ಆಹಾರ ಎಂದರೆ ಬರಿ ಅಕ್ಕಿಯೇ…? ಹಾಗಾದರೇ ಜನಪ್ರತಿನಿಧಿಗಳಿಗೆ ಬರಿ ಅಕ್ಕಿಯನ್ನೇ ಕೊಟ್ಟು ಊಟ ಮಾಡಲು ತಿಳಿಸಬೇಕು. ಸುಪ್ರೀಂಕೋರ್ಟ್ ಈಗ ನೀಡಿರುವ ತೀರ್ಪುಗಳು ಆಶಾದಾಯಕವಾಗಿವೆ ನಿಜ. ಆದರೆ, ಕಳೆದ ವರ್ಷದ ತೀರ್ಪುಗಳನ್ನು ಮರೆಯಲು ಸಾಧ್ಯವೆ…? ಒಂದು ರಾಷ್ಟ್ರ ಒಂದು ಪಡಿತರ ಎಂಬುದು ನಿಜಕ್ಕೂ ಅಸಂಘಟಿತ ವಲಯಕ್ಕೆ, ವಲಸೆ ಕಾರ್ಮಿಕರಿಗೆ ದಕ್ಕುತ್ತದೆಯೇ..? ಇಂತಹ ಗಂಭೀರ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದು ವಕೀಲರು, ಹೋರಾಟಗಾರರು ನಡೆಸಿದ, ಕೋವಿಡ್ ಸಂತ್ರಸ್ತರ ಸಂಬಂಧದ ಸುಪ್ರೀಂಕೋರ್ಟಿನ ಇತ್ತೀಚೆಗಿನ ತೀರ್ಪುಗಳು ಎಂಬ ವೆಬಿನಾರ್‌ನಲ್ಲಿ.

ಹೌದು, ಕೋವಿಡ್ ಸಂತ್ರಸ್ತರಿಗೆ ಸಂಬಂಧಪಟ್ಟಂತೆ ಇತ್ತಿಚೆಗೆ ಸುಪ್ರೀಂಕೋರ್ಟ್ ತಾನೇ ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿ, ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಜೊತೆಗೆ ವಲಸೆ, ಅಸಂಘಟಿತ ಕಾರ್ಮಿಕರ ಕುರಿತು ಆಶಾದಾಯಕ ತೀರ್ಪು ನೀಡಿದ್ದು, ಈ ತೀರ್ಪುಗಳ ಕುರಿತು ಮತ್ತು ಇಂದಿನ ವಲಸೆ, ಅಸಂಘಟಿತ ಕಾರ್ಮಿಕರ ಸ್ಥಿತಿಗತಿ, ಲಾಕ್‌ಡೌನ್ ಸಮಯದಲ್ಲಿ ಸರ್ಕಾರ ಅವರನ್ನು ನಡೆಸಿಕೊಂಡ ರೀತಿಯ ಕುರಿತು ವೆಬಿನಾರ್‌ ನಡೆಯಿತು.

ವಕೀಲರು ಮತ್ತು ಕಾರ್ಮಿಕ ಮುಖಂಡರಾದ ಕ್ಲಿಫ್ಟನ್ ರೊಝೆರಿಯೋ, ಆಹಾರದ ಹಕ್ಕಿಗಾಗಿ ಆಂದೋಲನದ ಸಂಘಟಕರಾದ ನಂದಿನಿ ಮತ್ತು ಪರ್ಯಾಯ ಕಾನೂನು ವೇದಿಕೆಯ ವಕೀಲರಾದ ವಿನಯ್ ಶ್ರೀನಿವಾಸ, ಶಾರದಾ ಗೋಪಾಲ್ ವಿಷಯ ಮಂಡನೆ ಮಾಡಿದರು.

ವೆಬಿನಾರ್‌ನಲ್ಲಿ ಮೊದಲು ವಿಷಯ ಮಂಡನೆ ಮಾಡಿದ, ಆಹಾರದ ಹಕ್ಕಿಗಾಗಿ ಆಂದೋಲನದ ಸಂಘಟಕಿ ನಂದಿನಿ ಬಿ.ಕೆ ಮಾತನಾಡಿ “ಸುಪ್ರೀಂಕೋರ್ಟ್ ತೀರ್ಪು ಆಶಾದಾಯಕವಾಗಿದೆ. ಸಮಯೋಚಿತವಾದುದ್ದು ಮತ್ತು ಅತ್ಯಗತ್ಯ ಕೂಡ. ಕೊರೊನಾದಿಂದ ಆರೋಗ್ಯ ವ್ಯವಸ್ಥೆಯಷ್ಟೇಯಲ್ಲ ವಲಸೆ ಮತ್ತು ಅಸಂಘಟಿತ ಕಾರ್ಮಿಕರ ಮೇಲೆ ಘೋರ ಪರಿಣಾಮ ಬೀರಿದೆ. ಕಳೆದ 2020 ಮಾರ್ಚ್‌ನಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಇನ್ನೂ ನಮ್ಮ ಕಣ್ಣಿಂದ ಮರೆಯಾಗಿಲ್ಲ. ಈಗಲೂ ವಲಸೆ ಕಾರ್ಮಿಕರನ್ನು ಮನುಷ್ಯರು ಎಂದು ಪರಿಗಣಿಸುತ್ತಿಲ್ಲ” ಎಂದು ವಿಷಾಧ ವ್ಯಕ್ತಪಡಿಸಿದರು.

’ಕೊರೊನಾ ಹರಡಬಾರದು ಎಂಬ ಸರ್ಕಾರದ ಕಾಳಜಿ ಮುಖ್ಯ. ಆದರೆ, ಅದನ್ನು ನಿಭಾಯಿಸುವುದರ ಬಗ್ಗೆ ಸರ್ಕಾರ ಕಾಳಜಿ ವಹಿಸಲಿಲ್ಲ. ಇಂದಿನವರೆಗೂ ಸರ್ಕಾರ ಅಸಂಘಟಿತ ಕಾರ್ಮಿಕರ ಬಗ್ಗೆ ಆಲೋಚನೆ ಮಾಡಲೇ ಇಲ್ಲ.  ಶೇ 70 ರಷ್ಟು ಜನ ಕೂಲಿಯನ್ನು ನಂಬಿ ಬದುಕುತ್ತಿದ್ದಾರೆ. ಆದರೆ, ವ್ಯವಸ್ಥೆ ಕಾರಣಕ್ಕೆ ಈಗ ಇವರೆಲ್ಲಾ ಸಾಲದ ಶೂಲಕ್ಕೆ ಒಳಗಾಗಿದ್ದಾರೆ. ದಿನದ ದುಡಿಮೆಯಲ್ಲಿ ಬದುಕುವ ಇವರು, ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಳ್ಳಲು ಸಾಧ್ಯವೆ…?, ಮನೆಯೇ ಇಲ್ಲದವರು, ತಮ್ಮನು ತಾವು ಪ್ರತ್ಯೇಕವಾಗಿರಿಸುವಷ್ಟು ದೊಡ್ಡ ಮನೆ ಹೊಂದಿರುತ್ತಾರೆಯೇ..? ದಿನದ ದುಡಿಮೆ ಇಲ್ಲದೆ ಬದುಕಲು ಸಾಧ್ಯವಾ…? ಎಂಬ ಪ್ರಶ್ನೆಗಳನ್ನು ಸರ್ಕಾರ ಕೇಳಿಕೊಳ್ಳಲಿಲ್ಲ. ಕೆಲ ಸಂಘ ಸಂಸ್ಥೆಗಳು ಇವರಿಗೆ ತಮ್ಮ ಕೈಲಾದ ಸಹಾಯ ಮಾಡಿವೆ. ಆದರೆ, ದುಡಿದು ತಿನ್ನುವ ಈ ಸಮುದಾಯದ ಘನತೆಗೆ ಚ್ಯೂತಿ ಬರದಂತೆ ಸರ್ಕಾರ ತಡೆಯಿತೇ..? ಯಾರೋ ಊಟ ಕೊಡುವುದನ್ನು ನಂಬಿಕೊಂಡು ಇವರು ಬದುಕುವ ಹಾಗಾಯಿತು. ಅವರ ಕಣ್ಣಿರು, ಅವರ ಸ್ವಾಭಿಮಾನದ ಪಾಡೆನು..?” ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಲಾಕ್‌ಡೌನ್‌ನಲ್ಲಿ 90 ರಷ್ಟು ಜನ ನಿರುದ್ಯೋಗಿಗಳಾಗದ್ದವರು. ಅನ್‌ಲಾಕ್ ಆದ ಮೇಲೆ ಶೇಕಡಾ 45 ರಷ್ಟು ಜನ ಅರೆ ಉದ್ಯೋಗಿಗಳಾಗಿದ್ದಾರೆ. ಲಾಕ್‌ಡೌನ್‌ನಲ್ಲಿ ಊಟಕ್ಕಾಗಿ ಸಾಲ ಮಾಡಿದವರೇ ಹೆಚ್ಚು. ಪಡಿತರ ಯೋಜನೆ  ಹೊಂದಿರುವವರಿಗೆ ಸರ್ಕಾರ 5 ಕೆಜಿ ಅಕ್ಕಿ, 1 ಕೆಜಿ ಬೆಳೆ (ಒಂದು ತಿಂಗಳು ಮಾತ್ರ ಸಿಕ್ಕಿದ್ದು) ನೀಡಿದೆ. ಅಕ್ಕಿ ಅನ್ನುವುದು ಆಹಾರವೇ…? ಎಲ್ಲಾ ಸಚಿವರು ಶಾಸಕರು, ಜನಪ್ರತಿನಿಧಿಗಳು ಬರಿ ಅಕ್ಕಿಯನ್ನು ತಿಂದು ತೋರಿಸಲಿ. ಕೇರಳ ಸರ್ಕಾರ ಪೂರ್ತಿ ಆಹಾರದ ಕಿಟ್ ನೀಡಿದೆ. ತಾರತಮ್ಯ ಮಾಡದೇ ಎಲ್ಲಾ ಕಾರ್ಡುದಾರರಿಗೆ ನೀಡಿದೆ. ಕೇರಳಕ್ಕೆ ಆಗುವುದು ಆದರೆ ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ…? ಗೋಡೌನ್‌ನಲ್ಲಿ ಹಾಳಾದರೂ ಸಹ ಜನರಿಗೆ ಧಾನ್ಯ ನೀಡದ ಸರ್ಕಾರ ಇದು’ ಎಂದು ನಂದಿನಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

’ಸರ್ಕಾರ ಕಣ್ಣು ತೆರೆಯಲು, ಸುಪ್ರೀಂಕೋರ್ಟ್‌ನ ಆದೇಶ ಜಾರಿಯಾಗಬೇಕು ಎಂದರೆ ಜನಸಂಘಟನೆ ಒಂದೇ ದಾರಿ. ಹೇಗೆ ರೈತ ಸಮೂಹ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದೆಯೋ ಹಾಗೆಯೇ ಕಾರ್ಮಿಕ ಸಂಘಟನೆ ಕೂಡ ಹೋರಾಡಬೇಕು. ಘನತೆಯುತ ಬದುಕು ಬೇಕು, ಪೌಷ್ಠಿಕ ಆಹಾರ ಎಂದ್ರೆ ಕೇವಲ ಅಕ್ಕಿಯಲ್ಲ ಎಂಬುದು ಸರ್ಕಾರ ತಿಳಿದುಕೊಳ್ಳಬೇಕು. ಜನರ ದುಡಿಮೆಯ ಹಣ ನೀಡಬೇಕು’ ಎಂದು ನಂದಿನಿ ಒತ್ತಾಯಿಸಿದರು.

ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಸಾರ್ವತ್ರೀಕರಣವೊಂದೇ ದಾರಿ

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾತನಾಡಿದ ಪರ್ಯಾಯ ಕಾನೂನು ವೇದಿಕೆಯ ವಕೀಲರಾದ ವಿನಯ್ ಶ್ರೀನಿವಾಸ್,  “ಆಹಾರಕ್ಕೆ ನಮ್ಮಲ್ಲಿ ಕೊರತೆಯಿಲ್ಲ. ಆಹಾರ ವಿತರಣೆಯಲ್ಲಿ ಕೊರತೆಯಿದೆ” ಎಂದು ಅಭಿಪ್ರಾಯಪಟ್ಟರು. ಅವರು ಉನ್ನತ ನ್ಯಾಯಾಲಯದ ತೀರ್ಪಿನ ಪ್ರಮುಖ 7 ಅಂಶಗಳನ್ನು ವಿವರಿಸಿದರು.

’ಕಳೆದ ವರ್ಷ ಸಾವಿರಾರು ಜನ ವಲಸೆ ಕಾರ್ಮಿಕರು ತೀರಿಕೊಂಡರು. ಆದರೆ, ಈ ವರ್ಷ ಸುಪ್ರೀಂಕೋರ್ಟ್ ಮೇ 26 ರಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ನಮ್ಮ ಸಂವಿಧಾನದಲ್ಲಿ ಕೂಡ ಸಂಪನ್ಮೂಲವನ್ನು ಸಮಾನವಾಗಿ ಹಂಚಬೇಕು. ಸಮಾಜದಲ್ಲಿ ಕಾರ್ಮಿಕರಿಗೆ ವಿಶೇಷ ಸ್ಥಾನವಿದೆ. ಬಂಡವಾಳ ಒಂದನ್ನೇ ಇಟ್ಟುಕೊಂಡು ಏನು ಮಾಡಲಾಗದು. ಹಾಗಾಗಿ ಕಾರ್ಮಿಕರು ಮುಖ್ಯ ಎಂದಿದ್ದು, ಅವರಿಗೆ ಆಹಾರ ಭದ್ರತೆ ಒದಗಿಸಬೇಕು. ಬಂಡವಾಳದಾರನಷ್ಟೇ ಅವರು ಪಾಲುದಾರರು ಎಂದಿದೆ’ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ 7 ಮುಖ್ಯ ನಿರ್ದೇಶನಗಳಿದ್ದು, ಅವುಗಳೆಂದರೆ,

೧. ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ನೋಂದಣಿಯನ್ನು ಜುಲೈ 31ರ ಒಳಗೆ ಮಾಡಿಸಬೇಕು.

೨. ರಾಜ್ಯ ಸರ್ಕಾರಗಳು ಅಸಂಘಟಿತ, ವಲಸೆ ಕಾರ್ಮಿಕರಿಗೆ ಹೆಚ್ಚಿನ ಪಡಿತರ ನೀಡಬೇಕು. ಇದಕ್ಕಾಗಿ ಕೇಂದ್ರದ ಸಹಾಯ ಪಡೆಯಬಹುದು.

೩. ರಾಜ್ಯಗಳು ಕೊರೊನಾ ಸೋಂಕು ಇರುವವರೆಗೂ ಅಸಂಘಟಿತ ಕಾರ್ಮಿಕರಿಗೆ ಉಚಿತ ಪಡಿತರ ನೀಡಲು  ಜುಲೈ 31ರ ಒಳಗೆ ಯೋಜನೆ ಮಾಡಬೇಕು ಮತ್ತು ಕೊರೊನಾ ಹೋಗುವವರೆಗೆ ಉಚಿತ ಪಡಿತರ ನೀಡಬೇಕು.

೪. ಜುಲೈ 31ರ ಒಳಗೆ ಒಂದು ರಾಷ್ಟ್ರ ಒಂದು ಪಡಿತರ ಯೋಜನೆ ಜಾರಿಗೊಳಿಸಬೇಕು.

೫. ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ 2011 ಜನಸಂಖ್ಯಾ ಆಧಾರದಲ್ಲಿ ಪಡಿತರ ಚೀಟಿ ನೀಡಿದೆ. ಅದು ಬದಲಾಗಬೇಕು. 2020ರ ಜನಗಣತಿಯನ್ನು ಪರಿಗಣಿಸಬೇಕು.

೬. ರಾಜ್ಯಗಳು ಅಂತರಾರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಪ್ರಕಾರ ಗುತ್ತಿಗೆದಾರರ ನೋಂದಣಿ ಕಡ್ಡಾಯವಾಗಿ ಮಾಡಿಸಬೇಕು.

೭. ಸಮುದಾಯ ಅಡಿಗೆ ಮನೆಗಳ ಸ್ಥಾಪನೆ ಮಾಡಲೇಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಒಂದು ರಾಷ್ಟ್ರ ಒಂದು ಪಡಿತರ ಯೋಜನೆ ಮೂಲಕ ಅಸ್ಸಾಂನ ಕಾರ್ಮಿಕರಿಗೂ ಕರ್ನಾಟಕದಲ್ಲಿ ಪಡಿತರ ನೀಡಬಹುದು. ಈ ಯೋಜನೆ ಸಂಪೂರ್ಣವಾಗಿ ಆಧಾರ್ ಕಾರ್ಡ್ ಮೇಲೆ ಅವಲಂಬಿಸಿರುತ್ತದೆ ಮತ್ತು ಮೊದಲೇ ಪಡಿತರ ಚೀಟಿ ಇರಬೇಕಾಗಿರುತ್ತದೆ. ಆದರೆ, ದೇಶದಲ್ಲಿ ರೆಷನ್ ಕಾರ್ಡ್ ಇಲ್ಲದ, ಆಧಾರ್‌ ಕಾರ್ಡ್ ಇಲ್ಲದ ಕಾರ್ಮಿಕರು ಲಕ್ಷಾಂತರ ಮಂದಿಯಿದ್ದಾರೆ ಅವರ ಕಥೆಯೇನು? ಹೀಗಾಗಿ, ಸುಪ್ರೀಂಕೋರ್ಟ್ ತೀರ್ಪು ಜನರಿಗೆ ದಕ್ಕುವಂತೆ ಆಗಬೇಕು. ಇದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿನಯ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆರೆ ಒತ್ತುವರಿ ತೆರವು: ಮನೆಗಳು ನೆಲಸಮ

ವಕೀಲರು ಮತ್ತು ಕಾರ್ಮಿಕ ಮುಖಂಡರು ಆಗಿರುವ ಕ್ಲಿಫ್ಟನ್ ರೊಝೆರಿಯೋ ಮಾತನಾಡಿ, ’ಈಗ ಸುಪ್ರೀಂಕೋರ್ಟ್ ತೀರ್ಪುಗಳನ್ನು ಸ್ವಾಗತಿಸುತ್ತಿರುವ ನಾವುಗಳು, ಹಿಂದೆ ನೀಡಿರುವ ತೀರ್ಪುಗಳ ಬಗ್ಗೆಯೂ ಮಾತಾಡಬೇಕು. ವಲಸೆ ಕಾರ್ಮಿಕರ ಬಗ್ಗೆ ಕಳೆದ ವರ್ಷ 5 ರಿಂದ 6 ಮಂದಿ ಕೇಸ್‌ಗಳನ್ನು ಹಾಕಿದ್ದರು. ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಸೇರಿಸುವುದು ಮತ್ತು ಆಹಾರ ನೀಡುವುದು ಆ ಅರ್ಜಿಗಳಲ್ಲಿ ಪ್ರಮುಖ ಮನವಿಯಾಗಿತ್ತು. ಕೇಂದ್ರ ಬದುಕುವ ಹಕ್ಕನ್ನು ಉಲ್ಲಂಘಿಸಿದೆ ಎಂದು ಕೇಸ್ ಹಾಗಿದ್ದರು. ಆದರೆ ಸುಪ್ರೀಂಕೋರ್ಟ ಈ ಅರ್ಜಿಗಳನ್ನು ವಜಾ ಮಾಡಿತ್ತು’ ಎಂದರು.

’ಹರ್ಷ್ ಮಂದರ್ ಕೇಸ್‌ನಲ್ಲಿ ವಲಸೆ ಕಾರ್ಮಿಕರ ಬಾಕಿ ಹಣ ನೀಡಲು ಕೇಳಲಾಗಿತ್ತು. ಆದರೆ, ಸುಪ್ರೀಂಕೋರ್ಟ್, ’ಸರ್ಕಾರ ಈಗ ಆಹಾರ ನೀಡುವಾಗ ಹಣದ ಬಗ್ಗೆ ಏಕೆ ಮಾತು’ ಎಂದಿತ್ತು. ಇನ್ನೊಂದು ಪ್ರಕರಣದಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸಿಗರಿಗೆ ವಾಹನ ನೀಡಿ ಎಂದರೆ, ಯಾರು ರಸ್ತೆ ಮೇಲಿಲ್ಲ ಎಂದು ಕೇಸ್ ವಜಾ ಮಾಡಿದ್ದರು’ ಎಂದು ಸುಪ್ರೀಂ ಕಳೆದ ವರ್ಷ ನಡೆದುಕೊಂಡ ರೀತಿಯನ್ನು ಕ್ಲಿಫ್ಟನ್ ರೊಝೆರಿಯೋ ನೆನಪಿಸಿಕೊಂಡರು.

ಸುಪ್ರೀಂಕೋರ್ಟ್ ತೀರ್ಪು ಅತಿ ಕರಾಳ ಕ್ಷಣ ಎಂದು ಹಲವು ಮಾಜಿ ನ್ಯಾಯಮೂರ್ತಿಗಳು ವಿಶ್ಲೇಷಿಸಿದ್ದರು ಎಂಬುದನ್ನು ಒತ್ತಿ ತಿಳಿಸಿದರು.

ಇಂದಿನ ಈ ಆದೇಶಗಳು ಎಷ್ಟರ ಮಟ್ಟಿಗೆ ಅನುಷ್ಟಾನಕ್ಕೆ ಬರುತ್ತದೆ…? ಜೂನ್ 29ಕ್ಕೆ ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರ ಪರ ತೀರ್ಪು ನೀಡಿದೆ. ಜೂನ್ 30ಕ್ಕೆ ಕೊರೊನಾದಿಂದ ಮೃತರಾದವರಿಗೆ ಪರಿಹಾರ ನೀಡಬೇಕು ಎಂದಿದೆ. ಮೊದಲ ಅಲೆಯಲ್ಲಿ ಜನರಿಗೆ ಆಹಾರಕ್ಕೆ ಗತಿಯಿರಲಿಲ್ಲ. ಎರಡನೇ ಅಲೆಯಲ್ಲಿ ಆಹಾರದ ಜೊತೆಗೆ ಪ್ರಾಣ ಕಾಪಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ಪರಿಸ್ಥಿತಿ ಬಂದಿದ್ದು ಯಾಕೆ…?’ ಎಂದು ಪ್ರಶ್ನಿಸಿದರು.

’ಕೊರೊನಾಗೆ 2020 ಆಗಸ್ಟ್‌ವರೆಗೆ 8 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಅಕ್ಟೋಬರ್‌ ಒಂದೇ ತಿಂಗಳಲ್ಲಿ 3 ಸಾವಿರ ಮಂದಿ ಮೃತ ಪಟ್ಟಿದ್ದಾರೆ. ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಡಿಸೆಂಬರ್‌ನಲ್ಲಿ ಸ್ಟಾಂಡಿಂಗ್ ಕಮಿಟಿಸ್ ವರದಿ ನೀಡಿ 2ನೇ ಅಲೆ ಬರುತ್ತದೆ. ಇನ್ನಷ್ಟು ಮುಂಜಾಗ್ರತೆ ಬೇಕು ಎಂದು ಹೇಳಿದರೂ ಸರ್ಕಾರಗಳು ಎಚ್ಚೆತುಕೊಳ್ಳಲಿಲ್ಲ. ಜನವರಿ 16ಕ್ಕೆ ಲಸಿಕಾ ಅಭಿಯಾನ ಮಾಡಿದ್ದರು. ಆದರೆ ಜ.20ಕ್ಕೆ ಬೇರೆ ದೇಶಕ್ಕೆ ಪ್ರಧಾನಿಯವರು ಲಸಿಕೆ ಕಳುಹಿಸಿದರು. ಇದರಿಂದ ಜನ ಸಾಯುವ ಪರಿಸ್ಥಿತಿ ಬಂದಿತು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಮೃತರಾದರು.  ಬೆಡ್, ಆಕ್ಸಿಜನ್ ಇಲ್ಲದೆ ಸಾವುಗಳು ಸಂಭವಿಸಿದೆ. ಇದಕ್ಕೆಲ್ಲ ಯಾರು ಹೊಣೆ..?’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಕೊರೊನಾ ಸಾವುಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಸರ್ಕಾರ ಪರಿಹಾರದ ಬಗ್ಗೆ ಮೊದಲೆ ಘೋಷಿಸಬೇಕಿತ್ತು. ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಕೆಲಸದಲ್ಲಿ ವಿಫಲವಾಗಿದೆ” ಎಂದಿದೆ. ಕೇಂದ್ರ ಸರ್ಕಾರ ಕೊರೊನಾ ಸಾವಿಗೀಡಾದವ ಡೆತ್ ಸರ್ಟಿಫಿಕೆಟ್‌ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಕೊರೊನಾ ಸಾವುಗಳ ಬಗ್ಗೆ ನಿಖರ ಮಾಹಿತಿ ಹಲವು ರಾಜ್ಯಗಳು ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಇನ್ನೂ ಸುಪ್ರೀಂಕೋರ್ಟ್ ಈ ತೀರ್ಪನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಕ್ಲಿಫ್ಟನ್ ರೊಝೆರಿಯೋ ತಿಳಿಸಿದರು

೧. ಸರ್ಕಾರ ತಮ್ಮ ತಪ್ಪು ಒಪ್ಪಿಕೊಳ್ಳಬೇಕು. ಜನರಲ್ಲಿ ಕ್ಷಾಮಾಪಣೆ ಕೇಳಬೇಕು.

೨. ಕೊರೊನಾ ಬಂದು ಮೃತರಾದ ಪ್ರತಿ ಸಾವಿಗೆ ಆಡಿಟ್ ಮಾಡಬೇಕು.

೩.  ಕೊರೊನಾದಿಂದ ಸಾವಿಗೀಡಾದ ಕುಟುಂಬಗಳಿಗೆ ಸಮಗ್ರ ಪುನರ್‌ವಸತಿ ಪ್ಯಾಕೇಜ್ ನೀಡಬೇಕು.

೪. ತಬ್ಬಲಿಗಳಾದ ಮಕ್ಕಳಿಗೆ, ವಿಧವೆಯರಿಗೆ ವಿವಿಧ ಪ್ಯಾಕೇಜ್ ತರಬೇಕು.

೫. ಪ್ರತಿ ಕುಟುಂಬಕ್ಕೆ ಕೊರೊನಾ ಸೋಂಕು ಹೋಗುವವರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು

೬. ಕೊರೊನಾ ಸಾವುಗಳ ಸಂಪೂರ್ಣ ಹೊಣೆ ಸರ್ಕಾರ ತೆಗೆದುಕೊಳ್ಳಬೇಕು. ಅದನ್ನು ತೆಗೆದುಕೊಳ್ಳುವಂತೆ ಸಂಘಟನೆಗಳು ಒತ್ತಾಯ ಮಾಡಬೇಕು ಎಂದಿದ್ದಾರೆ.

ಕೊರೊನಾ ಕಾಲದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿರುವ ತಜ್ಞರು, ಚಿಂತಕರು ಈ ನಿರ್ದೇಶನಗಳನ್ನು ರಾಜ್ಯ ಮತ್ತು ಒಕ್ಕೂಟ ಸರ್ಕಾರ ಪಾಲಿಸುವಂತೆ ಮಾಡಬೇಕು. ಹಾಗೆ ಮಾಡಲು ತಾವು ಮಾಡಬೇಕಾದ ಕೆಲಸಗಳ ಬಗ್ಗೆ ವೆಬಿನಾರ್‌ನಲ್ಲಿ ಚರ್ಚೆ ನಡೆಸಿದ್ದಾರೆ.


ಇದನ್ನೂ ಓದಿ: ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿ, ಬಡಜನರಿಗೆ ಪರಿಹಾರ ಒದಗಿಸಿ: ರಾಜ್ಯಾದ್ಯಂತ ಜನಾಗ್ರಹ ಪ್ರತಿಭಟನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. Madam I’m also un employed even though you are fighting in favour of un employed and poor people so I will pay now Rs 100 if I get the job or I’m using my car for taxi in Airport If I get good business I will pay Rs1000 sorry
    I will inform to all my taxi and poor pepole about you . Thank you very much

LEAVE A REPLY

Please enter your comment!
Please enter your name here