ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಗಟ್ಟಿ ಮನುಷ್ಯ, ಅವರ ಹೇಳಿಕೆಯನ್ನು ಎರಡು-ಮೂರು ರೀತಿಯಲ್ಲಿ ವಿಶ್ಲೇಷಿಸಬಹುದು ಎಂದಿದ್ದಾರೆ.
‘ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆ ಇರುತ್ತವೆ. ಹಾಗೆಯೇ ಯಡಿಯೂರಪ್ಪನವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರಗಾರಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ತಮ್ಮ ಸದಾಶಿವನಗರ ಮನೆಯಲ್ಲಿ ಸುದ್ದಿಗಾರರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
’ಯಡಿಯೂರಪ್ಪರವರ ಹೇಳಿಕೆಯನ್ನು ಎರಡ್ಮೂರು ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ನನ್ನನ್ನು ಮುಟ್ಟಿ ನೋಡಿ ಎಂಬ ಎಚ್ಚರಿಕೆ ಇರಬಹುದು, ನಾನು ಶಿಸ್ತಿನ ಸಿಪಾಯಿ ಎಂದೂ ಇರಬಹುದು. ನೀವು ಹೇಗೆ ವಿಶ್ಲೇಷಣೆ ಮಾಡುತ್ತೀರೋ ಮಾಡಿ. ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಗಟ್ಟಿ ನಾಯಕ. ಅಷ್ಟು ಸಲೀಸಾಗಿ ಅವರು ಜಗ್ಗಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
‘ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಸರಕಾರ ರಚಿಸಿದ್ದಾರೆ. ದುರ್ದೈವ ಏನೆಂದರೆ, ಬಿಜೆಪಿಯವರು ಶಿಸ್ತು ಕಳೆದುಕೊಂಡಿದ್ದಾರೆ. ಶಿಸ್ತು ಅನ್ನುವುದಿಲ್ಲ’ ಎಂದಿದ್ದಾರೆ.
’ಮುಂದೆ ಯಡಿಯೂರಪ್ಪನವರೇ ನಮ್ಮ ಸಿಎಂ ಎನ್ನುವವರು, ಹಿಂದೆ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ರೆಡಿಯಾಗಿದ್ದಾರೆ. ಬಿಜೆಪಿಯಲ್ಲಿನ ಏಳೆಂಟು ಮುಖಂಡರು ತಾವೇ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ಧವಾಗಿದ್ದಾರೆ. ಎಲ್ಲವೂ ನಮ್ಮಗೆ ಗೊತ್ತಿದೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ’ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಪರ್ಯಾಯ ನಾಯಕ ಇಲ್ಲ ಎನ್ನುವುದು ಸತ್ಯವಲ್ಲ’ ಎಂದಿದ್ದರು.
ಇದನ್ನೂ ಓದಿ: ಹೊಟ್ಟೆಗೆ ಅನ್ನ, ಬದುಕಿಗೆ ಭರವಸೆ ನೀಡುವ ಸಮಗ್ರ ಪ್ಯಾಕೇಜ್ ನೀಡಿ: ಜನಾಗ್ರಹ ಆಂದೋಲನ


