ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎರಡು ತಿಂಗಳ ನಂತರ ಕೊರೊನಾ ಪ್ರಕರಣಗಳು ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ದೆಹಲಿಯ ಅಂಗಡಿಗಳು, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ನಾಳೆಯಿಂದ ಸರಾಗಗೊಳಿಸಲಾಗುವುದು ಎಂದು ದೆಹಲಿ ಸರ್ಕಾರ ಭಾನುವಾರ ಹೇಳಿದೆ.
“ಪ್ರಸ್ತುತ ಬೆಸ-ಸಮ ವ್ಯವಸ್ಥೆಗೆ ಬದಲಾಗಿ ವಾರದಲ್ಲಿ ಏಳು ದಿನ ಅಂಗಡಿಗಳು ತೆರೆದಿರುತ್ತವೆ. ಇದು ಒಂದು ವಾರದ ಪ್ರಾಯೋಗಿಕ ಆಧಾರದ ಮೇಲೆ ಇರುತ್ತದೆ. ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಮಾತ್ರ ಅಂಗಡಿಗಳನ್ನು ತೆರೆದಿಡಬಹುದು. ರೆಸ್ಟೋರೆಂಟ್‌ಗಳನ್ನು 50% ಆಸನ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಬಡತನದ ಸ್ಮಾರಕ’ ಎಂದು ಮೋದಿ ಟೀಕಿಸಿದ್ದ ನರೇಗಾ ಯೋಜನೆಯನ್ನು, ‘ಜೀವಸೆಳೆ’ ಎಂದ ಗುಜರಾತ್ ಸರ್ಕಾರ!
ವಾರದ ಮಾರುಕಟ್ಟೆಗಳಿಗೆ ಸಹ ಅವಕಾಶ ನೀಡಲಾಗಿದೆಯಾದರೂ 50% ದಷ್ಟು ಮಾರಾಟಗಾರರಿಗೆ ಮಾತ್ರ ಅನುಮತಿ ನೀಡಲಾಗಿದೆ. ಪ್ರತಿ ಪುರಸಭೆಯ ವಲಯದಲ್ಲಿ ದಿನಕ್ಕೆ ಒಂದು ಮಾರುಕಟ್ಟೆ ಮಾತ್ರ ಕಾರ್ಯನಿರ್ವಹಿಸ ಬೇಕಾಗುತ್ತದೆ.
ಧಾರ್ಮಿಕ ಸ್ಥಳಗಳು ತೆರೆಯಬಹುದು ಆದರೆ ಯಾವುದೇ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಸೋಂಕಿನ ಪ್ರಕರಣಗಳು ಪ್ರಸ್ತುತ ರೀತಿಯಲ್ಲೆ ಕಡಿಮೆಯಾಗುತ್ತಿದ್ದರೆ, ನಮ್ಮ ಜೀವನವು ಕ್ರಮೇಣ ಮತ್ತೆ ಹಾದಿ ಹಿಡಿಯುತ್ತದೆ. ಇದು ಒಂದು ದೊಡ್ಡ ದುರಂತವಾಗಿದ್ದು, ನಾವೆಲ್ಲರೂ ಅದನ್ನು ಒಟ್ಟಾಗಿ ಎದುರಿಸಬೇಕಾಗಿದೆ” ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: ಕೋವಿಡ್ ಸಾವುಗಳು ಅಧಿಕೃತ ಸಂಖ್ಯೆಗಿಂತ 7 ಪಟ್ಟು ಹೆಚ್ಚಿವೆ: ವರದಿಗೆ ಕಿಡಿಕಾರಿದ ಕೇಂದ್ರ


