ಹುಡುಕಲು ಹೊರಟಿರುವುದು ಸೂಕ್ಷ್ಮಜೀವಿಗಳನ್ನು (Micriobial Life). ಈ ಜೀವಿಗಳನ್ನು ಹುಡುಕಲು ಮಂಗಳನಲ್ಲಿ ಜೆಝೀರೋ ಕುಳಿಯನ್ನು (Jezero Crator) ಆಯ್ಕೆ ಮಾಡಿಕೊಳ್ಳಲಾಗಿದೆ. ಯಾಕೆ ಈ ಜೆಝೀರೋ ಕುಳಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರೆ, ಈ ಹಿಂದಿನ ಮಂಗಳನ ಭೂ ಪ್ರದೇಶಗಳ ಅನ್ವೇಷಣೆಯ ಪ್ರಕಾರ ಜೆಝೀರೋ ಕುಳಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಸಾಧ್ಯತೆ ಹೆಚ್ಚಿದ್ದು, ಈ ನೀರಿನಲ್ಲಿ ಸೂಕ್ಷ್ಮಜೀವಿಗಳು ಜೀವಿಸಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪರ್ಸಿವರೆನ್ಸ್ ತನ್ನ ಉಪಕರಣಗಳಲ್ಲಿ ಒಂದಾದ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಟ್ಯೂಬ್ ಆಕಾರದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ಒಂದು ಟ್ಯೂಬ್‌ನಲ್ಲಿ ತುಂಬಿ, ತನ್ನಲ್ಲಿರುವ ಮತ್ತೆ ಕೆಲವು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದನ್ನು ಪರೀಕ್ಷೆ ಮಾಡಿ ಡೇಟಾವನ್ನು ಭೂಮಿಗೆ ರವಾನಿಸುತ್ತದೆ. ಅಲ್ಲದೆ, ಜೆಝೀರೋ ಕುಳಿಯ ಸುತ್ತಮುತ್ತ ಇಂತಹ ಹಲವು ಮಣ್ಣಿನ ಮಾದರಿಗಳನ್ನು ತೆಗೆದು, ಪರೀಕ್ಷಿಸಿ, ಎಲ್ಲಾ ಟ್ಯೂಬ್‌ಗಳನ್ನು ಒಂದು ಕಡೆ ಗುಡ್ಡೆಹಾಕುತ್ತದೆ. ಮುಂದಿನ ಹತ್ತು ವರ್ಷದಲ್ಲಿ ಮಂಗಳ ಗ್ರಹಕ್ಕೆ ತೆರಳುವ ಮತ್ತೊಂದು ರೋವರ್, ಪರ್ಸಿವರೆನ್ಸ್ ಸಂಗ್ರಹಿಸಿ ಗುಡ್ಡೆ ಮಾಡಿದ ಮಣ್ಣಿನ ಟ್ಯೂಬ್‌ಗಳನ್ನು ಎತ್ತಿಕೊಂಡು ಭೂಮಿಗೆ ಮರಳುತ್ತದೆ. ನಂತರ ಭೂಮಿಯಲ್ಲಿ ಮಂಗಳನ ಮಣ್ಣಿನ ಪೂರ್ಣ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳ ಕಾಲಾವಕಾಶ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

PC : Science News

ಚಂದ್ರನ ನಂತರ ಅತಿ ಹೆಚ್ಚು ಬಾಹ್ಯಾಕಾಶ ಎಕ್ಸಪ್ಲೋರೇಷನ್ ಕೈಗೊಂಡ ಸೌರಮಂಡಲದ ಗ್ರಹ ಎಂದರೆ ಅದು ಮಂಗಳ ಗ್ರಹ. ಮನುಷ್ಯನಿಗೆ ಚಂದ್ರನಲ್ಲಿ ಒಂದು ನಿಲ್ದಾಣ ಮಾಡಿ, ಅಲ್ಲಿಂದ ಮಂಗಳ ಗ್ರಹಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು. ಈ ಕನಸನ್ನು ನನಸು ಮಾಡುವುದಕ್ಕೆ ಪರ್ಸಿವರೆನ್ಸ್ ಹಲವು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುತ್ತಿದೆ. ಮಂಗಳ ಗ್ರಹದ ಹವಾಮಾನ, ಭೂಪ್ರದೇಶದ ಮಾಹಿತಿ, ಅಲ್ಲಿರುವ ವಾತಾವರಣದಿಂದ ಆಕ್ಸಿಜನ್ ತಯಾರಿಕೆ ಮತ್ತು ಮಾನವನ ಆಗಮನಕ್ಕೆ ಬೇಕಾಗಬಲ್ಲ ಹಲವು ಮಾಹಿತಿಯನ್ನು ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದು ಕಲೆಹಾಕಲಿದೆ.

ಇದರ ಜೊತೆಗೆ ಪರ್ಸಿವರೆನ್ಸ್ ರೋವರ್‌ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿದೆ. ಇದನ್ನು ಇಂಜಿನ್ಯುಟಿ (Ingenuity) ಎಂದು ಕರೆಯಲಾಗಿದೆ. ಈ ಹೆಲಿಕಾಪ್ಟರ್‌ನಲ್ಲಿ ಕ್ಯಾಮರಾ, ಸಂವೇದಕಗಳು (sensors) ಮತ್ತು ಬ್ಯಾಟರಿಯನ್ನು ಹೊರತುಪಡಿಸಿ ಯಾವ ವೈಜ್ಞಾನಿಕ ಉಪಕರಣವೂ ಇಲ್ಲ. ಇದು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ ಮಾದರಿಯಲ್ಲೇ ಇದೆ. ಆದರೆ ಇದು ಹಾರುವುದು ಮಾತ್ರ ಮಂಗಳ ಗ್ರಹದಲ್ಲಿ! ಇದೇ ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್‌ಅನ್ನು ನಾಸಾ ಮಂಗಳ ಗ್ರಹದಲ್ಲಿ ಹಾರಿಸಿದ್ದು, ಈ ಪ್ರಯೋಗ ಒಂದು ತಂತ್ರಜ್ಞಾನ ಪ್ರದರ್ಶನವಾಗಿದೆ (Technology Demonstration).

ಮಂಗಳ ಗ್ರಹದಲ್ಲಿ ಇಂತಹ ಸಣ್ಣ ಹೆಲಿಕಾಪ್ಟ್‌ರ್ ಹಾರಿಸಲು ಇಷ್ಟು ಕಷ್ಟಾನಾ?

ವಿಮಾನ ಅಥವಾ ಹೆಲಿಕಾಪ್ಟರ್ ಹಾರಿಸಬೇಕಾದರೆ, ಭೂಮಿಯ ವಾತಾವರಣದ ಸಾಂದ್ರತೆ ಎಷ್ಟಿದೆ ಎಂದು ತಿಳಿದು, ಹೆಲಿಕಾಪ್ಟರ್ ಆಗಿದ್ದರೆ ಅದರ ಬ್ಲೇಡ್‌ಗಳನ್ನು ಎಷ್ಟು ವೇಗವಾಗಿ ತಿರುಗಿಸಬೇಕು, ವಿಮಾನವಾಗಿದ್ದರೆ, ಟೇಕ್ ಆಫ್ ಮಾಡಲು ಎಷ್ಟು ವೇಗವಾಗಿ ಚಲಿಸಬೇಕು ಎಂದು ಲೆಕ್ಕ ಹಾಕಿ ಹಾರಿಸಲಾಗುತ್ತಿದೆ. ಇದೇ ರೀತಿ ಮಂಗಳ ಗ್ರಹಕ್ಕೂ ಮಾಡಲಾಗುತ್ತದೆ. ಮಂಗಳ ಗ್ರಹದ ವಾತಾವರಣದ ಸಾಂದ್ರತೆ ಭೂಮಿಯ ಶೇಕಡ ಒಂದರಷ್ಟು ಇರುವುದರಿಂದ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಇಂತಹ ತೆಳುವಾದ ವಾತಾವರಣದಲ್ಲಿ ಹಾರಿಸುವುದು ಅತ್ಯಂತ ಕಷ್ಟಕರವಾದದ್ದು.

ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹೆಲಿಕಾಪ್ಟರ್ ಹಾರಬೇಕಾದರೆ, ಅದರ ಬ್ಲೇಡ್‌ಗಳು ಒಂದು ನಿಮಿಷಕ್ಕೆ ಕನಿಷ್ಟ ಅಂದರೂ 25,000 ಬಾರಿ ತಿರುಗಬೇಕು. ಭೂಮಿಯಲ್ಲಿ ಈ ಸಂಖ್ಯೆ ಕೇವಲ 500 ರಿಂದ 600! ಇದು ಅತ್ಯಂತ ಸವಾಲಿನ ಕೆಲಸ. ತಾಂತ್ರಿಕವಾಗಿಯೂ ಇಂತಹ ಹೆಲಿಕಾಪ್ಟರ್ ಒಂದನ್ನು ಡಿಸೈನ್ ಮಾಡಿ, 48 ಕೋಟಿ ಕಿಲೋಮೀಟರ್ ದೂರದಿಂದ ಕಂಟ್ರೋಲ್ ಮಾಡುವುದು ಇನ್ನೂ ಕಷ್ಟದ ಕೆಲಸ. ಇದೇ ಕಾರಣದಿಂದ ಸತತ ಹತ್ತು ವರ್ಷಗಳ ಪ್ರಯತ್ನದಲ್ಲಿ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೆಟರಿ (Jet Propulsion Laboratory- JPL) ವಿಜ್ಞಾನಿಗಳು, ಇಂಜಿನಿಯರ್‌ಗಳು, ಡಿಸೈನರ್‌ಗಳು ಎಲ್ಲರೂ ಸೇರಿ ಇಂಜಿನ್ಯುಟಿ ಎಂಬ ಪುಟ್ಟ ಹೆಲಿಕಾಪ್ಟರ್ ತಯಾರಿಸಿದರು. ಈ ಹೆಲಿಕಾಪ್ಟರ್ ಅನ್ನು ಪರ್ಸಿವರೆನ್ಸ್ ರೋವರ್ ಮುಖಾಂತರ ಯಾವುದೇ ಅಡೆತಡೆ ಇಲ್ಲದೇ ಮಂಗಳನಲ್ಲಿ ಸುರಕ್ಷಿತವಾಗಿ ತಲುಪಿಸುವುದರಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾದರು.

ಮಂಗಳ ಗ್ರಹದಲ್ಲಿ ಹಾರಿದ ಇಂಜಿನ್ಯುಟಿ ಹೆಲಿಕಾಪ್ಟರ್

ಪರ್ಸಿವರೆನ್ಸ್ ತನ್ನ ಹೊಟ್ಟೆಯಲ್ಲಿದ್ದ ಇಂಜಿನ್ಯುಟಿ ಹೆಲಿಕಾಪ್ಟರ್‌ಅನ್ನು ಏಪ್ರಿಲ್ 03, 2021ರಂದು ಮಂಗಳನ ಅಂಗಳದ ಮೇಲೆ ಇಳಿಬಿಟ್ಟಿತು. ಇದಾದ ನಂತರ ಇಂಜಿನ್ಯುಟಿಯ ಸವಾಲು ಮಂಗಳನ ಹವಾಮಾನವನ್ನು ಎದುರಿಸುವುದು. ರಾತ್ರಿಯ ಸಮಯದಲ್ಲಿ ’-90 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಇಳಿಯುವುದರಿಂದ, ಇಂಜಿನ್ಯುಟಿಯ ಉಪಕರಣಗಳು ಹಾಳಾಗದಂತೆ ಡಿಸೈನ್ ಮಾಡುವುದು ಸವಾಲಿನ ಕೆಲಸ. ನಾಸಾದ ಜೆಪಿಎಲ್ ವಿಜ್ಞಾನಿಗಳು ಇಂಜಿನ್ಯುಟಿಯನ್ನು ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಡಿಸೈನ್ ಮಾಡಿದ್ದರು. ತದನಂತರ ಇಂಜಿನ್ಯುಟಿ ಹೆಲಿಕಾಪ್ಟರ್‌ಗೆ ಏಪ್ರಿಲ್ 19ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ಧಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೆ ದೂರದಲ್ಲಿದ್ದ ಪರ್ಸಿವರೆನ್ಸ್ ರೋವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಎಲ್ಲಾ ಘಟನೆಗಳೂ ಸ್ವಯಂಚಾಲಿತವಾಗಿ ನಡೆದು, ಘಟನೆಯ ಪ್ರತಿಯೊಂದು ಡೇಟಾ, ವಿಡಿಯೋಗಳು ರೆಕಾರ್ಡ್ ಆಗಿ ಭೂಮಿಗೆ ಬರಲು ಸುಮಾರು ನಾಲ್ಕು ಗಂಟೆಯ ಸಮಯ ತೆಗೆದುಕೊಂಡಿತು. ಇಂಜಿನ್ಯುಟಿಯಿಂದ ಯಾವ ಡೇಟಾ ಬರಬಹುದು, ಫಲಿತಾಂಶ ಏನಿರಬಹುದೆಂದು ವಿಜ್ಞಾನಿಗಳು ಕಾದುಕುಳಿತರು.

PC : sciencesprngs – WorldPress.com

ಅದೇ ದಿನ ಭಾರತೀಯ ಕಾಲಮಾನದ ಸಮಯ ಸಂಜೆ ನಾಲ್ಕ ಗಂಟೆಯ ಸುಮಾರಿಗೆ ಇಂಜಿನ್ಯುಟಿಯಿಂದ ಡೇಟಾ ಅದೇ ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾದಿಂದ ಭೂಮಿಗೆ ಬಂದಿತು. ಪರ್ಸಿವರೆನ್ಸ್ ರೋವರ್ ಇಂಜಿನ್ಯುಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಮೇಲಕ್ಕೆ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗೆದಿದ್ದ ವಿಡಿಯೋ ಮುಖಾಂತರ ದೃಢಿಕರಿಸಿತು. ಜೆಪಿಎಲ್ ಕೊಠಡಿಯಲ್ಲಿ ಉಸಿರು ಬಿಗಿಹಿಡಿದು ಕಾಯುತ್ತಿದ್ದ ವಿಜ್ಞಾನಿಗಳಿಗೆ ಒಮ್ಮೆಲೆ ಉತ್ಸಾಹ ಮತ್ತು ಸಂತೋಷದ ಕಟ್ಟೆಯೊಡೆಯಿತು. ಮಾನವನ ಇತಿಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೇ ಮೊದಲನೆಯ ಬಾರಿ.

ಸದ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ವರ್ಷದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದಂತೂ ಸತ್ಯ. ಮುಂದಿನ ಒಂದು ತಿಂಗಳಿನಲ್ಲಿ ಇಂಜಿನ್ಯುಟಿ ಇಂತಹ ಐದು ವೈಮಾನಿಕ ಹಾರಾಟ ನಡೆಸಲು ಅನುವಾಗುವಂತೆ ಸಿದ್ಧಪಡಿಸಲಾಗಿದೆ. ಇದು ಮಂಗಳ ಗ್ರಹದ ತೆಳುವಾದ ವಾತಾವರಣದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಮಗೆ ನೀಡಲಿದೆ.

ಇಂಜಿನ್ಯುಟಿ (Ingenuity) ಎಂದರೆ ಕೆಲಸಗಳನ್ನು ಕೌಶಲ್ಯದಿಂದ ಹೊಸರೀತಿಯಲ್ಲಿ ಮಾಡುವುದು. ಹಾಗೆಯೇ ಮಂಗಳನಲ್ಲಿರುವ ಇಂಜಿನ್ಯುಟಿ, ನಮ್ಮಲ್ಲಿ ಹೊಸ ಯೋಚನೆಗಳನ್ನು, ಹೊಸ ಪ್ರಶ್ನೆಗಳನ್ನು, ಹೊಸ ವಿಚಾರಗಳನ್ನು ಕಲಿಯಲು ಪ್ರೇರೇಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನು ಮಂಗಳ ಗ್ರಹಕ್ಕೆ ತೆರಳುವ ಕನಸುಗಳನ್ನು ನನಸು ಮಾಡಲು ಮೊದಲ ಅಂಬೆಗಾಲಿಟ್ಟಿರುವುದಂತೂ ನಿಜ.
ವಿಡಿಯೋ ಲಿಂಕ್ 
ಲೈವ್‌ಸ್ಟ್ರೀಮ್ ವಿಡಿಯೋ ಲಿಂಕ್

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್‌ ಹಾರಿಸಿದ ನಾಸಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತ 6ನೇ ಅತ್ಯಂತ ಕಲುಷಿತ ರಾಷ್ಟ್ರ; ಉತ್ತರ ಪ್ರದೇಶದ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

ಪ್ರಮುಖ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಮಟ್ಟದಲ್ಲಿ ಭಾರತ ಆರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಉತ್ತರ ಪ್ರದೇಶದ ಲೋನಿ ಜಗತ್ತಿನಾದ್ಯಂತ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ವಾಯು...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ದೆಹಲಿ ಏಮ್ಸ್‌ನಲ್ಲಿ ನಿಧನ

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24)...

ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯವರ್ತಿಯಾದರೆ ಅದು ಭಾರತದ ರಾಜತಾಂತ್ರಿಕ ಹಿನ್ನೆಡೆಯಾಗಬಹುದು; ಕಾಂಗ್ರೆಸ್ 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂವಹನದಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ದೃಢಪಟ್ಟರೆ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ,...

ಭಯೋತ್ಪಾದಕ ಚಟುವಟಿಕೆಗಳ ಆರೋಪ; ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆಯ ಸಹಚರರಾದ ಸೋಫಿ...

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ...

ಪಂಜಾಬ್: ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳಕ್ಕೆ ಅಧಿಕಾರಿ ಆತ್ಮಹತ್ಯೆ; ಅಮೃತಸರದಲ್ಲಿ ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ

ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಗೋದಾಮು ನಿಗಮದ ಅಧಿಕಾರಿ ಗಗನ್‌ದೀಪ್ ಸಿಂಗ್ ರಾಂಧವ ಅವರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಅಮೃತಸರದಲ್ಲಿ ನಡೆಸಲಾಗುವುದು...

ಮುಸ್ಲಿಂ ಮಹಿಳೆಯರು ‘ನಮಾಜ್’ ಮಾಡುತ್ತಿದ್ದ ಕೊಠಡಿಯಲ್ಲಿ ಮಂತ್ರ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ

ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ)ದ ವಿವಾದಾತ್ಮಕ ನಾಯಕಿ ಮಾಧವಿ ಲತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್‌ ಮಾಡುತ್ತಿದ್ದವರ ಹಿಂದೆ ಮಂತ್ರ ಪಠಿಸುತ್ತಿರುವ ಅವರ ವೀಡಿಯೊವೊಂದು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ತೂತುಕುಡಿ ಸಾತನ್‌ಕುಳಂ ತಂದೆ ಮಗನ ಕಸ್ಟಡಿ ಸಾವು ಪ್ರಕರಣ : ಒಂಬತ್ತು ಪೊಲೀಸರು ದೋಷಿಗಳು ಎಂದ ಕೋರ್ಟ್

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ; ಗುರುಗ್ರಾಮ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹರಿಯಾಣದ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಹರಿಯಾಣ ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವಿನೊಂದಿಗೆ...

ದಾವಣಗೆರೆ: ನಿಮ್ಮ ದೇಶಭಕ್ತಿ ಪ್ರಶ್ನಿಸುವ ಅಯೋಗ್ಯರಿಗೆ ಮತ ಹಾಕಬೇಡಿ; ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ

ದಾವಣಗೆರೆ: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ, ಅವರ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇವತ್ತು ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕದರೆ ನಿಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಇಂತಹ ಅಯೋಗ್ಯರಿಗೆ ಮತ...