ಇಪ್ಪತ್ತು ಗಂಟೆಯ ನಿರಂತರ ಪ್ರವಾಸ ಮಾಡಿ ದೇಹ ದಣಿದಿತ್ತು. ಕಾಲುಚಾಚಿ ಮಲಗಲು ಹಾಸಿಗೆ ಸಿಕ್ಕರೆ ಸಾಕೆನಿಸಿತ್ತು. ಇನ್ನೇನು ಎರಡು ನಿಮಿಷದಲ್ಲಿ ಹಾಸಿಗೆ ಮೇಲೆ ಮೈಚೆಲ್ಲುವೆ ಎಂಬ ಯೋಚನೆಯಿಂದ ಮನಸ್ಸಿಗೆ ಆಗತಾನೆ ಹಿತ ಮೂಡುತ್ತಿತ್ತು. ಮಗ ಅಪಾರ್ಟಮೆಂಟ್‌ನ ಮನೆಯ ಬಾಗಿಲು ತೆಗೆದ. ಬಾಗಿಲು ತೆಗೆಯುತ್ತಿದ್ದಂತೆ ಓಡೋಡಿ ಬಂದ ಜೂಲು ನಾಯಿ, ಅವನ ಮೇಲೆರಗಿತು. ಅದು ಅವನು ಸಾಕಿದ ನಾಯಿ. ನಂತರ ನನ್ನ ಕಡೆ ತಿರುಗಿ ಹೊಸ ಆಗಂತುಕನನ್ನು ಪರಿಚಯಿಸಿಕೊಳ್ಳಲು ಮೂಸಿನೋಡಲಾರಂಭಿಸಿತು. ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ಅದರ ತಣ್ಣನೆಯ ನಾಲಿಗೆಯಿಂದ ನನ್ನ ಪಾದ ನೆಕ್ಕಿ, ತಣ್ಣನೆಯ ಜೊಲ್ಲು ಸೂಸಿತು. ಪ್ರವಾಸದ ಆಯಾಸದಿಂದ ದಣಿದಿದ್ದ ನನಗೆ ನಾಯಿಯ ಸ್ಪರ್ಶ ಕಿರಿಕಿರಿ ಅನಿಸಿ, “ಚೀ ನಡಿಯಾಚೆ” ಎಂದು ದೂರ ಸರಿಸಿದೆ. ಮಗನ ಮುದ್ದಿನ ನಾಯಿಯದು. ನನ್ನ ಅಸಹನೆ ಹಿಡಿಸಿರಲಿಕ್ಕಿಲ್ಲ ಅವನಿಗೆ. ಅವನ ಮುಖದಲ್ಲಿ ಬೇಸರದ ಛಾಯೆ ಮೂಡಿದ್ದು ನನಗೂ ಕಂಡಿತು. “ಐರಿಷ್ ಬಾ ಇಲ್ಲಿ” ಎಂದು ಬರಸೆಳೆದು ಸಂತೈಸಿದ ತನ್ನ ನೆಚ್ಚಿನ ಮಗಳನ್ನು. ಆಗ ನನ್ನ ಬಾಲ್ಯ, ಮಿಸೆಸ್ ಎಂ. ಪಿ. ನಾಡಗೌಡರ ಅಂದಿನ ಮಾತುಗಳು ನೆನಪಿನಲ್ಲಿ ಸುಳಿದುಹೋದವು.
ಹಿಂದೊಮ್ಮೆ ಬೆಂಗಳೂರಿನಲ್ಲಿ ನಾಡಗೌಡರ ಮನೆಗೆ ಹೋಗಿದ್ದೆ. ಅತ್ತಿಗೆ ತಿಂಡಿ ತಿನ್ನಲು ಕರೆದಿದ್ದರು. ಒಳಗೆ ಕಾಲಿಡುತ್ತಿದ್ದಂತೆ ನನ್ನ ಬರುವಿಕೆಯನ್ನು ಅಲ್ಲಿದ್ದ ದೊಡ್ಡ ಗಾತ್ರದ ನಾಯಿ ಪ್ರತಿಭಟಿಸಿತು. ’ನೀನ್ಯಾರೆಂದು’ ತನ್ನ ಕರ್ಕಶವಾದ ಧ್ವನಿಯ ಪ್ರದರ್ಶನ ನೀಡಿತು. ಅದರ ಯಜಮಾನಿ ’ಸುಮ್ಮನಿರು’ ಎಂದು ಆಜ್ಞೆ ಮಾಡಿದ್ದೂ ಉಪಯೋಗವಾಗಲಿಲ್ಲ. ಮೂಸಿ ನೋಡುತ್ತ, ಆಗಂತುಕನ ಪೂರ್ವಾಪರ ವಿಚಾರಿಸಲು ಮುಂದೆ ಬಂತು. ಅದರ ಗಾತ್ರ ಮತ್ತು ಗಡುಸಾದ ಧ್ವನಿಯಿಂದ ಗಾಬರಿಗೊಂಡಿದ್ದ ನನ್ನನ್ನು ಗಮನಿಸಿದ ಮನೆಯ ಯಜಮಾನಿ ಸಂತೈಸುತ್ತಾ, “ಅವಳೇನು ಮಾಡಲ್ಲ, ತುಂಬಾ ಒಳ್ಳೆಯವಳು, ಹೆದರಬ್ಯಾಡ್ರಿ” ಅಂದರು. ’ಅವಳೇನು ಮಾಡಲ್ಲ’ ಎಂದು ಯಾರನ್ನು ಕುರಿತು ಹೇಳುತ್ತಿದ್ದಾರೆಂದು ಗಾಬರಿಯ ಜೊತೆಗೆ ಗಲಿಬಿಲಿಯೂ ಆಯಿತು. ಒಂದುಕ್ಷಣದ ನಂತರ ಗೋಚರಿಸಿದ್ದು: ನಾಯಿಗೆ ಮನುಷ್ಯನ ಸ್ಥಾನ ನೀಡಿದ್ದಾರೆಂದು. ಆಶ್ಚರ್ಯಚಕಿತನಾದರೂ ಅದನ್ನು ವ್ಯಕ್ತಪಡಿಸದೆ ಸುಮ್ಮನಾದೆ.

ವಿಜಾಪುರದ ಹಳ್ಳಿಗೌಡರ ಮಗ ನಾನು. ಹತ್ತೆತ್ತಿನ ಒಕ್ಕಲು ಮನೆಯಲ್ಲಿ, ಎತ್ತು, ಎಮ್ಮೆ, ಆಕಳು, ಆಡುಗಳ ಮಧ್ಯೆ ಬೆಳೆದವನು. ಆಗ ಎರಡು ನಾಯಿಗಳು ನಮ್ಮೊಂದಿಗಿದ್ದವು. ಮನೆಯವರೆಲ್ಲರೂ ಮಲಗಿದ್ದಾಗ ಎಚ್ಚರವಿದ್ದು ಬಾಗಿಲಿಲ್ಲದ ಮನೆಯನ್ನು ಕಾಯುವ ಕೆಲಸ ಮಾಡುತ್ತಿದ್ದವು. ಎಲ್ಲ ಪ್ರಾಣಿಗಳಿಗಿಂತ ಕನಿಷ್ಠ ದರ್ಜೆಯ ಪ್ರಾಣಿಯ ಸ್ಥಾನ ನೀಡಿದರೂ ಮನೆಯ ಕಾವಲುಗಾರರೆಂದು ಅವ್ವ ಅವುಗಳನ್ನ ಪ್ರೀತಿಸುತ್ತಿದ್ದಳು. ಬಾಲ ಅಲ್ಲಾಡಿಸುತ್ತ ಹಿಂದೆ ಮುಂದೆ ಓಡಾಡುವ ವಿಶ್ವಾಸಿಕ ಪ್ರಾಣಿಯಾದರೂ ಅವುಗಳ ಸ್ಥಾನ ಯಾವತ್ತೂ ಹೊಸ್ತಿಲ ಹೊರಗಿತ್ತು.
ರಸ್ತೆಯಲ್ಲಿ ಬೀದಿ ನಾಯಿ ಮರಿಹಾಕಿದಾಗ ಓಡಿಹೋಗಿ ಎತ್ತಿಕೊಂಡಿದ್ದುಬಿಟ್ಟರೆ ನಾಯಿಗಳನ್ನು ಮುಟ್ಟಿದ್ದು ಕಡಿಮೆಯೆ. ಒಟ್ಟಾರೆಯಾಗಿ ಉಳಿದ ಪ್ರಾಣಿಗಳಿಗಿಂತ ನಿರ್ಲಕ್ಷಿತವಾದವಾಗಿದ್ದವು ನಾಯಿಗಳು. ಅಷ್ಟೇ ಏಕೆ “ನಾಯಿ ಬಾಳು ನನ್ನದು” ಎಂಬ ಆಡುಮಾತೇ ಸಾಕು, ಈ ನಾಗರಿಕ ಸಮಾಜ ನಾಯಿಯನ್ನು ಕಾಣುವ ರೀತಿಗೆ. ಕರಿ ನಾಯಿಯನ್ನು ಬಿಳಿ ನಾಯಿಯನ್ನಾಗಿ ಮಾಡಲು ಅಣ್ಣ ಸಾಬೂನು ಹಾಳು ಮಾಡಿದ್ದೂ, ಅವ್ವನಿಂದ ಚೆನ್ನಾಗಿ ಒದೆ ತಿಂದದ್ದೂ, ಅಣ್ಣನಿಗೆ ತಕ್ಕ ಶಾಸ್ತಿ ಆಯಿತೆಂದು ನಾನು ಸಂತೋಷಪಟ್ಟಿದ್ದು ಬಾಲ್ಯದ ನೆನಪು. ಅಣ್ಣನ ಬುದ್ಧಿವಂತಿಕೆಯನ್ನು ತುಂಬಾ ದಿನದ ಕೊಂಡಾಡಲಾಗಿತ್ತು. ಅದು ಗೇಲಿ ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ! ಅಪ್ಪನೂ ಬಿದ್ದು ಬಿದ್ದು ನಕ್ಕಿದ್ದರು ಅವನ ಈ ಸಾಹಸಕ್ಕೆ!

ಭಾರತೀಯ ನಾಯಿ ಎಂದರೆ ಸಾಮಾನ್ಯವಾಗಿ ಬೀದಿನಾಯಿ. ಅದಕ್ಕೆ ಬೇಕಿಲ್ಲ ’ಕೆನನ್ ಕ್ಲಬ್’ ಸರ್ಟಿಫಿಕೇಟ್. ನಾಯಿ ಮರಿಗಳು ಎಲ್ಲಿಂದರಲ್ಲಿ ಸಿಗುತ್ತವೆ. ನಾಯಿಮರಿಯ (ಪಪ್ಪಿ) ಕಿವಿ ಹಿಡಿದು ಮೇಲೆತ್ತಿದಾಗ ನೋವಿನಿಂದ ಚೀರಿದರೆ ’ಹುಷಾರು’. ಚೀರದಿದ್ದಲ್ಲಿ ’ಪೆದ್ದು’ ಅಥವಾ ’ತೆಬ್ಬಾವು’. ಇದೊಂದೇ ಮಾನದಂಡ ನಾಯಿಯ ಜಾತಿ ಕಂಡುಹಿಡಿಯಲು. ತಜ್ಞರ ಸರ್ಟಿಫಿಕೇಟ್ ಎಲ್ಲಾ ದೂರವೇ ಉಳಿಯಿತು. ವ್ಯಾಕ್ಸಿನೇಶನ್‌ನದ್ದೂ ಅದೇ ಗತಿ. ನೋವಿನಿಂದ ಚೀರಿದ ನಾಯಿಮರಿಯನ್ನು ಸಾಕಿಕೊಳ್ಳಲು ಅವ್ವನಿಂದ ಒಪ್ಪಿಗೆ ಸಿಕ್ಕರೆ ಅದಕ್ಕೆ ಮನೆಯ ಆವರಣದಲ್ಲಿ ನೆಲೆ ಸಿಕ್ಕಂತೆ. ಆಗ ಅದು ಗೌಡರ ನಾಯಿ. ಸಾಹುಕಾರರ ನಾಯಿ ಅಥವಾ ಕೃಷಿಕನ ನಾಯಿ. ಮನೆಯ ಅಂಗಳದಲ್ಲೊ, ದನದ ಕೊಟ್ಟಿಗೆಯಲ್ಲೊ ಬಿದ್ದುಕೊಂಡು, ಮನೆಯವರು ಉಂಡು ಬಿಟ್ಟ ಆಹಾರ ತಿಂದು ಬದುಕುವ ಮಾನವ ಸ್ನೇಹಿ ಪ್ರಾಣಿ.
ಇಂದಿನಂತೆ ಉದ್ದಿಮೆಯವರು ಉತ್ಪಾದಿಸಿದ ಆಹಾರ ಇರಲಿಲ್ಲಿ ಅವಕ್ಕೆ, ನಮ್ಮದೆ ರೊಟ್ಟಿ, ನುಚ್ಚು, ಉಳಿದ ಅನ್ನ ಅವುಗಳ ಆಹಾರ. ಮನೆಯಲ್ಲಿದ್ದ ಹಾಲನ್ನು ಅನ್ನದಲ್ಲಾಗಲಿ ನುಚ್ಚಿನಲ್ಲಾಗಲಿ ಹಾಕಿದರೆ ಮೃಷ್ಠಾನ್ನ ಭೋಜನ. ನಾಯಿಗೆಂತಲೇ ಕೊನೆಯಲ್ಲಿ ಬಡಿಯುತ್ತಿದ್ದರು ನಾಯಿರೊಟ್ಟಿ. ನಮ್ಮನೆಯ ಅಡುಗೆಯ ಸಹಾಯಕಿಗೆ ರೊಟ್ಟಿ ಬಡಿಯುವದು ಸಾಕೆನಿಸಿದಾಗ ಕೊನೆಯ ರೊಟ್ಟಿಯೊಂದನ್ನು ಬಡಿಯುತ್ತಿದ್ದಳು. ಅತ್ತ ಇತ್ತ ಚೆಲ್ಲಿದ ಒಣ ಹಿಟ್ಟನ್ನು ಬಳಿದು, ಕೊಪ್ಪರಿಗೆಯಲ್ಲಿ ಉಳಿದ ಹಸಿ ಹಿಟ್ಟಿನಲ್ಲಿ ಅದನ್ನು ಕಲಸಿ, ನಾದಿ, ಅಂಗೈ ದಪ್ಪನೆಯ ಕೈ ರೊಟ್ಟಿ ಮಾಡಿ ಹಂಚಿನ ಮೇಲೆ ಹಾಕಿ ಕೆಳಗಿನ ಉರಿಯುವ ಕಟ್ಟಿಗೆಗೆ ನೀರು ಹಾಕಿ ಎದ್ದರೆ, ಬೆಚ್ಚನೆ ಹಂಚಿನ ಕಾವಿನಿಂದಲೇ ಬೇಯುತ್ತಿತ್ತು ನಾಯಿ ರೊಟ್ಟಿ. ಇಂದಿಗೂ ಗ್ರಾಮೀಣ ಮಹಿಳೆಯ ಕೊನೆಯ ರೊಟ್ಟಿ ನಾಯಿ ರೊಟ್ಟಿಯೇ. “ನಾಯಿ ರೊಟ್ಟಿಯಂತಾ ರೊಟ್ಟಿ ಮಾಡತಾಳರಿ, ನಾ ಹ್ಯಾಂಗ ತಿನ್ನಲ್ರಿ ಯಪ್ಪಾ” ಎಂದು ಹೆಂಡತಿಯ ಮೇಲೆ ದೂರ ತರುತ್ತಿದ್ದರು ನಮ್ಮೂರ ಜನರು ಅಪ್ಪನಲ್ಲಿ.
ನನ್ನವ್ವನ ಮೊಮ್ಮಗನ ನಾಯಿಯ ವೃತ್ತಾಂತಕ್ಕಿಂತ ಮೊದಲು ಅಮೆರಿಕನ್ನರ ನಾಯಿಯ ಬಾಳಿನ ಬಗ್ಗೆ ಎರಡು ಮಾತು ಆಡಲೇಬೇಕು. ಅವರು ನಾಯಿಗೆ ನೀಡಿರುವ ಪ್ರಾಮುಖ್ಯತೆ ಅದ್ಭುತ. ಅದರ ಸುತ್ತಲೇ ಸುತ್ತುತ್ತವೆ ಅಮೆರಿಕನ್ನರ ಸಂಸಾರ. ದಿನಕ್ಕೆ ಎರಡು ಬಾರಿಯಾದರೂ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಬೇಕು. ಎರಡು ಬಾರಿ ಮೂತ್ರ ಮಾಡಿಸಲು ಮತ್ತೆರಡು ಬಾರಿ ಕಕ್ಕ ಮಾಡಿಸಲು. ಅಮೆರಿಕೆಯಲ್ಲಿ ನಾವಿದ್ದದ್ದು ಕೂಡುಮನೆಯ (ಅಪಾರ್ಟ್‌ಮೆಂಟ್) ಎರಡನೆಯ ಅಂತಸ್ತಿನಲ್ಲಿ. ಅಲ್ಲಿ ಅವುಗಳಿಗಾಗಿಯೇ ನಿರ್ಮಿಸಿದ 50×60 ಅಳತೆಯ ಕೈ ತೋಟ ಇದೆ. ಅಲ್ಲಿ ನಾಯಿ ಮೂತ್ರ ಮಾಡಲು ಪ್ಲಾಸ್ಟಿಕ್ ಹುಲ್ಲಿನ ಕಾರ್ಪೆಟ್ ಹಾಕಿದ್ದಾರೆ. ಇಡೀ ಅಪಾರ್ಟ್‌ಮೆಂಟಿನ ನಾಯಿಗಳು ಮೂತ್ರ ಮಾಡುವ ಸ್ಥಳವದು. ಆದರೆ ಅಲ್ಲಿ ಕಕ್ಕ ಮಾಡುವಂತಿಲ್ಲ. ಕಕ್ಕಸ್ಸಿಗಾಗಿ ಸಾರ್ವಜನಿಕ ರಸ್ತೆಗಳಿಗೆ ಕರೆದೊಯ್ಯಬೇಕು. ನಾಯಿಯನ್ನು ರಸ್ತೆಗೆ ತಂದವನೇ, ಅವುಗಳು ಮಾಡಿದ ಕಕ್ಕವನ್ನು ಎತ್ತಿ ಕಸದ ಡಬ್ಬಿಯಲ್ಲಿ ಹಾಕಬೇಕು. ಕಕ್ಕ ತಗೆಯಲು ಪ್ಲಾಸ್ಟಿಕ್ ಚೀಲಗಳನ್ನು ಕೈಲಿ ಹಿಡಿದೆ ರಸ್ತೆಗಿಳಿಯಬೇಕು. ಕಟ್ಟಿರುವ ಚೈನನ್ನು ಯಾವದೇ ಕಾರಣಕ್ಕೂ ಬಿಚ್ಚುವಂತಿಲ್ಲ. ಪ್ರತಿಯೊಂದು ಬಡಾವಣೆಯಲ್ಲಿಯೂ ಅವುಗಳಿಗಾಗಿಯೇ ಡಾಗ್ ಪಾರ್ಕುಗಳಿವೆ. ಪಾರ್ಕಿನಲ್ಲಿ ಚೈನನ್ನು ಬಿಚ್ಚಬಹುದು, ಸ್ವಾತಂತ್ರ್ಯ ಪಡೆದ ನಾಯಿಗಳು ಅಲ್ಲಿ ಓಡಾಡುತ್ತವೆ, ಪ್ರಿಯತಮೆ ಕಂಡರೆ ಮುದ್ದಾಡುತ್ತವೆ. ಆದರೆ ಕಚ್ಚಾಡುವುದನ್ನು ನಾನು ಕಂಡೇ ಇಲ್ಲ.
ಹಚಿ, ಹಳಿ ಎನಿಸಿಕೊಂಡು, ಬಾಗಿಲಾಚೆ ಬಿದ್ದುಕೊಂಡು, ನಮ್ಮ ಸಂಪತ್ತನ್ನು ಕಾಯುವ ಪ್ರಾಣಿ ಎಂಬ ಸಾಮಾನ್ಯ ಅಭಿಪ್ರಾಯ ಹಳ್ಳಿಗಾಡಿನ ಭಾರತೀಯನದು. ಅದರೆ ಅಮೆರಿಕನ್ ನಾಯಿ ಕಾವಲು ನಾಯಿಯಲ್ಲ. ಅವನು/ಅವಳು ಆ ಮನೆಯ ಸದಸ್ಯ. ಅವನಿಗೂ ಭಾವನೆಗಳಿವೆ ಎಂದು ತಿಳಿಯುತ್ತಾರೆ ಅಲ್ಲಿಯ ಜನ. ಅದು ಮನೆಯಲ್ಲಿ ಸರ್ವ ಸ್ವತಂತ್ರ, ಮನೆಯಲ್ಲಿರುವ ಎಲ್ಲ ಬೆಡ್‌ರೂಮ್‌ಗಳ ಒಡೆಯ. ಡ್ರಾಯಿಂಗ್ ರೂಮಿನಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತ ಅವರನ್ನು ಉಪಚರಿಸಿ ಅವರ ಮನ ಗೆಲ್ಲುವುದನ್ನೂ ಮಾಡುತ್ತದೆ
ಅಮೆರಿಕೆಯ ನಾಯಿ. ಅದರ ಪರಿಪಾಲನೆಗೆ ತಗೆಲುವ ತಿಂಗಳ ಖರ್ಚು ನಮ್ಮ ಒಂದು ಕುಟುಂಬದ ಖರ್ಚಿನಷ್ಟು.

ನಮ್ಮ ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬರು ಮೂತ್ರ ಮಾಡಿಸಲು ತಮ್ಮ ನಾಯಿಯನ್ನು ಕರೆದುಕೊಂಡುಬಂದರು. ಅದೆ ಸಮಯದಲ್ಲಿ ನಾನೂ ನಮ್ಮ ನಾಯಿಯೊಂದಿಗೆ ಅಲ್ಲಿದ್ದೆ. ನಮ್ಮ ಮನೆಯ ಮೇಲಿನ ಅಂತಸ್ತಿನಲ್ಲಿ ಅವರಿರುವುದು. ’ಚಿಹ್ವಾ ಮಿನ್ ಪಿನ್ (Chihua min pin) ತಳಿಯ, ಮೆಕ್ಸಿಕನ್ ಮೂಲದ ನಾಯಿ ಅವರದ್ದು. ನೋಡಲು ಥೇಟ್ ಇಲಿಯಂತಿತ್ತು. ಚಿಕ್ಕ ನಾಯಿ, ಎತ್ತರ ಒಂಭತ್ತು ಇಂಚನ್ನು ಮೀರಲಾರದು. ಅದರ ಹೆಸರು ರಿಲೀ (riley).
“ರಿಲೀ ಎಂದರೇನು” ಕೇಳಿದೆ ನಾನು. “ಧೈರ್ಯಶಾಲಿ” (courageous) ಎಂದರು ಜೇನಿ. ಆರು ವರ್ಷದ ರಿಲೀಯ ಬಣ್ಣ ಕರಿ. ಇಲಿಯಂತೆ ಕಿವಿ ನಿಮಿರಿಸಿಕೊಂಡಿದ್ದಳು. ಪೋಟೋಗೆ ಪೋಸು ಕೊಡು ಎಂದಾಗ ಅವಳು ಕೊಟ್ಟ reaction ನೋಡಿ ಅವಳು ಧೈರ್ಯಶಾಲಿ ಎನಿಸಲಿಲ್ಲ. ಜೇನಿ ರಿಲೀಯ ದಿನನಿತ್ಯ ಆಹಾರಕ್ಕೆ 25-30 ಡಾಲರ್ ಖರ್ಚು ಮಾಡುತ್ತಾರಂತೆ. ಅದನ್ನು ಅಡಾಪ್ಟ್ ಮಾಡಿಕೊಂಡಿದ್ದಾರೆ. ಹೌದು ಈ ದೇಶದಲ್ಲಿ ನಾಯಿಯನ್ನು ಅಡಾಪ್ಟ್ ಮಾಡಿಕೊಳ್ಳಬಹುದು. ಅಡಾಪ್ಷನ್ ಫೀ ಎಂದು ಅವರು ಸ್ಥಳೀಯ ಆಡಳಿತಕ್ಕೆ 500 ಡಾಲರ್ ಕಟ್ಟಿದ್ದಾರೆ.
ಜೇನಿ ಶ್ರೀಮಂತ ಹೆಣ್ಣು. ಅವರೊಂದಿಗೆ ಮಾತಿಗಿಳಿದಾಗ ತಿಳಿಯಿತು, ಅವರ ಸಿಯಾಟೆಲ್ ನಗರದ ಆರೋಗ್ಯ ಇಲಾಖೆಯ ಸೇವೆಯಲ್ಲಿದ್ದಾರೆಂದು. ಜೇನಿ ಹೇಳಿದ ಇನ್ನೊಂದು ವಿಷಯ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತು. ಅವರು ತನ್ನ ನಾಯಿಯನ್ನು ಸುತ್ತಿಸಲು ಒಬ್ಬರನ್ನು ನೇಮಿಸಿದ್ದಾರಂತೆ. ಪ್ರತಿನಿತ್ಯ ನಾಯಿಯನ್ನು ರಸ್ತೆಗೆ ಕರೆದುಕೊಂಡು ಹೋಗಿ ಕಕ್ಕ ಮಾಡಿಸಿ ಹಿಂತಿರಿಗಿ ಫ್ಲ್ಯಾಟ್‌ನಲ್ಲಿ ಬಿಡುವದು ಆ ಸೇವಕಿಯ ಕೆಲಸ. ಆ ಕೆಲಸಕ್ಕೆ ಇಪ್ಪತೈದು ಡಾಲರ ನಿತ್ಯ ಸಂಬಳ. “ಆಕೆಯ ಸೇವೆ ನಿಮ್ಮ ನಾಯಿಗೆ ಮಾತ್ರ ಮೀಸಲೇ” ಎಂದು ಪ್ರಶ್ನಿಸಿದೆ. “ಅದು ಆಕೆಗೆ ಬಿಟ್ಟಿದ್ದು, ನನಗೆ ತಿಳಿದಂತೆ ಆಕೆ ಹದಿನೈದು ಇಪ್ಪತ್ತು ನಾಯಿಗಳಿಗೆ ಸರ್ವಿಸ್ ಕೊಡುತ್ತಾಳೆ” ಎಂದಳು ಜೇನಿ.
“ಅಂದರೆ ಆಕೆಯ ದಿನದ ಗಳಿಕೆ 375ರಿಂದ 500 ಡಾಲರ್‌ಗಳೆ?” ಎಂದೆ ಆಶ್ಚರ್ಯಚಕಿತನಾಗಿ.
“May be” ಅವರ ಉತ್ತರ. ಅಮೆರಿಕೆಯ ಜೀವನಮಟ್ಟಕ್ಕೂ ಉನ್ನತಮಟ್ಟದ ಗಳಿಕೆ ಅದು.
“ಆ ಸೇವಕಿಯ ಕೆಲಸದ ಅರ್ಹತೆಗಳೇನು” ಎಂದೆ.
“ಏನಿಲ್ಲ, ಪರಿಚಯದವರು ರೆಕಮಂಡ್ ಮಾಡಿದ್ದಾರೆ” ಎಂದರು.
“ಹೇರ್ ಕಟಿಂಗ್ ಮಾಡಲು ಸಹ ಅರ್ಹತೆ ನೋಡುವ ನೀವು, ಇದಕ್ಕೂ ಅರ್ಹತೆ ಗೊತ್ತುಪಡಿಸಿರಬೇಕಲ್ಲ, ಅಥವಾ ಸ್ಥಳೀಯ ಆಡಳಿತದಿಂದ ನಿರ್ಬಂಧ ಏನಾದರೂ ಇರಬೇಕಲ್ಲವೆ?” ನನ್ನ ಪ್ರಶ್ನೆ.
“ಅಂತಹದೇನಿಲ್ಲ” ಎಂದರು ಜೇನಿ. ಅಮೇರಿಕಯಲ್ಲಿ ನಾಯಿ ಕಕ್ಕ ಮಾಡಿಸಿ ಕೋಟಿ ಕೋಟಿ ಸಂಪಾದಿಸಬಹುದು! ಬಡ ದೇಶದಲ್ಲಿ ಮನುಷ್ಯರಾಗಿ ಹುಟ್ಟಿ ನಾಯಿಗಿಂತ ಕೀಳಾದ ಜೀವನ ಮಾಡುವ ಬದಲು ಅಮೆರಿಕೆಯಲ್ಲಿ ನಾಯಿಯಾಗಿ ಹುಟ್ಟುವದು ಶ್ರೇಷ್ಠ ಎಂದಿದ್ದ ಇಲ್ಲಿಯ ಒಬ್ಬ ಎನ್‌ಆರ್‌ಐ.
ಇನ್ನೊಂದು ಕುಟುಂಬ ಬಂದಿತ್ತು. ಅದೇ ಕೆಲಸದ ಸಲುವಾಗಿಯೇ, ಅಂದರೆ ನಾಯಿಗಳಿಗೆ ಮೂತ್ರ ಮಾಡಿಸಲು. ಅವರಿಬ್ಬರು ಅಜಾನುಬಾಹರು. ಇಪ್ಪತ್ತೆಂಟರಿಂದ ಮೂವತ್ತು ವರ್ಷದ ಆಸುಪಾಸಿನಲ್ಲಿದ್ದರು. ಅವರು ಸುಂದರವಾದ ಚಿಕ್ಕ ಚಿಕ್ಕ ನಾಯಿಗಳನ್ನು ಹೊತ್ತು ತಂದಿದ್ದರು. ಅವಳು ಹಿಡಿದಿದ್ದು ಪಮೇರಿಯನ್ (Pumerian) ಬ್ರೀಡ್. ಅದನ್ನು ಮಫಿ (Muffy) ಎಂದು ಕರೆಯುತ್ತಿದ್ದರು. ಮಫಿಯನ್ನು 300 ಡಾಲರ ಕೊಟ್ಟು ಖರೀದಿಸಿದ್ದಳಾಕೆ. ದಿನವೊಂದಕ್ಕೆ 15-20 ಡಾಲರ್ ಅದರ ಆಹಾರಕ್ಕಾಗಿ ವ್ಯಯಿಸಿದರೆ, ವ್ಯಾಕ್ಸಿನ್ ಕೊಡಿಸಲು 800 ಡಾಲರ್! ಅವಳೊಂದಿಗಿದ್ದ ಅವಳ ಸ್ನೇಹಿತ ಹೊತ್ತು ತಂದಿದ್ದುದು ರೇಷ್ಮೆಯ ಕೂದಲುಳ್ಳ ಯಾರ್ಕಿಯನ್ನು (yorkie). ಯಾರ್ಕಿಯ ಮೂಲ ನ್ಯೂಜಿಲ್ಯಾಂಡ್ ಅಂತೆ. ಕಿವಿ (Kivi) ಬ್ರೀಡ್. ಬಹಳ ಸುಂದರವಾಗಿತ್ತು ಬೆಕ್ಕಿನ ಗಾತ್ರದ ಈ ನಾಯಿ.

ಇನ್ನೊಬ್ಬನಿದ್ದ, ಕಂದು ಬಣ್ಣದವನು. ಎರಡು ಎರಡೂವರೆ ಅಡಿ ಎತ್ತರ ಇರಬಹುದು. ಮ್ಯಾಕ್ಸ್ ಅವನ ಹೆಸರು. ಅವನನ್ನು ಕರೆತಂದಿದ್ದವಳು ಮಧ್ಯ ವಯಸ್ಸಿನ ಹೆಣ್ಣು. ನಮ್ಮ ಐರಿಷ್ ಕಂಡರೆ ತುಂಬ ಇಷ್ಟವಂತೆ ಅವಳಿಗೆ. ಹೋಗುತ್ತಿರುವನನ್ನು ತಡೆಹಿಡಿದು ಮಾತಿಗೆ ಎಳೆದಳು. ನನಗೂ ಅವಳ ಮ್ಯಾಕ್ಸ್‌ನ ಚಿತ್ರ ಬೇಕಾಗಿತ್ತು. ಸಮ್ಮತಿಸಿದಳು. ಆದರೆ, ತನ್ನ ಸುಂದರ ಕಣ್ಣಾಲಿಗಳನ್ನು ತುಂಬಿಕೊಂಡು ಆಗ ಹೇಳಿದಳು.
“ಮ್ಯಾಕ್ಸ್ ಬಹಳ ದಿನ ಬದುಕಲಾರ”.
“ಯಾಕೆ? ಏನಾಯಿತು?”
“ಅವನಿಗೆ ಕ್ಯಾನ್ಸರ್ ಆಗಿದೆ. ದಿನದಿಂದ ದಿನಕ್ಕೆ ತೂಕ ಕಳೆದುಕೊಳ್ಳುತ್ತಿದ್ದಾನೆ. ತಿಂಗಳ ಹಿಂದೆ 55 lbs ತೂಗುತ್ತಿದ್ದವನು ನಿನ್ನೆ 45 lbs ತೂಗಿದ” ಎಂದಳು ಭಾವುಕಳಾಗಿ. ಸಾಮಾನ್ಯವಾಗಿ ಭಾವನೆಗಳನ್ನು ಪ್ರದರ್ಶಿಸದ ದೇಶದಲ್ಲಿ ಅಪರಿಚಿತನೆದರು ಕಣ್ಣೀರು. ಹೇಗೆ ಸಂತೈಸಲಿ ತಿಳಿಯಲಿಲ್ಲ.
“ಚಿಂತಿಸಬೇಡಿ ದೇವರಿದ್ದಾನೆ” ಎಂದೆ. “ಯಾವ ಹಂತದಲ್ಲಿದೆಯಂತೆ ಕ್ಯಾನ್ಸರ್” ಮರುಪ್ರಶ್ನಿಸಿದೆ.
“ನಾಳೆ ಬಯಾಪ್ಸಿ ಮಾಡುತ್ತಾರೆ, ಆಗ ತಿಳಿಯಲಿದೆ” ಮತ್ತೆ ಕಣ್ಣೀರು.

ಮನೆಗೆ ಬಂದು ಮಗನಿಗೆ ಪೋಟೋ ತೋರಿಸಿ ವರದಿ ಒಪ್ಪಿಸಿದೆ. “ಓ” ಎಂದು ಉದ್ಗಾರತಗೆದು ಚಿಂತಿತನಾದ ಮಗ. “ಮ್ಯಾಕ್ಸ್‌ನನ್ನು ನೋಡಿರುವೆ. ಹಿರಿಯ ನಾಗರಿಕನ ನಾಯಿ ಅದು. ಅದು ಸತ್ತರೆ ಅವನಿಗೆ ಬೇರಾರಿಲ್ಲ. ಅವನು ಬದುಕಲಾರ” ಎಂದ. ನಾಯಿಯ ಹೆಸರಿನಿಂದ ಅದರ ಮಾಲಿಕನನ್ನು ಗುರುತಿಸಿದ ನನ್ನ ಮಗ. ಆಗ ಹೇಳಿದೆ “ನಾಯಿಗೆ ಮೂತ್ರ ಮಾಡಿಸಲು ಕರೆತಂದಿದ್ದ ಹೆಂಗಸು ಅವನ ಸಂಬಂಧಿ ಇರಬಹುದೆಂದೆ”.
“ಇರಲಿಕ್ಕಿಲ್ಲ” ಅವನು ವಾದ ಮುಂದುವರೆಸಿದ್ದ…

ಜಿ ಬಿ ಪಾಟೀಲ
ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


