ಕಳೆದ 15 ದಿನಗಳಿಂದ ಸತತವಾಗಿ ಟ್ರೆಡಿಂಗ್‌ನಲ್ಲಿದ್ದ, ಕೋಟ್ಯಾಂತರ ಟ್ವೀಟ್‌ಗಳು, ಫೇಸ್‌ಬುಕ್ ಪೋಸ್ಟ್‌ಗಳು ದಾಖಲಾಗಿದ್ದ #ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್ ಮತ್ತು ಅದರ ಹೆಸರಿನಲ್ಲಿ ದಾಖಲಾದ ಎಲ್ಲಾ ಪೋಸ್ಟ್‌ಗಳನ್ನು ಬುಧವಾರ ಫೇಸ್‌ಬುಕ್ ಇಂಡಿಯಾ ಬ್ಲಾಕ್ ಮಾಡಿತ್ತು. ಫೇಸ್‌ಬುಕ್ ಆಳುವ ಸರ್ಕಾರವನ್ನು ರಕ್ಷಿಸಲು ಮುಂದಾಗಿದೆ, ಇದು ಸೆನ್ಸಾರ್ ಶಿಪ್ ಅಲ್ಲವೇ? ಎಂಬ ವ್ಯಾಪಕ ಟೀಕೆಗಳು ಬಂದ ನಂತರ ಫೇಸ್‌ಬುಕ್ #ResignModi ಹ್ಯಾಷ್‌ಟ್ಯಾಗ್ ಅನ್ನು ಮರುಸ್ಥಾಪಿಸಿದೆ. ಇದೊಂದು ‘ಮಿಸ್ಟೇಕ್’ ಎಂದ ಕಂಪನಿ ಒಪ್ಪಿಕೊಂಡಿದೆ.
ವಾರದ ಹಿಂದೆಯಷ್ಟೇ ಟ್ವಿಟರ್ ಸಹ #ResignModi ಹ್ಯಾಷ್‌ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆ ವೈಫಲ್ಯವನ್ನು ಟೀಕಿಸಿದ್ದ ಹಲವಾರು ಪೋಸ್ಟ್‌ಗಳನ್ನು ಬ್ಲಾಕ್ ಮಾಡುವಂತೆ ಸರ್ಕಾರವು ಟ್ವಿಟರ್ ಅನ್ನು ಕೇಳಿಕೊಂಡಿತ್ತು. ಅದರಂತೆ ಟ್ವಿಟರ್ ಹಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ತೀವ್ರ ಟೀಕೆಗೆ ಒಳಗಾಗಿತ್ತು. ಈಗ ಆ ಸಾಲಿಗೆ ಫೇಸ್‌ಬುಕ್ ಸಹ ಸೇರಿಕೊಂಡಿದೆ.
ಮೋದಿ ಸರ್ಕಾರದ ವೈಫಲ್ಯಗಳನ್ನು ಟೀಕಿಸುವ ಪೋಸ್ಟ್‌ಗಳನ್ನು ಫೇಸ್‌ಬುಕ್ ನಿರ್ಬಂಧಿಸಿದ ಕೂಡಲೇ ಅದರ ಮೇಲೆ ಟೀಕಾಪ್ರಹಾರ ನಡೆಯಿತು. ಈ ರೀತಿ ಅಧಿಕಾರ ಬಳಸಿ ಜನಾಭಿಪ್ರಾಯ ತಡೆಯುವುದು ಹೇಡಿಗಳ ಕೆಲಸ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಕೇಳಿಬಂತು. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂದು ಅಂತಿಮ ಹಂತದ ಮತದಾನ ನಡೆಯುತ್ತಿರುವ ವೇಳೆಯಲ್ಲಿ ಈ ರೀತಿಯ ನಿರ್ಬಂಧಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು.
ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಈ ಪೋಸ್ಟ್‌ಗಳನ್ನು ನಿರ್ಬಂಧಿಸಿಲ್ಲ. ಇದು ತಾತ್ಕಾಲಿಕ ತಪ್ಪಿನಿಂದ ಸಂಭವಿಸಿದೆ ಎಂದು ಫೇಸ್‌ಬುಕ್ ಸ್ಪಷ್ಟೀಕರಣ ನೀಡಿದ್ದು ಮತ್ತೆ ಆ ಹ್ಯಾಷ್‌ಟ್ಯಾಗ್ ಅನ್ನು ಮರುಸ್ಥಾಪಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈಗ ಮತ್ತೆ #ResignModi ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದ್ದು, ಜನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಇಂದು 3.79 ಲಕ್ಷ ಪ್ರಕರಣಗಳು ದಾಖಲಾಗಿವೆ. ಆದರೆ ಮೋದಿ ಸರ್ಕಾರ #ResignModi ಹ್ಯಾಷ್‌ಟ್ಯಾಗ್‌ಗಳನ್ನು ತೆಗೆದುಹಾಕುವಂತೆ ಹೋರಾಡುತ್ತಿದೆ. ಮೋದಿಯವರು ತಮ್ಮ ಆದ್ಯತೆಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ” ಎಂದು ಸ್ವಾತಿ ಚತುರ್ವೇದಿಯವರು ಟೀಕಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿಗೆ ಪ್ರಧಾನಿಯೇ ಕಾರಣ: ‘ಮೋದಿ ರಾಜೀನಾಮೆ ನೀಡಿ’ ಟ್ವಿಟರ್ ಟ್ರೆಂಡಿಂಗ್


