ಮೇ 2ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರದಲ್ಲಿ, ಮೇ 4ರಿಂದ ಇಲ್ಲಿವರೆಗೆ 23 ಸಲ ಇಂಧನ ದರ ಏರಿಕೆ ಮಾಡಲಾಗಿದ್ದು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಡೀಸೆಲ್ 100 ರೂ ದಾಟುವ ಮೂಲಕ ಇಂಧನ ದರಗಳು ಹೊಸ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.
ಇಂಧನ ದರದಲ್ಲಿ ಮತ್ತೊಂದು ಏರಿಕೆಯ ನಂತರ ಡೀಸೆಲ್ ಬೆಲೆ ಇಂದು ರಾಜಸ್ಥಾನದಲ್ಲಿ ಲೀಟರ್‌ಗೆ 100 ರೂ. ದಾಟಿ ‘ದಾಖಲೆ’ ಬರೆದಿದೆ.
ಈ ಏರಿಕೆ ಕಾರಣಕ್ಕೆ ಪೆತ್ರೋಲ್ ದರ 100 ರೂ. ದಾಟಿದ 7 ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿಕೊಂಡಿದೆ. ಹಾಗೆ ನೋಡಿದರೆ, ಕಳೆದ ಸಲದ ಏರಿಕೆಯಲ್ಲೇ ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ 100ರ ಗಡಿ ದಾಟಿತ್ತು.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಇಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್ ದರವನ್ನು 23 ಪೈಸೆ ಹೆಚ್ಚಿಸಲಾಗಿದೆ.
ದೆಹಲಿಯಲ್ಲಿ, ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಲೀಟರ್‌ಗೆ 96.12 ರೂ ಇದ್ದರೆ, ಡೀಸೆಲ್ ದರ 86.98 ರೂ ಇದೆ.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್ – ಈ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ಈಗ ಕರ್ನಾಟಕವೂ ಈ ಲಿಸ್ಟಿಗೆ ಸೇರ್ಪಡೆಯಾಗಿದ್ದು, ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿರಸಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99.39 ಮತ್ತು ಡೀಸೆಲ್ 92.27 ರೂಗಳಿಗೆ ತಲುಪಿವೆ.
ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯು ಫೆಬ್ರವರಿ ಮಧ್ಯದಲ್ಲಿ ಪೆಟ್ರೋಲ್ ದರ ನೂರು ರೂ. ದಾಟಿದ ಮೊದಲ ಪ್ರದೇಶವಾಗಿದೆ. ಇವತ್ತು ಶನಿವಾರ ಡೀಸೆಲ್ ಕೂಡ ಇಲ್ಲಿ ಸೆಂಚುರಿ ಬಾರಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ.
ರಾಜಸ್ತಾನದ ನಗರಗಳಲ್ಲಿ ಪೆಟ್ರೋಲ್ 107.22 ರೂ.ಗೆ ಮಾರಾಟವಾಗುತ್ತಿದೆ. ಇದು ದೇಶದಲ್ಲೇ ಗರಿಷ್ಠ ದರವಾಗಿದೆ. ಇವತ್ತಿನಿಂದ ನಗರಗಳಲ್ಲಿ ಡೀಸೆಲ್ 100.05 ರೂ.ಗೆ ಮಾರಾಟವಾಗುತ್ತಿದೆ. ಪಟ್ಟಣಗಳಲ್ಲಿ ಪ್ರೀಮಿಯಂ ಅಥವಾ ಸಂಯೋಜಕ ಪೆಟ್ರೋಲ್ ಲೀಟರ್‌ಗೆ. 110.50 ರೂ, ಮತ್ತು ಡೀಸೆಲ್ 103.72 ರೂ.ಗೆ ಮಾರಾಟವಾಗುತ್ತಿವೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಸರ್ಕಾರವು ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.
ಮೇ 29ರಂದು ಮುಂಬೈ ಪೆಟ್ರೋಲ್ ದರ 100 ರೂ. ದಾಟಿದ ಮೊದಲ ಮೆಟ್ರೋ ನಗರವಾಯಿತು. ಪೆಟ್ರೋಲ್ ಈಗ ಮುಂಬೈನಲ್ಲಿ 102.02 ರೂ.ಗೆ ಮತ್ತು ಡೀಸೆಲ್ 94.39 ರೂ.ಗೆ ಮಾರಾಟವಾಗುತ್ತಿವೆ.
ಲೇಹ್ ನಂತರ, ಶ್ರೀನಗರ ಕೂಡ ಪೆಟ್ರೋಲ್ ದರದಲ್ಲಿ 100 ರೂ. (ರೂ. 99.27 ರೂ) ಹತ್ತಿರ ಬಂದಿದೆ. ಹೈದರಾಬಾದ್‍ನಲ್ಲಿ ಕೂಡ ಪೆಟ್ರೋಲ್ ದರ 99.96 ರೂ,ಗೆ ತಲುಪಿದೆ.
ಪೆಟ್ರೋಲ್ ಲೇಹ್‌ನಲ್ಲಿ 101.73 ರೂ.ಗೆ ಮತ್ತು ಡೀಸೆಲ್ 93.66 ರೂ.ಗೆ ಮಾರಾಟವಾಗುತ್ತಿವೆ.
ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಕೊನೆಯ ಸುತ್ತಿನ ಮತದಾನಕ್ಕೂ ಮೊದಲು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆಯಲ್ಲಿ 18 ದಿನಗಳ ವಿರಾಮವನ್ನು ಕಾಯ್ದುಕೊಂಡಿದ್ದವು. ಮೇ 2ರಂದು ಫಲಿತಾಂಶ ಘೋಷಣೆಯಾಗಿತು. ಮೇ 4ರಿಂದ ಇವತ್ತಿನವರೆಗೆ 23 ಸಲ ಇಂಧನ ದರ ಏರಿಕೆ ಮಾಡಲಾಗಿದೆ.
ಈ 23 ಹೆಚ್ಚಳಗಳಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 5.72 ರೂ. ಮತ್ತು ಡೀಸೆಲ್ 6.25 ರೂಗಳಷ್ಟು ಏರಿಕೆಯಾಗಿದೆ.
ಹಿಂದಿನ 15 ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತವೆ.
ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಸ್ಥಿರವಾಗಿ ಕಂಡುಬಂದರೂ, ದೇಶದಲ್ಲಿ ಇಂಧನ ದರ ಏರಿಕೆಯಾಗುತ್ತಿದೆ.
ದೆಹಲಿಯಲ್ಲಿ, ಜೂನ್ 1 ರ ಅಧಿಕೃತ ಮಾಹಿತಿಯ ಪ್ರಕಾರ, ಪೆಟ್ರೋಲ್ ದರದಲ್ಲಿ ಕೇಂದ್ರ ಮತ್ತು ರಾಜ್ಯ ತೆರಿಗೆಗಳ ಪಾಲು ಶೇ. 34.8 ಮತ್ತು ಶೇ. 23.08 ರಷ್ಟಿದೆ. ಡೀಸೆಲ್‍ನಲ್ಲಿ ಕೇಂದ್ರ ತೆರಿಗೆಗಳು ಶೇ. 37.24ಕ್ಕಿಂತ ಹೆಚ್ಚಿದ್ದರೆ, ರಾಜ್ಯ ತೆರಿಗೆಗಳು ಶೇ. 14.64 ರಷ್ಟಿದೆ. ಇದು ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿದೆ.
ಇದನ್ನೂ ಓದಿ: ಅತಿ ಶ್ರೀಮಂತರ ಮೇಲೆ ’ಕೋವಿಡ್ ತೆರಿಗೆ’ ವಿಧಿಸಲೇಬೇಕಿದೆ: ವಿಕಾಸ್ ಮೌರ್‍ಯ


