Homeಅಂಕಣಗಳುಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

ಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

- Advertisement -
- Advertisement -

ಐವತ್ತೊಂದರ ಹರೆಯದ ಆ ಗೃಹಿಣಿಯ ಹೆಸರು ಪಾರುಲ್ ಖಕ್ಕಡ್. ಅಹ್ಮದಾಬಾದ್‌ನಿಂದ 200 ಕಿ.ಮೀ.ದೂರದಲ್ಲಿರುವ ಅಮ್ರೇಲಿಯ ನಿವಾಸಿ. ಕವಿತೆಯೊಂದನ್ನು ಬರೆದು ವಿವಾದದ ಬಿರುಗಾಳಿಗೆ ಸಿಕ್ಕಿದ್ದಾರೆ. ಆದರೂ ಧೃತಿಗೆಡದೆ ನಿಂತಿದ್ದಾರೆ ಈ ದಿಟ್ಟ ಹೆಣ್ಣುಮಗಳು.

ಬೆಂಬಲ ನೀಡಿದ ಬರೆಹಗಾರ ಲೋಕಕ್ಕೆ ಅವರು ನೀಡಿರುವ ಜವಾಬು- ’ಯಾವುದೇ ಒತ್ತಡ ಕಿರುಕುಳ ನನ್ನನ್ನು ಬಾಧಿಸಿಲ್ಲ, ನಿಮಗೆ ಸರಿತೋಚಿದ್ದನ್ನು ನೀವು ಮಾಡಿರಿ’.

ಇತ್ತೀಚೆಗೆ ತಮ್ಮನ್ನು ಸಂಪರ್ಕಿಸಲು ಬಯಸಿದ ಬಿ.ಬಿ.ಸಿ. ಸುದ್ದಿ ಸಂಸ್ಥೆಯ ಬಾತ್ಮೀದಾರನಿಗೆ ಮಿಂಚಂಚೆಯ ಮೂಲಕ ಪಾರುಲ್ ನೀಡಿರುವ ಪ್ರತಿಕ್ರಿಯೆ- ’ನಿಮ್ಮ ಸದ್ಭಾವನೆಗೆ ಋಣಿಯಾಗಿದ್ದೇನೆ. ಆದರೆ ಈಗ ನಾನು ಯಾರ ಕೂಡವೂ ಮಾತಾಡಲಾರೆ’.

ತಮ್ಮ ಕವಿತೆಯನ್ನು ಟೀಕಿಸಿ ಬೈಗುಳದ ಮಳೆ ಸುರಿಸಿದವರಿಗೆ ಉತ್ತರವಾಗಿ ಕಳೆದ ವಾರ ಅವರು ಮತ್ತೊಂದು ಕವಿತೆ ಬರೆದಿದ್ದಾರೆ. ಅದರಲ್ಲಿ ತಮ್ಮನ್ನು ಮತ್ತು ತಮ್ಮ ವಿವಾದಿತ ಕವಿತೆಯನ್ನು ಹಾಡಿ ಹೊಗಳಿದವರನ್ನೂ ದೂರವಿರಿಸಿ ಮಾತಾಡಿದ್ದಾರೆ. ಈ ಕವಿತೆಯ ಶೀರ್ಷಿಕೆ ’ತಾರೆ ಬೋಲ್ವಾನೂ ನಹೀ’ (ನೀನು ಮಾತಾಡುವಂತಿಲ್ಲ). ’ನಿರೀಕ್ಷಕ್’ ಎಂಬ ಗುಜರಾತಿ ಪಾಕ್ಷಿಕ ಈ ಕವಿತೆಯನ್ನು ಪ್ರಕಟಿಸಿದೆ. ಪ್ರಗತಿಪರರು ಮತ್ತು ಉದಾರವಾದಿಗಳು ತಮ್ಮ ಅನಿಸಿಕೆಗಳನ್ನು ಹೇಳಲು ಗುಜರಾತಿನಲ್ಲಿ ಉಳಿದಿರುವ ಕೆಲವೇ ಉದಾರವಾದೀ ಮಾಧ್ಯಮ ಆವರಣಗಳಲ್ಲೊಂದು ನಿರೀಕ್ಷಕ್.

’ಯಾತನೆಯು ಸಹನೆಯ ಸರಹದ್ದು ದಾಟಿದರೂ ತುಟಿ ಬಿಚ್ಚುವುದಿಲ್ಲ ನೀವು- ಹೃದಯ ವಿಲಪಿಸಿ ಚೀರಿದರೂ ಸೊಲ್ಲೆತ್ತುವವರಲ್ಲ ನೀವು’ ಎಂಬುದು ಈ ಹೊಸ ಕವಿತೆಯ ಸಾಲುಗಳಲ್ಲೊಂದು.

ತಿಂಗಳ ಹಿಂದೆ ಫೇಸ್ಬುಕ್ಕಿನಲ್ಲಿ ಆಕೆ ತಮ್ಮದೊಂದು ಕವಿತೆಯನ್ನು ಹಾಕಿದರು. ಹದಿನಾಲ್ಕು ಸಾಲುಗಳ ಈ ಕವಿತೆ ಮಿಂಚಿನ ಸಂಚಲನ ಸೃಷ್ಟಿಸಿತು. ಹತ್ತಾರು ಭಾಷೆಗಳಿಗೆ ತರ್ಜುಮೆಯಾಯಿತು. ಸಾಮಾಜಿಕ ಮಾಧ್ಯಮಗಳು ಮತ್ತು ಸೈಬರ್ ಲೋಕದಲ್ಲಿ ಕೋಲಾಹಲ ಎಬ್ಬಿಸಿತು.

ಕೋವಿಡ್ ಮಹಾಸಾಂಕ್ರಾಮಿಕದ ಕ್ರೂರ ಮತ್ತು ಸಿದ್ಧತೆಯೇ ಇಲ್ಲದೆ ಈ ದಾಳಿಗೆ ಶರಣಾಗಿ, ಆಳುವವರು ಸೃಷ್ಟಿಸಿದ ಮಾರಣಹೋಮವನ್ನು ಪ್ರತಿಫಲಿಸಿದ್ದ ಕವಿತೆಯಿದು. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಜಾಗವಿಲ್ಲದೆ, ಜಾಗ ಸಿಕ್ಕರೆ ಆಮ್ಲಜನಕ ದೊರೆಯದೆ, ಸತ್ತರೆ ಅಂತ್ಯಸಂಸ್ಕಾರಕ್ಕೂ ದಿಕ್ಕಿಲ್ಲದ ದುರ್ಗತಿಯಲ್ಲಿ ಬೆಂದ ಜನಮನಗಳು ಈ ಕವಿತೆಗೆ ಮಿಡಿದು ಮರುಗಿದವು.

ಆದರೆ ರಾಜಕೀಯ ಪಕ್ಷವೊಂದರ ಟ್ರೋಲ್ ಸೇನೆ ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಖಕ್ಕಡ್ ಅವರ ಮೇಲೆ ಸಮರವನ್ನೇ ಸಾರಿತು. ಅಶ್ಲೀಲ ಬೈಗುಳಗಳ ಸುರಿಮಳೆಯಾಯಿತು. ಸ್ತ್ರೀದ್ವೇಷದ ಕಾರ್ಕೋಟಕ ಹೊಳೆಯೇ ಹರಿಯಿತು. ಜೊತೆಗೆ ವ್ಯಾಪಕ ಬೆಂಬಲವೂ ದೊರೆಯಿತು.

ಹಾಗೆ ನೋಡಿದರೆ ಪಾರುಲ್ ವ್ಯವಸ್ಥೆಯನ್ನು ವಿರೋಧಿಸುವ ಇಲ್ಲವೇ ಯಥಾಸ್ಥಿತಿಯನ್ನು ಪ್ರಶ್ನಿಸುವ ಕವಿಯೇನೂ ಆಗಿರಲಿಲ್ಲ. ಬಹುತೇಕ ಭಾರತೀಯ ಸಂಪ್ರದಾಯಸ್ಥ ಕುಟುಂಬಗಳ ಹೆಣ್ಣುಮಕ್ಕಳ ಪಾಲಿಗೆ ವಿವಾಹವೇ ಪರಮ. ಒಳ್ಳೆಯ ’ಗಂಡು’ ಸಿಕ್ಕರೆ ಓದಿನ ಆಸೆಗೆ ಎಳ್ಳುನೀರು ಬಿಟ್ಟಂತೆಯೇ ಲೆಕ್ಕ. ಪಾರುಲ್ ಪರಿಸ್ಥಿತಿ ಭಿನ್ನವೇನಲ್ಲ. ಕಾಲೇಜು ಶಿಕ್ಷಣವನ್ನು ಎರಡನೆಯ ವರ್ಷಕ್ಕೇ ಮೊಟಕಾಗಿಸಿತ್ತು ಮದುವೆ. ಬ್ಯಾಂಕ್ ಉದ್ಯೋಗಿ ಪತಿಯೊಂದಿಗೆ ಮದುವೆಯ ’ಭದ್ರತೆ’ಗೆ ಅಡಿಯಿಟ್ಟರು.

ಹೈಸ್ಕೂಲಿನಲ್ಲಿದ್ದಾಗಲೇ ರೂಢಿಸಿಕೊಂಡಿದ್ದ ಕವಿತೆ ಬರೆವ ಹವ್ಯಾಸವನ್ನು ವಿವಾಹದ ನಂತರ ದೀರ್ಘ ರಜೆಯ ಮೇಲೆ ಕಳಿಸಬೇಕಾಯಿತು. ಹತ್ತು ವರ್ಷಗಳ ಹಿಂದೆ ಅಂತರ್ಜಾಲ ಸಾಮಾಜಿಕತಾಣ ಪಾರುಲ್ ಪಾಲಿಗೆ ಅನಾವರಣಗೊಳಿಸಿದ್ದು ಅವರ ಮುದ್ದಿನ ಮಗ.

’ಸದ್ದುಗದ್ದಲವಿಲ್ಲದೆ ನನ್ನ ಬದುಕಿಗೆ ಇಂಬಾಗಿ ನಿಂತದ್ದು ಕಾವ್ಯವೇ. ಅದುವೇ ನನ್ನ ಚೊಚ್ಚಲ ಪ್ರೀತಿ. ಬದುಕಿನ ಸಮುದ್ರದಲ್ಲಿ ಈಜಲು ಕಲಿಸಿದ್ದೇ ಕವಿತೆ. ಗುಜರಾತಿ, ಹಿಂದಿ ಉರ್ದುವಿನಲ್ಲಿ ಬರೆಯುತ್ತೇನೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನಸ್ಥಿತಿ ನನ್ನದು. ಘಜಲುಗಳ ಬರೆವುದು ಅಚ್ಚುಮೆಚ್ಚು. ಭಗವಂತನ ಅತ್ಯುತ್ತಮ ಸೃಷ್ಟಿ ನಾನು ಎಂಬುದು ನನ್ನ ಭಾವನೆ’ ಎಂಬ ಮಾತುಗಳನ್ನು ಅವರ ಬ್ಲಾಗಿನ ಮುನ್ನುಡಿಯಲ್ಲಿ ಓದಬಹುದು.

ಕುಟುಂಬಪ್ರೀತಿ ಮತ್ತು ಮನೆಗೆಲಸವೇ ತಮ್ಮ ಪಾಲಿನ ಬಹುದೊಡ್ಡ ಸಂತೋಷ ಎಂದಿದ್ದಾರೆ. ಗುಜರಾತಿನ ವೈಷ್ಣವ ಪಂಥ ಪೂಜಿಸುವ ಶ್ರೀಕೃಷ್ಣನ ಮತ್ತೊಂದು ರೂಪ ಶ್ರೀನಾಥಜೀ ಕುರಿತು ಆರು ಕವಿತೆಗಳನ್ನು ಬರೆದಿದ್ದಾರೆ. ಕೃಷ್ಣ ಮತ್ತು ರಾಧೆಯ ಕುರಿತು ಆಕೆ ಬರೆದಿರುವ ಕವಿತೆಗಳು ಗುಜರಾತಿ ಭಕ್ತಿಗೀತೆಗಳಾಗಿ ಜನಪ್ರಿಯವಾಗಿವೆ.

ಅವರ ಮನೆಯ ಮುಂದಿನ ಗುಲ್ಮೊಹರ್ ಮರವೊಂದನ್ನು ಕಡಿದು ಹಾಕಿದಾಗ ದುಗುಡಭರಿತ ಶೋಕಗೀತೆಯೊಂದನ್ನು ಬರೆದವರೀಕೆ.

ಅಂತರ್ಮುಖಿ ಸ್ವಭಾವದ ಪಾರುಲ್ ತಮ್ಮ ಹಿಂದೂ ಧರ್ಮಮೂಲ ಕುರಿತು ಹೆಮ್ಮೆಪಡುವ ವ್ಯಕ್ತಿ. ಮೋದಿಯವರು ಪ್ರಧಾನಿಯಾದ ನಂತರ ಅವರ ಮೇಲೆ ಮೆಚ್ಚುಗೆಯ ಸುರಿಮಳೆ ಕರೆದವರು. ಬಿಜೆಪಿಯನ್ನು ಬೆಂಬಲಿಸುವ ಕುಟುಂಬ ಆಕೆಯದು. ಎಂದೆಂದೂ ಬಿಜೆಪಿ ವಿರುದ್ಧ ದನಿ ಎತ್ತಿದವರಲ್ಲ. ಆದರೆ ಗಂಗೆಯಲ್ಲಿ ತೇಲಿದ ಶವಗಳನ್ನು ಕಂಡು ಆಕೆಯ ಮನಸು ಖಿನ್ನಗೊಂಡು ದ್ರವಿಸಿತ್ತು. ಕೋವಿಡ್ ದಾಳಿಯ ಮುಂದೆ ಜನರ ಕಷ್ಟ ಕಣ್ಣೀರುಗಳು ಅಕೆಯನ್ನು ಮಮ್ಮಲ ಮರುಗಿಸಿದ್ದವು. ಆಕೆಯಲ್ಲಿನ ಕವಯತ್ರಿ ಎಚ್ಚರಗೊಂಡಿದ್ದಳು.

ಆಕೆ ಬರೆದ ಈ ಕವಿತೆಗೆ ರಾಜಕಾರಣದ ಉದ್ದೇಶವೇ ಇರಲಿಲ್ಲ. ಸಾವಿನ ದುರಂತಕ್ಕೆ ಸಂವೇದನಾಶೀಲ ಮನಸ್ಸೊಂದು ಮಿಡಿದ ಸರಳ ಕ್ರಿಯೆಯಿದು ಎಂದು ಪಾರುಲ್ ಮತ್ತು ಅವರ ಕವಿತೆಯನ್ನು ಬಲ್ಲವರು ಹೇಳಿದ್ದಾರೆ. ಇಲ್ಲಿಯತನಕ ಗುಜರಾತಿನ ಬಲಪಂಥೀಯರು ಮೆಚ್ಚಿಕೊಂಡಿದ್ದ ಕವಿ ಆಕೆ.

ಖುದ್ದು ಗುಜರಾತಿನ ಆರೆಸ್ಸೆಸ್ ಮುಖವಾಣಿ ಸಾಧನಾ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಗುಜರಾತೀ ಕಾವ್ಯದ ಉಜ್ವಲ ಭವಿಷ್ಯ ಎಂದು ಆಕೆಯ ಪ್ರತಿಭೆಯನ್ನು ಈ ಹಿಂದೆ ಕೊಂಡಾಡಿದ್ದುಂಟು. ಇದೀಗ ಆಕೆ ಏಕಾಏಕಿ ಹಿಂದೂ ವಿರೋಧಿ, ಸಡಿಲ ಶೀಲದ ಹೆಂಗಸು, ನೈತಿಕ ಮೌಲ್ಯಗಳೇ ಇಲ್ಲದವಳು ಎಂಬ ಹಿಂಸಾತ್ಮಕ ಟೀಕೆಗಳ ದಾಳಿಯನ್ನು ಎದುರಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಕವಿಗಳು-ಬರೆಹಗಾರರನ್ನು ಒಳಗೊಂಡ ಗುಜರಾತಿ ಲೇಖಕ ಮಂಡಲ ಅವರ ಬೆಂಬಲಕ್ಕೆ ನಿಂತಿರುವುದು ಹೌದು.

ಗಂಗೆಯು ಶವವಾಹಿನಿಯಾಗಿ ಮಾರ್ಪಟ್ಟಿರುವ ರಾಮರಾಜ್ಯದ ಬೆತ್ತಲೆ ಅರಸ ಎಂದು ಕವಿತೆಯಲ್ಲಿ ಬಣ್ಣಿಸಿದ್ದರೂ ಆಕೆ ಯಾರನ್ನೂ ಹೆಸರಿಸಿಲ್ಲ. ಗಂಗೆಯಲ್ಲಿ ತೇಲಿದ ಶವಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿ ಮಾಡಿದ್ದವು. ಗಂಗಾ-ಯಮುನಾ ನದಿಗಳ ತಟದ ಮರಳಿನ ವಿಸ್ತಾರದಲ್ಲಿ ಹುಗಿಯಲಾಗಿದ್ದ ಸಹಸ್ರಾರು ಕೋವಿಡ್ ಪೀಡಿತರ ಕಳೇಬರಗಳ ಛಾಯಾಚಿತ್ರಗಳು, ಡ್ರೋನ್ ಮೂಲಕ ಸೆರೆಹಿಡಿದ ವಿಡಿಯೋಗಳು ವಿದೇಶೀ ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಕಂಡವು. ಬಿಳಿ ಮರಳಿನ ವಿಸ್ತಾರದಲ್ಲಿ ಹುಗಿದು ರಾಮನಾಮ ಅಚ್ಚು ಮಾಡಿದ ಕಾವಿ ವಸ್ತ್ರಗಳನ್ನು ಹೊದಿಸಿ, ಗುರುತಿಗಾಗಿ ಸುತ್ತ ಬಿದಿರು ದಬ್ಬೆಗಳನ್ನು ಸಿಕ್ಕಿಸಿದ್ದ ಘೋರ ದುರಂತದ ಚಿತ್ರಗಳು ಕೋವಿಡ್ ಸಾಂಕ್ರಾಮಿಕದ ಮುಂದೆ ಪ್ರಭುತ್ವದ ಅಸಹಾಯಕತೆಯನ್ನೂ, ಜನಸಮುದಾಯ ಎದುರಿಸಿದ ಸಾವುನೋವುಗಳ ದುರಂತವನ್ನೂ, ಶವಸಂಸ್ಕಾರಕ್ಕೆ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಲಾಗದೆ ಬಂಧುಗಳ ಶವಗಳನ್ನು ಗಂಗೆಯಲ್ಲಿ ತೇಲಿಬಿಟ್ಟ ಇಲ್ಲವೇ ಮರಳಿನಲ್ಲಿ ಹುಗಿದ ಬಡಜನರ ತಬ್ಬಲಿತನದ ಕಠೋರ ಬಿಂಬಗಳಾಗಿ ಪ್ರಸಾರವಾದವು.

ಗುಜರಾತಿ ಸಾಹಿತ್ಯ ಆಕಾಡೆಮಿಯ ನಿಯತಕಾಲಿಕ ಶಬ್ದಸೃಷ್ಟಿಯ ಸಂಪಾದಕೀಯದ ವಿರುದ್ಧ ಆ ರಾಜ್ಯದ ಉದ್ದಗಲಕ್ಕೆ ಬುದ್ಧಿಜೀವಿಗಳು ಸಿಡಿದೆದ್ದಿದ್ದಾರೆ. ’ಶಬ್ದಸೃಷ್ಟಿ’ ಎಂಬುದು ಗುಜರಾತ್ ಸಾಹಿತ್ಯ ಆಕಾಡೆಮಿಯ ಮುಖವಾಣಿ. ಈ ನಿಯತಕಾಲಿಕ ಪ್ರಕಟಿಸಿರುವ ಸಂಪಾದಕೀಯವೊಂದು ಆ ರಾಜ್ಯದ ಸಾಹಿತ್ಯ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ಈ ಹಿಂದೆ ಆರೆಸ್ಸೆಸ್ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಅವರು ಈಗ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

’ಅಲ್ಲ, ಇದು ಕವಿತೆಯಲ್ಲ, ಅರಾಜಕತೆಯ ಸೃಷ್ಟಿಗೆ ಕವಿತೆಯೊಂದರ ದುರುಪಯೋಗ’ ಎಂಬುದು ಈ ಸಂಪಾದಕೀಯದ ತಲೆಬರೆಹ. ಪ್ರಸ್ತಾಪಿತ ಕವಿತೆಯನ್ನು ರಚಿಸಿದ ಕವಯತ್ರಿಯನ್ನು ಬೆಂಬಲಿಸಿ ಕವಿತೆಯನ್ನು ಹಂಚಿಕೊಂಡವರು ’ಸಾಹಿತ್ಯ ನಕ್ಸಲೀಯರು’ ಎಂದು ಬಣ್ಣಿಸಲಾಗಿದೆ. ಮೋದಿ ಆಡಳಿತವನ್ನು ವಿಮರ್ಶೆಗೆ ಗುರಿ ಮಾಡಿದ ಸಾಮಾಜಿಕ ಕಾರ್ಯಕರ್ತರು ಮತ್ತು ಚಿಂತಕರಿಗೆ ಈಗಾಗಲೆ ’ಅರ್ಬನ್ ನಕ್ಸಲರು’ ಎಂಬ ಹಣೆಪಟ್ಟಿ ಹಚ್ಚಿ ಸೆರೆಮನೆಗೆ ತಳ್ಳಲಾಗಿದೆ. ಅರ್ಬನ್ ನಕ್ಸಲರು ಪದಪುಂಜ ಸರಣಿಗೆ ಇದೀಗ ಸೇರಿಸಲಾಗಿರುವ ಹೊಸ ಶಬ್ದಾವಳಿ ’ಸಾಹಿತ್ಯ ನಕ್ಸಲೀಯರು’.

ಸೃಜನಶೀಲ ಲೇಖಕರು ಏನನ್ನು ಬರೆಯಬೇಕು, ಏನನ್ನು ಬರೆಯಕೂಡದು ಎಂದು ವಿಧಿಸುವ ಪಾಂಡ್ಯ ಸಂಪಾದಕೀಯವು ಇಂದಿರಾಗಾಂಧಿ 1975ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ನೆನಪಿಸುತ್ತದೆ. ಲೇಖನಿಯನ್ನು ಸುತ್ತಿಗೆಯಿಂದ ಜಜ್ಜಿ ಹಾಕಿದಂತೆ ಮತ್ತು ಗುಜರಾತಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮರಣಶಾಸನ. ದೇಶದಲ್ಲಿ ಅರಾಜಕತೆ ಹರಡುವ ರಾಷ್ಟ್ರವಿರೋಧಿ ಸಾಹಿತ್ಯ ನಕ್ಸಲೀಯರನ್ನು ಮತ್ತು ವಿಧ್ವಂಸಕ ಶಕ್ತಿಗಳನ್ನು ಕವಿತೆಯು ಉತ್ತೇಜಿಸಿದೆ ಎಂಬ ಪಾಂಡ್ಯ ಹೇಳಿಕೆ ಅತೀವ ಆಘಾತಕಾರಿ ಮತ್ತು ತೀವ್ರ ಖಂಡನೀಯ ಎಂದು ಸಾಹಿತಿಗಳು ನೀಡಿರುವ ಸಂಯುಕ್ತ ಹೇಳಿಕೆ ಕಳವಳ ಪ್ರಕಟಿಸಿದೆ.

ಈ ಪುಟ್ಟ ಕವಿತೆಯು ಸಂಪ್ರದಾಯವಾದಿ ಗುಜರಾತಿ ಹಿಂದೂ ಸಂವೇದನೆಯೊಂದರ ವಿಸ್ಫೋಟ ಎಂದೂ ಹಿಂದೀ ಚಿಂತಕ ಅಪೂರ್ವಾನಂದ್ ಬಣ್ಣಿಸಿದ್ದಾರೆ.

ಬರೆದಿದ್ದ ಕವಿತೆಯಲ್ಲಿ ಅಡಗಿದ್ದ ದೇಶದ್ರೋಹ ಅದಾವುದು? ಮೂಲ ಕವಿತೆಯ ಶಕ್ತಿಯನ್ನು ಅನುವಾದದಲ್ಲಿ ಸೆರೆಹಿಡಿಯುವುದು ಕಡು ಕಠಿಣ ಕಸರತ್ತು.

ಈ ವರದಿಗಾರ ಮಾಡಿದ ಮೂಲ ಕವಿತೆಯ ಒರಟು ತರ್ಜುಮೆಯ ಪ್ರಯತ್ನ ಈ ಕೆಳಕಂಡಂತಿದೆ-

ಕಳೇಬರಗಳೆಲ್ಲ ಒಮ್ಮೆಗೇ ದನಿ ತೆರೆದು ಮಾತಾಡಿದವು- ಸರ್ವವೂ ಸುಭಗ ಸುಮುಖ ಸುಭಿಕ್ಷ ಅಂದ ಚೆಂದವಯ್ಯಾ
ಪ್ರಭುವೇ, ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.
ಧಣಿಯೇ ಸಾಲುವುದಿಲ್ಲವಯ್ಯಾ ನಿನ್ನ ಚಿತಾಗಾರಗಳು, ಸೌದೆಯೇ ಇರದ ಚಿತೆಗಳು
ಪ್ರಭುವೇ ಹೆಣಗಳಿಗೆ ಹೆಗಲು ನೀಡಿ ಸೋತಿವೆಯಯ್ಯಾ ನಮ್ಮ ಭುಜಗಳು, ಇಂಗಿ ಹೋಗಿವೆ ಕಣ್ಣೀರು
ಧಣಿಯೇ ಕಾಣದೇನಯ್ಯಾ ಮನೆ ಮನೆಗೆ ನುಗ್ಗಿದ ಯಮದೂತನ ಮೃತ್ಯು ನರ್ತನ
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ
ಧಣಿಯೇ ಹಗಲಿರುಳು ಉರಿದುರಿದು ದಣಿದು ಒರಗಿವೆಯಯ್ಯಾ ಚಿತೆಗಳು
ಒಡೆಯನೇ ಒಡೆಯತೊಡಗಿವೆ ನಮ್ಮ ಕೈಬಳೆಗಳು ನಿತ್ಯ ನಿರಂತರ, ಚೂರು, ಚೂರಾಗಿವೆ ಹೃದಯಗಳು
ಊರೂರುಗಳು ಹೊತ್ತಿ ಉರಿವಾಗ ನುಡಿಯತೊಡಗಿದೆ ಪಿಟೀಲು- ’ವಾಹ್ ಬಿಲ್ಲಾ ರಂಗಾ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಧಣಿಯೇ ದೈವೀಕ ನಿನ್ನ ಉಡುಪುಗಳು, ದೈದೀಪ್ಯ ನಿನ್ನ ಪ್ರಭಾವಳಿ
ಊರಿಗೆ ಊರೇ ಕಾಣತೊಡಗಿದೆ ನಿನ್ನ ನಿಜರೂಪವನು
ನಿಜದನಿಯ ಮಾನವನಿದ್ದರೆ ಮುಂದೆ ಬರಲಿ, ಹೇಳಲಿ ಬಾಯಿ ತೆರೆದು
’ನನ್ನ ಅರಸ ನಿಂತಿರುವನು ಬರಿ ಬತ್ತಲಾಗಿ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಬೈಗುಳಗಳ ಸುರಿಮಳೆಯ ನಂತರ ತಮ್ಮ ಫೇಸ್ಬುಕ್ ಖಾತೆಗೆ ಆಕೆ ಬೀಗ ಹಾಕಿದ್ದಾರೆ. ಆದರೆ ವಿವಾದಕ್ಕೆ ದಾರಿ ಮಾಡಿದ ಕವಿತೆಯನ್ನು ತೆಗೆದು ಹಾಕಿಲ್ಲ. ಈ ಕವಿತೆಯನ್ನು ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದು ಹಾಕದೆ ಇರುವುದಕ್ಕೆ ಅಭಿನಂದಿಸಿದ ಗುಜರಾತಿ ಕವಿ ಮೇಹುಲ್ ದೇವಕಲಾ ಅವರಿಗೆ ಪಾರುಲ್ ಪ್ರಶ್ನೆ- ಕವಿತೆಯಲ್ಲಿ ನಾನು ತಪ್ಪೇನನ್ನೂ ಹೇಳಿಲ್ಲ. ಹೀಗಿದ್ದಾಗ ಅದನ್ನು ಯಾಕೆ ತೆಗೆದು ಹಾಕಲಿ?


ಇದನ್ನೂ ಓದಿ: ನೂತನ ಐಟಿ ನಿಯಮಗಳ ಮೊದಲ ಟಾರ್ಗೆಟ್ ಕಾರ್ಟೂನಿಸ್ಟ್‌ಗಳೇ ಏಕಿರಬಹುದು?

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...