ದೊರೆಸ್ವಾಮಿ ತಾತನ ಮನೆ ನನಗೆ ಹೊಸದೇನೂ ಅಲ್ಲ. ಗೌರಿ ಲಂಕೇಶ್ ಮೇಡಂ ನಿರ್ಗಮನದ ನಂತರ ಅವರ ಪತ್ರಿಕಾ ಪರಂಪರೆಯನ್ನು ಮುಂದುವರೆಸುವ ಸಲುವಾಗಿ ದೊರೆಸ್ವಾಮಿಯವರ ಅಧ್ಯಕ್ಷತೆಯಲ್ಲೇ ಗೌರಿ ಮೆಮೋರಿಯಲ್ ಟ್ರಸ್ಟ್ ರಚನೆಯಾಗಿತ್ತು. ಆ ಟ್ರಸ್ಟ್‌ನ ಭಾಗವಾಗಿ ಹೊರತರುತ್ತಿದ್ದ ನ್ಯಾಯಪಥ ಪತ್ರಿಕೆಯ ಸಹಸಂಪಾದಕನಾಗಿದ್ದ ನನಗೆ ಪ್ರತಿವಾರ ಅವರ ಮನೆಗೆ ಹೋಗಿ, ಅವರು ಬರೆಯುತ್ತಿದ್ದ ’ನೂರರ ನೋಟ’ ಅಂಕಣದ ಹಸ್ತಪ್ರತಿ ತರುವುದು ರೆಗ್ಯುಲರ್ ಕಾಯಕ. ಹೀಗೆ ಪ್ರತಿ ಸಲ ಅವರ ಮನೆಗೆ ಹೋದಾಗಲು ಒಂದು ಹೊಸ ಪಾಠ, ಹೊಸ ಸ್ಫೂರ್ತಿ ಕಾದಿರುತ್ತಿತ್ತು. ಇಂಥಾ ಭೇಟಿಗಳು ಹೆಚ್ಚೆಂದರೆ ಐದು ನಿಮಿಷಗಳಲ್ಲಿ ಮುಗಿದುಹೋಗುತ್ತಿದ್ದವು. ಅಷ್ಟರಲ್ಲೇ ಅವರು ಬೇಕಾದಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗಿಬಿಡುತ್ತಿದ್ದರು.
ಒಮ್ಮೆ ಹೀಗಾಯಿತು. ಅವರು ತಮ್ಮ ಅಂಕಣ ಬರಹ ಬರೆಯಲು, ತಮ್ಮ ಮನೆಗೆ ಬೇರೆಬೇರೆ ಸಂಘಟನೆಗಳಿಂದ ಬರುತ್ತಿದ್ದ ಕರಪತ್ರಗಳ ಖಾಲಿ ಹಿಂಬದಿಯನ್ನೊ, ಅಥವಾ ಪೋಸ್ಟರ್‌ಗಳನ್ನೋ ಚಿಕ್ಕದಾಗಿ ಹರಿದಿಟ್ಟುಕೊಂಡ ತುಣುಕುಗಳನ್ನು ಬಳಸುತ್ತಿದ್ದರು. ಅವುಗಳನ್ನು ವ್ಯರ್ಥ ಮಾಡಬಾರದು ಅನ್ನೋದು ಅವರ ಉದ್ದೇಶ. ಆದರೆ ಹೀಗೆ ಬರೆದಿಟ್ಟ ಬಿಡಿಬಿಡಿ ಹಾಳೆಗಳಿಗೆ ಪುಟಸಂಖ್ಯೆ ಹಾಕಿ ಯಾವ್ಯಾವುದೋ ಪುಸ್ತಕದೊಳಗೆ ಇಟ್ಟಿರುತ್ತಿದ್ದರು. ನಾನು ಹೋದಾಗ ಅವುಗಳನ್ನೆಲ್ಲ ಹುಡುಕಿ ಆರ್ಡರ್ ಪ್ರಕಾರ ಜೋಡಿಸಲು ತುಂಬಾ ತ್ರಾಸ ತೆಗೆದುಕೊಳ್ಳುತ್ತಿದ್ದರು. ನಾನು ಸಹಾಯ ಮಾಡೋಣವೆಂದರೆ, ಅವರು ಒಪ್ಪುತ್ತಿರಲಿಲ್ಲ. ಅವರೇ ಪ್ರತಿ ಪುಟ ಪರಿಶೀಲಿಸಿ, ಜೋಡಿಸಿ ಒಂದಿಷ್ಟು instructions ಕೊಟ್ಟು ಕೈಗಿಟ್ಟರಷ್ಟೇ ಅವರಿಗೆ ಸಮಾಧಾನ.
ಅವರ ಈ ಪಜೀತಿ ನೋಡಲಾಗದೆ, ನಾನೊಂದು ಉಪಾಯ ಮಾಡಿದೆ. ನಮ್ಮ ಕಚೇರಿಯಲ್ಲಿ ಒಂದಷ್ಟು ಹಳೆಯ, ಬಳಸದ ಲೆಟರ್ ಪ್ಯಾಡ್‌ಗಳಿದ್ದವು. ಕಚೇರಿಯಲ್ಲಿ ಅನುಮತಿ ಪಡೆದು ಅವುಗಳಲ್ಲಿ ಒಂದನ್ನು ತೆಗೆದುಕೊಂಡುಹೋಗಿ ದೊರೆಸ್ವಾಮಿ ತಾತನ ಕೈಗಿಟ್ಟು, “ಸಾರ್, ಇನ್ಮುಂದೆ ಅಂಕಣ ಬರೆಯಲು ಇದನ್ನು ಉಪಯೋಗಿಸಿ. ಬಿಡಿ ಹಾಳೆಗಳಲ್ಲಿ ಬರೆದು ಅವುಗಳನ್ನು ಹುಡುಕಾಡುವುದಕ್ಕಿಂತ, ಇದರಲ್ಲೇ ಬರೆದಿಟ್ಟಿರಿ. ನಾನು ಬಂದಾಗ ಹಾಳೆಗಳನ್ನು ಹರಿದುಕೊಟ್ಟರಾಯಿತು” ಎಂದೆ.
“ಓಹ್! ಒಳ್ಳೆ ಕೆಲಸ ಮಾಡಿದೀರಿ ಕಣ್ರಿ (ಕಿರಿಯರನ್ನೂ ಅವರು ಮಾತಾಡಿಸುತ್ತಿದ್ದುದು ಹೀಗೆ) ಎಂದು ಮುಗುಳ್ನಕ್ಕರು. ನಾನು ತಾತನಿಗೆ ದೊಡ್ಡ ಹೊರೆ ತಪ್ಪಿಸಿದ ಸಂತೃಪ್ತಿಯಲ್ಲಿ ವಾಪಾಸಾದೆ. ಮಾರನೇ ವಾರ ಹಸ್ತಪ್ರತಿ ಸಂಗ್ರಹಿಸಲು ಅವರ ಮನೆಗೆ ಹೋದೆ. ನನ್ನನ್ನು ನೋಡಿ, “ಓಹ್, ಬಂದ್ರಾ?” ಎಂದವರೆ ಯಥಾಪ್ರಕಾರ ತಮ್ಮ ಹಾಸಿಗೆಯ ಪಕ್ಕ ಇಟ್ಟಿದ್ದ ಪುಸ್ತಕಗಳನ್ನೆಲ್ಲ ತಡಕಾಡಿ ಹುಡುಕಾಡಲಾರಂಭಿಸಿದರು. ಬಹುಶಃ ಲೆಟರ್ ಪ್ಯಾಡಿನಲ್ಲಿ ಬರೆದಿಟ್ಟಿರೊ ಸಂಗತಿ ಮರೆತು ಎಂದಿನಂತೆ ತುಂಡು ಹಾಳೆಗಳಿಗೆ ಹುಡುಕಾಡುತ್ತಿದ್ದಾರೇನೊ ಎಂದು ಯೋಚಿಸುತ್ತಿರುವಾಗಲೇ, ಬಿಡಿಬಿಡಿ ಪಾಂಪ್ಲೆಟ್ ಹಾಳೆಗಳನ್ನು ಹೆಕ್ಕಿತೆಗೆದು, ಜೋಡಿಸಿ ನನ್ನತ್ತ ಚಾಚಿದರು!
ಅರೆ, ಲೆಟರ್ ಪ್ಯಾಡ್ ಕೊಟ್ಟುಹೋಗಿದ್ದ ಸಂಗತಿಯನ್ನೇ ಮರೆತುಬಿಟ್ಟರಾ ಅನ್ನೊ ಆಲೋಚನೆಯಲ್ಲಿದ್ದೆ. ಅದನ್ನು ಗುರುತಿಸಿದವರಂತೆ “ನೀವು ಕೊಟ್ಟುಹೋದ ಬುಕ್‌ಲೆಟ್ ನನ್ನ ಹತ್ರ ಇದೆ. ಅದನ್ನು ಯಾವತ್ತಾದ್ರೂ ಬಳಸಿಕೊಳ್ಳಬಹುದು. ಜೋಪಾನವಾಗಿರುತ್ತೆ. ಆದ್ರೆ, ಈ ಕರಪತ್ರಗಳನ್ನ ಸಕಾಲದಲ್ಲಿ ಬಳಸಿಕೊಳ್ಳದಿದ್ದರೆ, ಅಲ್ಲಿ ಇಲ್ಲಿ ಬಿದ್ದು ಇವು ವೇಸ್ಟಾಗಿ ಕಸದ ಬುಟ್ಟಿ ಸೇರಿಬಿಡಬಹುದು. ಅದಕ್ಕಾಗಿ ಇವು ಮುಗಿಯೋವರೆಗು ಇದ್ರಲ್ಲೇ ಬರೀತೀನಿ. ನಿಮ್ಗೇನೂ ತೊಂದ್ರೆ ಕೊಡಲ್ಲ. ನೀಟಾಗಿ ಪುಟಸಂಖ್ಯೆ ಹಾಕಿ, ಜೋಡಿಸಿ ಕೊಡ್ತೀನಿ” ಅಂದರು. ಸಣ್ಣಪುಟ್ಟ ವಿಚಾರಗಳಲ್ಲಿ ಅವರು ಪಾಲಿಸಿಕೊಂಡು ಬಂದ ನೈತಿಕ ವ್ರತಗಳು ನನಗೆ ಪಾಠವಾಗಲಾರಂಭಿಸಿದವು.
ಗೌರಿ ಮೇಡಂ ಯಾವಾಗಲೂ ದೊರೆಸ್ವಾಮಿಯವರನ್ನು ’ರಾಕ್ ಸ್ಟಾರ್ ಎಂದು ತುಂಬು ಅಭಿಮಾನದಿಂದ ಛೇಡಿಸುತ್ತಿದ್ದರು. ಆದರೆ ನನ್ನ ಪಾಲಿಗೆ ಅವರು ನಿಜವಾಗಲು ರಾಕ್ ಸ್ಟಾರ್ ಆಗಿದ್ದರು. ಯಾಕೆಂದರೆ, ಕೇವಲ ಐದೇ ನಿಮಿಷಗಳ ಚುಟುಕು ಭೇಟಿಯಲ್ಲಿ ನಾನು ಅಚ್ಚರಿಗೀಡಾಗುವಂತ ಬದುಕಿನ ಹೊಸಹೊಸ ಪಾಠ ಬೋಧಿಸುತ್ತಿದ್ದರು. ಸಣ್ಣಪುಟ್ಟ ನೆಪಗಳ ಮೂಲಕ. ಒಮ್ಮೆ ತಾವು ತಿನ್ನುತ್ತಿದ್ದ ಬಾಳೆಹಣ್ಣು, ಮತ್ತೊಮ್ಮೆ ತಾವು ಕುಡಿಯುತ್ತಾ ಕೂತ ಮೊಣಕೈ ಉದ್ದದ ಲೋಟದ ತುಂಬಾ ತುಂಬಿದ್ದ ’ಶುಗರ್ ಪ್ಲಸ್ ಕಾಫಿ, ಮಗದೊಮ್ಮೆ ಯಾರೋ ಕೊಟ್ಟುಹೋಗಿದ್ದ ಹಲಸಿನ ಹಣ್ಣು, ಪೇಪರ್ ತುಂಡು ಹೀಗೆ ಕೇಳಿದವರಿಗೆ ದಿಗಿಲೆನಿಸುವ ಸಂಗತಿಗಳ ಮೂಲಕ ನನಗೆ ಪಾಠವಾಗುತ್ತಾ ಬಂದರು.
ಆದರೆ ಆ ಸಲ ನಾನು ಅವರ ಮನೆಗೆ ಹೋದಾಗ ನಾನು ನ್ಯಾಯಪಥ ಪತ್ರಿಕೆ ತೊರೆದಿದ್ದೆ. ನನ್ನನ್ನು ಗುರುತು ಹಿಡಿದು ರೂಮೊಳಗೆ ಕರೆದ ತಾತ, ನನ್ನ ಯೋಗಕ್ಷೇಮ, ಈಗ ಮಾಡುತ್ತಿರುವ ಕೆಲಸ, ಜೀವನೋಪಾಯದ ಮಾರ್ಗಗಳನ್ನು ವಿಚಾರಿಸಿದರು. ನಾನು ಅವರ ಅಧ್ಯಕ್ಷತೆಯ ಟ್ರಸ್ಟ್ ಪತ್ರಿಕೆಯನ್ನು ತೊರೆದದ್ದರ ಕುರಿತು ಅಪ್ಪಿತಪ್ಪಿಯೂ ಒಂದು ಮಾತೂ ಕೇಳಲಿಲ್ಲ. ತಮ್ಮ ಮನೆಗೆ ಬಂದ ಅತಿಥಿಗೆ ಮುಜುಗರ ಆಗಬಾರದೆನ್ನುವ ಕಾಳಜಿ ಅವರಲ್ಲಿತ್ತು.
ಕುಶಲೋಪರಿಯ ನಂತರ, ನಾನು ಹೋಗಿದ್ದ ಅಸಲಿ ಕಾರಣ ಅರುಹಿದೆ. ಹಿರಿಯ ಪತ್ರಕರ್ತ ಮಿತ್ರರಾದ ಡಾ. ಎಂ.ಎಸ್. ಮಣಿಯವರು ತಾವು ಬರೆದಿದ್ದ ’ಮನುಭಾರತ’ ಪುಸ್ತಕಕ್ಕೆ ದೊರೆಸ್ವಾಮಿಯವರಿಂದಲೇ ಮುನ್ನುಡಿ ಬರೆಸಬೇಕೆಂದು ಹಂಬಲಿಸಿ, ಆ ಹೊಣೆ ನನ್ನ ಹೆಗಲಿಗೇರಿಸಿದ್ದರು. ನಾನು ಅಳುಕಿನಿಂದಲೇ ವಿಚಾರ ಪ್ರಸ್ತಾಪಿಸಿದೆ. ಆ ವಯಸ್ಸಲ್ಲಿ ಅಷ್ಟೆಲ್ಲ ಕೆಲಸಗಳನ್ನು ಮೈಮೇಲೆ ಎಳೆದುಕೊಂಡಿದ್ದ ಅವರಿಗೆ ಹೊಸ ಹೊರೆ ಹೊರಿಸುವುದು ನನಗೇ ಸಮಾಧಾನವಿರಲಿಲ್ಲ. ಆದರೆ ಪ್ರಸ್ತುತ ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ ತಲ್ಲಣಗಳ ಆಳವಾದ ವಿಶ್ಲೇಷಣೆ ಒಳಗೊಂಡ ಆ ಕೃತಿಗೆ ಅವರ ಮುನ್ನುಡಿಯೇ ಸೂಕ್ತ ಅನ್ನಿಸಿದ್ದರಿಂದ ಆ ಸಾಹಸಕ್ಕೆ ಮುಂದಾಗಿದ್ದೆ. ಖುಷಿಯಿಂದಲೇ ಒಪ್ಪಿಕೊಂಡ ತಾತ, “ಬರೆದು ಕೊಡ್ತೀನಿ. ಆದ್ರೆ ನನಗೆ ತುಂಬಾ ಸಮಯ ಕೊಡಬೇಕು. ಯಾಕಂದ್ರೆ ಇಡೀ ಪುಸ್ತಕ ಓದದೆ ನಾನು ಬರೆಯೊಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರೆ. ಅವರು ಒಪ್ಪಿದ್ದೇ ನನಗೆ ಮಹಾಪ್ರಸಾದ. ನಾನು ಹೊಯ್ದಿದ್ದ ಕೃತಿಯ ಪ್ರಿಂಟ್ ಔಟ್ ಅವರ ಕೈಗಿಟ್ಟು ಹೊರಡಲು ಅಣಿಯಾದೆ.
ಆದರೆ ನನ್ನ ಮನಸ್ಸು ಯಾಕೋ ಚಡಪಡಿಸುತ್ತಿತ್ತು. ಅದಕ್ಕೆ ಕಾರಣ ನಮ್ಮ ಶಿವಸುಂದರ್ ಅವರು ಬರೆದಿದ್ದ ಒಂದು ಕವನ.
“ಗಾಂಧಿಯನ್ನು ನೀಗಿಕೊಂಡ
ಅಂಬೇಡ್ಕರ್
ಮಹಾನಾಯಕರಾಗುತ್ತಾ ಹೋದರು
ಅಂಬೇಡ್ಕರ್‌ರನ್ನು ಅರಗಿಸಿಕೊಳ್ಳದ
’ಮಹಾತ್ಮ
ಅರ್ಧಮನುಷ್ಯರಾಗಿಯೇ
ಉಳಿದುಬಿಟ್ಟರು
– ಶಿವಸುಂದರ್
ಅಂಬೇಡ್ಕರ್ ಮತ್ತು ಗಾಂಧಿಯನ್ನು ತುಲನೆ ಮಾಡಿದ್ದ ಶಿವಸುಂದರ್ ಅವರ ಕವನ ಗಾಂಧಿಯನ್ನು ಒರೆಗಲ್ಲಿಗೆ ಉಜ್ಜಿಉಜ್ಜಿ ತಕ್ಕಡಿಯಲ್ಲಿಟ್ಟು ತೂಗಿತ್ತು. ಕೆಲ ದಿನಗಳ ಹಿಂದಷ್ಟೆ ಅದನ್ನು ಓದಿದಾಗಿನಿಂದ, ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರೂ ತಮ್ಮದೇ ತೀವ್ರತೆಯಲ್ಲಿ ವಿರೋಧಿಸಿದ ಕೋಮುವಾದವು ಇಂದು ಇಡೀ ದೇಶವನ್ನು ಆವರಿಸಿ, ದಳ್ಳುರಿಯಲ್ಲಿ ಬದುಕುಗಳನ್ನು ಬೇಯಿಸುತ್ತಿರುವ ಕಾಲಘಟ್ಟದಲ್ಲಿ ಇಂಥಾ ಚರ್ಚೆಯ ಅಗತ್ಯವಿದೆಯಾ? ಎಂಬಂತಹ ಪ್ರಶ್ನೆಗಳು ನನ್ನನ್ನು ಕಾಡುತ್ತಲೇ ಇದ್ದವು. ಸ್ವತಃ ಶಿವಸುಂದರ್ ಅವರ ಬಳಿಯೂ ಇದನ್ನು ಒಮ್ಮೆ ವಾಟ್ಸಾಪ್‌ನಲ್ಲಿ ಚರ್ಚಿಸಿದ್ದೆ. ಅವರ ವಾದದಲ್ಲಿ ದೂರಗಾಮಿ ಮತ್ತು ಸೈದ್ಧಾಂತಿಕ ಸಂಘರ್ಷದ ಅಗತ್ಯತೆ ಗೋಚರಿಸಿತಾದರು, ನನಗೆ ಸಮಾಧಾನವಾಗಿರಲಿಲ್ಲ.
ಸ್ವತಃ ಗಾಂಧಿವಾದಿಯೂ, ಸ್ವಾತಂತ್ರ್ಯಪೂರ್ವ ರಾಜಕೀಯ-ಸಾಮಾಜಿಕ ಸಂಘರ್ಷಗಳನ್ನು ಕಂಡವರೂ ಆದ ದೊರೆಸ್ವಾಮಿ ತಾತನೇ ನನ್ನ ಈ ಚಡಪಡಿಕೆಗೆ ಸೂಕ್ತ ಉತ್ತರವಾಗಬಲ್ಲರು ಅನ್ನಿಸಿತ್ತು. ಅವರ ಮನೆಗೆ ಕಾಲಿಟ್ಟ ಕ್ಷಣದಿಂದಲೂ ಅದನ್ನು ಹೇಗೆ ಪ್ರಸ್ತಾಪ ಮಾಡುವುದೆಂಬ ಒದ್ದಾಟದಲ್ಲಿದ್ದೆ. ಅವತ್ತು ನನಗೇ ಹೆಚ್ಚಿನ ಸಮಯವಿರಲಿಲ್ಲ. ನಾವು ಹೊಸದಾಗಿ ಶುರು ಮಾಡಲಿದ್ದ ಮಾಸಪತ್ರಿಕೆಯ ತಯಾರಿಯ ಕುರಿತಂತೆ ಸಂಪಾದಕರೊಟ್ಟಿಗೆ ಚರ್ಚಿಸಲು ಹೋಗಬೇಕಿತ್ತು. ಆದಾಗ್ಯೂ ತಾತನ ಮುಂದೆ ವಿಷಯ ಪ್ರಸ್ತಾಪಿಸಿ ಅಸಮಾಧಾನದ ಗಾಯಕ್ಕೆ ಸಣ್ಣ ಮುಲಾಮು ಹಚ್ಚಿಸಿಕೊಂಡಾದರು ಹೋಗಬೇಕು ಅಂದುಕೊಂಡಿದ್ದೆ. ಎಂದಿನಂತೆ ಸರಾಗವಾಗಿ ಎದ್ದುಹೋಗದೆ, ಕೊಸರಾಡುತ್ತಿದ್ದ ನನ್ನ ಪರಿಸ್ಥಿತಿಯನ್ನು ಗ್ರಹಿಸಿದ ನಮ್ಮ ರಾಕ್ ಸ್ಟಾರ್ ಕೇಳಿಯೇಬಿಟ್ಟರು, “ಯಾಕೆ ಇವರೇ, ಮತ್ತೆ ಏನಾದರು ಹೇಳುವುದಕ್ಕಿದೆಯಾ?”.
ಅಷ್ಟು ಸಾಕಾಯ್ತು ನನಗೆ, “ಹೌದು ಸರ್. ತಾವು ಬಿಡುವಿದ್ದರೆ ಒಂದು ಸಣ್ಣ ಅನುಮಾನ ಬಗೆಹರಿಸಿಕೊಳ್ಳುವುದಿತ್ತು” ಮುಜುಗರ ಮುಂದಿಟ್ಟೆ.
“ಪರವಾಗಿಲ್ಲ ಹೇಳಿ, ಹೇಗೂ ನಾನೂ ಫ್ರೀಯಾಗಿದೀನಿ ಇವತ್ತು” ಎಂದರು. ತುಸು ಧೈರ್ಯ ಬಂದಂತಾಗಿ, ಶಿವಸುಂದರ್ ಅವರ ಕವನ ಮತ್ತು ಗಾಂಧಿ-ಅಂಬೇಡ್ಕರ್ ತುಲನಾತ್ಮಕ ನೋಟಗಳ ವಿಮರ್ಶೆ, ಆ ಮೂಲಕ ಗಾಂಧಿಯನ್ನು ಗ್ರಹಿಸುವಲ್ಲಿ ನಮ್ಮಂತಹ ಹೊಸ ಪೀಳಿಗೆಯವರಿಗೆ ಉಂಟಾಗುತ್ತಿರುವ ಗೊಂದಲ, ಸದ್ಯದ ಸಾಂದರ್ಭಿಕ ಸನ್ನಿವೇಶಗಳಲ್ಲಿ ಗಾಂಧಿ-ಅಂಬೇಡ್ಕರ್ ಎಂಬ ಧೀಶಕ್ತಿಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿಟ್ಟು ನೋಡುವ ವಿಮಶಯ ಸಮಂಜಸತೆಯ ಬಗ್ಗೆ ಮಾತು ಬಿಚ್ಚಿದೆ.
ಒಂದುಕ್ಷಣ ತಾತ ಗಂಭೀರವಾದರು. “ನೋಡಿ ಇವರೇ, ಈ ಪ್ರಪಂಚದ ಆಧುನಿಕ ಇತಿಹಾಸದಲ್ಲಿ, ಇಡೀ ವಿಶ್ವದಲ್ಲಿ ಹೆಚ್ಚು ಗೌರವಕ್ಕೆ ಪಾತ್ರರಾದ ವ್ಯಕ್ತಿಯೆಂದರೆ ಅದು ಗಾಂಧಿ. ಅದೇ ವೇಳೆ, ಗಾಂಧಿಯನ್ನು ಅತಿಹೆಚ್ಚು ಟೀಕಿಸುವ, ವಿಮರ್ಶಿಸುವ, ಒಂದು ಕೈ ದ್ವೇಷಿಸಿಯೂಬಿಡುವ ದೇಶ ಅಂತ್ಯಾವುದಾದರು ಇದ್ದರೆ ಅದು ಭಾರತ. ಇದು ನಮ್ಮ democratic beautyಯೂ ಹೌದು, ಈ ದೇಶದ ವಿಪರ್ಯಾಸವೂ ಹೌದು….”
“ಹಾಗಾದರೆ, ಅಂಬೇಡ್ಕರ್ ವಾದದ ದೃಷ್ಟಿಯಿಂದ ನೋಡಿದಾಗ ಗಾಂಧಿಯೇಕೆ ವಿಲನ್ ರೀತಿ ಚಿತ್ರಿತವಾಗುತ್ತಾರೆ ಸರ್ ನಾನು ಈ ಪ್ರಶ್ನೆ ಕೇಳಲು ತುಂಬಾ ಅವಸರಿಸಿಬಿಟ್ಟೆನೇನೊ ಅನ್ನಿಸಿತು.
ಆದರೂ ತಾತ, ಲಹರಿಗೆಡಲಿಲ್ಲ. “ಗಾಂಧಿ ವಿಚಾರದಲ್ಲಿ ನಿಮ್ಮ ’ವಿಲನ್ ಪದ ಬಳಕೆಯೇ ಬಾಲಿಶವಾದುದು. ಪ್ರತಿ ವ್ಯಕ್ತಿಗೂ ವಿಶೇಷತೆಗಳು ಇರುವಂತೆ ಮಿತಿಗಳೂ ಇರುತ್ತವೆ. ಬರೀ ವಿಶೇಷತೆಗಳನ್ನೆ ಪರಿಗಣಿಸಿದರೆ ಅದು ವ್ಯಕ್ತಿಪೂಜೆಯಾಗಿಬಿಡುತ್ತೆ. ಆತನ ಮಿತಿಗಳನ್ನೇ ಟೀಕಿಸುತ್ತಾ ಕೂತರೆ ವಿಮರ್ಶೆ ಎನ್ನುವುದೇ ಒಂದು ಕಾಯಿಲೆಯಾಗಿಬಿಡುತ್ತೆ. ಈ ಎಚ್ಚರಿಕೆ ಮತ್ತು ಕಾಳಜಿ ಇಟ್ಟುಕೊಂಡು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಸ್ಪರ್ಶಿಸಬೇಕೆ ವಿನಃ ಪೂರ್ವಗ್ರಹಗಳ ಆಲೋಚನೆಯನ್ನು ಹೊತ್ತು ಅಲ್ಲ ಎಂದರು.
“ಹಾಗಾದ್ರೆ ಸರ್, ಪೂನಾ ಒಪ್ಪಂದದ ಮೂಲಕ ನೋಡಿದಾಗ ಗಾಂಧಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?” ಮತ್ತೆ ನನ್ನ ಪ್ರಶ್ನೆ ಮುಂದಿರಿಸಿದೆ.
“ಗಾಂಧಿ-ಅಂಬೇಡ್ಕರ್‌ರನ್ನು ತೂಗಿ ನೋಡುವಾಗ, ಖಂಡಿತವಾಗಿಯೂ ಪೂನಾ ಒಪ್ಪಂದ ಒಂದು ಬಹುಮುಖ್ಯವಾದ ಅಳತೆಗೋಲು. ಅದಕ್ಕೂ ಮೊದಲು ನಾವು ಗಾಂಧಿ ಮತ್ತು ಅಂಬೇಡ್ಕರ್ ಅಂದ್ರೆ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ. ಭಾರತವನ್ನು ಕಟ್ಟಿಕೊಡುವ ಎರಡು ನೋಟಗಳು. ಗಾಂಧಿ ಈ ಭಾರತವನ್ನು ತುಂಬಾ ಚೆನ್ನಾಗಿ ಗ್ರಹಿಸಿದರು. ಆದರೆ ಅಂಬೇಡ್ಕರ್ ಈ ಭಾರತವನ್ನು ಆಳವಾಗಿ ಅನುಭವಿಸಿದರು. ಗ್ರಹಿಕೆ ಮತ್ತು ಅನುಭವಗಳ ನಡುವೆ ಯಾವ ವ್ಯತ್ಯಾಸವಿದೆಯೋ, ಅದೇ ವ್ಯತ್ಯಾಸ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವುದು. ನಾನು ಗಾಂಧಿವಾದಿಯಾದರು, ಈ ದೇಶವನ್ನು ರೂಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ರಿಗೆ ಇದ್ದ ಸ್ಪಷ್ಟತೆಯನ್ನು ಗೌರವಿಸುತ್ತೇನೆ. ಯಾಕೆಂದರೆ ಗಾಂಧಿಯವರ ರಾಜಕೀಯ ಹೋರಾಟ ಎಷ್ಟು ಸ್ಪಷ್ಟತೆಯಿಂದ ಕೂಡಿತ್ತೊ, ಅಂಬೇಡ್ಕರರ ಸಾಮಾಜಿಕ ಹೋರಾಟ ಅಷ್ಟೇ ದೂರದೃಷ್ಟಿ ಹೊಂದಿತ್ತು. ಮೇಲ್ವರ್ಗದ ಗಾಂಧಿಯವರು ಗ್ರಹಿಸಿದ್ದ ಭಾರತೀಯ ಸಮಾಜಕ್ಕಿಂತ ನಿಮ್ನ ವರ್ಗದ ಅಂಬೇಡ್ಕರ್ ಅನುಭವಿಸಿದ್ದ ಸಮಾಜ ನಮ್ಮನ್ನು ರೂಪಿಸಬೇಕಿದೆ.
ಹಾಗಂತ ಗಾಂಧಿ, ಅಂಬೇಡ್ಕರ್ ವಾದಗಳು ವೈಷಮ್ಯವನ್ನು ತುಂಬಿಕೊಂಡ ತದ್ವಿರುದ್ಧ ಧ್ರುವಗಳಲ್ಲ. ಉತ್ತಮತೆಯೆಡೆಗೆ ತುಡಿದ ಎರಡು ಭಿನ್ನ ಮಾರ್ಗಗಳು. ಅಂತಹ ಬೌದ್ಧಿಕ ಜಟಾಪಟಿಗಳು ಇದ್ದಾಗಲೇ ನಾವು ಆರೋಗ್ಯವಂತ ಸಶಕ್ತ ಸಮಾಜವಾಗುತ್ತೇವೆ. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಇಂಥ ಒಟ್ಟಾರೆ ಉತ್ಕೃಷ್ಟ ವಾತಾವರಣ ಇದ್ದುದರಿಂದಲೇ ನಾವು ಆಂಗ್ಲರನ್ನೂ ಮಣಿಸಲು ಸಾಧ್ಯವಾದದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ನಾವು ವಿಘಟನೆಗಾಗಿ ಅಂತಹ ಜಟಾಪಟಿಗಳನ್ನು ಸರಕಾಗಿಸಿಕೊಳ್ಳಬಾರದು. ವಿಮರ್ಶೆಗೆ ಆಯಾ ಕಾಲಘಟ್ಟದ ತುರ್ತಿನ ಹೊಣೆಗಾರಿಕೆಯೂ ಇರಬೇಕಾಗುತ್ತದೆ. ಗಾಂಧಿವಾದಿಯಾದ ನನಗೆ ಇವತ್ತು ಅಂಬೇಡ್ಕರ್ ವಿಚಾರಧಾರೆಗಳು ಹೆಚ್ಚು ಸಮಂಜಸವಾಗಿ ಕಾಣುತ್ತವೆ. ಹಾಗಾಗಿ ಗಾಂಧಿವಾದಿಯಾಗಿಯೇ ನಾನು ಅವುಗಳನ್ನು ಸ್ವೀಕರಿಸುತ್ತೇನೆ. ಇಲ್ಲಿ ಯಾರನ್ನೋ ಹೀರೊ ಎಂದು ಬಿಂಬಿಸುವ, ಮತ್ತ್ಯಾರನ್ನೋ ವಿಲನ್ ಆಗಿಸುವ ಪ್ರಶ್ನೆಯೇ ಉದ್ಭವಿಸದು. ಈ ಎರಡೂ ವಾದಗಳ ಒಟ್ಟಾರೆ ತುಡಿತವಾದ ಉತ್ತಮತೆ ನಮ್ಮ ಆದ್ಯತೆಯಾಗಬೇಕು” ಎಂದು ವಿವರಿಸಿದರು.
ತಾತ ಹೀಗೆಲ್ಲ ಮಾತಾಡುತ್ತಿದ್ದರೆ, ಆ ಪುಟಾಣಿ ಮಂಚದ ಮೇಲೆ ಅವರ ಆಕಾರ ಕ್ಷಣಕ್ಷಣಕ್ಕೂ ಹಿಗ್ಗಿದಂತೆ, ಗಾಂಧಿಗಿಂತಲೂ ವಿಸ್ತಾರವಾದಂತೆ, ಸ್ವಾತಂತ್ರ್ಯದ ಬುದ್ಧನಂತೆ ನನ್ನ ಕಣ್ಣಿಗೆ ಕಾಣಿಸಿದರು. ನಾನು ಎತ್ತಿದ್ದ ವಿಚಾರಕ್ಕೆ ಇಂಥ ಅಲ್ಪಾವಧಿ ಚರ್ಚೆ ಒಂದು ತೀರ್ಮಾನವನ್ನು ಒದಗಿಸಲಾರದು ಅನ್ನೋದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ, ನಾನು ತುರ್ತಾಗಿ ಹೋಗಲೇಬೇಕಿದ್ದರಿಂದ, ಬೇಸರದಲ್ಲೆ “ಹೌದು ಸಾರ್. ನೀವು ಹೇಳುತ್ತಿರೋದು ಸರಿ. ಗಾಂಧಿ ಮತ್ತು ಅಂಬೇಡ್ಕರ್‌ರನ್ನು ನಮ್ಮ ಬಲಗಳಾಗಿ ಬಳಸಿಕೊಳ್ಳಬೇಕೆ ವಿನಾಃ ಪರಸ್ಪರ ಕಾದಾಟದ ಅಸ್ತ್ರಗಳನ್ನಾಗಿ ಅಲ್ಲ. ನನಗಂತು ನಿಮ್ಮ ಬಳಿ ಕೇಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದ್ರೆ ಯಾರನ್ನೊ ಅರ್ಜೆಂಟಾಗಿ ಭೇಟಿ ಮಾಡ್ಬೇಕಿದೆ ಸರ್. ಹಾಗಾಗಿ ತಾವು ಅನುಮತಿ ಕೊಟ್ಟರೆ ಹೊರಡ್ತೀನಿ. ಒಂದು ದಿನ ಬಿಡುವು ಮಾಡಿಕೊಂಡು, ನೀವೂ ಆರಾಮಾಗಿರುವ ಸಮಯ ನೋಡಿಕೊಂಡು ಬರ್ತೀನಿ. ಈ ವಿಚಾರದಲ್ಲಿ ನಿಮ್ಮ ಮಾತನ್ನು ಇನ್ನಷ್ಟು ಕೇಳಿಸಿಕೊಳ್ಳಬೇಕು ಸರ್. ಅಷ್ಟರಲ್ಲಿ ಇನ್ನೂ ಸ್ವಲ್ಪ ಇತಿಹಾಸವನ್ನು ಓದಿಕೊಂಡು ಬರುತ್ತೇನೆ” ಅಂದೆ.
“ಖಂಡಿತ ಬನ್ನಿ. ನನಗೆ ಮೊದಲೇ ತಿಳಿಸಿದರೆ ನಾನೂ ಒಂದಿಷ್ಟು ಟಿಪ್ಪಣಿ ಮಾಡಿ (ಯಾವ ವಿಚಾರವನ್ನೂ ಅವರು ಸೂಕ್ತ ಆಧಾರ, ಪುರಾವೆಗಳಿಲ್ಲದೆ ಮಂಡಿಸುತ್ತಿರಲಿಲ್ಲ) ಇಟ್ಟುಕೊಳ್ತೀನಿ. ಮಾತಾಡಲು ಅನುಕೂಲವಾಗುತ್ತೆ. ನಿಮ್ಮಂತ ಯುವಕರು, ಗಾಂಧಿ-ಅಂಬೇಡ್ಕರ್ ಥರದ ವಿಚಾರಗಳ ಬಗ್ಗೆ ಆಸಕ್ತಿ ತಳೆಯೋದು ತುಂಬಾ ಮುಖ್ಯ. ಗೊಂದಲಗಳನ್ನು ಬಗೆಹರಿಸಿಕೊಂಡಾಗಲೆ ನಮಗೆ ಸ್ಪಷ್ಟತೆ ಬರಲು ಸಾಧ್ಯ. ಇಲ್ಲವಾದಲ್ಲಿ ಕೇವಲ ಆ ಸಂದರ್ಭಕ್ಕೆ ಪ್ರತಿಕ್ರಿಯಿಸುವುದಷ್ಟೇ ನಮ್ಮ ಹೊಣೆಗಾರಿಕೆ ಅನ್ನಿಸಿಬಿಡುತ್ತೆ. ಪ್ರತಿಕ್ರಿಯೆ ಮತ್ತು ಆಲೋಚನೆಗಳಲ್ಲಿ ದೂರದೃಷ್ಟಿ ಇಲ್ಲದಿರುವುದೇ ನಮ್ಮ ಹೊಸ ಪೀಳಿಗೆಯ ಬಗ್ಗೆ ಇರುವ ದೊಡ್ಡ ಕೊರಗು. ವಿಚಾರಶೀಲರಾಗೋದು ಯುವಪೀಳಿಗೆಯ ತುರ್ತು ಅಗತ್ಯ. ನೀವು ಯಾವಾಗ್ಲಾದ್ರೂ ಬನ್ನಿ. ಮಾತಾಡೋಣ” ಎಂದರು.
ಅವರಿಂದ ಬೀಳ್ಕೊಟ್ಟು ಹೊರಟೆ. ಅಷ್ಟರಲ್ಲಿ ಈ ಕೊರೊನಾ ಮಹಾಮಾರಿ ನಮ್ಮೆಲ್ಲರ ಓಡಾಟ, ಒಡನಾಟಗಳಿಗೇ ನಿರ್ಬಂಧ ಹೇರಿತು. ಅದಾದ ಮೇಲೆ, ಅವರು ಬರೆದಿಟ್ಟಿದ್ದ ಮುನ್ನುಡಿಯನ್ನು ಸಂಗ್ರಹಿಸಲು ಒಮ್ಮೆ ಹೋದೆವಾದರು, ಕೊರೊನಾ ಸಂದಿಗ್ದತೆಯಿಂದಾಗಿ ಅವರಿಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಹೆಚ್ಚು ಹೊತ್ತು ಕಳೆಯದೆ ವಾಪಾಸಾದೆವು. ಅವತ್ತು ಸಹಾ “ಎಲ್ಲಿ ಇವರೇ, ಬರ್ತೀನಿ ಅಂದ್ರಿ. ಆದ್ರೆ ಬರ್ಲೇ ಇಲ್ಲ ಅಂತ ತಾತನೇ ನನಗೆ ನಮ್ಮ ಅಪೂರ್ಣ ಚರ್ಚೆಯ ಕುರಿತು ನೆನಪಿಸಿದರು. “ಈ ಕೊರೊನಾ ಕಾರಣಕ್ಕೆ ನಿಮಗೆ ತೊಂದರೆ ಆಗದಿರಲೆಂದು ಬರಲಿಲ್ಲ ಸಾರ್. ಇದೆಲ್ಲ ರಗಳೆ ಮುಗಿಯಲಿ, ಒಂದು ಇಡೀ ದಿನ ಬಿಡುವು ಮಾಡಿಕೊಂಡು ಬರ್ತೀನಿ” ಎಂದೆ. “ಆಯ್ತು” ಎಂದರು.
ಅದೇ ನನ್ನ ಮತ್ತು ಅವರ ಕೊನೆಯ ಭೇಟಿ. ಅವರು ಇಲ್ಲವಾದ ಸುದ್ದಿ ಕೇಳಿದಾಗಿನಿಂದ ಗಾಂಧಿ-ಅಂಬೇಡ್ಕರ್ ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಕಾಲದ ಕುಚೋದ್ಯವೆಂದರೆ, ಸ್ವಾತಂತ್ರ್ಯದ ಬುದ್ಧನಂತಹ ತಾತ ಕೂಡಾ ಬುದ್ಧ ಪೂರ್ಣಿಮೆಯಂದೇ ಅಗಲಿಹೋದದ್ದು. ಸ್ಪಷ್ಟತೆಯನ್ನು ತಂದುಕೊಡಬೇಕಿದ್ದ ಚರ್ಚೆಯನ್ನು ಕೇವಲ ಟಿಪ್ಪಣಿಗಷ್ಟೇ ಸೀಮಿತವಾಗಿಸಿಕೊಂಡ ನನ್ನ ಕೊರಗು ತಾತನಿಲ್ಲದೆ ಹೇಗೆ ಬಗೆಹರಿಯುವುದೋ ಗೊತ್ತಿಲ್ಲ…..
ಗಿರೀಶ್ ತಾಳಿಕಟ್ಟೆ
ಪ್ರಸ್ತುತ ಪೊಲೀಸ್ ಲಹರಿ ಪತ್ರಿಕೆಯ ಸಹಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಪತ್ರಕರ್ತ, ವಿಶಿಷ್ಟ ಪ್ರತಿಭೆಯ ಡಿಸೈನರ್ ಆಗಿ ಪರಿಚಯವಿರುವ ಗಿರೀಶ್ ತಾಳಿಕಟ್ಟೆಯವರು ಕವಿ, ಕಥೆಗಾರರೂ ಹೌದು.


