ಕೊರೊನಾ ಎರಡನೇ ಅಲೆ ಇಳಿಯುತ್ತಿದೆ. ಆದರೆ ಜನರ ಮೇಲಿನ ಹೊರೆಗಳು ಹೆಚ್ಚಾಗುತ್ತಿವೆ. ಸತತ ಎರಡು ತಿಂಗಳ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅರೆಬರೆ ಪ್ಯಾಕೇಜ್ ಘೋಷಿಸಿ ಕೈತೊಳೆದುಕೊಂಡಿದೆ. ಇಂತಹ ಅಸಾಮಾನ್ಯ ಪರಿಸ್ಥಿತಿಯಲ್ಲಿ ಸರ್ಕಾರ ಅಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಕೂಡಲೇ ಸಮಗ್ರ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಜನಾಗ್ರಹ ಆಂದೋಲನ ವೇದಿಕೆಯು ರಾಜ್ಯಾದ್ಯಂತ ಶಾಸಕರು, ಸಚಿವರ ಮನೆ ಎದುರು ಪ್ರತಿಭಟನೆ ನಡೆಸಿದೆ.

ಬಡಜನರಿಗೆ ಸಮಗ್ರ ಪ್ಯಾಕೇಜ್‌ಗಾಗಿ ಕಳೆದ ಮೂರು ತಿಂಗಳಿನಿಂದ ಇದುವರೆಗೂ ನಾಲ್ಕು ಪ್ರತಿಭಟನೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಗಳಿಗೆ ಮೂರು ಪತ್ರಗಳನ್ನು ಬರೆದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಜನರ ನೆರವಿಗೆ ಧಾವಿಸಬೇಕೆಂದು ಜನಾಗ್ರಹ ಆಂದೋಲನದ ಬಿ.ಟಿ ಲಲಿತಾ ನಾಯಕ್ ಒತ್ತಾಯಿಸಿದರು.

ಬೆಂಗಳೂರಿನ ವಿಜಯನಗರದಲ್ಲಿರುವ ವಸತಿ ಸಚಿವ ವಿ.ಸೋಮಣ್ಣನವರ ಮನೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಸರ್ಕಾರ ಕೇವಲ ಕಣ್ಣೋರೆಸುವ ಕೆಲಸ ಮಾಡುತ್ತಿದೆ. ಒಂದು ಸಾವಿರ ಜನರಿದ್ದರೆ ಕೇವಲ 20 ಜನರಿಗೆ ಸೌಲಭ್ಯ ಕೊಟ್ಟರೆ ಸಾಲದು. ನ್ಯಾಯಯುತವಾಗಿ ನೊಂದವರಿಗೆ ಪರಿಹಾರ ನೀಡಬೇಕು. ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು. ಇದನ್ನು ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ” ಎಂದರು.

ಕೊರೊನಾದಿಂದಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಎಷ್ಟೋ ಕುಟುಂಬಗಳು ನಾಶವಾಗಿವೆ. ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ನಾವು ಇಂದು ಬೀದಿಗಿಳಿದು ಪ್ರತಿಭಟಿಸುವ ಅಗತ್ಯ ಬರುತ್ತಿರಲಿಲ್ಲ. ಇಂತಹ ಕಷ್ಟಕಾಲದಲ್ಲಿ ಶಾಸಕರು ಮತ್ತು ಸಚಿವರು ಏನು ಮಾಡುತ್ತಿದ್ದಾರೆ? ತನ್ನ ಕ್ಷೇತ್ರದ ಜನರಿಗಾಗಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಈ ಕಷ್ಟಕಾಲದಲ್ಲಿಯೂ ಪೆಟ್ರೋಲ್, ಎಣ್ಣೆ ಮತ್ತು ದವಸಧಾನ್ಯಗಳ ಬೆಲೆ ಏರಿಸಲಾಗುತ್ತಿದೆ. ಈ ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇಲ್ಲವೇ? ಲಸಿಕೆ ವಿಷಯದಲ್ಲಿಯೂ ಭ್ರಷ್ಟಾಚಾರ ಮಾಡುತ್ತಿವೆ. ಇದನ್ನು ಕೂಡಲೇ ನಿಲ್ಲಿಸಿ ಜನಪರವಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್‌ರವರು ಮಾತನಾಡಿ, “ನಾವು ಇದುವರೆಗೆ ಮೂರು ಸುತ್ತಿನಲ್ಲಿ ಹೋರಾಟ ನಡೆಸಿದ್ದೇವೆ. ಇಂದು ನಾಲ್ಕನೇ ಬಾರೀ ಹೋರಾಟಕ್ಕಿಳಿದ್ದಿದ್ದೇವೆ. ಏಕೆಂದರೆ ಸರ್ಕಾರ ಕೋವಿಡ್‌ ಅನ್ನು ಇಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ. ತಜ್ಞರು ಎರಡನೇ ಅಲೆ ಬಗ್ಗೆ ಎಚ್ಚರಿಸಿದ್ದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂಬುದಕ್ಕೆ ನೆಲಮಂಗಲದಲ್ಲಿದ್ದ 10000 ಬೆಡ್‌ಗಳ ಕೋವಿಡ್‌ ಕೇರ್ ಸೆಂಟರ್ ಅನ್ನು ಮುಚ್ಚಿದ್ದೆ ಸಾಕ್ಷಿ” ಎಂದು ಕಿಡಿಕಾರಿದರು.

ಜನ ಉಸಿರಿಗಾಗಿ ಒದ್ದಾಡುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಲಾಕ್‌ಡೌನ್ ಎಂಬುದು ಅನಿವಾರ್ಯ ಕ್ರಮವೇ ಹೊರತು ಅಗತ್ಯ ಕ್ರಮವಲ್ಲ. ಹಾಗಾಗಿ ಲಾಕ್‌ಡೌನ್ ಅವಧಿಯನ್ನು ಕಡಿಮೆ ಮಾಡಬೇಕು. ಹಾಗೆ ಮಾಡಬೇಕಾದರೆ ನಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕು. ಅದನ್ನು ಮಾಡಲು ಸರ್ಕಾರ ಮುಂದಾಗಲಿಲ್ಲ. ಬಡಜನರಿಗೆ ಕನಿಷ್ಟ 5 ಸಾವಿರ ಕೊಡಿ ಎಂದು ನಾವು ಒತ್ತಾಯಿಸಿದ್ದರು ಸರ್ಕಾರ ಮುಂದಾಗಿರದಿರುವುದು ದುರಾದೃಷ್ಟಕರ ಎಂದರು.

ನಮ್ಮೆಲ್ಲರ ಒತ್ತಾಯದಿಂದ ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ಕೊಡುವುದು, ಒಂದಷ್ಟು ರೇಷನ್ ಕಿಟ್ ಕೊಡುವ ಅರೆ ಬರೆ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ. ಆದರೆ ಈಗ ಮೂರನೇ ಅಲೆ ಬರುವ ಅಪಾಯವಿದೆ. ಅದು ಮಕ್ಕಳನ್ನು ಬಾಧಿಸುವ ಸಾಧ್ಯತೆಯಿದೆ. ಈಗ ಏನು ಮಾಡೋಣ? ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರು ಏನು ಮಾಡಬೇಕು? ಇಂತ ಸಮಯದಲ್ಲಿ ಏಕೆ ಕಾರ್ಪೋರೇಟ್ ಶ್ರೀಮಂತರ ಮೇಲೆ ತೆರಿಗೆ ಹಾಕುತ್ತಿಲ್ಲ? ಏಕೆ ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ಕೊಡುತ್ತಿಲ್ಲ ಎಂದು ಕೇಳುತ್ತಿಲ್ಲ ಎಂದು ಕಿಡಿಕಾರಿದರು. ನಂತರ ಹೋರಾಟಗಾರರ ನಿಯೋಗವು ವಿ.ಸೋಮಣ್ಣನವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ರಾಜ್ಯಾದ್ಯಂತ ಹಲವಾರು ಶಾಸಕರ ಮನೆ ಮುಂದೆ ಖಾಲಿ ಚೀಲಗಳನ್ನು ಸುಟ್ಟು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಶಾಸಕರ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಸುಮಾರು 100 ಜನರು ಭಾಗವಹಿಸಿದ್ದರು. ಕಾರ್ಕಳ ಶಾಸಕರ ಕಛೇರಿ ಬಳಿ ಪ್ರತಿಭಟನೆಗಾಗಿ ಪ್ರತಿಭಟನಾಕಾರರು ಸಾಗುತ್ತಿದ್ದಾಗ, ಪೋಲೀಸರು ತಡೆದ ಕಾರಣ ಶಾಸಕರ ಕಛೇರಿಗೆ ಸಮೀಪದಲ್ಲೇ ದಾರಿಮಧ್ಯೆ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರ ಮದ್ಯೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿ ಜಿಲ್ಲೆಯಲ್ಲಿ ಜನಾಗ್ರಹ ಆಂದೋಲನ ವತಿಯಿಂದ ಖಾಲಿ ಚೀಲವನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು ಮತ್ತು ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಕೃಷಿಯ ಸಮಾಜದ ರಾಜ್ಯಾಧ್ಯಕ್ಷರಾದ ಸಿದ್ದಗೌಡ ಮೋದಗಿ, ಕರ್ನಾಟಕ ಜನಶಕ್ತಿಯ ರವಿ ಪಾಟೀಲ್, ರಮೇಶ್ ವಾಲಿ, ವಿಠ್ಠಲ್ ಬಂಗೂಡಿ, ಶಂಕರ್ ಮುಗುಳಿ, ಪ್ರಕಾಶ್ ಕಾಗಿ, ಯಾಸಿನ್ ಮಕಂದರ್ ಮತ್ತಿತರರಿದ್ದರು.

ತುಮಕೂರು ನಗರ ಶಾಸಕರ ಜ್ಯೋತಿ ಗಣೇಶ್ ರವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು. ಇದೇ ರೀತಿಯಲ್ಲಿ ಶಿವಮೊಗ್ಗ, ವಿಜಯಪುರ, ವಿಜಯನಗರ, ಮಂಡ್ಯ, ಚಿತ್ರದುರ್ಗ ಸೇರಿದಂತೆ ರಾಜ್ಯದ ನೂರಾರು ಕಡೆ ಸಚಿವರು, ಶಾಸಕರ ಮನೆ ಮುಂದೆ ಪ್ರತಿಭಟನೆಗಳು ನಡೆದಿವೆ. ಅದರ ಕೆಲವು ಚಿತ್ರಗಳು ಕೆಳಗಿನಂತಿವೆ.


ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್‌ಗಾಗಿ ಆಗ್ರಹ: ಮುಖ್ಯಮಂತ್ರಿಯವರ ಮನೆಯಡೆಗೆ ಜನಾಗ್ರಹ ನಡಿಗೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here