Homeಮುಖಪುಟಸ್ಟ್ಯಾನ್ ಸ್ವಾಮಿ ಸಾವು ಮತ್ತು ದಮನಕಾರಿ ಕಾನೂನುಗಳ ಕರಾಳ ಕಥೆ

ಸ್ಟ್ಯಾನ್ ಸ್ವಾಮಿ ಸಾವು ಮತ್ತು ದಮನಕಾರಿ ಕಾನೂನುಗಳ ಕರಾಳ ಕಥೆ

ದೇಶದ ಭದ್ರತೆ, ಜನರ ರಕ್ಷಣೆಗೆ ಕಾನೂನುಗಳು ಅಗತ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಕಾನೂನುಗಳು ಸಂವಿಧಾನ ಆಶಯಗಳನ್ನು ಗಾಳಿಗೆ ತೂರುತ್ತಿದ್ದರೆ?

- Advertisement -
- Advertisement -

1990ರ ದಶಕದಿಂದಲೇ ಜಾರ್ಖಂಡ್‌ನ ಆದಿವಾಸಿಗಳು ಮತ್ತು ವಂಚಿತ ಸಮುದಾಯಗಳ ಹಕ್ಕುಗಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರ ಮೇಲೆ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಆರೋಪವನ್ನು ಹೊರಿಸಲಾಗಿತ್ತು. ಇದೀಗ ಸ್ಟ್ಯಾನ್ ಸ್ವಾಮಿಯವರ ಸಾವಿಗೆ ಸಂಬಂಧಿಸಿದಂತೆ ದೇಶ-ವಿದೇಶಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಾರತದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಸಾವು ಮಹಾ ದುರಂತ ಎಂದು ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯ, ಅಸಡ್ಡೆ ತೋರಿದ ನ್ಯಾಯಾಲಯಗಳು ಮತ್ತು ದುರುದ್ದೇಶಪೂರಿತ ತನಿಖಾ ಸಂಸ್ಥೆಗಳು ಈ ಸಾವಿಗೆ ಜವಾಬ್ದಾರರಾಗಿದ್ದು, ಸ್ವಾಮಿಯವರ ಸಾವು ಒಂದು ಸಾಂಸ್ಥಿಕ ಹತ್ಯೆಯಾಗಿದೆ ಎಂದು ಸ್ವಾಮಿಯವರ ಕುಟುಂಬಸ್ಥರು ಮತ್ತು ಸ್ನೇಹಿತರು ಹೇಳಿದ್ದಾರೆ.

ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿದ್ದ ಸ್ಟ್ಯಾನ್ ಸ್ವಾಮಿಯವರಿಗೆ ಅಗತ್ಯ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು. ಪಾನೀಯ ಸೇವನೆಗಾಗಿ ಅಗತ್ಯವಿದ್ದ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೂ ಅವಕಾಶ ನೀಡಿರಲಿಲ್ಲ. ಈ ನಡುವೆ ಜಾಮೀನು ಸಿಗದಿದ್ದರೆ ತನ್ನ ಸಾವು ಸಂಭವಿಸಬಹುದು ಎಂದು ಅವರು ಆತಂಕ ತೋಡಿಕೊಂಡರೂ, ಅವರ ರೋದನಕ್ಕೆ ನ್ಯಾಯಾಲಯ ಮರುಗಲೇ ಇಲ್ಲ. ಕೋರ್ಟ್ ಎರಡು ಬಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಸ್ವಾಮಿಯವರು 7 ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿದ್ದರೂ ಎನ್.ಐ.ಎ ಅವರ ವಿಚಾರಣೆಯನ್ನೇ ನಡೆಸಿರಲಿಲ್ಲ ಎಂದು ಸ್ವತಃ ಅವರ ವಕೀಲರು ಹೇಳಿದ್ದಾರೆ. ಕೊನೆ ಗಳಿಗೆಯಲ್ಲಿ ಮೂರನೇ ಜಾಮೀನು ಅರ್ಜಿ ವಿಚಾರಣೆ ನಡೆಯುವ ಒಂದು ಗಂಟೆ ಮೊದಲು ಅವರು ಪ್ರಾಣ ತೆತ್ತರು. ಆರೋಪಿಯಾದವನು ತನ್ನ ಮೇಲಿನ ಆರೋಪ ಸಾಬೀತಾಗುವವರೆಗೂ ಆತ ಅಮಾಯಕನಾಗಿಯೇ ಇರುತ್ತಾನೆ. ಇದು ಆರೋಪಿಯ ಕುರಿತಂತೆ ಇರುವ ಸಾಮಾನ್ಯ ಪರಿಕಲ್ಪನೆ. ಆರೋಪಿ ಬಂಧನದಲ್ಲಿರುವಾಗ ತನ್ನೆಲ್ಲಾ ಮಾನವ ಹಕ್ಕುಗಳನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಬಂಧಿತರೊಂದಿಗೆ ಮಾನವೀಯವಾಗಿ ವರ್ತಿಸುವುದು ಜೈಲು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅದಕ್ಕಿಂತಲೂ ಮಿಗಿಲಾಗಿ ಅಪರಾಧಿಯ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕೆಂದೂ ಕಾನೂನು ಹೇಳುತ್ತದೆ. ಇಷ್ಟೆಲ್ಲಾ ನಿಯಮಗಳು ಇದ್ದರೂ ಪಾರ್ಕಿನ್ಸನ್ಸ್ ಪೀಡಿತ 84ರ ಹರೆಯದ ವೃದ್ಧ ಸ್ಟ್ಯಾನ್ ಸ್ವಾಮಿಯವರ ಅಮಾನವೀಯ ಸಾವಿಗೆ ಕಾರಣವೇನು? ಈ ಪರಿಸ್ಥಿತಿಯಲ್ಲಿ ಚರ್ಚೆಗೆ ಬರುವುದು ಯುಎಪಿಎಯಂತಹ ದಮನಕಾರಿ ಕಾನೂನುಗಳ ಕರಾಳ ಮುಖ.

ದೇಶದ ಭದ್ರತೆ ಹಾಗೂ ಜನರ ರಕ್ಷಣೆಗೆ ಕಾನೂನುಗಳು ಅಗತ್ಯವಾಗಿ ಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಕಾನೂನುಗಳು ಸಂವಿಧಾನ ಆಶಯಗಳನ್ನು ಗಾಳಿಗೆ ತೂರುತ್ತಿದ್ದರೆ, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದರೆ ಅಂತಹ ಕಾನೂನುಗಳಿಂದ ಪ್ರಯೋಜಕ್ಕಿಂತ ಅಪಾಯವೇ ಹೆಚ್ಚು. ಭಾರತದಲ್ಲಿ ದಮನಕಾರಿ ಕಾನೂನುಗಳ ಇತಿಹಾಸವು ಭಯಾನಕವಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಟಾಡಾ ಮತ್ತು ಪೋಟಾಗಳೆಂಬ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗಿತ್ತು. ಆದರೆ ಆ ಕಾನೂನುಗಳನ್ನು ಕಾರ್ಯಗತಗೊಳಿಸುವ ವೇಳೆ ಸ್ವಜನ ಪಕ್ಷಪಾತ, ಪೂರ್ವಗ್ರಹಪೀಡಿತ ಧೋರಣೆ, ದುರ್ಬಳಕೆಯ ಮಾತುಗಳು ವ್ಯಾಪಕವಾಗಿ ಕೇಳಿ ಬಂದವು. ಈ ಮಧ್ಯೆ, ಅಮಾಯಕ ಯುವಕರು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ವರ್ಷಾನುಗಟ್ಟಳೆ ಕೊಳೆಯಬೇಕಾಯಿತು. ಅಕ್ರಮ ಬಂಧನಗಳ ಸರಣಿ ಮುಂದುವರಿದು ಮಾಡದ ತಪ್ಪಿಗಾಗಿ ಯುವಕರು ತೀವ್ರ ತೆರನಾದ ಚಿತ್ರಹಿಂಸೆಯನ್ನು ಅನುಭವಿಸಬೇಕಾಯಿತು.

ಪೊಲೀಸರ ಅನ್ಯಾಯದ ಕಾರ್ಯಾಚರಣೆಗಳು ಸಂತ್ರಸ್ತರ ಬದುಕನ್ನು ಕತ್ತಲೆಗೆ ದೂಡಿತು. ಈ ಕರಾಳ ಕಾನುನಿನ ಪ್ರಮುಖ ಸಂತ್ರಸ್ತರು ಬಹುತೇಕ ಮುಸ್ಲಿಮರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ. ಕೊನೆಗೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಮಾತುಗಳು ಕೇಳಿ ಬಂದಾಗ 1995ರಲ್ಲಿ ಟಾಡಾ ಕಾನೂನನ್ನು ರದ್ದುಪಡಿಸಲಾಯಿತು. ಅಮೆರಿಕಾದಲ್ಲಿ ನಡೆದ 9/11 ದಾಳಿಯ ಹಿನ್ನೆಲೆಯಲ್ಲಿ 2002ರಲ್ಲಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪೋಟಾ ಕಾನೂನನ್ನು ಅಂಗೀಕರಿಸಲಾಗಿತ್ತು. ಇದು ಟಾಡಾದ ಸುಧಾರಿತ ಕಾನೂನು ಆಗಬೇಕೆಂಬುದು ಇದರ ಉದ್ದೇಶವಾಗಿತ್ತು. ಆದರೆ ಆ ನಂತರದಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಟಾಡಾ, ಪೋಟಾಗಿಂತಲೂ ಕರಾಳ ಕಾನೂನಾಗಿತ್ತು ಎಂಬ ಅಂಶ ಅನುಭವಕ್ಕೆ ಬಂತು. ಆರೋಪಿ ತಾನು ಆರೋಪ ಮುಕ್ತನಾಗಬೇಕಾದರೆ ಅದಕ್ಕೆ ಬೇಕಾದ ಪುರಾವೆಯನ್ನು ತಾನೇ ಸಲ್ಲಿಸಬೇಕಾಗಿತ್ತು. ಒಂದು ರೀತಿಯಲ್ಲಿ ಇದು ಅಪರಾಧ ನ್ಯಾಯ ವ್ಯವಸ್ಥೆಯ ತತ್ವ ಸ್ವರೂಪವನ್ನೇ ಬುಡಮೇಲುಗೊಳಿಸಿತು. ಪೊಲೀಸರು ಸೃಷ್ಟಿಸಿದ ಕಲ್ಪಿತ ಕಥೆಗಳ ಆಧಾರದಲ್ಲಿಯೇ ನ್ಯಾಯಾಲಯಗಳು ವಿಚಾರಣೆಯನ್ನು ಪ್ರಾರಂಭಿಸಿದ್ದವು. ಗಮನಾರ್ಹವೆಂದರೆ, ಅಂದಿನ ಬಿಜೆಪಿ ಸರಕಾರ ತನ್ನ ರಾಜಕೀಯ ಅಜೆಂಡಾಗಳ ಅನುಷ್ಠಾನಕ್ಕಾಗಿ ಈ ಕಾನೂನನ್ನು ವ್ಯಾಪಕ ದುರ್ಬಳಕೆಗೆ ಒಳಪಡಿಸಿತ್ತು.

ಭಾರೀ ಜನಾಕ್ರೋಶದ ಬಳಿಕ ಟಾಡಾ ಮತ್ತು ಪೋಟಾಗಳನ್ನು ರದ್ದುಪಡಿಸಲಾಯಿತಾದರೂ, 1967ರಲ್ಲಿ ತರಲಾಗಿದ್ದ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯನ್ನು ತಿದ್ದುಪಡಿಗಳ ಮೂಲಕ ಮತ್ತಷ್ಟು ಕರಾಳಗೊಳಿಸಲಾಯಿತು. ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ತರಲಾದ ಈ ಕಾನೂನಿನ ಪ್ರಕಾರ, ಪೊಲೀಸರಿಗೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳು, ಅದಕ್ಕಾಗಿ ಜನರನ್ನು ಸಿದ್ಧಪಡಿಸುವವರು ಮತ್ತು ಆ ಚಟುವಟಿಕೆಗಳನ್ನು ಪ್ರಚೋದಿಸುವ ವ್ಯಕ್ತಿಗಳನ್ನೂ  ಗುರಿಪಡಿಸುವ ಅವಕಾಶ ನೀಡಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್.ಐ.ಎಗೆ ಬಹಳಷ್ಟು ಅಧಿಕಾರವನ್ನು ನೀಡಲಾಗಿದೆ. ಹಿಂದಿನ ನಿಯಮಗಳ ಅನುಸಾರ ಇಂತಹ ಪ್ರಕರಣಗಳ ತನಿಖೆಯನ್ನು ಡಿ.ಎಸ್.ಪಿ. ದರ್ಜೆಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಹೊಸ ನಿಯಮಗಳ ಪ್ರಕಾರ ಎನ್.ಐ.ಎ ಮಹಾ ನಿರ್ದೇಶಕರು ತನಿಖೆಯ ವೇಳೆ ಆರೋಪಿಯ ಆಸ್ತಿ ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ. 2019ರ ತಿದ್ದುಪಡಿಯ ಪ್ರಕಾರ ಯಾವನೇ ವ್ಯಕ್ತಿಯನ್ನು ತನಿಖೆಯ ಆಧಾರದಲ್ಲಿ ಭಯೋತ್ಪಾದಕನೆಂದು ಘೋಷಿಸಬಹುದು. ಈ ಮೊದಲು ಸಂಘಟನೆಯನ್ನು ಭಯೋತ್ಪಾದಕ ಎಂದು ಘೋಷಿಸಲಾಗುತ್ತಿತ್ತು. ಇದೀಗ ಹೊಸ ನಿಯಮದ ಪ್ರಕಾರ, ವ್ಯಕ್ತಿ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಬೇಕಾಗಿಲ್ಲ. ಭಯೋತ್ಪಾದಕ ಹಣೆಪಟ್ಟಿಯನ್ನು ತೊಡೆದು ಹಾಕಲು ಕೋರ್ಟ್ ಬದಲು ಆತ ಸರಕಾರ ರಚಿಸಿದ ರಿವ್ಯೂವ್ ಕಮಿಟಿಯ ಬಳಿ ತೆರಳಬೇಕಾಗುತ್ತದೆ. ಆದಾಗ್ಯೂ ಆತ ನಂತರ ಕೋರ್ಟ್ ನಲ್ಲಿ ಮನವಿ ಸಲ್ಲಿಸಬಹುದು. ಈ ಕಾಯ್ದೆಯು ಪೊಲೀಸರಿಗೆ ವ್ಯಕ್ತಿಯನ್ನು 30 ದಿನಗಳ ವರೆಗೆ ಕಸ್ಟಡಿ ತೆಗೆದುಕೊಳ್ಳುವ ಮತ್ತು 90 ದಿನಗಳ ವರೆಗೆ ನ್ಯಾಯಾಂಗ ಬಂಧನದ ಅವಕಾಶ ನೀಡುತ್ತದೆ.

ಯುಎಪಿಎ ಅಡಿ ಕೇಸು ದಾಖಲಾದರೆ ನಿರೀಕ್ಷಣಾ ಜಾಮೀನು ಪಡೆಯುವುದು ಕೂಡ ಅಷ್ಟೊಂದು ಸುಲಭದ ಮಾತಲ್ಲ. ಕೇವಲ ನಾಲ್ಕು ವರ್ಷಗಳಲ್ಲೇ (2016-2019) 5,922 ಮಂದಿಯನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದ್ದು, ಇದರಲ್ಲಿ ಕೇವಲ 132 ಅಂದರೆ ಶೇ.2.22 ಮಂದಿಗಷ್ಟೇ ಶಿಕ್ಷೆಯಾಗಿದೆ. ಈ ಅಂಕಿಅಂಶವು ಯುಎಪಿಎ ಎಷ್ಟರ ಮಟ್ಟಿಗೆ ದುರ್ಬಳಕೆಯಾಗುತ್ತಿದೆ ಮತ್ತು ಅಮಾಯಕರ ಬದುಕನ್ನು ಯಾವ ರೀತಿ ಕತ್ತಲ ಕೋಣೆಗೆ ತಳ್ಳುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಟಾಡಾ, ಪೋಟಾ, ಯುಎಪಿಎ ಜೊತೆಗೆ ಭಾರತೀಯ ನಾಗರಿಕರಿಗೆ ಕಂಟಕವಾಗಿರುವ ಮತ್ತಷ್ಟು ಕಾನೂನುಗಳೂ ಇವೆ. ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ, 1958 (AFSPA), ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ, 1978 (PSA ), ದೇಶದ್ರೋಹದ ಕಾನೂನು (ಭಾರತೀಯ ದಂಡ ಸಂಹಿತೆ, 1860  ಸೆಕ್ಷನ್ 124ಎ), ರಾಷ್ಟ್ರೀಯ ಭದ್ರತಾ ಕಾಯ್ದೆ, 1980 (NSA), ಪಿ.ಎಂ.ಎಲ್.ಎ, 2002 ಮತ್ತು ಈಡಿ, ರಾಷ್ಟ್ರೀಯ ತನಿಖಾ ಏಜೆನ್ಸಿ ಕಾಯ್ದೆ, 2008 (NIA) ಇವು ದಮನಕಾರಿ ಕಾನೂನುಗಳ ಪಟ್ಟಿಯಲ್ಲಿ ಸೇರಿದವುಗಳು. ಈ ಮಾರಕ ಕಾನೂನುಗಳು ಜನರ ಜೀವವನ್ನು ನರಕಸದೃಶವನ್ನಾಗಿ ಮಾಡಿವೆ. AFSPA ಸಶಸ್ತ್ರ ಪಡೆಗಳಿಗೆ ಅಕ್ರಮ ಬಂಧನ, ಹತ್ಯೆ, ಅತ್ಯಾಚಾರದ ಅಪರಾಧದಿಂದ ಪಾರಾಗುವ ಅವಕಾಶ ನೀಡಿತು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ವಿದ್ಯಾರ್ಥಿ ಹೋರಾಟಗಾರರು, ರಾಜಕೀಯ ನಾಯಕರು, ಪತ್ರಕರ್ತರನ್ನು ದೇಶದ್ರೋಹದ ಕಾನೂನಿನ ಮೂಲಕ ಗುರಿಪಡಿಸಲಾಯಿತು. ಮೋದಿಯವರನ್ನು ಟೀಕಿಸಿದ ಕಾರಣಕ್ಕಾಗಿ 149 ಮಂದಿ ಮತ್ತು ಯೋಗಿಯನ್ನು ಟೀಕಿಸಿದ ಕಾರಣಕ್ಕಾಗಿ 44 ಮಂದಿಯ ಮೇಲೆ ದೇಶದ್ರೋಹದ ಕಾನೂನು ಜಡಿಯಲಾಗಿತ್ತು.

ಎನ್.ಐ.ಎ ಕಾನೂನು ಕೂಡ ಭಾರತವನ್ನು ಒಂದು “ಪೊಲೀಸ್ ರಾಜ್ಯ”ವನ್ನಾಗಿ ಪರಿವರ್ತಿಸುತ್ತಿದೆ. ರಾಜ್ಯ ಪೊಲೀಸರ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಇದು ರಾಜ್ಯ ಸರಕಾರಗಳ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. 1982ರಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪೊಂದರಲ್ಲಿ ಪಿ.ಎಸ್.ಎ.ಯನ್ನು “ಒಂದು ಕಾನೂನುಬಾಹಿರ ಕಾನೂನು” ಎಂದು ಹೇಳಿತ್ತು. ಆದರೂ ಈ ಕಾನೂನಿನ ಹೇರುವಿಕೆ ಇನ್ನೂ ನಿಂತಿಲ್ಲ. ಬಿಜೆಪಿ ಸರಕಾರವು 2019ರಲ್ಲಿ ಜಮ್ಮು ಕಾಶ್ಮೀರದ ವಿಧಿ 370 ರದ್ದುಪಡಿಸಿದ ಬಳಿಕ ಅಲ್ಲಿ ಈ ಕಾನೂನಿನಡಿ 4000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಎನ್.ಎಸ್. ದುರ್ಬಳಕೆಯೂ ಕಡಿಮೆಯೇನಿಲ್ಲ. ಯುಪಿ ಪೊಲೀಸರು 2020ರಲ್ಲಿ ಕೇವಲ 7 ತಿಂಗಳ ಮಧ್ಯೆ 139 ಮಂದಿಯ ಮೇಲೆ ಎನ್.ಎಸ್.ಎ ಹೇರಿದ್ದು, 76 ಗೋಹತ್ಯೆ ಮತ್ತು 13 ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈಡಿಯಂತೂ ಸರಕಾರದ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ. ಬಿಜೆಪಿ ಸದಸ್ಯರು ಹಾಗೂ ಬಿಜೆಪಿಯೊಂದಿಗೆ ಸಹಮತಿ ಹೊಂದಿದವರಿಗೆ ಈ ಕಾನೂನಿನಿಂದ ಯಾವುದೇ ಅಪಾಯವಿಲ್ಲ ಎಂಬುದನ್ನು ಸ್ವತಃ ಈಡಿ ಕಾರ್ಯಾಚರಣೆಯೇ ಸ್ಪಷ್ಟಪಡಿಸಿದೆ. ಈ ಮಾರಕ ಕಾನೂನುಗಳ ಪ್ರಮುಖ ಬಲಿಪಶುಗಳು ಮುಸ್ಲಿಮರು, ದಲಿತರು, ಆದಿವಾಸಿಗಳು ಮತ್ತು ಅವರ ಪರವಾಗಿ ಧ್ವನಿ ಎತ್ತುವವರು ಎಂಬುದನ್ನು  ಅಧ್ಯಯನ ವರದಿಗಳು ಈಗಾಗಲೇ ಬಹಿರಂಗಪಡಿಸಿವೆ. ಸಿಎಎ ವಿರೋಧಿ ಹೋರಾಟಗಾರರನ್ನು ಮಟ್ಟಹಾಕಲು ಮತ್ತು ಮುಸ್ಲಿಮ್ ಸಂಘಟನೆಗಳನ್ನು ಹಾಗೂ ಅದರ ನಾಯಕರನ್ನು ಬೇಟೆಯಾಡಲು ಈ ದಮನಕಾರಿ ಕಾನೂನುಗಳನ್ನು ದುರ್ಬಳಕೆ ಮಾಡುತ್ತಿರುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ.

ಆರೆಸ್ಸೆಸ್/ಬಿಜೆಪಿ ಎಲ್ಲಾ ದಮನಕಾರಿ ಕಾನೂನುಗಳನ್ನು ತನ್ನ ದ್ವೇಷದ ಅಜೆಂಡಾಗಳ ಅನುಷ್ಠಾನಕ್ಕೆ ಮತ್ತು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳಿಗಾಗಿ ಬಳಸಿಕೊಳ್ಳುತ್ತಿರುವುದು ಬಹಳ ಸ್ಪಷ್ಟ. ನಾಗರಿಕರು ತಮ್ಮ ವಿಚಾರಧಾರೆಯೊಂದಿಗೆ ಒಂದೋ ಸಹಮತ ಹೊಂದಿರಬೇಕು ಇಲ್ಲವೇ ಮೌನವಾಗಿರಬೇಕೆಂದು ಆರೆಸ್ಸೆಸ್/ಬಿಜೆಪಿ ಬಯಸುತ್ತದೆ. ಇದಕ್ಕೆ ತಪ್ಪಿದರೆ ಕಠಿಣ ಕಾನೂನುಗಳ ಮೂಲಕ ವಿರೋಧಿಗಳನ್ನು ಬೇಟೆಯಾಡಲು ಒಂದು ನಿಮಿಷವನ್ನೂ ಅದು ವ್ಯರ್ಥ ಮಾಡುವುದಿಲ್ಲ. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಾದರೂ ಇನ್ನೂ ಚಾರ್ಜ್ ಶೀಟ್ ದಾಖಲಿಸಲಾಗಿಲ್ಲ. ಇದರಲ್ಲಿ ಬಂಧಿತರಾಗಿರುವವರೆಲ್ಲಾ ಮಾನವ ಹಕ್ಕುಗಳಿಗಾಗಿ, ಜನರ ಸಮಸ್ಯೆಗಳಿಗಾಗಿ  ದುಡಿದವರು ಮತ್ತು ಪ್ರಭುತ್ವದ ದಬ್ಬಾಳಿಕೆ, ದಮನಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತಿದವರು. ಪ್ರಸಕ್ತ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಶಿಸ್ಟ್ ಸರ್ವಾಧಿಕಾರಿದತ್ತ ಕೊಂಡೊಯ್ಯಲು ಕಾನೂನು ಅಥವಾ ನ್ಯಾಯದ ಮಾನ್ಯತೆ ಹೊಂದಿರುವ ಮಾನದಂಡಗಳನ್ನು ಉಪೇಕ್ಷಿಸುವ ಕಾಂಗರೂ ಕೋರ್ಟ್ ಗಳನ್ನು ಪರೋಕ್ಷವಾಗಿ ನೆಲೆಗೊಳಿಸುವ ಉದ್ದೇಶವನ್ನು ಹೊಂದಿದಂತೆ ಭಾಸವಾಗುತ್ತಿದೆ. ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ದಮನಕಾರಿ ಕಾನೂನುಗಳನ್ನು ರದ್ದುಪಡಿಸಬೇಕೆನ್ನುವುದು ಜನರ ಆಗ್ರಹವಾಗಿದೆ. ಇದಕ್ಕಾಗಿ ಹಲವು ರೀತಿಯ ಆಂದೋಲನಗಳು ಪ್ರಸಕ್ತ ದೇಶದಲ್ಲಿ ನಡೆಯುತ್ತಿವೆ. ಸ್ಟ್ಯಾನ್ ಸ್ವಾಮಿಯವರ ಕಸ್ಟಡಿ ಸಾವು ಮತ್ತು ಮಾಡದ ತಪ್ಪಿಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತಿ ವಿಚಾರಣಾಧೀನ ಖೈದಿಗಳಾಗಿ ದಿನದೂಡುತ್ತಿರುವ ಹೋರಾಟಗಾರರಿಗೆ ಆಗುತ್ತಿರುವ ಅನ್ಯಾಯವು ಈ ಜನಾಗ್ರಹಕ್ಕೆ ಮತ್ತಷ್ಟು ಶಕ್ತಿ ತುಂಬಲಿ. ಕರಾಳ ಕಾನೂನುಗಳ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಕ್ಷಿಥಿಲಗೊಳಿಸುವ ಕರಾಳ ಅಧ್ಯಾಯವು ಅಂತ್ಯ ಕಾಣಲಿ ಎಂದು ಆಶಿಸೋಣ.

  • ಏ.ಕೆ ಅಶ್ರಫ್
    (ರಾಜ್ಯ ಕಾರ್ಯದರ್ಶಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ)

ಇದನ್ನೂ ಓದಿ: ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...