2020ರ ನವೆಂಬರ್ 11ರಂದು ಜಾರ್ಖಂಡ್ ವಿಧಾನಸಭೆಯಲ್ಲಿ ಆ ರಾಜ್ಯದ ಆದಿವಾಸಿಗಳ ‘ಸರ್ಣ’ ಧರ್ಮಕ್ಕೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಲು ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ವಿಧಾನಸಭೆಯ ಈ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ, 2021ರಲ್ಲಿ ನಡೆಯುವ ಜನಗಣತಿಯ ಕಾಲಂನಲ್ಲಿ ಜಾರ್ಖಂಡ್ ಆದಿವಾಸಿಗಳ ಈ ‘ಸರ್ಣ’ ಧರ್ಮಕ್ಕೆ ಪ್ರತ್ಯೇಕ ಕೋಡ್ ಕೊಡಬೇಕೆಂದು ಜಾರ್ಖಂಡ್ ಸರಕಾರ ಆಗ್ರಹಿಸಿದೆ. ಹಲವು ದಶಕಗಳಿಂದ ಜಾರ್ಖಂಡ್‌ನ ಆದಿವಾಸಿಗಳು ತಮ್ಮನ್ನು ಪ್ರತ್ಯೇಕ ಧಾರ್ಮಿಕ ಸಮುದಾಯವಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದರು. ಈ ಬೇಡಿಕೆಯ ಈಡೇರಿಕೆಗೆ ಜಾರ್ಖಂಡ್ ಸರಕಾರವು ಈಗ ವಿದ್ಯುಕ್ತ ಚಾಲನೆಯನ್ನು ನೀಡಿದೆ.

2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆದಿವಾಸಿಗಳ ಸರ್ಣ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಮತ್ತು 2021ರಲ್ಲಿ ನಡೆಯಲಿರುವ ಜನಗಣತಿಯಲ್ಲಿ ಈ ಧರ್ಮಕ್ಕೆ ಪ್ರತ್ಯೇಕ ಕೋಡ್ ನೀಡುವ ಭರವಸೆಯನ್ನು ನೀಡಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೋತು, ಕಾಂಗ್ರೆಸ್ ನೇತೃತ್ವದ ಯುಪಿಎ ಗೆದ್ದಿತ್ತು. ಜಾರ್ಖಂಡ್ ಮುಕ್ತಿ ಮೋರ್ಚ್ ಪಕ್ಷದ ನೇತೃತ್ವದಲ್ಲಿ ಸರಕಾರ ರಚನೆಯಾದ ನಂತರ ಸರ್ಣ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಚುನಾವಣೆಯಲ್ಲಿ ತಾನು ಕೊಟ್ಟ ಭರವಸೆಯನ್ನೇ ಮರೆತು, ವಿಧಾನಸಭೆ ತೆಗೆದುಕೊಂಡ ಈ ನಿರ್ಣಯವನ್ನು ಬಿಜೆಪಿ ಪಕ್ಷ ವಿರೋಧಿಸುತ್ತಿದೆ.

ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ, ಸರಕಾರದ ಈ ನಿರ್ಧಾರವನ್ನು ‘ಹಿಂದು ಸಮಾಜವನ್ನು ಒಡೆಯುವ ಹುನ್ನಾರ’ ಎಂದು ಕರೆದಿದ್ದಾರೆ. ಆದರೆ ಜಾರ್ಖಂಡ್‌ನ ಆದಿವಾಸಿಗಳು ಮತ್ತು ಪ್ರತ್ಯೇಕ ಧರ್ಮದ ಹೋರಾಟದಲ್ಲಿ ದಶಕಗಳಿಂದ ತೊಡಗಿದ್ದ ಆದಿವಾಸಿ ಆಕ್ಟಿವಿಸ್ಟ್‌ಗಳು, ಮಾನವಶಾಸ್ತ್ರಜ್ಞರು ಮತ್ತು ಚರಿತ್ರೆಕಾರರು ಸರಕಾರದ ಈ ನಿಲುವನ್ನು ಸ್ವಾಗತಿಸಿದ್ದಾರೆ. ಯಾವ ಸಾಂಸ್ಥಿಕ ಧರ್ಮದ ಚೌಕಟ್ಟಿಗೂ ಒಗ್ಗದ ಈ ಆದಿವಾಸಿಗಳು ನಿಸರ್ಗದ ಆರಾಧಕರು ಮತ್ತು ಸರ್ವಚೇತನವಾದಿಗಳು. ತಮ್ಮದೇ ಆದ ಆದಿಮ ಅಧ್ಯಾತ್ಮವನ್ನು ಬದುಕುತ್ತಾ ಬಂದ ಈ ಆದಿವಾಸಿಗಳು ತಮ್ಮನ್ನು ಸಾಂಸ್ಥಿಕ ಧರ್ಮದ ಆಚೆಗೆ ಗುರುತಿಸಬೇಕು ಎಂದು ಬಯಸುತ್ತಿದ್ದಾರೆ. ಬಹುತ್ವದ ಭಾರತ, ಎಲ್ಲರನ್ನೂ ಒಳಗೊಳ್ಳುವ ಭಾರತ ಎಂದು ಹೇಳುವ ಜನ ಇವರ ನ್ಯಾಯಬದ್ಧ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ. ಯಾಕಾಗಿ ಆದಿವಾಸಿಗಳು ಸಾಂಸ್ಥಿಕ ಧರ್ಮಗಳ ಕರ್ಮಠ ಚೌಕಟ್ಟಿಗೆ ಒಗ್ಗುವುದಿಲ್ಲ ಎಂಬುದಕ್ಕೆ ಇರುವ ಕಾರಣಗಳನ್ನು ನೋಡೋಣ.

ಆದಿವಾಸಿಗಳು ಸರ್ವಚೇತನವಾದಿಗಳು ಮತ್ತು ನಿಸರ್ಗಾರಾಧಕರು. ಆದಿವಾಸಿಗಳಲ್ಲಿ ಸಾಂಸ್ಥಿಕ ಸ್ವರೂಪದ ಧರ್ಮವಿಲ್ಲ, ಅನುಭವದ ಆಧಾರದಲ್ಲಿ ದಕ್ಕಿದ ಅಧ್ಯಾತ್ಮವಿದೆ. ಇದನ್ನೇ ‘ಆದಿಮ ಧರ್ಮ’ ಎನ್ನಲಾಗುತ್ತದೆ. ಅರಣ್ಯ ಮತ್ತು ತನ್ನ ಸುತ್ತಲ ಪರಿಸರದ ಜೊತೆಗಿನ ಇವರ ಸಹಬಾಳ್ವೆಯೇ ಆದಿವಾಸಿಗಳ ತಿಳಿವಳಿಕೆಯನ್ನು ಮತ್ತು ಅವರ ಬದುಕಿನ ತತ್ವವನ್ನು ರೂಪಿಸುತ್ತಾ ಬಂದಿದೆ. ಭಾರತದ ಸಾಮಾಜಿಕ ಸಂದರ್ಭದಲ್ಲಿ ಅರಣ್ಯ ಮತ್ತು ಸಮುದಾಯಗಳ ಸಂಬಂಧ ಅವಿಚ್ಫಿನ್ನವಾದದ್ದು. ಅರಣ್ಯಗಳು ಸ್ಥಳೀಯ ಸಮುದಾಯಗಳ ಬದುಕಿನ ಭಾಗವಾಗಿಯೇ ಪರಿಭಾವಿಸಲ್ಪಟ್ಟಿವೆ. ಈ ಸಮುದಾಯಗಳು, ಅರಣ್ಯಗಳನ್ನು ಕೇವಲ ಮಳೆ ಸುರಿಸುವ ಮತ್ತು ಹಸಿರಿನಿಂದ ಕಂಗೊಳಿಸಿ ಮನಸ್ಸಿಗೆ ಮುದ ನೀಡುವ ಭೂಭಾಗಗಳನ್ನಾಗಿ ಮಾತ್ರ ಪರಿಗಣಿಸಿರಲಿಲ್ಲ. ಸಮುದಾಯಗಳ ಸಂಸ್ಕೃತಿ ಮತ್ತು ಅಧ್ಯಾತ್ಮಿಕ ಜಗತ್ತನ್ನು ಅರಣ್ಯಗಳು ರೂಪಿಸುತ್ತಲೇ ಬಂದಿವೆ. ಈ ಕಾರಣದಿಂದಾಗಿ ಸಮುದಾಯಗಳು ಯಾವತ್ತೂ ಅರಣ್ಯವನ್ನು ಉಪಯೋಗವಾದಿ ದೃಷ್ಟಿಕೋನದಿಂದ ನೋಡುವ ಪರಿಪಾಠವನ್ನು ಬೆಳೆಸಿಕೊಂಡಿರಲಿಲ್ಲ.

PC :

ಅರಣ್ಯಗಳನ್ನು ರಕ್ಷಿಸುವ ವಿಪರೀತ ಕಾಯ್ದೆಗಳು ಬರುವವರೆಗೂ, ಅರಣ್ಯಗಳು ಸಮುದಾಯಗಳ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಜೊತೆಗೆ ಅರಣ್ಯವು ’ಆಸ್ತಿ’ ಎಂಬಂತೆ ಪರಿಗಣಿಸಲ್ಪಟ್ಟಿರಲಿಲ್ಲ. ಅರಣ್ಯವು ಅಧ್ಯಾತ್ಮವಾಗಿ, ತಿಳಿವಿನ ಮೂಲವಾಗಿ, ಮನುಷ್ಯನ ಯಾವತ್ತೂ ಸಂಗಾತಿಯಾಗಿ ಸಮುದಾಯಗಳ ಬದುಕಲ್ಲಿ ಹಾಸುಹೊಕ್ಕಾಗಿತ್ತು.ಆದಿವಾಸಿಗಳು ಅರಣ್ಯವನ್ನು ಉಪಭೋಗಕ್ಕೆ ಬಳಸಲಿಲ್ಲ. ಆದರೂ ಸಮುದಾಯಗಳ ಆರ್ಥಿಕತೆಯನ್ನು ರೂಪಿಸುವಲ್ಲಿ ಅರಣ್ಯ ಉಪಯುಕ್ತ ಪಾತ್ರ ವಹಿಸುತ್ತಲೇ ಬಂದಿದೆ. ಮನುಷ್ಯನ ಸಾಮಾಜಿಕ ಸಂಸ್ಥೆಗಳಾದ ಬೇಟೆ, ಪಶುಪಾಲನೆ ಮತ್ತು ಆದಿಮ ಕೃಷಿ ಹಂತಗಳಲ್ಲಿ ಅರಣ್ಯ ಬಳಕೆಯಾಗುತ್ತಾ ಬಂದಿದೆ. ಆದರೆ ಇಂದಿನಂತೆ ಖಿಲಗೊಳ್ಳುವ ಸ್ವರೂಪದಲ್ಲಿ ಬಳಕೆಯಾಗುತ್ತಿರಲಿಲ್ಲ. ಆದಿಮಾನವ ಅಥವಾ ಇಂದಿನ ಆದಿವಾಸಿಗಳು ರೂಢಿಸಿಕೊಂಡಿದ್ದ ಕುಮ್ರಿ ಬೇಸಾಯ ಪದ್ಧತಿಯು ಅರಣ್ಯದ ಸಾವಯವತೆಯನ್ನು ನಾಶ ಮಾಡುವಂತಹದ್ದಲ್ಲ. ಬದಲಿಗೆ ಅರಣ್ಯವನ್ನು ಮತ್ತು ಅದರ ಸಾವಯವತೆಯನ್ನು ಈ ಕುಮ್ರಿ ಕೃಷಿ ಪದ್ಧತಿಯು ಪೋಷಿಸುತ್ತಿತ್ತು.

ಈ ಕಾರಣದಿಂದ ಭಾರತದ ಸ್ಥಳೀಯ ಸಮುದಾಯಗಳಿಗೆ ಅರಣ್ಯವು ಭೋಗಿಸಲ್ಪಡುವ ಆಸ್ತಿಯಲ್ಲ. ಅರಣ್ಯ ಮತ್ತು ಅದರ ಪರಿಸರದ ಜೊತೆಗಿನ ಆದಿವಾಸಿಗಳ ಸಂಬಂಧ ಅದ್ವೈತದ ಸ್ವರೂಪದ್ದು. ಕರ್ನಾಟಕದಲ್ಲಿ ಸೋಲಿಗ, ಬೆಟ್ಟಕುರುಬ, ನಾಯಕ, ಎರವ, ಕುಣಬಿ, ಕುಮ್ರಿ ಮರಾಟಿ, ಮರಾಟಿ ನಾಯಕ, ಕೊರಗ, ಕುಡಿಯ, ಗೌಡಲು, ಹಸಲ ಮತ್ತು ಹಾಲಕ್ಕಿ ಒಕ್ಕಲಿಗರು ಈ ಕುಮ್ರಿ ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿದ್ದರು. ವಸಾಹತು ಆಡಳಿತದ ಸಂದರ್ಭದಲ್ಲಿ ಕುಮ್ರಿ ಬೇಸಾಯವನ್ನು ನಿಷೇಧಿಸಿ, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆದಿವಾಸಿಗಳ ಈ ಸಮೃದ್ಧ ಕಣಿವೆ ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಯಿತು. ವಸಾಹತು ಆಡಳಿತವು ಆದಿವಾಸಿಗಳನ್ನು ಕಾಡಿನಿಂದ ಹೊರಹಾಕಿತು. ಕೆಲವು ಆದಿವಾಸಿ ಪಂಗಡಗಳು ಕಿರುಕುಳ ತಾಳದೆ ಮತ್ತೆಮತ್ತೆ ದಟ್ಟ ಕಾಡೊಳಗೆ ನಡೆದು ಹೋಗಿ ಬದುಕತೊಡಗಿದವು.

ಈ ಆದಿವಾಸಿಗಳಿಗೆ ಅರಣ್ಯ ಕೇವಲ ಆಶ್ರಯದ ತಾಣವಾಗಿರಲಿಲ್ಲ. ಅರಣ್ಯವೇ ಅವರ ಬದುಕಾಗಿತ್ತು. ಅರಣ್ಯವೇ ಅವರ ಧ್ಯಾನವಾಗಿತ್ತು, ದೈವವಾಗಿತ್ತು. ಸೋಲಿಗರಲ್ಲಿ ಮರ ಕಡಿಯುವುದು ಒಂದು ಅಪರಾಧ. ಸೋಲಿಗರ ಪ್ರದೇಶದಲ್ಲಿ ಮರವೊಂದನ್ನು ಕಡಿದರೆ ತಮ್ಮದೆ ಮನೆಯ ಸದಸ್ಯನನ್ನು ಕಳೆದುಕೊಂಡಂತೆ ಸೋಲಿಗರು ಶೋಕಿಸುತ್ತಾರೆ. ಕಾಡು, ಗಿಡ ಮರ ಬಳ್ಳಿಗಳೇ ಇವರ ಸಹಚರಿಗಳು. ಸದಾ ಹಸಿರಾಗಿರುವ, ಎಲ್ಲವನ್ನೂ ನೀಡಿ ಆದಿವಾಸಿಗಳ ಬದುಕನ್ನು ರೂಪಿಸುವ ಕಾಡುಗಳೆ ಅವರ ಸರ್ವಸ್ವ. ಸೋಲಿಗರಿಗೆ ಬಿಳಿಗಿರಿರಂಗನಬೆಟ್ಟದ ತಪ್ಪಲಲ್ಲಿರುವ ದೊಡ್ಡಸಂಪಿಗೆ ಮರವೇ ಅವರಿಗೆ ದೈವವಾಗಿದೆ. ಜಾರ್ಖಂಡ್‌ನ ಆದಿವಾಸಿಗಳು ಸಹ ತಾವು ಬದುಕುವ ಪರಿಸರವನ್ನೇ ದೈವವೆಂದು ಪರಿಭಾವಿಸುತ್ತ ಬಂದಿದ್ದಾರೆ.

ಜಾರ್ಖಂಡ್‌ನ ಆದಿವಾಸಿಗಳು ತಮ್ಮ ಹಾಡಿಗಳ ಬದುವಿನಲ್ಲಿರುವ ಸಾಲ್ ಮರಗಳ ತೋಪನ್ನು ದೈವವೆಂದು ಪೂಜಿಸುತ್ತಾರೆ. ತಮ್ಮ ಹಾಡಿಗಳ ಪಕ್ಕದ ಏಕಶಿಲಾ ಬೆಟ್ಟವನ್ನೂ ದೈವವೆಂದು ಆರಾಧಿಸುತ್ತಾರೆ. ಇಲ್ಲಿನ ಸಂತಾಲರು ‘ಬುರು ಬೋಂಗ’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಸಂತಾಲಿ ಭಾಷೆಯಲ್ಲಿ ‘ಬುರು’ ಎಂದರೆ ಬೆಟ್ಟ. ‘ಬೋಂಗ’ ಎಂದರೆ ದೇವರು ಎಂದರ್ಥ. ಇಲ್ಲಿ ಬದುಕುವ ಸಂತಾಲ, ಮುಂಡಾ, ಹೋ, ಬೈಗಾ ಮತ್ತು ಕುರುಖ್ ಸಮುದಾಯಗಳು ತಮ್ಮ ಸುತ್ತಲ ಸಾಲ್ ಮರಗಳ ತೋಪನ್ನು ‘ಪವಿತ್ರ ಕಾಡು’ ಎಂದು, ಎದುರಿಗಿರುವ ಏಕಶಿಲಾ ಬೆಟ್ಟವೇ ತಮ್ಮ ದೈವವೆಂದು ಪರಿಗಣಿಸಿ ಆರಾಧಿಸುತ್ತ ಬಂದಿದ್ದಾರೆ. ಸಾಂಸ್ಥಿಕ, ಕರ್ಮಠ ಆರಾಧನಾ ಪದ್ಧತಿಗಳಿಗೆ ಇರುವಂತೆ ಈ ಆದಿವಾಸಿಗಳ ದೈವಗಳಿಗೆ ದೇವಾಲಯಗಳಿಲ್ಲ, ಸ್ಪಷ್ಟ ಆಕಾರದಲ್ಲಿ ಕೆತ್ತಿ ನಿಲ್ಲಿಸಿದ ಮೂರ್ತಿಗಳಿಲ್ಲ. ಪೂಜಾ ವಿಧಾನಗಳನ್ನು ವಿಧಿಬದ್ಧಗೊಳಿಸುವ ಪೂಜಾರಿಯೂ ಇಲ್ಲ. ಮಂತ್ರೋಚ್ಛಾರಣೆಯ ವಿಧಿ ವಗೈರಗಳಿಲ್ಲ. ದೈವದ ಜೊತೆ ಸಮುದಾಯಗಳು ಅನುಸಂಧಾನ ಮಾಡಲು ಇಲ್ಲಿ ಪುರೋಹಿತಶಾಹಿ ಪ್ರಣೀತ ಧಾರ್ಮಿಕ ಸಂಸ್ಥೆಯ ಯಾವ ಕಟ್ಟಳೆಗಳಿಲ್ಲ. ಇಲ್ಲಿ ದೈವವೆಂದರೆ ನಿರಾಕಾರ ಸ್ಥಿತಿಯ ನಿಸರ್ಗ. ಅಗಮ್ಯ, ಅಗಾಧ ಬೆಟ್ಟಗಳೇ ಆದಿವಾಸಿಗಳಿಗೆ ದೈವಗಳಾಗಿವೆ.

ಇಂತಹ ಆದಿವಾಸಿಗಳು ತಾವು ಕಟ್ಟಿಕೊಂಡು ಬಂದ ಅಧ್ಯಾತ್ಮಿಕ ಪರಂಪರೆ ಸಾಂಸ್ಥಿಕ ಸ್ವರೂಪದ್ದಲ್ಲ, ತಮ್ಮ ಧರ್ಮವು ಸಮುದಾಯಗಳ ನಡುವೆ ಗೋಡೆ ಕಟ್ಟುವಂತಹದ್ದಲ್ಲ, ತಮ್ಮ ಅಧ್ಯಾತ್ಮಿಕತೆಯ ಆಳದಲ್ಲಿ ದಮನ ಮತ್ತು ಅಸಮಾನತೆಗಳಿಲ್ಲ, ಈ ಕಾರಣಕ್ಕಾಗಿ ನಮ್ಮದು ‘ಆದಿ ಧರ್ಮ’. ಈ ಆದಿ ಅಧ್ಯಾತ್ಮಕ್ಕೆ, ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಳುತ್ತಿದ್ದಾರೆ. ಆದಿ ಧರ್ಮವೆಂದರೆ ಮತ್ತು ದುಡಿವ ಸಮುದಾಯಗಳ ಅಧ್ಯಾತ್ಮವೆಂದರೆ, ಸಾಮುದಾಯಿಕ ಬದುಕಲ್ಲಿ ನಿರುಮ್ಮಳವಾಗಿ ಅರಳಿಬಿಡುವ ಸಾಮರಸ್ಯ. ತನ್ನ ಸುತ್ತಲ ಸಕಲ ಜೀವಿಗಳ ನಡುವೆ ಮೈದಾಳುವ ಸಹಜೀವನ. ಈ ಸಹಜೀವನಕ್ಕಾಗಿ, ದಬ್ಬಾಳಿಕೆಗಳಿಲ್ಲದ ಸಮಸಮಾಜದ ನಿರ್ಮಾಣಕ್ಕಾಗಿ ಆದಿವಾಸಿಗಳು ಸಾಂಸ್ಥಿಕ ಧರ್ಮಗಳ ವಿರುದ್ಧ ಹೋರಾಡಿದ ಉದಾಹರಣೆಗಳು ಬೇಕಾದಷ್ಟಿವೆ.

18 ಮತ್ತು 19ನೇ ಶತಮಾನದಲ್ಲಿ ಒರಿಸ್ಸಾದ ಆದಿವಾಸಿಗಳ ದೈವಗಳನ್ನು ವಶಪಡಿಸಿಕೊಂಡು, ಆ ದೈವದ ಹೆಸರಲ್ಲಿ ವಿಪರೀತ ತೆರಿಗೆ ಹಾಕುತ್ತಿದ್ದ ಮತ್ತು ಬಿಟ್ಟಿ ಸೇವೆಗಳನ್ನು ನ್ಯಾಯಬದ್ಧಗೊಳಿಸುತ್ತಿದ್ದ ಊಳಿಗಮಾನ್ಯ ಅಧಿಕಾರದ ವಿರುದ್ಧ ಬಂಡೆದ್ದರು. ತಾವು ಆರಾಧಿಸುತ್ತಿದ್ದ ಪುರಿಯ ಜಗನ್ನಾಥನು ಮೇಲ್ವರ್ಗಗಳ ಪ್ರತಿನಿಧಿಯಾಗಿ, ಆಳುವ ವರ್ಗಗಳ ದಮನಗಳಿಗೆ ದಾರಿ ತೋರುತ್ತಿದ್ದಾನೆ ಎಂದು ಹಾಗೂ ವರ್ಗ ವೈರುಧ್ಯಗಳಿಲ್ಲದ ಸಮಾಜದ ಶತ್ರುವಾದ ದೈವ ಇರಬಾರದು ಎಂದು ಒರಿಸ್ಸಾದ ಆದಿವಾಸಿಗಳು ಜಗನ್ನಾಥನ ಕಟ್ಟಿಗೆಯ ಮೂರ್ತಿಗೆ ಬೆಂಕಿ ಇಡಲು ಹೋಗುತ್ತಾರೆ. ಆದಿವಾಸಿಗಳ ಈ ಚಳವಳಿ ಮುಂದೆ ಮಹಿಮಾ ಪಂಥವನ್ನೇ ಹುಟ್ಟು ಹಾಕುತ್ತದೆ. ಆದಿವಾಸಿಗಳನ್ನೂ ಒಳಗೊಂಡಂತೆ ದುಡಿವ ಸಮುದಾಯಗಳ ಚಿಂತನೆಯ ಫಲವಾಗಿ ರೂಪುಗೊಂಡ ಮಹಿಮಾ ಪಂಥ, ಸತ್ನಾಮ್ ಮತ್ತು ಕಬೀರ್ ಪಂಥಗಳು ಕೇವಲ ಆಧ್ಯಾತ್ಮಿಕ ಚಳವಳಿಗಳಲ್ಲ. ರಾಜಕೀಯ ಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳು ಜಂಟಿಯಾಗಿ ಸೃಷ್ಟಿಸಿದ ಶೋಷಣೆಗಳ ಪರಂಪರೆಯನ್ನು ಪ್ರತಿರೋಧಿಸಿ ಹುಟ್ಟಿದ ರಾಜಕೀಯ ಚಳವಳಿಗಳೂ ಹೌದು. ಮೇಲ್ನೋಟಕ್ಕೆ ಆಧ್ಯಾತ್ಮಿಕ ಎಂದು ಕಾಣುವ ಈ ಚಳವಳಿಗಳ ಆಳದಲ್ಲಿ ಮನುಷ್ಯ ಮತ್ತು ಅವನ ಪರಿಸರದ ಅಳಿವು ಉಳಿವಿನ ಪ್ರಶ್ನೆಗಳು ಪ್ರಧಾನವಾಗಿವೆ.

ಮನುಷ್ಯನ ನಿತ್ಯದ ಬದುಕಿನ ಹೊಟ್ಟೆಬಟ್ಟೆಯ ಪ್ರಶ್ನೆಗಳೂ ಮುಖ್ಯವಾಗಿವೆ. ಆ ಕಾರಣಕ್ಕಾಗಿಯೇ ಈ ಅಧ್ಯಾತ್ಮಿಕ ಚಳವಳಿಗಳು ಆಚರಣೆಗಳಾಗಿ, ಮೌಖಿಕ ಸಂಪ್ರದಾಯಗಳಾಗಿ ಮತ್ತು ಬದುಕಿನ ತತ್ವಗಳಾಗಿ ಇಂದಿಗೂ ಉಳಿದುಕೊಂಡು ಬಂದಿವೆ. ಈ ಅಧ್ಯಾತ್ಮಿಕ ಚಳವಳಿಗಳು ದೇವರ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಆದರೆ, ‘ಭೂಮಿಯ ಮೇಲಿರುವ ಚರಾಚರ ಜೀವಿಗಳಿಗೆ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯ ಮತ್ತು ಅವನ ಸುತ್ತಲ ಪರಿಸರದ ಅನುಸಂಧಾನದಿಂದ ಈ ಪ್ರಜ್ಞೆ ರೂಪುಗೊಂಡಿದೆ’ ಎಂಬ ವಿಶಿಷ್ಟ ಅದ್ವೈತವನ್ನು ಈ ಅನುಭವ ನಮ್ಮ ಮುಂದಿಡುತ್ತದೆ. ಈ ತತ್ವವು ಈಗ ಅಸ್ತಿತ್ವದಲ್ಲಿರುವ ಸಾಂಸ್ಥಿಕ ಊಳಿಗಮಾನ್ಯ ಧರ್ಮಗಳಿಗೆ ವ್ಯತಿರಿಕ್ತವಾದದ್ದು. ಈ ಕಾರಣಕ್ಕಾಗಿ ತಮ್ಮ ಆದಿ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂದು ಜಾರ್ಖಂಡ್‌ನ ಆದಿವಾಸಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ತೋರಿಕೆಗಾಗಿ ಬಹುತ್ವದ ಕುರಿತು ಮಾತನಾಡುತ್ತಿರುವ ಆದರೆ ಒಂದೇ ಭಾಷೆ, ಒಂದು ಸಂಸ್ಕೃತಿ ಮತ್ತು ಒಂದು ಧರ್ಮ ಎಂದು ಪದೇ ಪದೇ ಪ್ರತಿಪಾದಿಸುವ ಇಂದಿನ ಪ್ರಭುತ್ವ ಈ ಸಮುದಾಯಗಳ ನ್ಯಾಯಯುತ ಬೇಡಿಕೆಯನ್ನು ಹೇಗೆ ಪರಿಗಣಿಸಬಲ್ಲದು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇನು ಉಳಿದಿರುವಂತೆ ಕಾಣುವುದಿಲ್ಲ.

ವಸಾಹತು ಆಡಳಿತದ ಸಂದರ್ಭದಲ್ಲಿ ಭಾರತದ ನಿಸರ್ಗ ಸಂಪತ್ತು, ಖನಿಜ, ಪ್ರಾದೇಶಿಕ ವೈವಿಧ್ಯ, ಧರ್ಮ, ಜಾತಿ ಮತ್ತು ಬುಡಕಟ್ಟುಗಳ ಸಮೀಕ್ಷೆಯನ್ನು ನಡೆಸಲಾಯಿತು. ವಸಾಹತು ಅಧ್ಯಯನಕಾರರು ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿಯೇ ಕೈಗೊಂಡರು. ಜನಾಂಗ, ಜಾತಿ, ಧರ್ಮ ಮತ್ತು ಬುಡಕಟ್ಟುಗಳ ಗಣತಿಯನ್ನು ಎತ್ನೋಗ್ರಾಫಿಕ್ ಸರ್ವೇ ಆಫ್ ಇಂಡಿಯಾದ ಮೂಲಕ ಕೈಗೊಳ್ಳಲಾಯಿತು. 1881 ರಿಂದ 1941ರ ವರೆಗೆ ನಡೆದ ಜನಗಣತಿಯಲ್ಲಿ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್, ಬೌದ್ಧ ಮತ್ತು ಜೈನ ಧರ್ಮಗಳ ಜೊತೆಗೆ ಈ ಯಾವ ಧರ್ಮಕ್ಕೂ ಸೇರದ ಆದಿವಾಸಿಗಳನ್ನು ಪ್ರತ್ಯೇಕವಾಗಿ ಗಣತಿ ಮಾಡಲಾಯಿತು. ಧರ್ಮದ ಕಾಲಮ್ಮಿನಲ್ಲಿ ಸತ್ನಾಮಿ, ಕಬೀರಪಂಥಿ ಎಂದೂ, ಹಿಂದುಯೇತರ ಮತ್ತು ಮೂಲನಿವಾಸಿ ಸಮುದಾಯಗಳನ್ನು ಆದಿವಾಸಿಗಳೆಂದು (aboriginal or non-Hindu tribe, the name of the tribe as Garo, Khasi etc., was recorded as their religion.) ಗಣತಿ ಮಾಡಲಾಯಿತು. (ನೋಡಿ: Census of India, Introduction 2001). ಆದರೆ 1951ರ ಜನಗಣತಿಯಲ್ಲಿ ಹಿಂದುಯೇತರ ಮೂಲನಿವಾಸಿ ಬುಡಕಟ್ಟುಗಳನ್ನು ಪ್ರತ್ಯೇಕವಾಗಿ ಗಣತಿ ಮಾಡದೆ, ಕೇವಲ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್, ಬೌದ್ಧ ಮತ್ತು ಜೈನ ಎಂಬ ಆರು ಧರ್ಮಗಳನ್ನು ಮಾತ್ರ ಪ್ರಧಾನವಾಗಿ ಪರಿಗಣಿಸಲಾಯ್ತು. 2011ರಲ್ಲಿ ಮಾತ್ರ ಯಾವ ಧರ್ಮಕ್ಕೂ ಸೇರದ ಸಮುದಾಯಗಳನ್ನು ‘Other religions and persuasions’ ಮತ್ತು ‘Religion not stated’ ಎಂದು ಗಣತಿ ಮಾಡಲಾಯಿತು. ಈ ಗುಂಪಿಗೆ ಸೇರಿದ ಸಮುದಾಯಗಳು ಹೆಚ್ಚಾಗಿ ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಮಧ್ಯಪೂರ್ವ ರಾಜ್ಯಗಳಾದ ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‌ಗಡ್ ಮತ್ತು ಒರಿಸ್ಸಾ ರಾಜ್ಯಗಳಿಗೆ ಸೇರಿವೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 0.9ರಷ್ಟಿರುವ (1.08 ಕೋಟಿ) ಈ ಜನ ತಾವು ಪ್ರತ್ಯೇಕ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. (ನೋಡಿ: Census of India: Data on Religion:C-1, Population by Religious Community, India-2011). ಯಾವ ಶಕ್ತಿರಾಜಕಾರಣದ ಒತ್ತಡ ಮತ್ತು ಪ್ರೇರಣೆಗಳಿಲ್ಲದಿದ್ದ ಸಂದರ್ಭದಲ್ಲೂ ಆದಿವಾಸಿಗಳು ತಮ್ಮನ್ನು ತಾವು ಮುಖ್ಯವಾಹಿನಿಯ ಧರ್ಮಗಳ ಜೊತೆ ಗುರುತಿಸಿಕೊಂಡಿಲ್ಲ. ನಿಸರ್ಗದ ಜೊತೆ ಬದುಕುವ ತಾವು ಒಂದು ನಿಶ್ಚಿತ ವೈಚಾರಿಕ ಆವರಣದಲ್ಲಿ ಬದುಕುತ್ತಿದ್ದೇವೆ, ನಮಗೆ ತಲಾಂತರಗಳಿಂದ ಬಂದ ತಿಳಿವಳಿಕೆ ಇದೆ ಎಂಬುದನ್ನು ಈ ಆದಿವಾಸಿಗಳು ಹೇಳುತ್ತಿದ್ದಾರೆ.

ಆದಿವಾಸಿಗಳ ಈ ವಿಶಿಷ್ಟ ಅಧ್ಯಾತ್ಮಿಕ ನಿಲುವುಗಳನ್ನು ಬಹುತೇಕ ಎಲ್ಲ ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಗುರುತಿಸಿದ್ದಾರೆ. ಭಾರತದ ಅಧ್ಯಾತ್ಮಿಕ ಚರಿತ್ರೆಯಲ್ಲಿ ಆದಿವಾಸಿಗಳ ಈ ವಿಶಿಷ್ಟ ಪರಂಪರೆಯು ಸಾಂಸ್ಥಿಕ ಧಾರ್ಮಿಕ ಆಚರಣೆಗಳಿಗೆ ಭಿನ್ನ ಎಂಬುದನ್ನು ಇವರು ತಮ್ಮ ಅಧ್ಯಯನದ ಮೂಲಕ ಎತ್ತಿ ಹಿಡಿದಿದ್ದಾರೆ. ಮುಂಡಾ ಆದಿವಾಸಿ ಸಮುದಾಯದಿಂದ ಬಂದ ಪ್ರಸಿದ್ಧ ಮಾನವಶಾಸ್ತ್ರಜ್ಞ ರಾಮದಯಾಳ್ ಮುಂಡಾ ಅವರು Adi Darma: Religious Beliefs of the Adivasis of India ಎಂಬ ಕೃತಿ ರಚಿಸಿದ್ದಾರೆ. ಈ ಕೃತಿಯಲ್ಲಿ ಜಾರ್ಖಂಡ್ ರಾಜ್ಯವನ್ನೂ ಒಳಗೊಂಡಂತೆ ಭಾರತದ ಆದಿವಾಸಿಗಳ ಅಧ್ಯಾತ್ಮಿಕ ಜಗತ್ತನ್ನು ಅನಾವರಣ ಮಾಡಿದ್ದಾರೆ.

ಸಾಂಸ್ಥಿಕ ಧರ್ಮಗಳಲ್ಲಿ ವಿಧಿನಿಷೇಧಗಳು ಮತ್ತು ಆಚರಣೆಗಳೇ ಮೇಲುಗೈ ಸಾಧಿಸುತ್ತವೆ. ಒಂದು ಅರ್ಥದಲ್ಲಿ ಸಾಂಸ್ಥಿಕ ಧರ್ಮಗಳು ಆಚರಣೆ ಮತ್ತು ಕಟ್ಟುಪಾಡುಗಳ ಒಟ್ಟಾರೆ ಸಂಹಿತೆಗಳಂತೆ ಭಾಸವಾಗುತ್ತವೆ. ಅಲ್ಲಿ ಮನುಷ್ಯನ ಸ್ವತಂತ್ರ ಅಸ್ತಿತ್ವಕ್ಕೆ ಬೆಲೆ ಇಲ್ಲ. ಆದರೆ, ಆದಿವಾಸಿಗಳ ಅಧ್ಯಾತ್ಮದಲ್ಲಿ ಪರಿಸರ ಮತ್ತು ಸಾಮುದಾಯಿಕ ಬದುಕಿನ ಧ್ಯಾನವಿದೆ, ಸಹಬಾಳ್ವೆಯೇ ಪ್ರಧಾನವಾದ ವಿಶಿಷ್ಟ ತಿಳಿವಳಿಕೆ ಇದೆ. ಈ ಎಲ್ಲ ಕಾರಣದಿಂದ ಆಶಯ, ತತ್ವ ಮತ್ತು ಆಚರಣೆಗಳ ಆಧಾರದಲ್ಲಿ ಸಾಂಸ್ಥಿಕ ಧರ್ಮಗಳಿಗೆ ಭಿನ್ನವಾದ ‘ಆದಿ ಧರ್ಮ’ಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂಬ ಆದಿವಾಸಿಗಳ ಬೇಡಿಕೆ ಸಂವಿಧಾನಬದ್ಧವಾದದ್ದು.

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಸದ್ಯದಲ್ಲೇ ಬಿಡುಗಡೆಯಾಗಲಿದೆ


ಇದನ್ನೂ ಓದಿ: ಹಳತು-ವಿವೇಕ: ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು

1 COMMENT

LEAVE A REPLY

Please enter your comment!
Please enter your name here