ಸರ್ಕಾರಿ ತೈಲ ಕಂಪನಿಗಳು ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 28 ಪೈಸೆ ಮತ್ತು ಡೀಸೆಲ್ ದರವನ್ನು 27 ಪೈಸೆ ಹೆಚ್ಚಿಸಿವೆ. ಇತ್ತೀಚಿನ ಹೆಚ್ಚಳವು ಇಂಧನ ದರವನ್ನು ಮತ್ತೊಂದು ದಾಖಲೆಗೆ ಕೊಂಡೊಯ್ದಿದೆ. ಅದು ಈಗ ಮೆಟ್ರೋಗಳಲ್ಲದೇ ಎರಡನೇ ಹಂತದ ನಗರಗಳಲ್ಲೂ ಗರಿಷ್ಠ ಮಟ್ಟ ತಲುಪುತ್ತಿದೆ.
ಐದು ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಘೋಷಣೆಯಾದ ಒಂದೆರಡು ದಿನಗಳ ನಂತರ, ಅಂದರೆ ಮೇ 2 ರಿಂದ 35 ದಿನಗಳಲ್ಲಿ 20 ದಿನ ಇಂಧನ ದರ ಹೆಚ್ಚಿಸಲಾಗಿದೆ. ಅಂದರೆ ಚುನಾವಣೆ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 4,91 ರೂ ಮತ್ತು ಡೀಸೆಲ್ 5.49 ರೂ ಏರಿಕೆ ಕಂಡಿವೆ.
ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಪ್ರತಿ ಲೀಟರ್‌ಗೆ 95.31 ರೂ. ಮತ್ತು ಡೀಸೆಲ್ ಲೀಟರ್‌ಗೆ. 86.22 ರೂ.ಗಳಿಗೆ ತಲುಪಿದೆ. ದೆಹಲಿಯಲ್ಲಿನ ಇಂಧನ ದರಗಳು ಇಡೀ ದೇಶಕ್ಕೆ ಮಾನದಂಡವಾಗಿದ್ದರೂ, ಎರಡು ಇಂಧನಗಳ ಚಿಲ್ಲರೆ ಬೆಲೆಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ. ಏಕೆಂದರೆ ರಾಜ್ಯ ತೆರಿಗೆಗಳು ಮತ್ತು ಸ್ಥಳೀಯ ಸುಂಕಗಳಲ್ಲಿ ವ್ಯತ್ಯಾಸವಿದೆ.
ಮೇ 4 ರಿಂದ ಇಂಧನ ದರಗಳಲ್ಲಿ ಕಂಡು ಬಂದ ನಿರಂತರ ಏರಿಕೆಯು ದೇಶದ ವಿವಿಧ ನಗರಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳ ನಗರಗಳಲ್ಲಿ ಪೆಟ್ರೋಲ್ ದರ 100 ರೂ. ದಾಟುವಂತೆ ಮಾಡಿದೆ.
ಮುಂಬೈ, ರತ್ನಗಿರಿ, ಪರಭಾನಿ, ಔರಂಗಾಬಾದ್, ಜೈಸಲ್ಮೇರ್, ಗಂಗಾನಗರ, ಬನ್ಸಾರ್, ಇಂದೋರ್, ಭೋಪಾಲ್, ಗ್ವಾಲಿಯರ್, ಗುಂಟೂರು ಮತ್ತು ಕಾಕಿನಾಡಗಳಲ್ಲಿ ಪೆಟ್ರೋಲ್ ಶತಕ ಬಾರಿಸಿದೆ.
ನಿನ್ನೆಯಿಂದ ಕರ್ನಾಟಕದ ಬಳ್ಳಾರಿ ಮತ್ತು ಶಿರಸಿಯಲ್ಲೂ ಪೆಟ್ರೋಲ್ ದರ 100 ರೂ. ದಾಟಿದೆ.
ಮಹಾನಗರಗಳಲ್ಲಿ ಮುಂಬೈ ಅತಿ ಹೆಚ್ಚು ಇಂಧನ ದರವನ್ನು ಹೊಂದಿದೆ. ಪೆಟ್ರೋಲ್ 101.53 ರೂ. ಮತ್ತು ಡೀಸೆಲ್ 93.58 ರೂ.ಗಳಿಗೆ ಸದ್ಯ ಮಾರಾಟವಾಗುತ್ತಿವೆ.
ಅಂತರರಾಷ್ಟ್ರೀಯ ತೈಲ ದರಗಳು ಮತ್ತು ಅತಿಯಾದ ದೇಶಿ ತೆರಿಗೆಗಳು ಇಂಧನ ದರ ಏರಿಕೆಗೆ ಎರಡು ಪ್ರಮುಖ ಕಾರಣಗಳು.
ಭಾರತೀಯ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಯನ್ನು, ಹಿಂದಿನ ದಿನದ ಅಂತರರಾಷ್ಟ್ರೀಯ ಮಾನದಂಡ ದರಗಳೊಂದಿಗೆ ಜೋಡಿಸುತ್ತಾರೆ. ಬೆಂಚ್ ಮಾರ್ಕ್ ಎನಿಸಿದ ಬ್ರೆಂಟ್ ಕಚ್ಚಾ ತೈಲ ಗುರುವಾರ ಶೇ. 0.06 ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 71.31 ಡಾಲರ್‌ಗೆ ತಲುಪಿತ್ತು, ಶುಕ್ರವಾರ ಶೇ. 0.81 ಏರಿಕೆ ಕಂಡು ಬ್ಯಾರೆಲ್‌ಗೆ 71.89 ಡಾಲರ್‌ಗೆ ತಲುಪಿದೆ. ಆದರೆ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಇದು ಶೇ.0.56 ಕುಸಿದು ಪ್ರತಿ ಬ್ಯಾರೆಲ್‌ಗೆ 71.49 ಡಾಲರಿಗೆ ತಲುಪಿದೆ.
ತೆರಿಗೆಯಿಂದಾಗಿ ಇಂಧನಗಳ ಬೆಲೆ ಕೂಡ ಹೆಚ್ಚಾಗಿದೆ. ದೆಹಲಿಯಲ್ಲಿ, ಜೂನ್ 1 ರ ಅಧಿಕೃತ ಮಾಹಿತಿಯ ಪ್ರಕಾರ, ಪೆಟ್ರೋಲ್ ದರದಲ್ಲಿ ಕೇಂದ್ರ ಮತ್ತು ರಾಜ್ಯ ತೆರಿಗೆಗಳ ಪಾಲು ಶೇ. 34.8 ಮತ್ತು ಶೇ. 23.08 ರಷ್ಟಿದೆ. ಡೀಸೆಲ್‍ನಲ್ಲಿ ಕೇಂದ್ರ ತೆರಿಗೆಗಳು ಶೇ. 37.24ಕ್ಕಿಂತ ಹೆಚ್ಚಿದ್ದರೆ, ರಾಜ್ಯ ತೆರಿಗೆಗಳು ಶೇ. 14.64 ರಷ್ಟಿದೆ.
2020ರ ಹೊತ್ತಿಗೆ, ಜಾಗತಿಕ ಕಚ್ಚಾ ಬೆಲೆಗಳು ಕುಸಿಯುತ್ತಿದ್ದಂತೆ, ಕೇಂದ್ರ ಸರ್ಕಾರವು ತನ್ನ ಹಣಕಾಸನ್ನು ಹೆಚ್ಚಿಸಲು ಇಂಧನದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿತು. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆದಾಯವು ಕಡಿಮೆಯಾಗಿದೆ ಎಂದು ಕೇಂದ್ರ ನೆಪ ಹೇಳಿತ್ತು.
ಕಳೆದ ಒಂದು ತಿಂಗಳಲ್ಲಿ ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಳಿಕೆ ಕಂಡಿವೆ. ಆದರೆ ಭಾರತದಲ್ಲಿ ಮಾತ್ರ ಕೇವಲ ಮೇಲ್ಮುಖವಾಗಿ ಸಾಗಿವೆ. ಉದಾಹರಣೆಗೆ, ಮೇ 20 ರಂದು ಬ್ರೆಂಟ್ ಕಚ್ಚಾ ದರ 65.11 ಡಾಲರ್‌ಗೆ ಕುಸಿದಿತ್ತು. 34 ದಿನಗಳಲ್ಲಿ ಇದು ಅತ್ಯಂತ ಕಡಿಮೆ ದರವಾಗಿತ್ತು. ಆದರೆ ಭಾರತದಲ್ಲಿ ಮರುದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕ್ರಮವಾಗಿ 19 ಪೈಸೆ ಮತ್ತು 29 ಪೈಸೆ ಏರಿಕೆ ಮಾಡಲಾಗಿತು.
ಚುನಾವಣೆಯ ಕಾರಣದಿಂದ ಫೆಬ್ರವರಿ 26ರಿಂದ 66 ದಿನಗಳ ಕಾಲ ದರ ಏರಿಕೆ ಮಾಡದೇ ಇದ್ದುದರಿಂದ ತೈಲ ಮಾರಾಟ ಕಂಪನಿಗಳಿಗೆ ಆದಾಯ ನಷ್ಟವಾಗಿತ್ತು. ಹೀಗಾಗಿ ಚುನಾವಣೆಗಳ ನಂತರ ಅವು ಆ ನಷ್ಟ ತುಂಬಿಕೊಳ್ಳಲು ದರ ಏರಿಕೆ ಮಾಡುತ್ತಿವೆ ಎಂದು ಸರ್ಕಾರಿ ತೈಲ ಕಂಪನಿಗಳ ಅಧಿಕಾರಿಗಳು ಸಮರ್ಥಿಸುತ್ತಾರೆ.
ಇದನ್ನೂ ಓದಿ: ಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ


