Homeಮುಖಪುಟಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

- Advertisement -
- Advertisement -

ಕೊರೊನಾ ನಮ್ಮ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಮೂರನೆ ಅಲೆಗೆ ಸನ್ನದ್ಧರಾಗಿರಬೇಕೆಂದು ತಜ್ಞರು ಹೇಳುತ್ತಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೂರನೆ ಅಲೆ ಬರುವ ಹೊತ್ತಿಗೆ 18 ವರ್ಷಕ್ಕಿಂತ ಕೆಳಗಿನವರು ತೊಂದರೆಗೀಡಾಗಬಹುದು ಎಂದು ಹೇಳಲಾಗುತ್ತಿದೆ. ಇವೆಲ್ಲದರ ಜೊತೆಗೆ ಕೊರೊನಾದಿಂದಾಗಿ ಹಲವರಿಗೆ ಶಿಕ್ಷಣದ ಬಾಗಿಲೇ ಮುಚ್ಚುತ್ತಿದ್ದರೆ, ಶಿಕ್ಷಣದ ಮಾದರಿಯೂ ದೊಡ್ಡದಾಗಿ ಬದಲಾಗುತ್ತಿದೆ. ಈಗ ಹಲವೆಡೆ ಆನ್‌ಲೈನ್‌ನಲ್ಲಿ ಶಿಕ್ಷಣ ಪ್ರಾರಂಭವಾಗಿದ್ದು ಅದು ಹಲವು ಪ್ರಶ್ನೆಗಳನ್ನು ಎತ್ತಿದೆ.

ಶಿಕ್ಷಣ ಎಂಬುದು ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಮೂಲಭೂತ ಅಂಶ ಎನ್ನುವುದು ಒಂದಾದರೆ ಅದು ಸಾಮಾಜೀಕರಣಕ್ಕೆ ಪೂರಕವಾಗಿರಬೇಕು ಎಂಬುದು ಕೂಡ ಮಹತ್ವವಾದ ಸಂಗತಿ. ಈಗದನ್ನು ನಾಲ್ಕು ಗೋಡೆಗಳ ಮಧ್ಯೆ ನೀಡುತ್ತಿರುವುದು ಸರಿಯೆ, ಬೇರೆ ದಾರಿಗಳಿಲ್ಲವೆ ಎಂಬ ಚರ್ಚೆಗಳೂ ಇನ್ನೂ ಬಗೆಹರಿದಿಲ್ಲ.

ಕೊರೊನಾ ಇಲ್ಲಿಗೆ ಮುಗಿಯಿತು, ಇನ್ನು ಮುಂದೆ ಬರುವುದಿಲ್ಲ ಎಂದ ದಿನ ಶಿಕ್ಷಣವನ್ನು ಆನ್‌ಲೈನ್ ಮೂಲಕ ಮಾಡಬೇಡಿ ಎನ್ನಬಹುದು. ಆದರೆ ಅಂತಹ ಯಾವುದೆ ಗ್ಯಾರಂಟಿಯನ್ನು ತಜ್ಞರು ನೀಡುತ್ತಿಲ್ಲ. ಹಾಂಗ್‌ಕಾಂಗ್‌ನಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲೇ ಐದನೆ ಅಲೆಯ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಕೊರೊನಾ ಅಲೆಗಳು ಹೀಗೆ ಸರಣಿಯಾಗಿ ಬರುತ್ತಿರುವ ಮುನ್ಸೂಚನೆಯಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆನ್‌ಲೈನ್ ಶಿಕ್ಷಣವನ್ನು ಸಮರ್ಥಿಸಲಾಗುತ್ತಿದೆ.

ಆಫ್‌ಲೈನ್ ಶಿಕ್ಷಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಇರುವ ನಮ್ಮ ದೇಶದಲ್ಲಿ ಆನ್‌ಲೈನ್ ಶಿಕ್ಷಣ ಎಂಬುದು, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಕೊರೊನಾ ಇಲ್ಲದಿರುವ ಸಮಯದಲ್ಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಯ ನಡುವೆ ದೊಡ್ಡ ಅಂತರವಿತ್ತು. ಈ ಅಂತರ ಕೊರೊನಾ ಕಾಲದ ಆನ್‌ಲೈನ್ ಶಿಕ್ಷಣದಿಂದಾಗಿ ಮತ್ತಷ್ಟು ಹೆಚ್ಚಾಗುತ್ತಿದೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಗ್ಗೆ ಹೇಳುವುದಾದರೆ, ಬಡ ಹಾಗೂ ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚು ಕಲಿಯುತ್ತಾರೆ. ಈ ವಿದ್ಯಾರ್ಥಿಗಳ ಪೋಷಕರಲ್ಲಿ ಆನ್‌ಲೈನ್ ಕ್ಲಾಸುಗಳಿಗೆ ಬೇಕಾದ ಸ್ಮಾರ್ಟ್‌ಫೋನ್‌ಗಳು ಇರುವುದಿಲ್ಲ. ಕೊರೊನಾದಿಂದ ಯಾವುದೇ ದುಡಿಮೆಯಿಲ್ಲದ ಕಾರಣಕ್ಕೆ ಪೋಷಕರು ಅವುಗಳನ್ನು ಕೊಳ್ಳುವ ಶಕ್ತಿಯನ್ನು ಹೊಂದಿರುವುದಿಲ್ಲ. ಅಥವಾ ಒಂದು ಸ್ಮಾರ್ಟ್‌ಫೋನ್‌ಅನ್ನು ಹೊಂದಿದ್ದರೂ ಒಂದಕ್ಕಿಂತ ಹೆಚ್ಚು ಕಲಿಯುವ ಮಕ್ಕಳಿರುವವರಿಗೆ ಅದು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತದೆ.

ಈ ಸಮಸ್ಯೆಗಳು ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಕೂಡ ಗಂಭೀರವಾದದ್ದು. 70% ಕಾಡುಗಳಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಳವಳ್ಳಿಯ ರತೀಶ್ ಅವರು ತಮ್ಮ ಆನ್‌ಲೈನ್ ಕ್ಲಾಸುಗಳನ್ನು ಕೇಳಬೇಕೆಂದರೆ ಮನೆಯಿಂದ ಸುಮಾರು ಐದು ಕಿಲೋಮೀಟರ್ ನಡೆದು ಎತ್ತರದ ಜಾಗದಲ್ಲಿ ನಿಲ್ಲಬೇಕಾಗುತ್ತದೆ. ಕ್ಲಾಸುಗಳು ಕೇಳಬೇಕಾದ ಸಮಯ ಮಳೆ ಬಂದರೆ ಅವರ ಕಷ್ಟಗಳು ದೇವರಿಗೇ ಪ್ರೀತಿ! ಜೊತೆಗೆ ’ಮಿಸ್ಡ್‌ಕಾಲ್’ ಕೊಡಲು ಮಾತ್ರ ತಮ್ಮ ಮೊಬೈಲುಗಳಲ್ಲಿ ಕರೆನ್ಸಿ ಹಾಕಿಡುತ್ತಿದ್ದ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗ, ತಮ್ಮ ಮಕ್ಕಳ ಆನ್‌ಲೈನ್ ಕ್ಲಾಸ್‌ಗಳಿಗಾಗಿ ಇಂಟರ್‌ನೆಟ್‌ಗೆ ಪ್ಯಾಕ್‌ಗಳನ್ನು ಹಾಕಬೇಕಾಗುತ್ತದೆ. ಒಂದು ದಿನದಲ್ಲಿ ಎರಡು ಗಂಟೆಗಳ ತರಗತಿಯೆಂದರೂ ತಿಂಗಳಿಗೆ 250 ರೂಗಳನ್ನು ಪಾವತಿಸಬೇಕಾಗುತ್ತದೆ. ಇದು ಕೊರೊನಾದಂತಹ ಆರ್ಥಿಕ ಹಿನ್ನಡೆಯ ಸಮಯದಲ್ಲಿ ಅತಿ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ.

ಉತ್ತರ ಕನ್ನಡದಲ್ಲಿ ಪ್ರಾಧ್ಯಾಪಕರಾಗಿರುವ ಅರುಣ್ ಪ್ರಸಾದ್ ಅವರು ಹೇಳುವಂತೆ, “ಬಡವರ್ಗದ ಮಕ್ಕಳ ಪೋಷಕರಿಗೆ ಸಾವಿರಾರು ರುಪಾಯಿಗಳನ್ನು ನೀಡಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಶಕ್ತಿಯಿರುವುದಿಲ್ಲ. ಇಂತಹ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಮನೆಯ ದನಕರುಗಳನ್ನು ಮಾರಿ ಮೊಬೈಲ್ ಕೊಡಿಸಿರುವಂತಹ ಘಟನೆಗಳ ಬಗ್ಗೆ ನನ್ನ ಸಹೋದ್ಯೋಗಿಗಳು ಹೇಳುವುದನ್ನು ಕೇಳಿದ್ದೇನೆ” ಎನ್ನುತ್ತಾರೆ.

ಮತ್ತೊಂದು ಕಡೆ ಗ್ರಾಮೀಣ ಭಾಗದ ಖಾಸಗಿ ಶಾಲೆಗಳಿಗೆ ತೆರಳುವ ಮಕ್ಕಳಲ್ಲಿ ಮಧ್ಯಮ ವರ್ಗದವರೆ ಹೆಚ್ಚು. ಜೊತೆಗೆ ಒಳ್ಳೆಯ ಶಿಕ್ಷಣ ಸಿಗುತ್ತದೆ ಎಂಬ ’ಪ್ರಚಾರದ’ ಕಾರಣಕ್ಕೆ ಬಡವರ್ಗದ ಜನರು ಕೂಡಾ ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿರುತ್ತಾರೆ. ಇಲ್ಲಿ ಶಾಲೆಯ ಫೀಸ್ ಜೊತೆಗೆ ಆನ್‌ಲೈನ್ ತರಗತಿಗಳು ಪೋಷಕರನ್ನು ಮತ್ತಷ್ಟು ಹೈರಾಣಾಗಿಸುತ್ತಿವೆ.

ನಗರ ಪ್ರದೇಶದಲ್ಲಿನ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಕಷ್ಟಗಳು ಗ್ರಾಮೀಣ ಭಾಗಗಳಿಗಿಂತ ಕಡಿಮೆಯೇನಲ್ಲ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ತೀರಾ ಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಈ ಬಡಜನರು ನಗರದಲ್ಲಿ ಜೀವನೋಪಾಯಕ್ಕೇ ಕಷ್ಟಪಡುತ್ತಿದ್ದಾರೆ. ಕೊರೊನಾ ಇವರ ಆರ್ಥಿಕ ಸ್ಥಿತಿಯನ್ನು ಜರ್ಜರಿತವಾಗಿಸಿದೆ.

“ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಸಂಪರ್ಕ ತಪ್ಪಿಹೋಗಬಾರದು ಎನ್ನುವ ಕಾರಣಕ್ಕೆ ಆನ್‌ಲೈನ್‌ಕ್ಲಾಸ್ ಎಂಬುದು ಒಳ್ಳೆಯ ಪ್ರಯೋಗವೆ. ಆದರೆ ನಮ್ಮ ಶಾಲೆಯಲ್ಲಿ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳೆ ಹೆಚ್ಚಿನವರಿದ್ದಾರೆ. ಕೆಲವೊಂದು ವಿದ್ಯಾರ್ಥಿಗಳ ಪೋಷಕರಲ್ಲಿ ಸ್ಮಾರ್ಟ್‌ಫೋನ್‌ಗಳು ಇರುವುದಿಲ್ಲ. ಅಂತದ್ದರಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್‌ಫೋನ್‌ಗಳು ಕೊಳ್ಳಬೇಕೆಂದರೆ ಕಷ್ಟವೆ ಸರಿ. ಅದು ಅಲ್ಲದೆ ದಿನಕ್ಕೆ ಎರಡು ಗಂಟೆ ಕ್ಲಾಸ್‌ಗಳಿಗಿಂತ ಹೆಚ್ಚು ಸಮಯ ನಡೆಸಲು ಆಗುವುದಿಲ್ಲ. ಅದಕ್ಕೆ ಹೆಚ್ಚಿನ ಡಾಟಾ ಪ್ಯಾಕ್ ಅಗತ್ಯವಿದೆ. ಜೊತೆಗೆ ನೆಟ್‌ವರ್ಕ್ ಸಮಸ್ಯೆಯಿದೆ. ಇದನ್ನು ಸರ್ಕಾರ ಸರಿಪಡಿಸಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿರುವ ಹಝ್ರತ್ ಸೈಯ್ಯದ್ ಮದನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆಎಂಕೆ ಮಂಜನಾಡಿ ಅಭಿಪ್ರಾಯಪಡುತ್ತಾರೆ.

“ಆನ್‌ಲೈನ್ ತರಗತಿಗಳು ಆಫ್‌ಲೈನ್ ಕ್ಲಾಸುಗಳಷ್ಟು ಸಾಂಗವಾಗಿ ನಡೆಯುವುದಿಲ್ಲ. ತರಗತಿಯ 50%ಕ್ಕಿಂತ ಕಡಿಮೆ ಮಕ್ಕಳಷ್ಟೇ ಇದರಲ್ಲಿ ಭಾಗವಹಿಸುತ್ತಾರೆ. ಭಾಗವಹಿಸದೆ ಇರುವ ಮಕ್ಕಳು ತಮ್ಮ ಗೈರು ಹಾಜರಾತಿಗೆ ಮೊಬೈಲ್ ಹಾಳಾಗಿದೆ, ನೆಟ್ವರ್ಕ್ ಸಮಸ್ಯೆ ಸೇರಿದಂತೆ ಹಲವಾರು ಕಾರಣಗಳನ್ನು ನೀಡುತ್ತಾರೆ. ಅಲ್ಲದೆ ಭಾಗವಹಿಸಿದವರೂ ತಮ್ಮ ತರಗತಿಗಳನ್ನು ಸರಿಯಾಗಿ ಕೇಳುತ್ತಿದ್ದಾರೆ ಎಂದು ನಮಗೆ ತಿಳಿಯುವುದು ಕೂಡಾ ಇಲ್ಲ. ಕೆಲವು ಮಕ್ಕಳ ವಿಡಿಯೊ ಆಫಾಗಿ ಇರುವಾಗಲೂ ಗೊತ್ತಾಗುವುದಿಲ್ಲ. ಈ ಮೊಬೈಲ್‌ಗಳು ವಿದ್ಯಾರ್ಥಿಗಳ ಮನೆಯವರದ್ದೇ ಆಗಿರುವುದರಿಂದ ಕೆಲವೊಮ್ಮ ಕ್ಲಾಸ್ ಮಧ್ಯೆಯೆ ಮೊಬೈಲ್‌ಗಳಿಗೆ ಕರೆಗಳು ಬರುತ್ತದೆ. ಇದರಿಂದ ಅವರ ತರಗತಿಗಳ ಸಂಪರ್ಕ ತಪ್ಪಿ ಹೋಗುತ್ತದೆ. ಇದು ಮಕ್ಕಳ ಏಕಾಗ್ರತೆಗೂ ಭಂಗ ತರಿಸುತ್ತದೆ” ಎಂದು ಮಂಗಳೂರಿನ ಖಾಸಗಿ ಶಾಲೆಯ ಅಧ್ಯಾಪಕಿ ಆಗಿರುವ ಸುಪ್ರಿಯಾ ಅವರು ಹೇಳುತ್ತಾರೆ.

2011ರ ಜನಗಣತಿಯ ಪ್ರಕಾರ 69% ಭಾರತೀಯರು ಒಂದು ಅಥವಾ ಎರಡು ಕೊಠಡಿಗಳು ಇರುವ ಮನೆಗಳಲ್ಲಿ ವಾಸವಿರುತ್ತಾರೆ. ಇಂತಹ ಸಮಾಜದಲ್ಲಿ ಒಂದು ಮಗುವಿಗೆ ತರಗತಿಗಳನ್ನು ಕೇಳಲು ಸುಲಭವಾಗುವ ಮತ್ತು ಶಾಲೆಯ ಅನುಭವ ನೀಡುವ ಕೊಠಡಿಗಳನ್ನು ಒದಗಿಸಲು ಪೋಷಕರಿಗೆ ಸಾಧ್ಯವೆ ಎಂಬ ಪ್ರಶ್ನೆಗಳೂ ಇವೆ.

ಆನ್‌ಲೈನ್ ಶಿಕ್ಷಣದಲ್ಲಿನ ಸಂಕಷ್ಟಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಇವೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಅತಿ ಕಡಿಮೆ ಸಂಬಳವಿದ್ದು, ಈ ಕೊರೊನಾ ಬಿಕ್ಕಟ್ಟಿನಲ್ಲಿ ಅವರಿಗೆ ಅದನ್ನೂ ಸರಿಯಾಗಿ ನೀಡಲಾಗುತ್ತಿಲ್ಲ ಎಂಬ ಹಲವು ಆರೋಪಗಳಿವೆ. ಅದಲ್ಲದೆ ಗ್ರಾಮೀಣ ಭಾಗದಲ್ಲಿನ ಶಿಕ್ಷಕರು ತಮ್ಮ ತರಗತಿಗಳನ್ನು ನಡೆಸಲು ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಮಹಿಳಾ ಶಿಕ್ಷಕರು ಹೆಚ್ಚಿನ ತೊಂದರೆಗಳನ್ನು ಅನುಭವಿಸುತ್ತಾರೆ. ನೆಟ್‌ವರ್ಕ್ ಹುಡುಕಿಕೊಂಡು ಬೇರೆ ಸ್ಥಳಗಳಿಗೆ ಹೋದಾಗ ಅಲ್ಲಿ ಅವರು ಲೈಂಗಿಕ ಕಿರುಕುಳಕ್ಕೆ ಕೂಡಾ ಒಳಗಾಗುವ ಅಪಾಯವಿರುತ್ತದೆ ಎಂದು ತುಮಕೂರಿನ ಪತ್ರಕರ್ತರಾದ ಕೆ.ಇ.ಸಿದ್ದಯ್ಯ ಅವರು ಅಭಿಪ್ರಾಯ ಪಡುತ್ತಾರೆ.

“ಶಿಕ್ಷಣ ತಜ್ಞರು ಯಾರು ಎನ್ನುವುದನ್ನು ಸರ್ಕಾರ ಇವತ್ತಿನವರೆಗೂ ಹುಡುಕಿಕೊಂಡಿಲ್ಲ. ಆನ್‌ಲೈನ್ ಶಿಕ್ಷಣದ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳಿವೆ ಎಂದು ಸರ್ಕಾರವೆ ಹೇಳುತ್ತದೆಯಾದರೂ, ಈ ಎರಡು ರೀತಿಯ ವರದಿಗಳನ್ನು ಸರ್ಕಾರ ತರಿಸಿಕೊಂಡಿಲ್ಲ. ಸರ್ಕಾರದ ಪರವಾಗಿ ಇರುವ ಒಂದು ವರ್ಗದ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ನೋಡುವ ವರದಿಗಳನ್ನಷ್ಟೇ ಸರ್ಕಾರ ಗಣನೆಗೆ ತೆಗೆದುಕೊಂಡಿದೆ. ನಿಜವಾದ ಶಿಕ್ಷಣ ತಜ್ಞರ ಕಡೆಯಿಂದ ಮಾಹಿತಿಯನ್ನು ಸರ್ಕಾರ ಇನ್ನೂ ಪಡೆದುಕೊಂಡಿಲ್ಲ. ಇದು ನಿಜವಾದ ಸಮಸ್ಯೆಯಾಗಿದೆ” ಎಂದು ಸಿದ್ದಯ್ಯ ಹೇಳುತ್ತಾರೆ.

PC : India TV News

ಆಟವಾಡುತ್ತಾ ಬೆಳೆಯುವ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವು ಸಾಮಾಜಿಕ ಬೆರೆಯುವಿಕೆ ಇಲ್ಲದಂತೆ ಮಾಡುತ್ತದೆ. ಹೀಗಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೂ ಇದು ಹಿನ್ನಡೆ ಉಂಟು ಮಾಡುತ್ತದೆ. ಅಲ್ಲದೆ ಮೊಬೈಲ್‌ಗಳನ್ನು ನಿರಂತರ ನೋಡಬೇಕಾದ ಅನಿವಾರ್ಯತೆ ಆನ್‌ಲೈನ್ ತರಗತಿಗಳಲ್ಲಿ ಇರುವುದರಿಂದ ಮಕ್ಕಳ ಕಣ್ಣುಗಳಿಗೂ ಕೆಟ್ಟ ಪರಿಣಾಮ ಬೀರುತ್ತದೆ. ಈ ಆನ್‌ಲೈನ್ ಕ್ಲಾಸ್‌ಗಳ ನಡುವೆ ನುಸುಳಿದ್ದ ಕಿಡಿಗೇಡಿಗಳು ಅಶ್ಲೀಲ ಚಿತ್ರಗಳನ್ನು ಪ್ಲೇ ಮಾಡಿರುವ ಘಟನೆಗಳು ಕೂಡ ವರದಿಯಾತ್ತು. ಇಂತಹ ಘಟನೆಗಳು ಮಕ್ಕಳನ್ನು ಮಾನಸಿಕವಾಗಿ ಅಘಾತಕ್ಕೆ ಈಡು ಮಾಡುವ ಸಂಭವ ಕೂಡಾ ಇರುತ್ತದೆ.

“ಎಲ್ಲವೂ ಆನ್‌ಲೈನ್ ಆಗುತ್ತಿರುವ ಸಂದರ್ಭ. ಒಂದು ಶಿಕ್ಷಣದ ಮಾದರಿಯನ್ನು ತಯಾರಿಸಿ ಇದನ್ನು ಉಪಯೋಗಿಸಿಕೊಳ್ಳಿ ಎಂದು ಶಾಲೆಗಳಿಗೆ ಹೇಳಬಹುದಿತ್ತು. ಆದರೆ ಸರ್ಕಾರ ಇದನ್ನು ಮಾಡಿಲ್ಲ. ಈ ಹಿಂದೆ ಮಕ್ಕಳು ಎಷ್ಟರಮಟ್ಟಿಗೆ ತಮ್ಮ ಪಾಠಗಳನ್ನು ಮನನ ಮಾಡಿದ್ದಾರೆ ಎಂಬ ತಿಳಿದುಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಎಲ್ಲರನ್ನೂ ಪಾಸ್ ಮಾಡಿದ್ದಾರೆ, ಹಾಗಾಗಿ ಆನ್‌ಲೈನ್ ಶಿಕ್ಷಣ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ತಲುಪಿದೆ ಎಂದು ತಿಳಿದುಕೊಳ್ಳಲು ಆಗುವುದಿಲ್ಲ” ಎಂದು ಲೇಖಕ ರಾಜಾರಾಂ ತಲ್ಲೂರು ಹೇಳುತ್ತಾರೆ.

ಒಂದು ಅಂಕಿಅಂಶದ ಪ್ರಕಾರ ದೇಶದಲ್ಲಿ ಇಂಟರ್‌ನೆಟ್ ಬಳಕೆ ಮಾಡಲು ತಿಳಿದಿರುವರು 37% ಮಾತ್ರವಿದ್ದಾರೆ. ಒಂದುವೇಳೆ ದೇಶದಲ್ಲಿ ಆನ್‌ಲೈನ್ ಶಿಕ್ಷಣ ಕಡ್ಡಾಯವಾದರೆ ದೇಶದ 85% ಜನರು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಕೂಡಾ ಹೇಳಲಾಗುತ್ತಿದೆ. ಕೊರೊನಾ ಅಲೆಯು ಸರಣಿಯಾಗಿ ಬರುತ್ತಿರುವ ಹೊತ್ತಿನಲ್ಲಿ ಆನ್‌ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಹುಟ್ಟುಹಾಕಿದೆ. ದೈಹಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ಪ್ರಾರಂಭಿಸಿದರೂ ಸೋಂಕಿನ ಬೆದರಿಕೆಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆಯೆ ಎಂಬ ಪ್ರಶ್ನೆಯೂ ಇದೆ. ಇನ್ನು ದೇಶದಾದ್ಯಂತ ಪ್ರಾರಂಭವಾಗಿರುವ ವ್ಯಾಕ್ಸಿನೇಷನ್ ಪ್ರಕ್ರಿಯೆ 18 ವರ್ಷಗಳ ಮೇಲಿನವರಿಗೆ ಮಾತ್ರ ಇದೆ. ಮಕ್ಕಳಿಗೆ ಲಸಿಕೆ ನೀಡಬಹುದೆ ಎಂಬ ಪರೀಕ್ಷೆಗಳು ಇನ್ನೂ ನಡೆಯುತ್ತಿವೆ. ಮಕ್ಕಳೆಲ್ಲರೂ ವ್ಯಾಕ್ಸಿನೇಟ್ ಆಗುವವರೆಗಾದರೂ ಆನ್‌ಲೈನ್ ಶಿಕ್ಷಣ ಮುಂದುವರೆಸಬೇಕೆಂದರೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಎಲ್ಲರಿಗೂ ಸ್ಮಾರ್ಟ್‌ಫೋನ್ ನೀಡುವುದು, ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸುವುದು, ಇಂಟರ್‌ನೆಟ್ ಡಾಟಾ ಪ್ಯಾಕ್‌ಗಳನ್ನು ನೀಡುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ. ಈ ಸಿದ್ಧತೆಗಳಿಲ್ಲದ ಆನ್‌ಲೈನ್ ಶಿಕ್ಷಣ, ಶ್ರೀಮಂತರಿಗೆ ಹೆಚ್ಚಿನ ಅವಕಾಶ ಕೊಟ್ಟು, ಬಡವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿಸುತ್ತದೆ. ಇದು ಸಂವಿಧಾನ ಭಾರತದ ಎಲ್ಲಾ ಪ್ರಜೆಗಳಿಗೆ ನೀಡುವ ಶಿಕ್ಷಣದ ಹಕ್ಕು ಮತ್ತು ಸಮಾನತೆಯ ಹಕ್ಕನ್ನು ನಿರಾಕರಿಸಿದಂತಗುತ್ತದೆ.


ಇದನ್ನೂ ಓದಿ: ಹೊಸ ಐಟಿ ನಿಯಮ: ಏಪ್ರಿಲ್‌ನಲ್ಲಿ 59,350 ಕಂಟೆಂಟ್‌‌‌ಗಳನ್ನು ಕಿತ್ತು ಹಾಕಿದ ಗೂಗಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಆನ್ಲೈನ್ ಶಿಕ್ಷಣ ಒಂದು ದೊಡ್ಡ ಜೋಕ್! ಸರ್ಕಾರದ ಬಹುಪಾಲು ತೀರ್ಮಾನಗಳು ಇಂತಹ. ಇನ್ನೊಂದು ಇಲ್ಲಿದೆ, ನೋಡಿ:

    ಮಂತ್ರ ಹೇಳಿದರೆ, ಮಾವಿನಕಾಯಿ ಉದುರಬಹುದೆ?
    ಕರೊನ ಸಮಯದಲ್ಲಿ ಕನ್ನಡಿಗನ ಪಾಡು:
    ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆಯಲ್ಲಿ ಒಂದು ವಾರದ ತರಬೇತಿ ಕಡ್ಡಾಯ. ಅದಿಲ್ಲದಿದ್ದರೆ, ಸಾಲವೂ ಇಲ್ಲ, ಸಬ್ಸಿಡಿಯೂ ಇಲ್ಲ. ತರಬೇತಿಯನ್ನು ಈವರೆಗೆ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು ಸ್ಥಳೀಯ ಭಾಷೆಯಲ್ಲಿ ಕೊಡುತ್ತಿದ್ದವು. ಕರೊನದ ಈ ಕಾಲದಲ್ಲಿ ಸರ್ಕಾರ ಆನ್ಲೈನ್ ತರಬೇತಿಯನ್ನು ಕೇಂದ್ರ ಮಟ್ಟದಲ್ಲಿ ವ್ಯವಸ್ಥೆ ಮಾಡಿದೆ. ಇದನ್ನು ನಡೆಸಿ ಕೊಡುವವರು ಉತ್ತರ ಪ್ರದೇಶದವರು; ತರಬೇತಿ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ! ಇಂಗ್ಲಿಷ್-ಹಿಂದಿ ಬಾರದ ಅತ್ಯಲ್ಪ ವಿದ್ಯೆಯ, ಕನ್ನಡ, ತೆಲುಗು, ಮಲೆಯಾಳಂ, ತಮಿಳು ಮುಂತಾದ ಭಾಷೆಯ ಫಲಾನುಭವಿಗಳ ಅವಸ್ಥೆ ಏನು? ತರಬೇತಿ, ಸ್ಥಳೀಯ ಭಾಷೆಯಲ್ಲಿ ಇರಬೇಕು ಎಂಬ ಕನಿಷ್ಠ ಸಾಮಾನ್ಯ ಜ್ಞಾನವೂ, ಕಾರ್ಯಕ್ರಮ ರೂಪಿಸಿದ ಕೇಂದ್ರ ಅಧಿಕಾರಿಗಳಿಗೆ ಇಲ್ಲವೆ? ಯಾಕೆ, ರಾಜ್ಯ ಮಟ್ಟದಲ್ಲಿ ಆನ್ಲೈನ್ ತರಬೇತಿ ಕೈಗೊಳ್ಳಬಾರದು? ಯಾಕೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯ ಮಟ್ಟದ ಸಂಸ್ಥೆಗಳು ಕೇಂದ್ರಕ್ಕೆ ಅವಶ್ಯಕ ಪೀಡ್ ಬ್ಯಾಕ್ ಕೊಡದೆ ನುಣುಚಿಕೊಳ್ಳುತ್ತಿದ್ದಾರೆ?

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...