‘ಅಲ್ಲ ಮಾರಾಯ, ನಿನ್ ಸೊಂಟಕ ಉಡದಾರವಿಲ್ಲ, ಕಿವಿಗೆ ತೂತಿಲ್ಲ. ಜಾಸ್ತಿ ಹೊರಗ ಓಡಾಡಬೇಡಲೇಪ…’ ಹುಬ್ಬಳ್ಳಿ-ಧಾರವಾಡದಲ್ಲಿ ಆಗಾಗ ನಡೆಯುತ್ತಿದ್ದ ಕೋಮು ಗಲಭೆ ಅಥವಾ ಮಾತಿನ ತಿಕ್ಕಾಟಗಳ ಹಿನ್ನೆಲೆಯಲ್ಲಿ ಹಿರಿಯ ಮಿತ್ರ ಫಕ್ರುದ್ದೀನ್ 90ರ ದಶಕದ ಆರಂಭದಲ್ಲಿ ಹೇಳಿದ್ದ ಮಾತಿದು.
2002ರಲ್ಲಿ ಗುಜರಾತಿನ ಹತ್ಯಾಕಾಂಡ ನಡೆದಾಗ ಮತ್ತೆ ಫಕ್ರುದ್ದೀನ್ ಹೇಳಿದ್ದು ನೆನಪಾಗಿತು.
2014ರ ನಂತರ ಹೆಚ್ಚಿದ ಧ್ರುವೀಕರಣ ನೋಡಿದಾಗಲೂ ಫಕ್ರುದ್ದೀನ್ ನೆನಪಾದ.
ಮೊನ್ನೆ ಈದ್ ಮತ್ತು ಬಸವ ಜಯಂತಿ ಒಟ್ಟಾಗಿ ಬಂದಾಗ ಮತ್ತೆ ಗಜೇಂದ್ರಗಡದ ಫಕ್ರುದ್ದೀನ್ ನೆನಪಾದ.
****
ಆತ ಹೇಳಿದ್ದು ನನಗೆ ಹಲವು ಸಲ ಅನುಭವಕ್ಕೆ ಬಂದಿದೆ. 2018ರ ಸುಮಾರಿಗೆ ಹುಬ್ಬಳ್ಳಿಯಿಂದ ಬೆಂಗಳೂರು ಪ್ಯಾಸೆಂಜರ್ ರೈಲನ್ನು ನಾನು ಮತ್ತು ಮಿತ್ರ ಹತ್ತಿದ್ದೆವು. ಎದುರಿನ ಸೀಟಿನಲ್ಲಿ ಐವರು ಯುವಕರು. ನಾನು ಮತ್ತು ನನ್ನ ಮಿತ್ರನ ಸಂಭಾಷಣೆಯ ಮಧ್ಯೆ ಪ್ರವೇಶಿಸಿದ ಆ ಯುವಕರು, ಮೋದಿಯವರನ್ನು ಟೀಕಿಸೋದು ತಪ್ಪು ಎಂದರು. ಅನ್ನಭಾಗ್ಯ ವೇಸ್ಟ್ ಎಂದರು. ಇಂಜಿನಿಯರಿಂಗ್ ಓದುತ್ತಿದ್ದ ಅವರು, ಬೆಂಗಳೂರಿನ ಅಷ್ಟೇನೂ ಹೆಸರಿಲ್ಲದ ಕನ್ಸಲ್ಟೆನ್ಸಿ ಕಂಪನಿಯೊಂದರಿಂದ ಪ್ರಾಜೆಕ್ಟ್ ‘ಪಡೆಯಲು’ (ಈಗಾಗಲೇ ಹಿಂದಿನ ವಿದ್ಯಾರ್ಥಿಗಳ್ಯಾರೋ ಮಾಡಿದ ಪ್ರಾಜೆಕ್ಟ್ ಥೀಮ್ ಅನ್ನು ಮಾರುವುದೂ ಒಂದು ದಂಧೆ!) ಹೊರಟಿದ್ದಾಗಿ ಗೊತ್ತಾಗಿತು. ಆಗಲೇ ಅವರದು ಆತ್ಮನಿರ್ಭರ! ರಾಜಕೀಯ ವಿಷಯವಾಗಿ ಮಾತು ಬಂದಾಗ ಅವರು ನಮ್ಮ ಬಗ್ಗೆ ಕೊಂಚ ಸಿಟ್ಟಾದರು.
ರೈಲು ಹಾಗೇ ಸಾಗುತ್ತಲಿತ್ತು. ಮಿತ್ರ ಮನೆಯಿಂದ ತಂದಿದ್ದ ಚಿಕನ್ ಮಸಾಲಾ, ರೊಟ್ಟಿಗಳಿದ್ದ ಬಾಕ್ಸ್ ತೆಗೆದ. ನಾವು ಊಟ ಮಾಡಲು ಆರಂಭಿಸಿದಾಗ, ಎದುರಿಗಿದ್ದ ಆ ಹುಡುಗರ ಪೈಕಿ ಒಬ್ಬ, ಇಲ್ಲೆಲ್ಲ ನಾನ್‌ವೆಜ್ ತರ‍್ತೀರಲ್ರೀ ಎಂದು ಜೋರಾಗಿ ಕೇಳಿದ. ‘ನಮ್ಮ ಊಟ ನಮ್ಮದು, ಇದು ಚಿಕನ್ ಅಥವಾ ಬೀಫ್ ಇದ್ದರೂ ಅದನ್ನು ಇಲ್ಲೇ ತಿನ್ನುತ್ತೇವೆ’ ಎಂದೆ.
‘ಮಲ್ಲಿಯಣ್ಣ, ಹೋಗಲಿ ಬಿಡು’ ಎಂದು ಮಿತ್ರ ಹೇಳಿದಾಗ, ಅವರಿಗೆ ಮಲೀಕ್ ಅಣ್ಣ ಎಂದು ಅನಿಸಿತೇನೋ? ಅದರಲ್ಲಿ ಒಬ್ಬ ‘ಕಿವಿಗೇ ತೂತೇ ಇಲ್ಲ ನೋಡಪ್ಪಾ. ರೈಲಿಗೂ ಬೀಫ್ ತಂದರು’ ಎಂದು ತಮ್ಮಲ್ಲೇ ಹೇಳಿಕೊಂಡ.
ಅರೆ ಇವನಾ, ನನ್ನ ಕಿವಿಗೆ ತೂತಿಲ್ಲ ಎಂಬುದನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾನಲ್ಲ ಎಂದುಕೊಂಡು, ಆ ಯುವಕನಿಗೆ ನೀವು ತುಂಬ ಸೂಕ್ಷ್ಮವಾಗಿ ಗಮನಿಸುತ್ತೀರಿ. ಫೈನಲ್ ಸೆಮಿಸ್ಟರ್‌ಗಾಗಿ ಪ್ರಾಜೆಕ್ಟ್ ‘ತರಲು’ ಬೆಂಗಳೂರಿಗೂ ಹೋಗುವ ಅಗತ್ಯ ಇರಲಿಲ್ಲ’ ಎಂದ ಕೂಡಲೇ ಗಲಾಟೆ ಶುರು ಮಾಡಿದರು.
‘ದೇಶದ್ರೋಹಿಗಳು’ ಅಂತೆಲ್ಲ ಬಾಯಿ ಮಾಡಿ, ನೆರೆದ ಪ್ಯಾಸೆಂಜರ್‌ಗಳ ಮುಂದೆ, ‘ದನದ ಮಾಂಸ ತಿಂತಾರೆ. ಮೋದಿಯವರನ್ನು ಬೈತಾರೆ’ ಎಂದು ಅರೆಬರೆ ಸತ್ಯ ಹೇಳಿದರು. ನಮ್ಮ ಪಕ್ಕದಲ್ಲೇ ಕುಳಿತ ಹಿರಿಯ ರೈತರೊಬ್ಬರು ಆ ಯುವಕರಿಗೆ ದಬಾಯಿಸುತ್ತ, ‘ಅವರೇನು ತಿಂತಾ ಇದ್ದಾರೋ ಅದೆಲ್ಲ ನಿಮಗೇಕೆ? ಅವರು ಮೋದಿ ಟೀಕಿಸಿದರೆ ನಿಮಗೇನು?’ ಎಂದ ನಂತರ ಇತರ ಪ್ಯಾಸೆಂಜರ್ ಕೆಲವರು ನಮ್ಮ ಪರ ನಿಂತರು. ದಾವಣಗೆರೆಯಲ್ಲಿ ಈ ಹುಡುಗರು ಇಳಿದು ಬೇರೆ ಡಬ್ಬಿ (ಬೋಗಿ) ಹತ್ತಿದರು.
ಫಕ್ರುದೀನ್ ಹೇಳಿದ್ದು ಮತ್ತೆ ನೆನಪಾಗಿತು.
ಉತ್ತರಪ್ರದೇಶದ ರೈಲಿನಲ್ಲಿ ಬೀಫ್ ಒಯ್ಯುತ್ತಿದ್ದಾರೆ ಎಂದು ಒಬ್ಬ ಮುಸ್ಲಿಂ ಬಾಲಕನನ್ನು ಕೊಂದರಲ್ಲವೇ? ಮನೆಯ ಫ್ರೀಜ್‌ನಲ್ಲಿ ಬೀಫ್ ಇದೆ ಎಂದು ವೃದ್ಧ ಮುಸ್ಲಿಮ ಒಬ್ಬರನ್ನು ಕೊಂದರಲ್ಲವೇ? ಪಟ್ಟಿ ಮಾಡುತ್ತ ಹೋದರೆ… ಈಗ ನೋಡಿ, ಕೋವಿಡ್ ಶವಗಳ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡುತ್ತಿರುವವರು ಅದೇ ಮುಸ್ಲಿಮರು ಅಥವಾ ಸಾಬಿಗಳು!
***
ನಾಸ್ತಿಕನಾಗಿದ್ದ ನಮ್ಮಪ್ಪ ಮೂವರು ಗಂಡು ಮಕ್ಕಳ ಕಿವಿಗಳಿಗೆ ತೂತು (ಹೋಲ್ಸ್) ಹಾಕಿಸಲಿಲ್ಲ. ಹೆಣ್ಣುಮಕ್ಕಳಿಗೆ ಹಾಕುವುದನ್ನು ತಡೆಯಲಾಗಲಿಲ್ಲ. ನಮ್ಮ ಅಕ್ಕಂದಿರ ಮದುವೆ ಸಂದರ್ಭದಲ್ಲಿ ಅಪ್ಪ ಟ್ರಂಕ್‌ನಲ್ಲಿ ಇಟ್ಟ ಗುಂಡಗಡಿಗೆಯನ್ನು (ಇಷ್ಟಲಿಂಗ) ಹೊರ ತೆಗೆದು ಒಂದೆರಡು ದಿನ ಧರಿಸುತ್ತಿದ್ದ.
ದಿನವೂ ಲಿಂಗಪೂಜೆ ಮಾಡುತ್ತಿದ್ದ ನಮ್ಮವ್ವ, ಎರಡು ದಿನಕ್ಕೆ ಇದೆಲ್ಲ ಬೇಕಾ ಎಂಬಂತೆ ಅಪ್ಪನನ್ನು ಕಾಡಿಸುತ್ತಿದ್ದಳು. ಇಲ್ಲಿವರೆಗೂ ಶಿವದಾರವನ್ನೇ ಹಾಕದ ನಾನು ನಾಲ್ಕನೇ ಕ್ಲಾಸಿಗೆ ಉಡದಾರ ಕಿತ್ತು ಹಾಕಿದ್ದೆ. ಅದೇನೋ, ವಿಭೂತಿ ಟೀಚರ್ ಬೋಧನೆಯ ಪ್ರಭಾವವೋ?
ರೈಲಿನಲ್ಲಿ ಆದಂತೆ ಹಲವು ಸಲ ನನ್ನನ್ನು ಮುಸ್ಲಿಂ ಎಂದು ಭಾವಿಸಿ ಜಗಳಕ್ಕೆ ಬಿದ್ದ ಹಲವು ಪ್ರಸಂಗಗಳಿವೆ. ಸಮಸ್ಯೆ ಅದಲ್ಲ, ನಿಜವಾಗಿಯೂ ಮುಸ್ಲಿಂ ಆಗಿದ್ದು, ಅವರ ವಾದಗಳಿಗೆ ಅಡ್ಡ ಮಾಡದಿದ್ದರೆ ಸಮಸ್ಯೆ ಇಲ್ಲ. ಆದರೆ, ಮುಸ್ಲಿಮ ಎಂದು ನಮ್ಮನ್ನು ಭಾವಿಸಿದಾಗ, ಅವರ ವಿರುದ್ಧವಾಗಿ ವಾದ ಮಂಡಿಸಿದರೆ, ನಂತರದಲ್ಲಿ ಮುಸ್ಲಿಂ ಅಲ್ಲ ಅಂತ ಗೊತ್ತಾದಾಗಲೂ, ಅವರ ಕೋಪ ಕಡಿಮೆ ಆಗುವುದಿಲ್ಲ! ಇದರರ್ಥ ಅಲ್ಪಸಂಖ್ಯಾತರಷ್ಟೇ ಅಲ್ಲ, ಸೆಕ್ಯುಲರ್‌ಗಳೂ ಸಾಮಾನ್ಯ ಬಿಜೆಪಿ ಬೆಂಬಲಿಗರ ಲಿಸ್ಟಿಗೆ ಸೇರಿಸಲ್ಪಟ್ಟಿದ್ದಾರೆ! ಪನ್ಸಾರೆ, ದಾಬೋಲ್ಕರ್, ಸೆಕ್ಯುಲರ್ ಲಿಂಗಾಯತರೇ ಆದ ಕಲಬುರ್ಗಿ ಸರ್, ಗೌರಿ ಮೇಡಂ ಅವರ ಹತ್ಯೆಗಳ ಹಿಂದೆ ಇಂತಹ ಮನಸ್ಥಿತಿ ಕೆಲಸ ಮಾಡುತ್ತಿದೆ.
ಧಾರವಾಡದಲ್ಲಿ ಓದುವಾಗ ಲಂಕೇಶ್ ಪತ್ರಿಕೆ ಕಣ್ಣಾಮುಚ್ಚಾಲೆ ಪ್ರಶ್ನೆಗೆ ಬಹುಮಾನ ಬಂದಿದ್ದನ್ನು ಮನೆಯಲ್ಲಿ ಹೇಳುವಾಗ, ಅಪ್ಪ ಖುಷಿಪಡುತ್ತಲೇ, ಹಾಗೆಲ್ಲ ನೀನು ಮಾಡಿದರೆ ನಿನಗೆ ಅಲ್ಲಿ ಕೆಲವರು ತೊಂದರೆ ಕೊಡಬಹುದು ಎಂದಿದ್ದ. ಫಕ್ರುದ್ದೀನ್ ಕೂಡ ಅದೇ ರೀತಿಯಲ್ಲಿ ಹೇಳಿದ್ದನಲ್ಲವೇ? ಅಪ್ಪ, ಫಕ್ರುದ್ದೀನ್ ಅಂದಾಜು ಮಾಡಿದ್ದು ಈಗ ನಮ್ಮ ನಡುವೆ ಸಂಭವಿಸುತ್ತಿದೆ.
ಉತ್ತರ ಕರ್ನಾಟಕದ ಸೌಹಾರ್ದತೆ…
ನಾನು ಹತ್ತನೇ ತರಗತಿವರೆಗೆ ಓದಿದ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಆಗ ಅಲೈ ಹಬ್ಬ ಎಲ್ಲರ ಹಬ್ಬವಾಗಿತ್ತು. ಈಗಲೂ ಕೂಡ ಹಾಗೆಯೇ ಇದೆ ಆದರೂ, ಒಂದಿಷ್ಟು ಹಿನ್ನಡೆಯಾಗಿದೆ. ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಅನೋನ್ಯವಾಗಿದ್ದಾರೆ.
‘ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮುಸ್ಲಿಮರು ಮತ್ತು ಲಿಂಗಾಯತರ ಕೇರಿಗಳು ಅಥವಾ ಓಣಿಗಳು ಹತ್ತಿಕೊಂಡೇ ಇವೆ. ಅಲ್ಲಿನ ಮುಸ್ಲಿಮರು ಕೂಡ ಕೃಷಿಕರೇ ಆಗಿರುವ ಕಾರಣ ಅಲ್ಲಿ ಲಿಂಗಾಯತರು ಮತ್ತು ಮುಸ್ಲಿಮರ ನಡುವೆ ಕೊಡಕೊಳ್ಳುವ ಸನ್ನಿವೇಶವಿದೆ. ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಹಬ್ಬಗಳನ್ನು ಲಿಂಗಾಯತರೇ ಮುಂದೆ ನಿಂತು ಮಾಡುತ್ತಾರೆ. ಆದರೆ, ದಲಿತರ ಕೇರಿಗಳು ಮಾತ್ರ ಊರ ಹೊರಗಿರುವ ಅಸಮಾನತೆ ಇನ್ನೂ ಮುಂದುವರೆದಿದೆ’ ಎಂದು ಸಂಸ್ಕೃತಿ ಚಿಂತಕ ರಹಮತ್ ತರಿಕೆರೆ ಒಮ್ಮೆ ಹೇಳಿದ್ದರು.
ಅಲೈ ದೇವರ ಕುರಿತೇ ನಾಟಕ ಬರೆದ ಮಿತ್ರ ಹನುಮಂತ ಹಾಲಿಗೇರಿ, ‘ನಮ್ಮ ತುಳಸಿಗೆರೆ (ಬಾಗಲಕೋಟೆ ತಾಲೂಕು) ಗ್ರಾಮವೇನೂ ಅಲ್ಲ. ಅಲ್ಲಿ ಈಗಲೂ ಭೂಮಾಲೀಕ ಲಿಂಗಾಯತ ರೆಡ್ಡಿಗಳು ಅಲೈ ಹಬ್ಬದ ನೇತೃತ್ವ ವಹಿಸುತ್ತಾರೆ. ಊರಿಗೆಲ್ಲ ಪ್ರಸಾದ ಹಂಚುತ್ತಾರೆ. ಬೇರೆ ವಿಷಯಗಳಲ್ಲಿ ಈ ಭೂಮಾಲೀಕರು ತಮ್ಮ ಹಳೆಯ ‘ಶ್ರೇಷ್ಠತೆ’ಯ ಗುಂಗಿನಲ್ಲಿ ಇದ್ದರೂ ಕೂಡ ಅವರು ಮುಸ್ಲಿಮರ ಹಬ್ಬಗಳನ್ನು ತಮ್ಮ ಹಬ್ಬಗಳಂತೆ ಆಚರಿಸುತ್ತಾರೆ’ ಎಂದು ಹೇಳುತ್ತಾರೆ.
‘ದಲಿತರು ಮಾಂಸಾಹಾರಿಗಳು, ಮುಸ್ಲಿಮರೂ ಮಾಂಸಾಹಾರಿಗಳು. ಆದರೆ ಸಸ್ಯಾಹಾರಿಗಳಾದ ಗ್ರಾಮೀಣ ಲಿಂಗಾಯತರು ದಲಿತರ ಜೊತೆ ಅಷ್ಟಾಗಿ ಸಮಾನತೆಯ ನಡವಳಿಕೆ ತೋರುತ್ತಿಲ್ಲ. ಈ ಸಂರಚನೆಯೇ (ಸ್ಟ್ರಕ್ಚರ್) ನನ್ನಲ್ಲಿ ಆಶ್ಚರ್ಯ ಮೂಡಿಸುತ್ತಿದೆ’ ಎನ್ನುವ ರಹಮತ್ ಸರ್, ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಿರುವ ಗ್ರಾಮೀಣ ಭಾಗಗಳಲ್ಲಿ ಹಲವಾರು ಮುಸ್ಲಿಮರು ಮಾಂಸಾಹಾರವನ್ನು ತ್ಯಜಿಸಿದ್ದಾರೆ ಅಥವಾ ಅದನ್ನು ಕದ್ದುಮುಚ್ಚಿ ತಿನ್ನುತ್ತಾರೆ, ಬಹಿರಂಗ ಮಾಡುವುದಿಲ್ಲ. ಕೆಲವು ಮುಸ್ಲಿಮರು ಲಿಂಗಾಯತಿಕರಣಗೊಂಡಿದ್ದಾರೆ. ಹೀಗಾಗಿ ಇಲ್ಲಿ ಮಠಗಳು ಮತ್ತು ದರ್ಗಾಗಳಲ್ಲಿ ಇಬ್ಬರನ್ನೂ ಕಾಣಬಹುದು’ ಎನ್ನುತ್ತಾರೆ.
‘ಗುರು ಖಾದ್ರಿ ಪೀರ ಎನ್ನುವ ಸಂತರೊಬ್ಬರು, ಬಸವಣ್ಣನನ್ನು ಹೊಗಳಿ ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವರು ಶಂಕರಾಚರ್ಯರನ್ನೋ ಅಥವಾ ಇನ್ನಾರನ್ನೋ ಕುರಿತು ಬರೆಯಲಿಲ್ಲ. ಅನೇಕ ಮುಸ್ಲಿಂ ಗುರುಗಳು, ಸೂಫಿಗಳು ಲಿಂಗಾಯತ ಧರ್ಮದೊಂದಿಗೆ ಆಧ್ಯಾತ್ಮಿಕ ನೆಲೆಯಲ್ಲಿ ಸಂವಾದ ಮಾಡಿದ್ದಾರೆ. ಎರಡರಲ್ಲೂ ಕೊಡುಕೊಳ್ಳುವಿಕೆ ಇದೆ. ಸಾವಳಗಿಯ ಶಿವಲಿಂಗ ಮತ್ತು ಕಲಬುರ್ಗಿಯ ಬಂದೇನವಾಜ್ ಇವರ ತತ್ವಗಳ ಅಂತಿಮ ಸಂದೇಶ ಮಾನವತೆಯೇ ಆಗಿದೆ’ ಎನ್ನುತ್ತಾರೆ.
ನಮ್ಮೂರಲ್ಲಿ (ಗದಗ ಜಿಲ್ಲೆ ತೋಟಗಂಟಿ) ಇರುವುದು ನಾಲ್ಕೇ ಮುಸ್ಲಿಂ ಕುಟುಂಬಗಳು. ಮುಸ್ಲಿಮರ ಹಬ್ಬದಲ್ಲಿ ಇಲ್ಲಿರುವ ಪುಟ್ಟ ಮಸೀದಿ ಎದುರು ಕುಣಿ (ಗುಂಡಿ) ತೆಗೆಯುವುದು ನಾವೇ. ಅಲ್ಲಿ ನಮ್ಮ ಮಕ್ಕಳೆಲ್ಲ ತಮಗೆ ತೋಚಿದಂತೆ, ‘ಅಲೈ ಭಲೇ’ ಎಂದು ಆ ಕುಣಿಯ ಸುತ್ತು ಕುಣಿಯುತ್ತವೆ. ನಮ್ಮ ಮನೆಗೆ ದಿನವೂ ಹಾಲು ಕೊಡುವ ಜಂತೆವ್ವ ನಮ್ಮ ಮನೆಯ ಸದಸ್ಯರಂತೆಯೇ ಭಾಸವಾಗುತ್ತಾರೆ. ನಮ್ಮ ಹೊಲದ ಪಕ್ಕದಲ್ಲೇ ಹೊಲ ಹೊಂದಿರುವ ರಫೀಕ್ ನನ್ನ ಜೊತೆಗೆ ಮಾತನಾಡುತ್ತ, ನಗರಗಳಲ್ಲಿ ಹರಡುತ್ತಿರುವ ಧ್ರುವೀಕರಣದ ಬಗ್ಗೆ ಕಳವಳಗೊಳ್ಳುತ್ತಾನೆ. ಬಿರಿಬಿರಿ ಬಿಸಲಿನಲ್ಲಿ ನಾವು ಕೆರೆ ದಿಬ್ಬದ ಮೇಲೆ ಇಂತಹ ಚರ್ಚೆ ಮಾಡುತ್ತೇವೆ. ಇಬ್ಬರ ಕಿವಿಗಳಿಗೂ ತೂತಿಲ್ಲ, ಸೊಂಟಕೆ ಉಡದಾರವಿಲ್ಲ. ರಫೀಕ್‌ನದೂ ಸುಂತಿಯೇ ಆಗಿಲ್ಲ, ನನ್ನಂತೆ!
ನಮ್ಮ ರೋಣ ತಾಲೂಕಿನ ಬಸವ ಪರಂಪರೆ ಮಠವೊಂದಕ್ಕೆ ಕಳೆದ ವರ್ಷ ಮುಸ್ಲಿಮರೊಬ್ಬರನ್ನು ಮಠಾಧೀಶರನ್ನಾಗಿ ನೇಮಿಸಲಾಗಿತು. ಕಲಬುರ್ಗಿಯ ಜೇವರ್ಗಿಯಲ್ಲೂ ಲಿಂಗಾಯತ ಮಠವೊಂದಕ್ಕೆ ಮುಸ್ಲಿಂರೊಬ್ಬರನ್ನು ನೇಮಿಸಲಾಗಿದೆ.
ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ, ಹೈದರಾಬಾದ್ ಕರ್ನಾಟಕದಲ್ಲಿ ಈಗಲೂ ಲಿಂಗಾಯತರು ಮತ್ತು ಮುಸ್ಲಿಮರ ನಡುವಿನ ಅನೋನ್ಯತೆ ಹಾಗೇ ಇದೆ.
ಏಕ ದೇವೋಪಾಸನೆ ಎಂಬ ಸಾಮ್ಯತೆ
ನೈಜ ಇಸ್ಲಾಂ ಮತ್ತು ನೈಜ ಲಿಂಗಾಯತದಲ್ಲಿ (ಬಸವಣ್ಣ ಸ್ಥಾಪಿಸಿದ್ದು) ಎರಡರಲ್ಲು ಏಕ ದೇವೋಪಾಸನೆ ಇದೆ. ಇಲ್ಲಿ ದೇವರು ನಿರಾಕಾರ’ ಎಂದು ರಹಮತ್ ತರಿಕೆರೆ ಗುರುತಿಸುತ್ತಾರೆ.
ಗದಗಿನ ಮುಸ್ಲಿಂ ಪತ್ರಕರ್ತರೊಬ್ಬರು, ‘ನಾವು ಪ್ರಾರ್ಥನೆ ಮಾಡಾದು, ನೀವ್ ಪೂಜೆ ಮಾಡಾದು ಎಲ್ಲ ಒಂದೇರಿ. ನಿರಾಕಾರ ದೇವರು. ಅಂತಿಮದಲ್ಲಿ ಇಬ್ಬರೂ ಹೂಳುತ್ತೇವೆ. ಲಿಂಗಾಯತರು ಮತ್ತು ಮುಸ್ಲಿಮರು ಅಂತಿಮ ಸಂಸ್ಕಾರ ಗೌರವಪೂರ್ವಕವಾಗಿ ಇರಬೇಕು ಎಂದು ಬಯಸುತ್ತಾರೆ’ ಎಂದು ಹೇಳಿದರು.
ತೋಂಟದಾರ್ಯರ ಸೇವೆ ಅನುಪಮ
‘ಆಧ್ಯಾತ್ಮಿಕ ಕಾರಣಕ್ಕೆ, ಕೃಷಿ ಕೊಡಕೊಳ್ಳುವಿಕೆ ಕಾರಣಕ್ಕೆ, ಗುರು-ಶಿಷ್ಯ ಪರಂಪರೆ ಕಾರಣಕ್ಕೆ ಅನೋನ್ಯರಾಗಿದ್ದ ಉತ್ತರ ಕರ್ನಾಟಕದ ಲಿಂಗಾಯತರು ಮತ್ತು ಮುಸ್ಲಿಮರಲ್ಲಿ ಒಂದು ಸಣ್ಣ ಬಿರುಕು ಉಂಟಾಗುವಂತೆ ಮಾಡಿದ್ದು, ಕೆಲವು ಲಿಂಗಾಯತ ರಾಜಕಾರಣಿಗಳು ತಮ್ಮ ಲಿಂಗಾಯತದ ಮೂಲ ಆಶಯವನ್ನೇ ವಿನಾಶ ಮಾಡುವ ಪಕ್ಷದ ಹಿಂದೆ ಬಿದ್ದಿದ್ದು… ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿ, ಇಳಕಲ್ಲಿನ ಮಹಾಂತ ಸ್ವಾಮಿಗಳು ಈ ಬಿರುಕನ್ನು ಸರಿದೂಗಿಸಲು ದಿಟ್ಟ ನಿಲುವುಗಳ ಮೂಲಕ ಕೆಲಸ ಮಾಡಿದರು. ಈಗ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಅವರು ಕೂಡ ಈ ಕೆಲಸ ಮಾಡುತ್ತಿದ್ದಾರೆ.
– ಪ್ರೊ. ರಹಮತ್ ತರಿಕೆರೆ
‘ನಮ್ಮ ಪರಂಪರೆಯಲ್ಲೇ ಸೂಫಿ ಮತ್ತು ಲಿಂಗ ಪರಂಪರೆ ಒಂದಕ್ಕೊಂದು ಪೂರಕವಾಗಿಯೇ ಜನಹಿತ, ಸಮಾನತೆ ಸಾರಿವೆ. 90ರ ದಶಕದ ನಂತರ ಪಟ್ಟಣಗಳ ‘ಎಲೈಟ್’ ಲಿಂಗಾಯತರು ಕೋಮುವಾದಿ ಪಕ್ಷದ ಆರಾಧಕರಾದ ನಂತರ ಒಂದಿಷ್ಟು ಬಿರುಕನ್ನು ಸೃಷ್ಟಿಸುವ ಕೆಲಸ ನಡೆದಿದೆ’ ಎಂದು ಬರಹಗಾರ ಪೀರ್‌ಬಾಷಾ ಹೇಳುತ್ತಾರೆ.
ಉಗ್ರ ರಾಷ್ಟ್ರವಾದದ ಹೆಸರಲ್ಲಿ 90ರ ದಶಕದಲ್ಲಿ ದಾಳಿಯಿಟ್ಟ ರಾಜಕೀಯ ಇಲ್ಲಿ ಸಣ್ಣಗೆ ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟಲು ನೋಡುತ್ತಿದೆ.
ಸದ್ಯಕ್ಕೆ ಕೊರೊನಾ ವೈರಸ್ ಇವರ ಸೊಕ್ಕನ್ನು ಮುರಿಯುತ್ತಿದೆಯೇ?
‘ಕಿವಿಗೆ ತೂತಿಲ್ಲ, ಸೊಂಟಕೆ ಉಡದಾರವಿಲ್ಲ. ನಾನು ಮನುಷ್ಯನಷ್ಟೇ’ ಎಂದು ಹೇಳಬೇಕಾದ ಸಂದರ್ಭವಿದು. ಅನಿಕೇತನರಾಗೋಣ…..
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಪ್ರತ್ಯೇಕ ಅಸ್ತಿತ್ವ ಬಯಸುವ ‘ಆದಿ ಧರ್ಮ’: ಡಾ. ಎ ಎಸ್ ಪ್ರಭಾಕರ



ನಿಜ ಸರ್ ಇವತ್ತಿಗೂ ಹೈದರಬಾದ ಕರ್ನಾಕದಲ್ಲಿ ಈ ಸಾಮರಸ್ಯ ಇದೆ.