ಲಾಕ್‌ಡೌನ್ ಭಾರತದಲ್ಲಿ ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ. ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯೋಗ, ನಡಿಗೆ, ವ್ಯಾಯಾಮ, ಸೈಕ್ಲಿಂಗ್ ಹೀಗೆ ಜನರು ದೇಹ ಮನಸ್ಸಿನ ಆರೋಗ್ಯದ ಕಡೆ ಹೆಚ್ಚು ಹೆಚ್ಚು ಗಮನ ಕೊಡುತ್ತಿದ್ದಾರೆ. ಬೆಂಗಳೂರಿನಿಂದ ಇಬ್ಬರು ಸೈಕ್ಲಿಸ್ಟ್‌ಗಳು ಭಾರತ ಯಾತ್ರೆಯನ್ನು ಹೊರಟಿದ್ದಾರೆ. ಅದೂ ಸೈಕಲ್‌ನಲ್ಲಿ. ಆರಂಭದ ಉತ್ಸಾಹ, ದಾರಿ ಮಧ್ಯೆ ದಣಿಯುತ್ತಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಇಬ್ಬರು ಸೈಕ್ಲಿಸ್ಟ್‌ಗಳು ಈಗಾಗಲೇ ಸೈಕಲ್ ಸವಾರಿಯ ಮೂಲಕ ದೆಹಲಿ ತಲುಪಿದ್ದಾರೆ. ಸರಿ ಸುಮಾರು 3000 ಕಿಲೋ ಮೀಟರ್ ದೂರವನ್ನು ಬಿಸಿಲು, ಮಳೆ, ನಿರ್ಬಂಧಗಳ ನಡುವಿನಲ್ಲಿ ಕ್ರಮಿಸಿದ್ದಾರೆ.
ಇವರದು ಸಾಮಾನ್ಯ ಸೈಕಲ್ ಅಲ್ಲ. ಉದ್ದವಾದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಪೆಡೆಲ್ ತುಳಿಯುವ ಎರಡು ಸೀಟ್‌ಗಳ ಟೆಂಡೆಮ್ ಸೈಕಲ್. ಒಬ್ಬರಿಗೊಬ್ಬರ ಹೊಂದಾಣಿಕೆ, ವೇಗ, ಲಯ ಮತ್ತು ಸಹಕಾರ ಮಾತ್ರ ಈ ಬಗೆಯ ಸೈಕಲ್ ಪ್ರಯಾಣದ ಯಶಸ್ಸನ್ನು ನಿರ್ಧರಿಸುತ್ತದೆ. ಇದುವರೆಗೆ ಟೆಂಡೆಮ್ ಸೈಕಲ್‌ನಲ್ಲಿ ಭಾರತದಲ್ಲಿ ಇಷ್ಟು ದೂರ ಯಾರೂ ಕ್ರಮಿಸಿಲ್ಲ. 6000 ಕಿ.ಮೀ ಪ್ರಯಾಣದ ಮೂಲಕ ಈ ಸೈಕ್ಲಿಸ್ಟ್‌ಗಳು ಹೊಸ ದಾಖಲೆಗೆ ಸದ್ಯದಲ್ಲಿಯೇ ಸಾಕ್ಷಿಯಾಗಲಿದ್ದಾರೆ.
44 ವರ್ಷದ ಮೀರಾ ವೇಲಂಕರ್ ಮತ್ತು 48 ವರ್ಷದ ದಿಂಕರ್ ಪಾಟಿಲ್ ಜೂನ್ 19 ರಂದು ಬೆಂಗಳೂರಿನಿಂದ ಸೈಕಲ್‌ನಲ್ಲಿ ಹೊರಟು 14 ದಿನಗಳ ನಂತರ ಇಂದು ದೆಹಲಿ ತಲುಪಿದ್ದಾರೆ. 6000 ಕಿಲೋಮೀಟರ್ ದೂರದ ಗೋಲ್ಡ್‌ನ್ ಕ್ವಾಡ್ರಿಲಾಟರಲ್ ರಸ್ತೆಯನ್ನು ಸಂಪೂರ್ಣವಾಗಿ ಸೈಕಲ್‌ನಲ್ಲಿಯೇ ಕ್ರಮಿಸುವ ಉದ್ಧೇಶ ಹೊಂದಿರುವ ಸೈಕ್ಲಿಸ್ಟ್‌ಗಳು ಸದ್ಯ ಅರ್ಧ ದೂರವನ್ನು ಕ್ರಮಿಸಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ನಂತರ ಅಮಿರ್ ಖಾನ್-ಕಿರಣ್ ರಾವ್ ಭಾವನಾತ್ಮಕ ವಿಡಿಯೋ ಸಂದೇಶ
12 ರಾಜ್ಯಗಳ ಮೂಲಕ ಹಾದುಹೋಗುವ ಈ ಜರ್ನಿ ಬೆಂಗಳೂರು, ಪುಣೆ, ಮುಂಬೈ, ಅಹ್ಮದಾಬಾದ್, ಜೈಪುರ್, ದೆಹಲಿ, ಲಕ್ನೊ, ಕಲ್ಕತ್ತಾ, ಭುವನೇಶ್ವರ, ವಿಶಾಖಪಟ್ಟಣಂ ಚೆನ್ನೈ ನಗರಗಳ ಮೂಲಕ ಸಾಗಲಿದೆ.

ನನಗೆ ಸವಾಲುಗಳೆಂದರೆ ಇಷ್ಟ. ಕಳೆದ ಅಕ್ಟೋಬರ್‌ನಲ್ಲಿ ನಾನು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ತೆರಳಿದ್ದೆ. ಭಾರತದ ಪೂರ್ವ ಪಶ್ಚಿಮ ತೀರಗಳನ್ನು ಬೆಸೆಯುವ ಗೋಲ್ಡನ್ ಕ್ವಾಡ್ರಿಲಾಟರಲ್ ಅನ್ನು ಸೈಕಲ್ ಮೂಲಕ ಕ್ರಮಿಸುವ ಆಸೆಯಿತ್ತು. ಈ ಪ್ರಯತ್ನದಲ್ಲಿ ನಾಸಿಕ್ ನ ದಿಂಕರ್ ಪರಿಚಯವಾಯಿತು. ಈ ಪ್ರಯಾಣದಲ್ಲಿ ನಾವಿಬ್ಬದು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಭಾರಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಆದರೂ ನಮ್ಮ ಪ್ರಯತ್ನ ಬಿಡಲಿಲ್ಲ. ಇಂದು ಸೈಕಲ್ ಮೂಲಕ ರಾಷ್ಟ್ರ ರಾಜಧಾನಿಯನ್ನು ತಲುಪಿದ್ದೇವೆ ಎಂದು ಮೀರಾ ವೇಲಂಕರ್ ತಮ್ಮ ಭಾರತ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಮೀರಾ ಅವರು ಜೀವ ವಿಜ್ಞಾನದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದಿದ್ದು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
ನಾಸಿಕ್‌ನ ಹಿಂದುಸ್ತಾನ್ ಎರೋನಾಟಿಕಲ್ ಲಿಮಿಟ್ಸ್‌ನ ಭದ್ರತಾ ಮುಖ್ಯಸ್ಥರಾಗಿರುವ ದಿಂಕರ್ ಪಾಟೀಲ್, “ಸೈನಿಕನಾಗಿ ಯಾವಾಗಲೂ ನಾನು ಸಾಹಸಗಳಿಗೆ ಸಿದ್ಧವಿದ್ದೆ. ಮೀರಾ ಅವರು ಸೈಕ್ಲಿಂಗ್ ಯೋಜನೆಯನ್ನು ಮುಂದಿಟ್ಟರು. ಆರಂಭದಲ್ಲಿ ನನಗೆ ವಿಶ್ವಾಸವಿರಲಿಲ್ಲ. ಜೂನ್ 19 ರಂದು ಬೆಂಗಳೂರಿನಿಂದ ಹೊರಟ ನಮ್ಮ ಪ್ರಯಾಣ ಇಂದು ದೆಹಲಿಗೆ ತಲುಪಿದೆ” ಎಂದಿದ್ದಾರೆ.
ಬೆಂಗಳೂರಿನಿಂದ ಮುಂಬೈವರೆಗಿನ ಮಾರ್ಗ ಬೆಟ್ಟ ಗುಡ್ಡಗಳಿಂದ ಕೂಡಿದ ಪಶ್ಚಿಮಘಟ್ಟದ ಮೂಲಕ ಹಾದುಹೋಗುತ್ತದೆ. ಮುಂಗಾರಿನ ವೇಳೆ ಪಶ್ಚಿಮ ಘಟ್ಟದ ಪ್ರಯಾಣ ಅತ್ಯಂತ ಕಠಿಣವಾಗಿರುತ್ತದೆ. ನಾವು ನಿತ್ಯ 150-200 ಕಿಲೊ ಮೀಟರ್ ದೂರವನ್ನು ಕ್ರಮಿಸುತ್ತಿದ್ದೆವು. ಮಹಾರಾಷ್ಟ್ರದ ಬಹುಪಾಲು ಪ್ರದೇಶದಲ್ಲಿ ಮಳೆಯಿಂದ ರಸ್ತೆಗಳಲ್ಲಿ ಸೈಕಲ್ ಓಡಿಸುವುದು ಸುಲಭವಿರಲಿಲ್ಲ. ಗುಜರಾತ್, ರಾಜಸ್ಥಾನಗಳಲ್ಲಿ ಇನ್ನೊಂದು ರೀತಿಯ ಸವಾಲು. ಮರಭೂಮಿಯ ಪ್ರದೇಶಗಳಲ್ಲಿ ವಿಪರೀತ ಸೆಕೆ. ಕ್ರಮಿಸುವ ದೂರ ಮತ್ತು ವೇಗದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ದೀರ್ಘ ಪ್ರಯಾಣದಲ್ಲಿ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ ಎಂದು ಸೈಕ್ಲಿಸ್ಟ್‌ಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆರೆ ಒತ್ತುವರಿ ತೆರವು: ಮನೆಗಳು ನೆಲಸಮ
ಲಾಕ್‌ಡೌನ್ ಜಾರಿಯಿರುವ ಕಾರಣ ಕೆಲವು ರಾಜ್ಯಗಳಲ್ಲಿ ಹಗಲು ಪ್ರಯಾಣ ಸಾಧ್ಯವಿರಲಿಲ್ಲ. ರಾತ್ರಿ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಪ್ರಯಾಣಿಸಬೇಕಿತ್ತು. ಅರ್ಧ ದಾರಿಯಲ್ಲಿ ಪ್ರಯಾಣವನ್ನು ಕೈಬಿಡುವುದು ಸಾಧ್ಯವಿಲ್ಲ. ದಾಖಲೆಗಳನ್ನು ಸೃಷ್ಟಿಸುವ ಉದ್ಧೇಶಕ್ಕಿಂತ ನಮ್ಮ ಜೊತೆಗಾರರ ಉತ್ಸಾಹಕ್ಕೆ ತಣ್ಣೀರು ಎರಚಬಾರದೆಂಬುದು ನನ್ನ ಇಷ್ಟು ವರ್ಷದ ಪ್ರಯಾಣದಲ್ಲಿ ಕಂಡುಕೊಂಡಿದ್ದೇನೆ ಎಂದು ದಿಂಕರ್ ಪಾಟೀಲ್ ಹೇಳಿದ್ದಾರೆ.
ನಮ್ಮದು ಮಾಮೂಲು ಸೈಕಲ್ ಅಲ್ಲ. ಇದು ಟೆಂಡಾಮ್ ಸೈಕಲ್. ಇಬ್ಬರು ಸವಾರರು ಒಂದೇ ಸೈಕಲ್‌ನಲ್ಲಿ ಕುಳಿತು ಒಂದೇ ಸಮಯದಲ್ಲಿ ಪೆಡೆಲ್ ತುಳಿಯಬೇಕು. ಇಬ್ಬರ ವೇಗ ಹೊಂದಾಣಿಕೆಯನ್ನು ಮಾಡಬೇಕು. ಪ್ರಯಾಣವನ್ನು ನಿಲ್ಲಿಸುವುದಾದರೆ ಸೈಕಲ್ ಅನ್ನು ಮರಳಿ ತೆಗೆದುಕೊಂಡು ಹೋಗಲು ದೊಡ್ಡ ವಾಹನ ಬೇಕು. ಹೀಗೆ ಸಮಸ್ಯೆಗಳು ಹಲವಾರು ಇವೆ. ನಮ್ಮ ಪ್ರಯಾಣದ ಅರ್ಧದೂರವಿನ್ನು ಬಾಕಿಯಿದೆ. ಉತ್ತರ ಪ್ರದೇಶ, ಬಂಗಾಳ, ಕೊಲ್ಕತ್ತ, ವಾರಣಾಸಿಗಳ ಬಗ್ಗೆ ಕುತೂಹಲವಿದೆ. ಕುತೂಹಲವೊಂದೇ ದಿನದ ಕೊನೆಯಲ್ಲಿ ದಣಿದ ನಮ್ಮನ್ನು ಮಾರನೇಯ ದಿನ ಇನ್ನೊಂದಿಷ್ಟು ದೂರ ಕೊಂಡೊಯ್ಯಬಲ್ಲದೆಂದು ಮೀರಾ ಮಾರ್ಮಿಕವಾಗಿ ತಮ್ಮ ಪ್ರಯಾಣದ ಹಿಂದಿನ ಸ್ಪೂರ್ತಿಯನ್ನು ತೆರೆದಿಡುತ್ತಾರೆ.
– ರಾಜೇಶ್ ಹೆಬ್ಬಾರ್
ಇದನ್ನೂ ಓದಿ; ಎಲ್‌ಎಸ್‌ಇಯಿಂದ ಅಂಬೇಡ್ಕರ್ ಅವರ ಅಪರೂಪದ ದಾಖಲೆಗಳ ಆನ್ಲೈನ್ ವಸ್ತು ಪ್ರದರ್ಶನ


