Homeಮುಖಪುಟಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

- Advertisement -
- Advertisement -

ಆತನ ಬೆರಳುಗಳಿಂದ ನನ್ನ ನೋವು ಮಿಡಿಯುತ್ತಿದೆ
ಆತನ ನುಡಿಗಳಿಂದ ನನ್ನ ಜೀವನ ಹಾಡುತ್ತಿದೆ
ಆತನ ಹಾಡು ನನ್ನನ್ನು ಮೆಲ್ಲನೆ ಕೊಲ್ಲುತ್ತಿದೆ
ಆತನ ಹಾಡು ನನ್ನನ್ನು ಮೆಲ್ಲನೆ ಕೊಲ್ಲುತ್ತಿದೆ
ಆತನ ಪದಗಳು ನನ್ನ ಇಡೀ ಜೀವನದ ಕತೆ ಹೇಳುತ್ತಿದೆ
ಆತನ ಹಾಡು ನನ್ನನ್ನು ಮೆಲ್ಲನೆ ಕೊಲ್ಲುತ್ತಿದೆ

1970ರ ದಶಕದ ಜನಪ್ರಿಯ ಹಾಡಿನ ಈ ಸಾಹಿತ್ಯವು ವಾಸ್ತವಿಕವಾಗಿ ಫಾದರ್ ಸ್ಟ್ಯಾನ್ ಸ್ವಾಮಿಯ ಜೀವನ ಮತ್ತು ಅವರ ಜೊತೆಗ ಪ್ರಭುತ್ವ ನಡೆದುಕೊಂಡಿದ್ದಕ್ಕೆ ಅನ್ವಯಿಸುತ್ತದೆ

ಭೀಮಾ-ಕೊರೆಗಾಂವ್‌ನಲ್ಲಿ ಜನವರಿ 1, 2018ರಂದು ಕೆಲವು ಘಟನೆಗಳು ಸಂಭವಿಸಿದವು. ಇದು ದೇಶದ್ರೋಹ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಕಾರಣವಾಯಿತು. ತನಿಖೆಯ ನಂತರ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) (UAPA) ಕಾಯ್ದೆಯಡಿ ಅಪರಾಧಗಳನ್ನು ಸೇರಿಸಲಾಗಿದೆ. ಕೆಲವು ಆರೋಪಿಗಳ ವಿರುದ್ಧ ನವೆಂಬರ್ 15, 2018ರಂದು ಮೊದಲು ಚಾರ್ಜ್‌ಶೀಟ್ ಸಲ್ಲಿಸಲಾಯಿತು ಮತ್ತು 2019ರ ಫೆಬ್ರವರಿ 21ರಂದು ಇನ್ನೂ ಕೆಲವು ಆರೋಪಿಗಳ ವಿರುದ್ಧ ಎರಡನೇ ಅಥವಾ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಯಿತು.

ಈ ನಡುವೆ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಪೊಲೀಸರು ರಾಂಚಿಯಲ್ಲಿನ ಸ್ಟ್ಯಾನ್ ಸ್ವಾಮಿಯವರ ನಿವಾಸ ಮತ್ತು ಕಚೇರಿಯನ್ನು ಆಗಸ್ಟ್ 28, 2018ರಂದು ತಪಾಸಣೆ ಮಾಡಿದರು. ಸ್ಪಷ್ಟವಾಗಿ, ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ ಮತ್ತು ಅದಕ್ಕಾಗಿಯೇ ನವೆಂಬರ್ 2018 ಮತ್ತು ಫೆಬ್ರವರಿ 2019ರಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ಗಳಲ್ಲಿ ಅವರ ವಿರುದ್ಧ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ. ಬಹುಶಃ ಸ್ಟ್ಯಾನ್ ಸ್ವಾಮಿಯ ವಿರುದ್ಧ ಕೆಲವಾದರೂ ಸಾಕ್ಷ್ಯಗಳನ್ನು ಕೆದಕುವ ಉದ್ದೇಶದಿಂದ, ಅವರ ನಿವಾಸ ಮತ್ತು ಕಚೇರಿಯನ್ನು ಮತ್ತೆ ಜೂನ್ 12, 2019ರಂದು ರಾಂಚಿಯಲ್ಲಿ ತಪಾಸಣೆ ನಡೆಸಿದಾಗ ಆಗಲೂ ಯಾವುದೇ ಸಾಕ್ಷ್ಯ ಕಂಡುಬರಲಿಲ್ಲ ಎಂದು ತೋರುತ್ತದೆ. ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿರುವವರೆಗೆ ಎಲ್ಲವೂ ತಣ್ಣಗೆ ಇತ್ತು, ನಂತರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) 2020ರ ಜನವರಿ 2 ರಂದು ವರ್ಗಾಯಿಸಿದ ಬಳಿಕ ಹೊಸ ಬೆಳವಣಿಗೆಗಳು ಶುರುವಾದವು.

PC : The Print

ಸ್ಟ್ಯಾನ್ ಸ್ವಾಮಿ ಅವರ ಪ್ರಕಾರ, ಅವರನ್ನು ಜುಲೈ 25 ಮತ್ತು ಆಗಸ್ಟ್ 7, 2020ರ ನಡುವೆ ಸುಮಾರು 15ಗಂಟೆಗಳ ಕಾಲ ಎನ್‌ಐಎ ವಿಚಾರಣೆಗೊಳಪಡಿಸಿತು. ಅಕ್ಟೋಬರ್ 5ರಂದು ಮುಂಬೈನ ಎನ್‌ಐಎ ಕಚೇರಿಗೆ ಹಾಜರಾಗಲು ಸೆಪ್ಟೆಂಬರ್ 30, 2020ರಂದು ಸೂಚಿಸಲಾಯಿತು. ಅವರ ವೃದ್ಧಾಪ್ಯ (ಆಗ 83 ವರ್ಷ ವಯಸ್ಸು) ಮತ್ತು ಸಾಂಕ್ರಾಮಿಕ ಪರಿಸ್ಥಿತಿಯ ಕಾರಣದಿಂದಾಗಿ ಅದನ್ನು ಅವರು ನಿರಾಕರಿಸಿದರು. ಭೀಮಾ-ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್ 8ರಂದು ಎನ್‌ಐಎ ರಾಂಚಿಗೆ ತೆರಳಿ ಅವರನ್ನು ಬಂಧಿಸಿ ಮುಂಬೈ ಬಳಿಯ ತಲೋಜ ಜೈಲಿಗೆ ಹಾಕಿತು. ಯುಎಪಿಎ ಅಡಿಯಲ್ಲಿ ಅಪರಾಧಗಳನ್ನು ಉಲ್ಲೇಖಿಸಿ ಮರುದಿನ ಅವರ (ಮತ್ತು ಇತರರ) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು.

ಡಿ.ಕೆ. ಬಸು (1996) ಪ್ರಕರಣದಲ್ಲಿ ಬಂಧಿತನಾದ ಪ್ರತಿಯೊಬ್ಬ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ. ಸುಪ್ರೀಂಕೋರ್ಟ್ ಈ ತೀರ್ಪು ಸರಳ ಅಥವಾ ಕಣ್ಣಿಂದಲೇ ಪರೀಕ್ಷಿಸುವ ಉದ್ದೇಶವನ್ನು ಹೊಂದಿರಲಿಲ್ಲ, ಬದಲಾಗಿ ಸ್ವಲ್ಪ ಹೆಚ್ಚು ವಿವರವಾದ ಪರೀಕ್ಷೆ ನಡೆಸುವುದು ಉದ್ದೇಶವಾಗಿತ್ತು. ಸ್ಟ್ಯಾನ್ ಸ್ವಾಮಿ ಅವರ ವಯಸ್ಸು ಮತ್ತು ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ದಾಖಲಿಸುವ ಒಬ್ಬ ಸಮರ್ಥ ವೈದ್ಯಕೀಯ ಅಧಿಕಾರಿಯಿಂದ ಪರೀಕ್ಷಿಸಲು ಬಂಧನ ಅಧಿಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.

ಎ.ಕೆ. ರಾಯ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1981) ಪ್ರಕರಣದಲ್ಲಿ ವಿಚಾರಣೆಯಿಲ್ಲದೆ ಮತ್ತು ಆರೋಪಗಳನ್ನು ರೂಪಿಸದೆ ವ್ಯಕ್ತಿಯನ್ನು ಬಂಧಿಸುವುದರ ಬಗ್ಗೆ ಸುಪ್ರೀಂಕೋರ್ಟ್ ಗಮನಹರಿಸಿತ್ತು. ಬಂಧನಕ್ಕೊಳಗಾದ ವ್ಯಕ್ತಿಯನ್ನು ಸಾಮಾನ್ಯವಾಗಿ “ಅವನ ಅಥವಾ ಅವಳ ಸಾಮಾನ್ಯ ವಾಸಸ್ಥಳದ ಪರಿಸರದಲ್ಲಿ ಇರುವ ಜಾಗದಲ್ಲಿ ಬಂಧನದಲ್ಲಿಡಬೇಕು. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಮದ್ರಾಸ್ ಅಥವಾ ಕೊಲ್ಕತ್ತಾದಂತಹ ದೂರದ ಸ್ಥಳದಲ್ಲಿ ಬಂಧನದಲ್ಲಿರಿಸುವುದು ದಂಡನಾತ್ಮಕ ಕ್ರಮವಾಗಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಅಂಥದನ್ನು ಪ್ರೋತ್ಸಾಹಿಸಬಾರದು. ಇದಲ್ಲದೆ, ಒಬ್ಬ ವ್ಯಕ್ತಿಯನ್ನು ಅವನು ವಾಸಿಸುವ ಸ್ಥಳವನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಇಟ್ಟುಕೊಳ್ಳುವುದರಿಂದ ಅವನ ಸ್ನೇಹಿತರು ಮತ್ತು ಸಂಬಂಧಿಕರು ಅವರನ್ನು ಭೇಟಿಯಾಗುವುದು ಅಸಾಧ್ಯವಾಗುತ್ತದೆ…” ಎಂದು ಸ್ಪಷ್ಟವಾಗಿ ಹೇಳಿದ್ದ ನ್ಯಾಯಾಲಯ, ಹಾಗೆ ಮಾಡಲು ವಿಫಲವಾದರೆ ಅದು ದಂಡನಾತ್ಮಕ ಬಗೆಗೆ ತೆಗೆದುಕೊಳ್ಳುವ ಕ್ರಮವಾಗುತ್ತದೆ ಎಂದಿತ್ತು.

ಮುಂಜಾಗ್ರತಾ ಕ್ರಮ ಬಂಧನದ ಕಾನೂನಿನಡಿಯ ಬಂಧನ ಮತ್ತು ಕ್ರಿಮಿನಲ್ ಅಪರಾಧಕ್ಕಾಗಿ ವಿಚಾರಣೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಬಂಧನದ ನಡುವೆ ನಿಸ್ಸಂದೇಹವಾಗಿ ಗುಣಾತ್ಮಕ ವ್ಯತ್ಯಾಸವಿದೆ, ಆದರೆ ಬಂಧಿತನ ಜೀವನ ಮತ್ತು ಸ್ವಾತಂತ್ರ್ಯವನ್ನು ವಿಶಾಲ ಸನ್ನಿವೇಶದಲ್ಲಿ, ಸಹಾನುಭೂತಿಯಿಂದ ಮತ್ತು ಮಾನವೀಯ ರೀತಿಯಲ್ಲಿ ಪರಿಗಣಿಸಿದಾಗ ಅಂತಹ ವ್ಯತ್ಯಾಸವೇನೂ ಇಲ್ಲ. ಆದ್ದರಿಂದ, ಜೈಲು ಸುಧಾರಣೆಯ ಅವಶ್ಯಕತೆಗಳಲ್ಲಿ ಒಂದು, ವಿಚಾರಣೆಗೆ ಒಳಪಡದ ಕೈದಿಯನ್ನು ಅವನ/ಅವಳ ನಿವಾಸದ ಹತ್ತಿರವಿರುವ ಜೈಲಿನಲ್ಲಿ ಬಂಧನದಲ್ಲಿಡಬೇಕು, ಇದರಿಂದಾಗಿ ಬಂಧಿತ ಮೃದುವಾಗಿ ಕೊಲ್ಲಲ್ಪಡುವುದಿಲ್ಲ.

ಇತ್ತೀಚೆಗೆ, ಗೌತಮ್ ನವಲಖಾ ವರ್ಸಸ್ ಎನ್‌ಐಎ (2021) ಪ್ರಕರಣದಲ್ಲಿ, ಜೈಲಿನ ಬಂಧನಕ್ಕೆ ವಿರುದ್ಧವಾಗಿ ಗೃಹಬಂಧನವನ್ನು ಸುಪ್ರೀಂಕೋರ್ಟ್ ಪ್ರೋತ್ಸಾಹಿಸಿತು. ಸುಪ್ರೀಂಕೋರ್ಟ್ ಪ್ರಸ್ತಾಪಿಸಿದ ಒಂದು ಕಾರಣವೆಂದರೆ ಜೈಲುಗಳಲ್ಲಿನ ಜನದಟ್ಟಣೆ. ಇದು ದೀರ್ಘಕಾಲದ ಸಮಸ್ಯೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಸಾಂಕ್ರಾಮಿಕ ರೋಗವು ಕೆಲವು ಜೈಲುಗಳಲ್ಲಿ ಬದುಕುವ ಪರಿಸ್ಥಿತಿಯನ್ನು ಸಾಕಷ್ಟು ಭೀಕರಗೊಳಿಸಿದೆ. “ಸೂಕ್ತ ಪ್ರಕರಣಗಳಲ್ಲಿ ಗೃಹಬಂಧನಕ್ಕೆ ಆದೇಶಿಸಲು ನ್ಯಾಯಾಲಯಗಳಿಗೆ ಮುಕ್ತವಾಗಿರುತ್ತದೆ. ಅದನ್ನು ಜಾರಿಗೊಳಿಸಲು (ಸಿಆರ್‌ಪಿಸಿಯ ಸೆಕ್ಷನ್ 167), ನಾವು ಸಮಗ್ರವಾಗಿರದೆ, ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಆರೋಪಿತರ ಚಾರಿತ್ರ್ಯ, ಅಪರಾಧದ ಸ್ವರೂಪ, ಇತರ ರೀತಿಯ ಬಂಧನದ ಅಗತ್ಯತೆ ಮತ್ತು ನಿಯಮಗಳನ್ನು ಜಾರಿಗೊಳಿಸುವ ಸಾಮರ್ಥ್ಯ ಮುಂತಾದ ಮಾನದಂಡಗಳನ್ನು ನಾವು ಗೃಹಬಂಧನದ ನಿಯಮಗಳು ಎಂದು ಸೂಚಿಸಬಹುದು” ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಏಪ್ರಿಲ್ 2020ರಿಂದಲೇ ತಲೋಜ ಜೈಲು ಸಿಕ್ಕಿರುವುದು ತಿಳಿದಿತ್ತು ಮತ್ತು ಇತ್ತೀಚೆಗೆ ಬಾಂಬೆ ಹೈಕೋರ್ಟ್ ಗಮನಿಸಿದಂತೆ ಅಲ್ಲಿ ಕೇವಲ ಮೂವರು ಆಯುರ್ವೇದ ವೈದ್ಯರಿದ್ದರು. ದುರದೃಷ್ಟವಶಾತ್ ಈ ಪ್ರಕರಣದಲ್ಲಿ ಸಹಾನುಭೂತಿ ಮತ್ತು ಒಂದು ಮಟ್ಟದ ಮಾನವೀಯತೆ ಕಾಣೆಯಾಗಿದೆ ಹಾಗೂ ಸ್ಟ್ಯಾನ್ ಸ್ವಾಮಿಯವರನ್ನು ತಮ್ಮ ಪರಿಸರದಿಂದ ಮತ್ತು ತಮ್ಮ ವಸತಿಯ ಸಾಮಾನ್ಯ ಪ್ರದೇಶದಿಂದ ದೂರ, ರಾಂಚಿಯಿಂದ ಮುಂಬೈಗೆ ಕರೆದುಕೊಂಡುಹೋಗಿ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿ ಇಡಲಾಗಿದೆ, ಮೆಲ್ಲಗೆ ಕೊಲ್ಲಲಾಗಿದೆ.

ಸ್ಟ್ರಾ ಮತ್ತು ಸಿಪ್ಪರ್ ಇಲ್ಲದೆ ಎರಡು ತಿಂಗಳು

ಆಸಕ್ತಿದಾಯಕವಾಗಿ, ಎನ್‌ಐಎ ಸ್ಟ್ಯಾನ್ ಸ್ವಾಮಿ ಅವರ ಕಸ್ಟಡಿಗೆ ಕೋರಿಲ್ಲ. ಆದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ರಿಮಾಂಡ್ ಮಾಡುವಂತೆ ನೇರವಾಗಿ ನ್ಯಾಯಾಲಯಕ್ಕೆ ವಿನಂತಿಸಿತು.

ಕಾರಣ ಸಾಕಷ್ಟು ಸ್ಪಷ್ಟವಾಗಿದೆ – ವಿಚಾರಣೆಗೆ ಅವರು ಅಗತ್ಯವಿರಲಿಲ್ಲ ಮತ್ತು ಅವರ ವಿರುದ್ಧ ಸಲ್ಲಿಸಲು ಚಾರ್ಜ್‌ಶೀಟ್ ಆಗಲೇ ಸಿದ್ಧವಾಗಿತ್ತು ಮತ್ತು ವಾಸ್ತವವಾಗಿ, ಮರುದಿನ ಅದನ್ನು ಸಲ್ಲಿಸಲಾಯಿತು. ಆದ್ದರಿಂದ, ಅವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ಮತ್ತು ಮುಂಬೈಯಲ್ಲಿ ಮತ್ತು ರಾಂಚಿಯಲ್ಲಿ ಏಕೆ ಬಂಧಿಸಿಡಲಿಲ್ಲ? ಅವರ ವಯಸ್ಸು (83 ವರ್ಷ), ವೈದ್ಯಕೀಯ ಸ್ಥಿತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಯಾಕೆ ಯೋಚನೆ ಮಾಡಲಿಲ್ಲ?

ಬಂಧನದ ನಂತರ ಅವರ ಆರೋಗ್ಯ ಸ್ಥಿತಿ (ಪಾರ್ಕಿನ್ಸನ್ ಮತ್ತು ವಯಸ್ಸು) ಗೊತ್ತಾದ ನಂತರ, ಸ್ಟ್ಯಾನ್ ಸ್ವಾಮಿ ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ದುರದೃಷ್ಟವಶಾತ್ ಈ ಅರ್ಜಿಯನ್ನು ಅಕ್ಟೋಬರ್ 22, 2020ರಂದು ತಿರಸ್ಕರಿಸಲಾಯಿತು. ಸ್ಟ್ಯಾನ್ ಸ್ವಾಮಿ ಪಾರ್ಕಿನ್ಸನ್‌ನಿಂದ ಬಳಲುತ್ತಿದ್ದರಿಂದ, ನೀರು ಸೇರಿದಂತೆ ದ್ರವ ಪದಾರ್ಥಗಳನ್ನು ಸೇವಿಸಲು ಸಿಪ್ಪರ್ ಅಥವಾ ಸ್ಟ್ರಾ ಅಗತ್ಯವಿತ್ತು. ಅವರು ಸಿಪ್ಪರ್ ಮತ್ತು ಸ್ಟ್ರಾ ಒದಗಿಸುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಹೆಚ್ಚಿನ ಅಸೂಕ್ಷ್ಮತೆಯೊಂದಿಗೆ ನಿರ್ವಹಿಸಲಾಗಿದೆ. ಮೊದಲಿಗೆ, ಪ್ರಾಸಿಕ್ಯೂಷನ್ ಉತ್ತರವನ್ನು ಸಲ್ಲಿಸಲು ಸಮಯವನ್ನು ಕೋರಿತು.
ಇದು ಅಗತ್ಯವೇ? ಸ್ಟ್ಯಾನ್ ಸ್ವಾಮಿಯವರಿಗೆ ಸ್ಟ್ರಾ ಮತ್ತು ಸಿಪ್ಪರ್ ನೀಡಲಾಗುತ್ತಿರಲಿಲ್ಲವೇ? ನಂತರ, ಇನ್ನೂ ಆಶ್ಚರ್ಯಕರವಾಗಿ, ಘನವೆತ್ತ ನ್ಯಾಯಾಧೀಶರು ಉತ್ತರವನ್ನು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ 20 ದಿನಗಳ ಕಾಲಾವಕಾಶವನ್ನು ನೀಡಿದರು! ಇದು ನಿಜಕ್ಕೂ ಅದ್ಭುತ. ನಿಜವಾಗಿ, ಜೈಲು ವ್ಯವಸ್ಥೆಗೆ ಸಹಾನುಭೂತಿ ಮತ್ತು ಮಾನವೀಯತೆ ಇದ್ದಿದ್ದರೆ ಸ್ಟ್ಯಾನ್ ಸ್ವಾಮಿಯವರು ಸ್ಟ್ರಾನಂತಹ ಸರಳ ಸಂಗತಿಗಾಗಿ ಟ್ರಯಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗಿ ಬರುತ್ತಿರಲಿಲ್ಲ. ಅಂತಿಮವಾಗಿ, ದೊಡ್ಡ ಸಹಾಯವೆಂಬಂತೆ, ಸಿಪ್ಪರ್ ಪೂರೈಸಿದರು ಅಧಿಕಾರಗಳು. ಸಣ್ಣ ಕರುಣೆ! ಅವರ ನೋವನ್ನು ಅವರ ಬೆರಳುಗಳಿಂದ ಮೀಟುವ ಒಂದು ಅತ್ಯುತ್ತಮ ನಿದರ್ಶನ.

ಜಾಮೀನು ನಿರ್ಧರಿಸಲು ನ್ಯಾಯಾಧೀಶರಿಗೆ ನಾಲ್ಕು ತಿಂಗಳು

ನವೆಂಬರ್ 26,2020ರಂದು ಅಥವಾ ಆ ಸಮಯದಲ್ಲಿ ಆರೋಗ್ಯ ಸೇರಿದಂತೆ ಹಲವಾರು ಕಾರಣಗಳಿಗಾಗಿ ಸಾಮಾನ್ಯ ಜಾಮೀನು ಕೋರಿ ಸ್ಟ್ಯಾನ್ ಸ್ವಾಮಿ ಅರ್ಜಿ ಸಲ್ಲಿಸಿದರು. ಈ ವಿಷಯದ ವಾಸ್ತವ ಸಂಗತಿಯೆಂದರೆ, ಎನ್‌ಐಎ ಅವರನ್ನು ಮತ್ತಷ್ಟು ವಿಚಾರಣೆ ಮಾಡಲು ಬಯಸುತ್ತಿರಲಿಲ್ಲ, ಬದಲಿಗೆ ಕೇವಲ ಕೆಲವು ಆಪಾದಿತ ಅಪರಾಧಗಳಿಗೆ ಅವರನ್ನು ಶಿಕ್ಷಿಸಲು ಬಯಸಿತ್ತು ಎಂದು ತೋರುತ್ತದೆ. ಅದು ವಿಚಾರಣೆಯಿಲ್ಲದೆ ಶಿಕ್ಷೆ. ಹಾಗಾಗಿ, ಜಾಮೀನು ಅರ್ಜಿಯನ್ನು ಎನ್‌ಐಎ ತೀವ್ರವಾಗಿ ವಿರೋಧಿಸಿತು ಮತ್ತು ಅಂತಿಮವಾಗಿ ಟ್ರಯಲ್ ಕೋರ್ಟ್ ನ್ಯಾಯಾಧೀಶ ಡಿ ಇ ಕೊಥಾಲಿಕರ್, ಸುಮಾರು ನಾಲ್ಕು ತಿಂಗಳ ನಂತರ ಮಾರ್ಚ್ 20, 2021ರಂದು ಜಾಮೀನನ್ನು ನಿರಾಕರಿಸಿದರು. ಈ ಸಮಯದಲ್ಲಿ ಸ್ವಾಭಾವಿಕವಾಗಿ ಸ್ಟ್ಯಾನ್ ಸ್ವಾಮಿ ಬಂಧನದಲ್ಲಿಯೇ ಇದ್ದರು. ಜಾಮೀನು ಅರ್ಜಿಯನ್ನು ನಿರ್ಧರಿಸಲು ಇಷ್ಟು ತಿಂಗಳು ಏಕೆ ಅಗತ್ಯ ಎಂದು ಕೇಳಬೇಕಾಗಿದೆ. ಜಾಮೀನು ಕೋರುವ ವ್ಯಕ್ತಿಯು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ನ್ಯಾಯಾಂಗ ಬಂಧನದಲ್ಲಿ ಮುಂದುವರೆಸುವುದರ ಬಗ್ಗೆ, ನ್ಯಾಯಾಂಗದ ಜವಾಬ್ದಾರಿಯಾಗಿದೆ ಎಂಬ ಅಂಶವನ್ನು ಪರಿಗಣಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯವಿರಲಿಲ್ಲವೇ? ವಿಚಾರಣೆಗೆ ಒಳಪಡುವ ಪ್ರತಿಯೊಬ್ಬ ಕೈದಿಯನ್ನು ಮೃದುವಾಗಿ ಕೊಲ್ಲಬೇಕೇ?

ಸಾಮಾನ್ಯ ಜಾಮೀನು ಅರ್ಜಿಯನ್ನು ಮತ್ತು ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ್ದರಿಂದ ನೊಂದ ಸ್ಟ್ಯಾನ್ ಸ್ವಾಮಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಸಾಮಾನ್ಯ ಜಾಮೀನುಗಾಗಿ ಅವರ ಮನವಿಯನ್ನು ಮೊದಲು 2021ರ ಮೇ 4ರಂದು ಪರಿಗಣನೆಗೆ ತೆಗೆದುಕೊಳ್ಳಲಾಯಿತು ಮತ್ತು ವೈದ್ಯಕೀಯ ವರದಿಗಳನ್ನು ಪಡೆಯಲು ಕಾಲಕಾಲಕ್ಕೆ ಮುಂದೂಡಲಾಯಿತು. ಗೌರವಾನ್ವಿತ ನ್ಯಾಯಾಧೀಶರು ತಿಳಿದಿರುವಂತೆಯೇ, ಅರ್ಹ ವೈದ್ಯರಲ್ಲದಿದ್ದರೂ, ವೈದ್ಯಕೀಯ ವರದಿಗಳನ್ನು ಓದುವದರಿಂದ, ಸ್ಟ್ಯಾನ್ ಸ್ವಾಮಿ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಅವರು ಯುವಕನಂತೆ ಆರೋಗ್ಯವಾಗಿರಲಿಲ್ಲ ಎಂಬ ಸುಳಿವು ಸಿಗುತ್ತದೆ.

ವೈದ್ಯಕೀಯ ವರದಿಗಳ ಹೊರತಾಗಿಯೂ, ಗೌರವಾನ್ವಿತ ನ್ಯಾಯಾಧೀಶರು ಸ್ಟ್ಯಾನ್ ಸ್ವಾಮಿಯವರೊಂದಿಗೆ ಮಾತನಾಡಲು ನಿರ್ಧರಿಸಿದರು. “ಅವರಿಗೆ ತೀವ್ರ ಶ್ರವಣ ಸಮಸ್ಯೆ ಇದೆ ಮತ್ತು ಅವರು ದೈಹಿಕವಾಗಿ ತುಂಬಾ ದುರ್ಬಲರಾಗಿದ್ದಾರೆ ಎಂದು ನಾವು ಗಮನಿಸಿದ್ದೇವೆ. ಆದರೆ, ನಾವು ಅವರ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಸಹಾಯದಿಂದ ಅವರೊಂದಿಗೆ ಸಂಭಾಷಣೆ ನಡೆಸಿದ್ದೇವೆ. ಕೋರ್ಟ್ ಮತ್ತು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರು, ಅರ್ಜಿದಾರರು ಜೆ.ಜೆ. ಆಸ್ಪತ್ರೆಯಲ್ಲಿ ಅಥವಾ ಹೋಲಿ ಫ್ಯಾಮಿಲಿ ಆಸ್ಪತ್ರೆ ಸೇರಿದಂತೆ ಅವರಿಗೆ ಇಷ್ಟವಾದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರಾ ಎಂದು ವಿಚಾರಿಸಿದರು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುವುದಿಲ್ಲ ಮತ್ತು ಯಾವುದೇ ಆಸ್ಪತ್ರೆಗೆ ದಾಖಲಾಗುವುದಕ್ಕಿಂತ ಜೈಲಿನಲ್ಲಿ ಸಾಯಲು ಬಯಸುತ್ತಾರೆಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ತಲೋಜಾ ಜೈಲಿಗೆ ಬಂದ ನಂತರ ಅವರ ಸಾಮಾನ್ಯ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿದೆ ಮತ್ತು ’ಜೈಲಿನಲ್ಲಿ ಸಾಕಷ್ಟು ಕೊಡುಕೊಳ್ಳುವ ವ್ಯವಹಾರ ಇದೆ’ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅವರು ಮಧ್ಯಂತರ ಜಾಮೀನು ಪಡೆಯಬೇಕೆಂದು ಒತ್ತಾಯಿಸಿದ್ದಾರೆ” ಎಂದು ಕೋರ್ಟ್ ದಾಖಲಿಸಿತ್ತು. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಅವರ ಹಾಡಿನಿಂದ ಅವರನ್ನು ಮೃದುವಾಗಿ ಕೊಲ್ಲುತ್ತಿರುವಾಗ ಸ್ಟಾನ್ ಸ್ವಾಮಿಗೆ ಅವರ ಇಡೀ ಜೀವನವನ್ನು ಅವರ ಮಾತುಗಳಿಂದ ತಿಳಿಸಲಾಯಿತು.

ವಿಡಿಯೋ-ಕಾನ್ಫರೆನ್ಸ್‌ನಲ್ಲಿ ಲೈವ್‌ಲಾ.ಇನ್ ಪತ್ರಕರ್ತರೊಬ್ಬರು ಹಾಜರಿದ್ದರು ಮತ್ತು ತಲೋಜ ಜೈಲಿಗೆ ಬಂದಾಗ ಅವರ ದೇಹದ ಮುಖ್ಯ ವ್ಯವಸ್ಥೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಟಾನ್ ಸ್ವಾಮಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. “ಆದರೆ ನಿಧಾನವಾಗಿ ನನ್ನ ದೇಹದ ಮುಖ್ಯ ಕಾರ್ಯಗಳು ಕೈಕೊಡಲಾರಂಭಿಸಿದವು. ನಾನೇ ನಡೆಯಬಲ್ಲವನಾಗಿದ್ದೆ, ನಾನೇ ಸ್ನಾನ ಮಾಡಬಲ್ಲವನಾಗಿದ್ದೆ, ಬರೆಯಬಲ್ಲವನಾಗಿದ್ದೆ. ಆದರೆ ಈ ಕೆಲಸಗಳು ನಿಧಾನವಾಗಿ ನಿಂತುಹೋಗುತ್ತಿವೆ. ನನಗೆ ಸರಿಯಾಗಿ ತಿನ್ನಲು ಸಾಧ್ಯವಾಗುತ್ತಿಲ್ಲ. ನಿನ್ನೆ ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹಾಗಾಗಿ ನನಗೆ ಏನು ನೀಡಬೇಕೆಂದು ವಿವರಿಸಲು ನನಗೆ ಅವಕಾಶ ಸಿಕ್ಕಿತು. ಅವರು ನೀಡುವ ಸಣ್ಣ ಮಾತ್ರೆಗಳಿಗಿಂತ ನನ್ನ ಕ್ಷೀಣಿಸುವಿಕೆಯು ಹೆಚ್ಚು ಶಕ್ತಿಯುತವಾಗಿದೆ” ಎಂದು ಸ್ವಾಮಿ ಹೇಳಿದ್ದರು.

ನ್ಯಾಯಾಲಯ: ತಲೋಜಾ ಜೈಲಿನಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆಯೇ? ಸಾಮಾನ್ಯ ಚಿಕಿತ್ಸೆ ನೀಡಿದ್ದಾರೆಯೇ? ತಲೋಜಾ ಜೈಲಿನ ವಿರುದ್ಧ ನಿಮ್ಮಲ್ಲಿ ಏನಾದರೂ ದೂರುಗಳಿವೆಯೇ? ನೀವು ಜೆಜೆ ಆಸ್ಪತ್ರೆಯಲ್ಲಿ ದಾಖಲಾಗಲು ಬಯಸುವಿರಾ?

ಸ್ಟ್ಯಾನ್ ಸ್ವಾಮಿ: ಇಲ್ಲ. ನಾನು ಬಯಸುವುದಿಲ್ಲ. ನಾನು ಅಲ್ಲಿಗೆ ಮೂರು ಬಾರಿ ಹೋಗಿದ್ದೇನೆ.

ಅಲ್ಲಿನ ವ್ಯವಸ್ಥೆ ನನಗೆ ತಿಳಿದಿದೆ. ನಾನು ಆ ಆಸ್ಪತ್ರೆಗೆ ದಾಖಲಾಗಲು ಬಯಸುವುದಿಲ್ಲ. ಅದರ ಬದಲು ಸಾಯುವುದು ಮೇಲು. ನಾನು ಇದನ್ನು ಬಯಸುತ್ತೇನೆ.

ತನ್ನೊಂದಿಗೆ ತಾನಿರಲು ಬಯಸುವುದಾಗಿ ಕೂಡ ಅವರು ಹೇಳಿದ್ದರು ಎನ್ನಲಾಗಿದೆ. ಆದರೆ,
ಮರುದಿನ, ಜೆಜೆ ಆಸ್ಪತ್ರೆಯಲ್ಲಿ ದಾಖಲಾತಿ ಪಡೆಯಲು ಅವರ ಮನವೊಲಿಸಲಾಯಿತು, ಅವರ ಸ್ವಂತ ವೆಚ್ಚದಲ್ಲಿ!

ಸ್ಟ್ಯಾನ್ ಸ್ವಾಮಿ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಇತ್ತೇ? ಯುಎಪಿಎಯ ನಿಬಂಧನೆಗಳು ಭಾರತದ ಸಂವಿಧಾನದ ನಿಬಂಧನೆಗಳಿಗಿಂತ ವಿಶೇಷವಾಗಿ 21ನೇ ವಿಧಿಗಿಂತ ಮುಖ್ಯವೇ? ನಮ್ಮ ದೇಶದಲ್ಲಿರುವ ಅಧಿಕಾರಗಳು ಹೆಚ್ಚು ಸಹಾನುಭೂತಿ, ಮಾನವೀಯ, ಕರುಣಾಮಯಿಯಾಗಿರಲು ಮತ್ತು ಘನತೆಯಿಂದಿರಲು ಸಾಧ್ಯವಿಲ್ಲವೇ? ಅಥವಾ ಪ್ರತಿಯೊಬ್ಬರೂ ಅಧಿಕಾರಗಳ ಕೈಯಲ್ಲಿ ಅಗೌರವ ಮತ್ತು ಅವಮಾನವನ್ನು ಅನುಭವಿಸಬೇಕೇ?

ಇಡೀ ವಿದ್ಯಮಾನವು ಸ್ಟ್ಯಾನ್ ಸ್ವಾಮಿ ಅವರ ವಿರುದ್ಧ ಆರೋಪಗಳಿಲ್ಲದೆ ಮತ್ತು ವಿಚಾರಣೆಯಿಲ್ಲದೆ ಮರಣದಂಡನೆಯನ್ನು ವಿಧಿಸಲಾಯಿತು ಎಂಬ ಭಾವನೆಯನ್ನು ಹೊರಹೊಮ್ಮಿಸುತ್ತದೆ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆಯೇ ಎಂದು ನನಗೆ ಆಶ್ಚರ್ಯವಾಗುತ್ತಿದೆ. “ತಂದೆಯೇ, ಅವರು ಏನು ಮಾಡುತ್ತಾರೆಂದು ತಿಳಿದಿಲ್ಲದ ಕಾರಣ ಅವರನ್ನು ಕ್ಷಮಿಸು” ಎಂದಷ್ಟೇ ಹೇಳಬಹುದೆಂದು ನಾನು ಭಾವಿಸುತ್ತೇನೆ.

ಕೃಪೆ: ದಿ ವೈರ್

ಮದನ್ ಬಿ. ಲೋಕೂರ್

ಜಸ್ಟಿಸ್ ಮದನ್ ಬಿ. ಲೋಕೂರ್
ಭಾರತದ ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರು.

(ಕನ್ನಡಕ್ಕೆ): ಮಲ್ಲನಗೌಡರ್


ಇದನ್ನೂ ಓದಿ: ‘ಸ್ಟಾನ್‌ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...