ಕೊರೊನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. 10ನೇ ತರಗತಿಗೆ ಸೇರಲು ಅರ್ಜಿ ತುಂಬಿರುವ ವಿದ್ಯಾರ್ಥಿಗಳು ಮತ್ತು ಒಂಬತ್ತನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಹೋಲಿಕೆ ಮಾಡಿದರೇ ಎರಡು ಲಕ್ಷಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಈ ಮಾಹಿತಿಯು ಮಹಾರಾಷ್ಟ್ರದ ಶಿಕ್ಷಣ ಇಲಾಖೆಗೆ ಆಘಾತವನ್ನುಂಟು ಮಾಡಿದ್ದು, ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಮರಳಿ ಕರೆಸಿಕೊಳ್ಳುವ ಕಾರ್ಯಕ್ಕೆ ತುರ್ತು ಚಾಲನೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಕಳೆದ ವರ್ಷ ಒಟ್ಟು 18,31,344 ವಿದ್ಯಾರ್ಥಿಗಳು ಒಂಬತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆದಾಗ್ಯೂ, ಈ ವರ್ಷ ಹತ್ತನೇ ತರಗತಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 16, 57,000. ಈ ಪೈಕಿ 56 ಸಾವಿರ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಹಾಜರಾಗಿದ್ದರು. ಹೀಗಾಗಿ ಹತ್ತನೇ ತರಗತಿ ಪರೀಕ್ಷೆಗೆ 16 ಲಕ್ಷ ಹೊಸ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಕಳೆದ ವರ್ಷ 9 ನೇ ತರಗತಿಯಲ್ಲಿ ಉತ್ತೀರ್ಣರಾದವರೊಂದಿಗೆ ಹೋಲಿಸಿದರೆ, ಒಂದೇ ವರ್ಷದಲ್ಲಿ ಸುಮಾರು 2,32,000 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ
“ಬಡತನ, ಆರ್ಥಿಕ ತೊಂದರೆ, ಬಾಲ್ಯವಿವಾಹಗಳು, ಪೋಷಕರ ಕೆಲಸ ಮತ್ತು ಬಾಲ ಕಾರ್ಮಿಕ ಪದ್ಧತಿಗಾಗಿ ಬೇರೆಡೆಗೆ ವಲಸೆ ಹೋಗುವ ಸಾಧ್ಯತೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ” ಎಂದು ಜಲ್ಕಾರಿ ಜ್ಞಾನ ಪ್ರತಿಷ್ಠಾನದ ಹಿರಿಯ ಶಿಕ್ಷಣ ತಜ್ಞ ಮತ್ತು ಸಿಇಒ ಸಂಗಿತಾ ಮಾಲ್ಶೆ ಹೇಳಿದ್ದಾರೆ.
’ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ವಿದ್ಯಾರ್ಥಿಗಳು ಶಾಲೆಗೆ ಬರುವಂತಹ ವಾತಾವರಣ ಕಲ್ಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಗ್ರೇಡ್ ವ್ಯವಸ್ಥೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು 8 ನೇ ತರಗತಿವರೆಗೆ ತೇರ್ಗಡೆ ಮಾಡಲಾಗುತ್ತಿದೆ. ಒಂಬತ್ತನೇ ತರಗತಿಯಿಂದ ವಿದ್ಯಾರ್ಥಿಗಳು ಹೊರಗುಳಿದ ಹಲವಾರು ಘಟನೆಗಳು ನಡೆದಿವೆ, ಆದರೆ ಈಗ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಿರುವುದು ಆಘಾತಕಾರಿ ಮತ್ತು ಅಸ್ವಾಭಾವಿಕವಾಗಿದೆ’ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.
“ಪ್ರಾಥಮಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳನ್ನು ತಲುಪಬೇಕಿದೆ. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿಯ ಪ್ರಯತ್ನಗಳನ್ನು ನಾವು ನೋಡಿಲ್ಲ. ಅವರು ವಿದ್ಯಾರ್ಥಿಗಳನ್ನು ಹುಡುಕಲು ಮತ್ತು ಹತ್ತನೇ ತರಗತಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳಬೇಕಾಗಿತ್ತು” ಎಂದು ಮಾಜಿ ಶಿಕ್ಷಣ ಸಚಿವ ಮತ್ತು ಬಿಜೆಪಿ ನಾಯಕ ಆಶಿಶ್ ಶೆಲಾರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸತತ ಎರಡು ವರ್ಷ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯನ್ನು ಆಶ್ರಯಿಸಬೇಕಾಗಿದ್ದು, ಈ ಕ್ರಮವು ಬಡ ವಿದ್ಯಾರ್ಥಿಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗೆ ತಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ರಾಜ್ಯದ ಪ್ರಾಥಮಿಕ ಶಿಕ್ಷಣ ಇಲಾಖೆಯು ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಳ್ಳುತ್ತಲೇ ಇದ್ದರೂ, ಸರ್ಕಾರದ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಾಸ್ತವ ತಿಳಿಸುತ್ತಿದೆ ಎಂದು ಶಿಕ್ಷಣ ತಜ್ಞರು ಮತ್ತು ಪ್ರತಿಪಕ್ಷ ಆರೋಪಿಸಿದೆ.
ಇದನ್ನೂ ಓದಿ: ಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್ ಡಾಲರ್ ಏಕಾಧಿಪತ್ಯ?


