ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಅಸದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಮುಂದಿನ ವರ್ಷವೇ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ (ಎಸ್‍ಎಡಿ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಘೋಷಿಸಲಾಗಿದೆ ಎಂದು ಮಾಯಾವತಿ ಒತ್ತಿ ಹೇಳಿದ್ದಾರೆ. 117 ಸದಸ್ಯರ ವಿಧಾನಸಭೆಯಲ್ಲಿ ಉಭಯ ಪಕ್ಷಗಳು ಸ್ಥಾನ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿವೆ: ಎಸ್‌ಎಡಿ 97 ಸ್ಥಾನಗಳಲ್ಲಿ ಮತ್ತು ಬಿಎಸ್‌ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

“ಓವೈಸಿಯವರ ಎಐಎಂಐಎಂ ಮತ್ತು ಬಿಎಸ್‍ಪಿ ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿವೆ ಎಂಬ ವಿಷಯ ನಿನ್ನೆಯಿಂದ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದೆ. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು. ಇದು ದಾರಿತಪ್ಪಿಸುವ ಮತ್ತು ಆಧಾರರಹಿತ ಸುದ್ದಿಯಾಗಿದೆ. ಇದರಲ್ಲಿ ಸತ್ಯದ ಒಂದು ಅಗುಳು ಕೂಡ ಇಲ್ಲ. ಬಿಎಸ್‍ಪಿ ಅದನ್ನು ತೀವ್ರವಾಗಿ ನಿರಾಕರಿಸಿದೆ” ಎಂದು ಮಾಯಾವತಿ ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

“ಈ ನಿಟ್ಟಿನಲ್ಲಿ, ಪಂಜಾಬ್ ಹೊರತುಪಡಿಸಿ, ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಯುಪಿ ಮತ್ತು ಉತ್ತರಾಖಂಡ ರಾಜ್ಯ ಚುನಾವಣೆಗಳಲ್ಲಿ ಬಿಎಸ್‍ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಮಾಯಾವತಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಕಳೆದ ಬಾರಿ ಹಿನ್ನಡೆ ಅನುಭವಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಈ ವಾರದ ಆರಂಭದಲ್ಲಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಮುಂದಿನ  ಉತ್ತರಪ್ರದೇಶದ ಚುನಾವಣೆಗೆ ಯಾವುದೇ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ತಮ್ಮ ಪಕ್ಷವು ಸಮಾನ ಮನಸ್ಕ ಸಣ್ಣ ಪಕ್ಷಗಳ ಒಕ್ಕೂಟದೊಂದಿಗೆ ಮೈತ್ರಿಯನ್ನು ಬಯಸುತ್ತದೆ’ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ವಿಚಾರ: ಅಖಿಲೇಶ್ ಯಾದವ್ ಭೇಟಿಯಾದ ಬಿಎಸ್‌ಪಿ ಶಾಸಕರು

LEAVE A REPLY

Please enter your comment!
Please enter your name here