- Advertisement -
| ಗೌರಿ | ಬೆಂಗಳೂರು.ನಮ್ಮ ಸಮಾಜದ 90% ಜನವರ್ಗಗಳ ಬೆಳಕಾಗಿ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನ ಜಾರಿಗೊಂಡ ದಿನದಿಂದಲೂ ಸಂಘಪರಿವಾರದ ‘ಬ್ರಾಹ್ಮಣ್ಯ’ವಾದಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅಪಸ್ವರವನ್ನು ಎತ್ತುತ್ತಾ ಬರುತ್ತಿದ್ದಾರೆ. ಈಗ ಬ್ರಾಹ್ಮಣ್ಯವಾದಿಗಳು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಸಂವಿಧಾನವನ್ನು ಸುಡುವ ಮಾತುಗಳನ್ನು ಬಹಿರಂಗವಾಗಿಯೇ ಆಡಲಾಗುತ್ತಿದೆಯಲ್ಲದೇ, ಬದಲಾವಣೆ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದಾರೆ. ಆಡಳಿತದಲ್ಲೂ ಸಂವಿಧಾನದ ಆಶಯಗಳಿಗೆ ಧಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಪ್ರಜಾತಾಂತ್ರಿಕ ಚಿಂತನೆಗೆ ಮಸಿ ಬಳಿಯುವ, ಬುಡಮೇಲು ಮಾಡುವ ಕೃತ್ಯಕ್ಕೇ ಕೈ ಹಾಕಲಾಗುತ್ತಿದೆ. ಇದಕ್ಕೆ ಬೇಕಾದ ಚಿಂತನಾ ತಳಹದಿಯನ್ನು ರೂಪಿಸುವ ಕೆಲಸವನ್ನು ಭೈರಪ್ಪರಂಥವರು ಮಾಡುತ್ತಿದ್ದಾರೆ.
ಇತ್ತೀಚೆಗೆ ಈ ತಲೆಕೆಟ್ಟ ಭೈರಪ್ಪ ತನ್ನ ನಾಲಿಗೆಯನ್ನು ಹರಿಬಿಟ್ಟು ‘ಮಹಿಳೆಯರಿಗೆ ಸ್ವಾತಂತ್ರ ಜಾಸ್ತಿಯಾಯಿತು, ಈ ಸಂವಿಧಾನದಿಂದಲೇ ಮಹಿಳೆಯರಿಗೆ ಈ ರೀತಿಯ ಅವಕಾಶಗಳು ಸಿಗುತ್ತಿವೆ, ಸಂವಿಧಾನ ಮನುವಿನ ಕಾಲದ ಪರಂಪರೆಯನ್ನು ಒಳಗೊಂಡಿಲ್ಲ’ವೆಂದು ತನ್ನ ಬ್ರಾಹ್ಮಣ್ಯ ಮನಸ್ಥಿತಿಯನ್ನು ಹೊರಹಾಕಿದ್ದಾನೆ. ಇವರ ದೃಷ್ಟಿಯಲ್ಲಿ ಹೆಣ್ಣೆಂದರೆ ಭೋಗದ ವಸ್ತು, ಗಂಡಸರ ಸೇವೆಗಾಗಿಯೇ ಇರುವ ಪ್ರಾಣಿಯ ಇನ್ನೊಂದು ರೂಪ, ಮಕ್ಕಳನ್ನು ಹೆರುವ ಯಂತ್ರ, ಮನೆಗೆಲಸಕ್ಕೆಂದೇ ಇರುವ ಆಳುಗಳು ಬೇಕೆಂದಾಗ ಬಳಸಿ, ಬೇಡವೆಂದಾಗ ಬಿಸಾಡುವ ವಸ್ತು. ಮನೆಯ ಹೊಸ್ತಿಲ ಗೆರೆ ದಾಟಬಾರದ, ಓದಿನಲ್ಲಿ, ಉನ್ನತ ಹುದ್ದೆಯನ್ನು ಪಡೆಯಲು ಅನರ್ಹಳು. ಇದನ್ನೇ ಮನುಧರ್ಮಶಾಸ್ತ್ರ ಹೇಳುತ್ತದೆ. ಇದು ಅವರ ದೃಷ್ಟಿಯಲ್ಲಿ ಹಿಂದೂ ಪರಂಪರೆ, ಸಂಸ್ಕೃತಿ.
ಈ ದೇಶದ ಜಾತಿಯಾಧಾರಿತ ಶೋಷಿತ ಸಮುದಾಯಗಳೂ ಸಹ ಹಿಂದೂ ಧರ್ಮದ ಪ್ರಕಾರ ಪ್ರಾಣಿಗಳಿಗಿಂತ ಕಡೆ. ಬೈರಪ್ಪನವರ ಪರಂಪರೆಯಲ್ಲಿ ಜಾತಿಯೇ ಶ್ರೇಷ್ಠ, ಮಾನವೀಯತೆಯಲ್ಲ. ಮೇಲ್ಜಾತಿಗಳಿಗೆ ಕೆಳ ಜಾತಿಗಳು ಅಧೀನವಾಗಿರಬೇಕು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮನುಷ್ಯನ ರೀತಿ ನೋಡದೇ ಇರುವುದೇ ಅವರ ಹಿಂದೂ ಧರ್ಮ. ಇಂಥಹ ಧರ್ಮವು ಅವರಿಗೆ ಶ್ರೇಷ್ಠ ಹೇಗಾಗುತ್ತದೆಂದು ಸಂವಿಧಾನ ಪ್ರಶ್ನೆ ಮಾಡುತ್ತದೆ, ಮಹಿಳೆಯು ಪುರುಷನಷ್ಟೇ ಸಮಾನಳು ಎಂದು ಪ್ರತಿಪಾದಿಸುತ್ತದೆ, ಸಂವಿಧಾನ ಈ ದೇಶದ ಎಲ್ಲಾ ಜಾತಿಯವರಿಗೂ ಸಮಾನತೆಯನ್ನು ಹೇಳುವುದಲ್ಲದೆ, ಪರಸ್ಪರ ಗೌರವದಿಂದ ಬದುಕಬೇಕೆಂದು ಪ್ರತಿಪಾದಿಸುತ್ತದೆ. ಹಿಂದೂ ಧರ್ಮ, ಮನುಧರ್ಮಶಾಸ್ತ್ರದ ಕಲ್ಮಶವನ್ನು ತಲೆಯಲ್ಲಿಟ್ಟುಕೊಂಡಿರುವವರಿಗೆ ಈ ಮಾನವೀಯ ನೆಲೆಯ ಸಂವಿಧಾನವನ್ನು ಒಪ್ಪಲು ಸಾದ್ಯವಿಲ್ಲ. ದೇಶ ಧರ್ಮದ ಆಧಾರದಲ್ಲಿ ನಡೆಯಬಾರದೆಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಇದನ್ನು ಅರ್ಥ ಮಾಡಿಕೊಂಡು ಸಂವಿಧಾನದಲ್ಲಿ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿಯೇ ಈ ಸಂವಿಧಾನವನ್ನು ಅವರು ಒಪ್ಪಲು ಸಾಧ್ಯವಿಲ್ಲ.
ಈ ಸಂವಿಧಾನ ರಚನೆಯೇ ಮನುವಾದಿಗಳಿಗೆ ಮೊದಲ ಸೋಲಾಗಿದೆ. ಸಂವಿಧಾನ ರಚನೆಗೆ ಮುಂಚೆಯೇ ಅದರ ವಿರುದ್ದ ಅಪಸ್ವರ ಎತ್ತಿದ್ದಲ್ಲದೆ, ದೇಶದ 79 ಕಡೆ ಪ್ರತಿಭಟನೆಯನ್ನು ಸಹ ಮಾಡಿದ್ದರು. ಹಿಂದೆ ಬುದ್ದ, ಬಸವಣ್ಣನ ಕಾಲದಲ್ಲಿ ಸೋಲುಂಡವರು, ಪುನಃ ಸಂವಿಧಾನದ ಮೂಲಕ ನಿಯಂತ್ರಣದಲ್ಲಿದ್ದಾರೆ. ಒಂದು ವೇಳೆ ಇದರಲ್ಲಿ ಸಂವಿಧಾನ ಸೋತರೆ ಈ ದೇಶದ ಸಮಸ್ತ ಶೋಷಿತ ಸಮುದಾಯಗಳ, ಮೇಲ್ಜಾತಿ ಮಹಿಳೆಯರೂ ಒಳಗೊಂಡಂತೆ ಎಲ್ಲಾ ಮಹಿಳೆಯರ ಸೋಲಾಗುತ್ತದೆ. ಸ್ವಾತಂತ್ರ್ಯ, ಸಮಾನತೆಯ ಸೋಲಾಗುತ್ತದೆ. ಸಂವಿಧಾನವನ್ನು ಉಳಿಸಿ-ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.


