ನಮ್ಮ ತೋಟಕ್ಕೆ ಯಾರೇ ಬರಲಿ ಅವರು ಮೊದಲು ಕೇಳುವ ಪ್ರಶ್ನೆ “ಈ ಕಳೆಯನ್ನು ಹೇಗೆ ಕಳೆಯುತ್ತೀರಿ?” ಅವರಿಗೆ ನಾವು ಉಳುಮೆ ಮಾಡುವುದಿಲ್ಲವೆಂಬುದು ಗೊತ್ತಿರುತ್ತದೆ. ಟ್ರ್ಯಾಕ್ಟರಿನ ದೊಡ್ಡ ನೇಗಿಲಿನಿಂದ, ವರ್ಷಕ್ಕೆ ಮೂರು ನಾಲ್ಕು ಸಲ ಉಳುಮೆ ಮಾಡಿದರೂ ಅವರು ಅವರ ತೋಟದ ಕಳೆ ಕಳೆಯಲು ಆಗಿರುವುದಿಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು “ಈ ಕಳೆಯನ್ನು ಹೇಗೆ ಕಳೆಯುತ್ತೀರಿ” ಎಂಬ ಕೊನೆಯಿರದ ಬೇತಾಳ ಪ್ರಶ್ನೆ ಹಾಕುತ್ತಿರುತ್ತಾರೆ. ಈ ಬಗೆಗೆ ನನ್ನ ಮತ್ತು ನಮ್ಮಪ್ಪನ ನಡುವೆ ವಾಗ್ವಾದ ನಡೆಯುತ್ತಲೇ ಇತ್ತು. ತೆಂಗಿನ ಮರಗಳಿಗೆ ಈ ಕಳೆಗಳು ನಷ್ಟವೇನನ್ನೂ ಉಂಟು ಮಾಡುವುದಿಲ್ಲ, ಇನ್ನೂ ಲಾಭವೇ ಆಗುತ್ತದೆ ಎಂಬ ನನ್ನ ಮಾತುಗಳು ಮೂರ್ಖತನದವು ಎಂಬುದು ಅವರ ತೀರ್ಮಾನವಾಗಿತ್ತು.
ಇಷ್ಟಕ್ಕೂ ಉಳುಮೆ ಎಂದರೆ ಏನು, ನೆಲವನ್ನು ಹದ ಮಾಡಲು, ಮೆತ್ತಗೆ ಮಾಡಲು, ಕಳೆಗಳನ್ನು ಇಲ್ಲದಂತೆ ಮಾಡಲು ರೈತರು ಮಾಡುವ ಕ್ರಿಯೆ. ತೋಟಗಳಲ್ಲಿ ರೈತರು ಮಾಡುತ್ತಿರುವ ಉಳುಮೆಯಿಂದ ಅವರ ಈ ಉದ್ದೇಶಗಳು ಈಡೇರುತ್ತಿವೆಯೇ ಎಂದರೆ ಖಂಡಿತ ಇಲ್ಲ. ತೋಟಗಳನ್ನು ಮೀರಿ ಕಳೆಗಳೇನು ಬೆಳೆಯುವುದಿಲ್ಲವಾದ್ದರಿಂದ ಉಳುಮೆಯ ಅಗತ್ಯವೇ ಇಲ್ಲ, ಹಾಗಾದರೆ ರೈತರು ಯಾಕೆ ಉಳುಮೆ ಮಾಡುತ್ತಾರೆ? ತಮ್ಮ ಹಿಂದಿನವರು ಉಳುಮೆ ಮಾಡುತ್ತಿದ್ದರು ಅದನ್ನೇ ಈಗಿನವರೂ ಮುಂದುವರಿಸಿದ್ದಾರೆ.
ಹೊಲಗದ್ದೆಗಳ ಬೆಳೆಗಳಲ್ಲಿ ಉಳುಮೆಗೆ ತನ್ನದೇ ಆದ ಪ್ರಾಶಸ್ತ್ಯವಿದೆ. ಪೈರುಗಳಿಗಿಂತಲೂ ಕಳೆ ಮೇಲೆದ್ದು ಬರದಂತೆ ಉಳುಮೆ ಹರತೆಗಳು ಸಹಾಯ ಮಾಡುತ್ತವೆ. ಅಲ್ಲಿ ಉಳುಮೆ ಅತ್ಯಗತ್ಯ. ಆದರೆ ತೋಟಗಳಲ್ಲಿ ತೆಂಗು ಅಡಕೆ ಇತರ ಹಣ್ಣಿನ ಮರಗಳನ್ನು ಮೀರಿ ಅದ್ಯಾವ ಕಳೆಗಳು ಬೆಳೆಯುತ್ತವೆ? ಖಂಡಿತಾ ಬೆಳೆಯಲಾರವು. ಹಕ್ಕಿ ಪಕ್ಷಿಗಳ ಹಿಕ್ಕೆಗಳ ಜೊತೆ ಬಿದ್ದ ಬೀಜಗಳ ಫಲವಾಗಿ ತರಾವರಿ ಗಿಡಗಳು ಹುಟ್ಟಿ ಬೆಳೆಯುವುದು ನಿಜ ಅವುಗಳನ್ನು ಸಣ್ಣ ಗಿಡಗಳಾಗಿದ್ದಾಗಲೆ ಕೈಯಲ್ಲಿ ಕಿತ್ತು ಹಾಕಿದರಾಯಿತು.

ತೋಟಗಳಿಗೆ ಖಂಡಿತ ಉಳುಮೆ ಬೇಕಿಲ್ಲ. ಆದರೆ ಪೂರ್ವಿಕರು ಯಾಕೆ ತೋಟಗಳ ಉಳುಮೆ ಮಾಡುತ್ತಿದ್ದರು. ಮೊದಲಿಗೆ ಮಳೆ ಆಶ್ರಯದಲ್ಲಿ ತೋಟಗಳನ್ನು ಮಾಡುತ್ತಿದ್ದರು. ಆಗ ಉಳುಮೆ ಬೇಕೇಬೇಕಾಗಿತ್ತು. ಈ ಬಗೆಯ ಉಳುಮೆಯಿಂದ ತೋಟದ ನಾಲ್ಕಿಂಚು ಮೇಲ್ಮಣ್ಣು ಧೂಳಾಗಿಬಿಡುತ್ತಿತ್ತು. ಇದು ಬೇಸಿಗೆಯಲ್ಲಿ ಸೂರ್ಯಶಾಖವನ್ನು ತಡೆದು ಕೆಳಗಿನ ತೇವಾಂಶವು ಆರದಂತೆ ಕಾಪಾಡುತ್ತಿತ್ತು. ಇದು ಒಂದು ಬಗೆಯ ಒಣ ಮಲ್ಚಿಂಗ್. ನಮ್ಮ ಪೂರ್ವಜರು ಇದನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದರು. ಅಷ್ಟೇ ಅಲ್ಲ ಉಳುಮೆ ಮಾಡುತ್ತಿದ್ದ ತೋಟಗಳಲ್ಲಿ ಸುಮ್ಮನೆ ಉಳುಮೆಯನ್ನು ಯಾರೂ ಮಾಡುತ್ತಿರಲಿಲ್ಲ. ಮಳೆಗಾಲದಲ್ಲಿ ಹುರುಳಿ, ಅಪ್ಪಸೆಣಬು, ತೊಗರಿ, ಉದ್ದು, ಹೆಸರು, ತರುಣಿ ಮುಂತಾದ ದ್ವಿದಳ ಧಾನ್ಯಗಳನ್ನು ಚೆಲ್ಲುತ್ತಿದ್ದರು. ಕೆಲವೊಮ್ಮೆ ಒಳ್ಳೆಯ ಫಸಲು ಸಿಗತ್ತಿತ್ತು. ಮೇವಂತೂ ಕಡ್ಡಾಯವಾಗಿ ಸಿಗುತ್ತಿತ್ತು. ದ್ವಿದಳ ಧಾನ್ಯಗಳನ್ನು ಬಿತ್ತಿ ಬೆಳೆದು ನೆಲಕ್ಕೆ ಸೇರಿಸುತ್ತಿದ್ದುದರಿಂದ ಟನ್ ಗಟ್ಟಲೆ ಸಾವಯವ ಜೀವ ನೆಲಕ್ಕೆ ಸಿಕ್ಕಿ ಫಲವತ್ತಾಗುತ್ತಿತ್ತು.
ಈಗಲೂ ಈ ಬಗೆಯ ಉಳುಮೆಯನ್ನು ಯಾರು ತಾನೆ ಬೇಡ ಎನ್ನುತ್ತಾರೆ. ಎಲ್ಲಿಂದಲೋ ಕೊಂಡು ತಂದ ಗೊಬ್ಬರ ನೆಲಕ್ಕೆ ಸಾಕಾಗುವುದಿಲ್ಲ. ಫಸಲು ಬೆಳೆಯುವ ಜೊತೆಗೆ ಗೊಬ್ಬರ ತಯಾರಿಕಾ ಕಾರ್ಖಾನೆಯೂ ಇಲ್ಲಿ ಸ್ಥಾಪಿತವಾದರೆ ಯಾರಿಗೇನು ತೊಂದರೆ. ಅದಕ್ಕೆ ಮಾಡಬೇಕಾದ ಕೆಲಸ ದ್ವಿದಳ ಧಾನ್ಯವನ್ನು ಚೆಲ್ಲುವುದು, ಹೂಗುಡಿಯಾದ ಕೂಡಲೇ ಭೂಮಿಗೆ ಸೇರುವಂತೆ ಉಳುಮೆ ಮಾಡುವುದು.
ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ. ಜನ ಹೆಚ್ಚಾಗುತ್ತಿದ್ದಾರೆ, ಕೃಷಿಭೂಮಿ ಖಂಡಿತಾ ಕಡಿಮೆಯಾಗುತ್ತಿದೆ. ಕೃಷಿಯೇತರ ಅಂದರೆ ಕೈಗಾರಿಕೆ, ವಸತಿ ಮುಂತಾದದ್ದಕ್ಕೆ ಭೂಮಿ ಬಳಕೆ ಹೆಚ್ಚುತ್ತಿದೆ. ಆದ್ದರಿಂದ ಇರುವ ಭೂಮಿಯನ್ನು ಪೂರ್ಣವಾಗಿ ಬಳಸಬೇಕಾಗಿದೆ. ಅದು ಅಂತರ ಬೆಳೆ ಅಥವಾ ಮಿಶ್ರಬೆಳೆ ಅಥವ ಸಾಂದ್ರ ಬೇಸಾಯಗಳಿಂದ ಸಾಧ್ಯ. ಅದಕ್ಕೇ ಇಂಚಿಂಚು ನೆಲವನ್ನು ಬಳಸಿ ಕೃಷಿ ಮಾಡಬೇಕು ಎನ್ನುತ್ತಾನೆ ಫುಕುವೊಕಾ. ಅಷ್ಟೆ ಅಲ್ಲ ಭೂಮಿಯ ಮೇಲೂ ಭೂಮಿ ಒಳಗೂ (ಗೆಡ್ಡೆ ಗೆಣಸು) ಬೆಳೆ ತೆಗೆಯಬೇಕು ಎನ್ನುತ್ತಾನೆ.
ಈಗ ಹುಲ್ಲನ್ನು ಹೇಗೆ ಕಳೆಯುತ್ತೀರಿ ಎಂಬ ನಮ್ಮ ತೋಟಕ್ಕೆ ಬಂದವರ ಪ್ರಶ್ನೆಯನ್ನು ಈಗ ಉತ್ತರಿಸೋಣ. ನಮ್ಮ ತೋಟದಲ್ಲಿ ಸಾಂದ್ರ ಬೇಸಾಯ ನಡೆಯುತ್ತಿದೆ, ಮಿಶ್ರ ಬೆಳೆಗಳನ್ನು ಅಳವಡಿಸಿದ್ದೇವೆ. ಅಡಕೆ, ತೆಂಗು, ಬಾಳೆ, ತರಕಾರಿ ಬಳ್ಳಿಗಳು, ಅಲ್ಲಿ ಹಣ್ಣಿನ ಗಿಡಗಳು, ಮರಮುಟ್ಟಿನ ಮರಗಳು ಎಲ್ಲಾ ಇವೆ. ಆ ನಾಲ್ಕೆಕರೆ ತೋಟದಲ್ಲಿ ನೇಗಿಲು ಇಡಲು ಜಾಗವಿಲ್ಲ. ಆದ್ದರಿಂದ ಉಳುಮೆಯ ಪ್ರಶ್ನೆಯೇ ಇಲ್ಲ. ಟ್ರ್ಯಾಕ್ಟರ್ ಅಂತೂ ಬದುವೊಂದರ ಮೂಲಕ ಬಂದು ಆ ಬದುವಿನಗುಂಟವೇ ಹಿನ್ನಡೆಯಬೇಕು. ಹೀಗೆ ನಮ್ಮ ತೋಟದ ಮೇಲೆ ಬೀಳುವ ಬಿಸಿಲ್ಲನ್ನೆಲ್ಲ ಬಳಸಿಕೊಳ್ಳಲು ನಾಲ್ಕಾರು ಬೆಳೆಗಳು ಕಾದು ಕುಳಿತಿರುತ್ತವೆ. ಅವು ಬಳಸಿಬಿಟ್ಟ ಬಳಲಿದ ಬಿಸಿಲು ಮಾತ್ರ ನೆಲ ಮುಟ್ಟುತ್ತದೆ. ಅದನ್ನು ಬಳಸಿಕೊಂಡು ಹುಲ್ಲು ಬೆಳೆಯುತ್ತದೆ. ಅದು ಸಹಜವಾಗಿಯೇ ದುರ್ಬಲವಾಗಿರುತ್ತದೆಯಾದ್ದರಿಂದ ಅದನ್ನು ಕಳೆಯುವುದು ಬಲು ಸುಲಭ. ಆದರೆ ಕಳೆಯುವುದಿಲ್ಲ ಬದಲಿಗೆ ಕೂಡುತ್ತೇವೆ. ಅಂದರೆ ಅದನ್ನು ಹಸಿರು ಮಲ್ಚಿಂಗ್ ಆಗಿ ಬಳಸಿಕೊಳ್ಳುತ್ತೆವೆ. ಅದು ನಮಗೆ ಕಳೆಯಲ್ಲ ಬೆಳೆ. ಕೀಟಗಳ ಕಾಡು, ಮಣ್ಣಿನ ಸವಕಳಿ ತಡೆಯುವ ಮಹಾಗೋಡೆ, ಮೊಲದ ಮೇವು, ಕೋಟಿಕೀಟಗಳ ನೆಲೆ, ಎರೆಹುಳಕ್ಕೆ ಬೇಕಾದ ಊಟ ಕೊಡುವ ಅನ್ನದ ತಟ್ಟೆ ಹೀಗೆ.. ಮಳೆಗಾಲದಲ್ಲಿ ಹುಲ್ಲು ಅತಿಯಾದರೆ ಮಾತ್ರ ಕತ್ತರಿಸುತ್ತೇವೆ.
ಇದು ಯಾವುದೂ ಕೇವಲ ವರ್ಣನೆಯಲ್ಲ, ವಾಸ್ತವ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ, ಈ ಹುಲ್ಲನ್ನು ದುರ್ಬಲ ಎಂದು ಕರೆದದ್ದೇ ತಪ್ಪು ಎನಿಸುತ್ತದೆ. ಇದನ್ನು ನಿಯಂತ್ರಿಸುತ್ತಿದ್ದೇವೆಯೇ ಹೊರತು ಕಳೆಯುತ್ತಿಲ್ಲ. ಉಳುಮೆ ಇಲ್ಲದ ತೋಟದಲ್ಲಿ ಈ ಹುಲ್ಲಿನ ಮಲ್ಚಿಂಗ್ ಸರ್ವಸ್ವ. ಭೂಮಿಗೆ ಹೊದಿಸಿದ ಹಸಿರು ಚಾದರ, ಭೂಮಿ ಉಸಿರಾಡಲು ಅನುವು ಮಾಡಿಕೊಡುವ ಬೇರು ದಾರಿಯ ಬಾಯಿ. ಪ್ರತಿ ವರ್ಷವೂ ಈ ಹುಲ್ಲಿನ ಕೋಟಿ ಬೇರುಗಳು ಸತ್ತು ಹುಟ್ಟುತ್ತವೆ. ಸತ್ತದ್ದನ್ನು ಎರೆಹುಳು, ಕ್ರಿಮಿಕೀಟಗಳು, ಗೆದ್ದಲು, ಶಂಖದಹುಳುಗಳು ಉಂಡು ಮತ್ತೆ ನೆಲಕ್ಕೆ ಜೀವ ಬರಿಸುತ್ತವೆ. ನೆಲದ ತುಂಬಾ ಜೀವರಂಧ್ರಗಳಾಗಲು ಈ ಪ್ರಕ್ರಿಯೆಯೇ ಕಾರಣ. ಇದನ್ನೆ ಕೀಟದುಳುಮೆಯ ಆಟಗಳು ಎನ್ನುವುದು.
ನೀವು ಉಳುಮೆ ಮಾಡುವುದೇ ಇಲ್ಲವೇ ಎಂದು ಕೆಲವರು ಒತ್ತಿ ಕೇಳುತ್ತಾರೆ. ಬೇಸರವಿಲ್ಲದೆ ನಾನು ಹೇಳಲೇಬೇಕಾಗುತ್ತದೆ. ಇಲ್ಲ ನಾವು ನಮ್ಮ ತೋಟವನ್ನು ಉಳುಮೆ ಮಾಡುವುದಿಲ್ಲ. ಈ ಉಳುಮೆಯ ಉಸಾಬರಿಯನ್ನು ಎರೆಹುಳು, ಗೆದ್ದಲು , ಇರುವೆ, ಗೊದ್ದ ಮುಂತಾದುವುಗಳಿಗೆ ವಹಿಸಿಕೊಟ್ಟಿದ್ದವೆ. ನಾವು ಉಳುಮೆಗೆ ಬಳಸುವ ನೇಗಿಲುಗಳಿಗೆ ಮಿತಿ ಇದೆ ಆದರೆ ಈ ಕೀಟಗಳೆಂಬ ಪುಟ್ಟ ಪುಟ್ಟ ನೇಗಿಲುಗಳಿಗೆ ಮಿತಿ ಎಂಬುದಿಲ್ಲ. ಎರೆಹುಳದ ನೇಗಿಲಂತೂ ನೇಗಿಲುಗಳಲ್ಲೇ ಉತ್ತಮ, ಜೊತೆಗೆ ಅವುಗಳ ಉಳುಮೆಯಾದರೂ ಎಂಥದು, ಹೂವಿನ ಉಕ್ಕೆ. ಇಷ್ಟೇ ಅಲ್ಲ ಬೇರುಳುಮೆ ಬೇರೆ ನಡೆಯುತ್ತಿರುತ್ತದೆ, ಅದರ ಮೂಲಕ ನೀರುಳುಮೆಯೂ ಆಗುತ್ತಿರುತ್ತದೆ. ಇದಕ್ಕಿಂತ ಬೇಕಾ ಉಳುಮೆ ಎಂದು ವಿವರಿಸುತ್ತೇನೆ. ಗೆದ್ದಲಿನ ಮಹಿಮೆಯನ್ನು ಮರೆಯಲು ಹೇಗೆ ತಾನೆ ಸಾಧ್ಯ, ಒಣಗಿದ ತೆಂಗಿನ ಉಳಿಕೆಗಳನ್ನೆಲ್ಲಾ ತಿಂದು ಗೊಬ್ಬರ ಮಾಡಿಕೊಡುವ ಗೆದ್ದಲಿಗೆ ನಾವು ಏನು ಕೊಟ್ಟು ಅವುಗಳ ಋಣ ತೀರಿಸಲು ಸಾಧ್ಯ. ಅದೇ ಈಗ ಬಹುತೇಕ ರೈತರು ಮಾಡುತ್ತಿರುವ ಟ್ರ್ಯಾಕ್ಟರ್ ಉಳುಮೆ ನೆಲವನ್ನು ತನ್ನ ಟನ್‌ಗಟ್ಟಲೆ ಭಾರದಿಂದ ನೆಲವನ್ನು ತುಳಿಯುತ್ತಾ ಕಣದಂತೆ ಗಟ್ಟಿ ಮಾಡುತ್ತಾ ಸಾಗುತ್ತದೆ. ಆಗ ಅಲ್ಲಿನ ಮಣ್ಣುಜೀವಿಗಳೂ ಬಹುತೇಕ ನಾಶವಾಗುತ್ತವೆ. ನೆಲ ಸಾಯುವುದು ಎಂದರೆ ಇದೇ ತಾನೆ.
ನೆಲದ ಒಕ್ಕಲು ಎಂದರೆ ರೈತರು ಎನ್ನುತ್ತಾರೆ. ಖಂಡಿತ ಅದು ನಿಜ. ಆದರೆ ನಿಜವಾದ ಒಕ್ಕಲು ಈ ಎರೆ ಹುಳು ಮತ್ತು ಗೆದ್ದಲು ಎಂದರೆ ಯಾರಾದರೂ ಒಪ್ಪಲೇಬೇಕು. ಇವುಗಳ ಜೊತೆಗೆ ನೆಲದಲ್ಲಿರುವ ಕೋಟ್ಯಾಂತರ ಜೀವಿಗಳ ಸಹಾಯದಿಂದ ಮಣ್ಣು ಅನ್ನವಾಗಿ ರೂಪಾಂತರವಾಗುವ ಪರಿ ಎಂಥಾ ಚೋದ್ಯದ್ದು.
ನಮ್ಮ ತೋಟದಲ್ಲಿ ಒಂದೇ ಬಗೆಯ ಹುಲ್ಲು ಯಾವಾಗಲೂ ಇರುವುದಿಲ್ಲ. ಬದಲಾಗುತ್ತಾ ಸಾಗುವ ಹುಲ್ಲಿನ ಜಾತಿಗಳು ಅದೆಲ್ಲಿಂದಲೋ ಬರುತ್ತಿರುತ್ತವೆ. ಮುಖ್ಯವಾಗಿ ಹಕ್ಕಿಗಳು ಈ ಕೆಲಸ ಮಾಡುತ್ತವೆ, ಬಿಟ್ಟರೆ ಗಾಳಿ, ಅದು ಬಿಟ್ಟರೆ ನಾವು ಹಾಕುವ ಸಾವಯವ ಗೊಬ್ಬರ.
ಕೆಲ ಬಗೆಯ ಹುಲ್ಲನ್ನು ಕೊಯ್ದು ರಾಸುಗಳಿಗೆ ಹಾಕಿದರೆ ಬಲು ಚೆನ್ನಾಗಿ ತಿನ್ನುತ್ತವೆ. ಮತ್ತೆ ಕೆಲ ಬಗೆಯ ಹುಲ್ಲನ್ನು ಮೂಸಿಯೂ ನೋಡುವುದಿಲ್ಲ. ಆದರೆ ಸೀಮೆ ಹಸುಗಳು ಮಾತ್ರ ಯಾವ ಭಿನ್ನ ಭೇದವನ್ನು ಮಾಡದೆ ತಿಂದು ಸುಮ್ಮನಿರುತ್ತವೆ, ನಗುವುದೂ ಇಲ್ಲ ಅಳುವುದೂ ಇಲ್ಲ, ಕೊನೆಗೆ ಕೂಗುವುದೂ ಇಲ್ಲ.
ನಮ್ಮ ತೋಟಕ್ಕೆ ಒಮ್ಮೆ ಮುಟ್ಟಿದರೆ ಮುನಿ ತೋಟವನ್ನೆಲ್ಲ ಆವರಿಸುವ ಹಟ ತೊಟ್ಟು ಸಾಕಷ್ಟು ಭಾಗ ಆವರಿಸಿತು. ಅದರೊಳಗೆ ತಿರುಗಾಡುವುದು ಕಷ್ಟವಾಯಿತು. ನೋಡ ನೋಡುತ್ತಿದ್ದಂತೆ, ಎರಡು ವರ್ಷಗಳಲ್ಲಿ ಮಾಯವಾಯಿತು. ದರ್ಬೆ ಹುಲ್ಲು ಮಾತ್ರ ತನ್ನ ಬೇರುಗಳನ್ನು ಊರಿ ಹಬ್ಬುತ್ತಲೇ ಇದೆ. ಇದು ಯಾಕೋ ಸ್ವಲ್ಪ ತಲೆನೋವಾಗಿ ಕಾಡುತ್ತಿರುವುದು ಸುಳ್ಳಲ್ಲ. ಹುಲ್ಲು ಕತ್ತರಿಸುವ ಮಿಷನ್ನಿಗೆ ಇದು ಸಿಕ್ಕುವುದಿಲ್ಲ. ಕತ್ತರಿಸಿಕೊಳ್ಳದೆ ಸುತ್ತಿಕೊಂಡು ಕಾಟ ಕೊಡುತ್ತದೆ. ಕುಡ್ಲಿನಿಂದ ಕೊಯ್ದು ರಾಸುಗಳಿಗೆ ಹಾಕುವುದು, ದರ್ಬೆ ಇರುವ ಜಾಗಕ್ಕೆ ದಟ್ಟವಾಗಿ ಸ್ವಾಗೆ ಗರಿಗಳನ್ನು ಹೊದಿಸುವುದು, ಆ ಭಾಗದಲ್ಲಿನ ಮರಗಳ ದಟ್ಟಣೆಯನ್ನು ಹೆಚ್ಚಿಸುವುದೇ ಮುಂತಾದ ಉಪಾಯಗಳನ್ನು ನಾವು ಕಂಡುಕೊಂಡಿದ್ದೇವೆ.
ಒಮ್ಮೆ ಅನ್ನಗೊನೆ ಸೊಪ್ಪನ್ನು ಹೋಲುವ ಆದರೆ ಅದಲ್ಲದ ಒಂದು ಬಗೆಯ ಸೊಪ್ಪು ಅದೆಲ್ಲಿಂದಲೋ ಪ್ರತ್ಯಕ್ಷವಾಯಿತು. ಇದು ತುಂಬಾ ಒಳ್ಳೆಯ ಹಸಿರು ಮಲ್ಚಿಂಗ್. ಕತ್ತರಿಸುವುದು ಸುಲಭ. ಇದು ಎಷ್ಟಾದರೂ ಹಬ್ಬಲಿ ಎಂದುಕೊಳ್ಳುತ್ತಿದ್ದಂತೆ ಮಾಯವಾಗಿದೆ.
ಈಗ ಅಕ್ಕಿಹುಲ್ಲು ತೋಟದ ತುಂಬಾ ಆವರಿಸಿ ಹಬ್ಬುತ್ತಿದೆ. ಇದು ನಿಜವಾದ ಅಕ್ಕಿ ಹುಲ್ಲಲ್ಲ ಎಂದು ಗೊತ್ತಾಗಿದೆ. ಅಕ್ಕಿಹುಲ್ಲನ್ನು ಕರೇವು ರಾಸುಗಳು ರಾಪಾಡಿಕೊಂಡು ತಿಂದು ಬೇಕಾದಷ್ಟು ಹಾಲನ್ನು ಕೊಡುತ್ತವೆ. ಆದರೆ ಈ ನಮ್ಮ ತೋಟದ ಈ ಕಬ್ಬಿಣದ ತಂತಿಯಂತಾ ಅಕ್ಕಿಹುಲ್ಲನ್ನು ಎಮ್ಮೆಗಳು ತಿನ್ನಲು ನಿರಾಕರಿಸುತ್ತಿವೆ, ನಮ್ಮ ಪುಣ್ಯಕ್ಕೆ ಒಂದು ಸೀಮೇ ಹಸು ಮಾತ್ರ ಈ ಹುಲ್ಲನ್ನು ತಿನ್ನುತ್ತಿದೆ. ಇಂಥ ಹುಲ್ಲಿನ ನಿಯಂತ್ರಣಕ್ಕೂ ಮಲ್ಚಿಂಗ್ ಮಂತ್ರವೇ ಒಳ್ಳೆಯ ಉಪಾಯ. ಮುಟ್ಟಿದರೆ ಮುರಿಯುವ ಅಕ್ಕರಿಕೆ, ಕಡ್ಲೆಪುರಿಯಂತಾ ಗೇಣುದ್ದ ಮಾತ್ರ ಬೆಳೆಯುವ ಜೊಂಡು ಜಾತಿಯ ಹುಲ್ಲು, ಕುದುರೆ ಹುಲ್ಲು ಇತ್ಯಾದಿಗಳೆಲ್ಲಾ ಸೇರಿ ನಮ್ಮ ತೋಟವನ್ನು ತಣ್ಣಗೆ ಇಟ್ಟಿವೆ.
ಹೀಗೆ ಇದು ಒಂದು ಹುಲ್ಲಿನ ಕ್ರಾಂತಿಯಲ್ಲ, ಹತ್ತಾರು ಬಗೆಯ ಹುಲ್ಲಿನ ಕ್ರಾಂತಿ. ಅದರಡಿಯ ಕೋಟಿ ಕೀಟಗಳ ಶಾಂತಿ…
· ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ, ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)



ಸರ್,
“ತೋಟದ ಕೃಷಿ”ಯ ಹೊಸ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲುವ ಈ ಅಂಕಣ ಸ್ವಾನುಭವದ ಒಂದು ಆಪ್ತ ಬರಹವಾಗಿದೆ. ನಿಮ್ಮ ಈ ಪ್ರಯತ್ನದಿಂದ ಕೆಲವರಾದರೂ ತಮ್ಮ ತೋಟದ ಕೃಷಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವರೆಂಬ ನಿರೀಕ್ಷೆಯಿದೆ. ವೃತ್ತಿಯಲ್ಲಿ ಮಾದರಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬದುಕಿನ ಫಸಲನ್ನು ತೆಗೆಯುವ ಬಗ್ಗೆ ತಿಳಿಸುವ ನೀವು, ಪ್ರವೃತ್ತಿಯಲ್ಲಿ ಒಬ್ಬ ಅಪ್ಪಟ ರೈತನಾಗಿ
ತೋಟದೊಳಗಿನ ಮಣ್ಣು, ಕೀಟ, ಹುಲ್ಲು, ನೀರು, ಬೇರು – ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ಅಧ್ಯಯನ ಮಾಡಿ, ಪ್ರಾಯೋಗಿಕವಾಗಿ ಪರೀಕ್ಷಿಸಿ, ಆ ಜ್ಞಾನವನ್ನು ಇತರರಿಗೂ ಹಂಚುತ್ತಿದ್ದೀರಿ. ನಿಮ್ಮ ಈ ಕಾರ್ಯಕ್ಕೆ ಶರಣು.
ರೈತೋಪಯೋಗಿ ಹಾಗೂ ಪರಿಸರಸ್ನೇಹಿ ಬರಹವನ್ನೊಳಗೊಂಡ ಈ ಅಂಕಣದ ಮುಂದಿನ ಸಂಚಿಯ ನಿರೀಕ್ಷೆಯಲ್ಲಿದ್ದೇನೆ.
ಧನ್ಯವಾದಗಳು ಸರ್.